ಗುರುವಾರ , ಆಗಸ್ಟ್ 11, 2022
27 °C

ಒತ್ತಡಗಳ ನಿರ್ವಹಣೆ ಮತ್ತು ಆರೋಗ್ಯ

ಡಾ. ಕಿರಣ್ ವಿ. ಎಸ್. Updated:

ಅಕ್ಷರ ಗಾತ್ರ : | |

Prajavani

ಒತ್ತಡವೆಂಬುದು ಸಾರ್ವತ್ರಿಕ. ಪ್ರತಿಯೊಬ್ಬರೂ ತಂತಮ್ಮ ಮಟ್ಟದಲ್ಲಿ ಒತ್ತಡವನ್ನು ಅನುಭವಿಸುತ್ತಲೇ ಇರುತ್ತಾರೆ. ಒತ್ತಡಗಳನ್ನು ಸಹಿಸಬಲ್ಲ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಒತ್ತಡಗಳು ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲವು. ಇಂದಿನ ಬದುಕಿನ ಧಾವಂತದಲ್ಲಿ ಒತ್ತಡವೆಂಬುದು ಕಡ್ಡಾಯವಾಗಿಹೋಗಿದೆ. ಹೀಗಾಗಿ, ಒತ್ತಡವನ್ನು ನಿರ್ವಹಿಸುವ ಮಾರ್ಗಗಳನ್ನು ಕಂಡುಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಹಲವಾರು ಸಂಗತಿಗಳು ಒತ್ತಡಕ್ಕೆ ಕಾರಣವಾಗಬಹುದು. ನಮ್ಮ ಮನಸ್ಸು ಬದಲಾವಣೆಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ; ಆತಂಕ ಪಡುತ್ತದೆ. ಕೆಲವೊಮ್ಮೆ ನಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗುವ ಸಂದರ್ಭಗಳಲ್ಲಿ ಜೀವನದ ಮೇಲೆ ನಮ್ಮ ನಿಯಂತ್ರಣ ತಪ್ಪಿಹೋದಂತೆ ಅನಿಸುತ್ತದೆ. ಆಗಲೂ ತೀವ್ರ ಒತ್ತಡದ ಭಾವನೆ ಇರುತ್ತದೆ. ಪ್ರಸ್ತುತ ಸಮಾಜದಲ್ಲಿ ವೃತ್ತಿಗೆ ಸಂಬಂಧಿಸಿದ ಒತ್ತಡಗಳು ಅತ್ಯಂತ ಹೆಚ್ಚು. ಇಂತಹ ಒತ್ತಡಗಳನ್ನು ನಿರ್ವಹಿಸುವ ವಿಧಾನಗಳು ಪ್ರತಿಯೊಬ್ಬರಿಗೂ ವಿಭಿನ್ನ. ನಮ್ಮ ಜೆನೆಟಿಕ್ ರಚನೆ, ಜೀವನದಲ್ಲಿ ಹಿಂದೆ ನಡೆದ ಘಟನೆಗಳು, ವ್ಯಕ್ತಿತ್ವ, ಸಾಮಾಜಿಕ ಪರಿಸರ, ಆರ್ಥಿಕ ಪರಿಸ್ಥಿತಿಗಳು, ಮನಃಸ್ಥಿತಿ, ಮೊದಲಾದುವು ಒತ್ತಡ ನಿರ್ವಹಣೆಯಲ್ಲಿ ಪಾತ್ರ ವಹಿಸುತ್ತವೆ.

ಒತ್ತಡದ ವೇಳೆ ಶರೀರದ ಹಾರ್ಮೋನುಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ತೋರುತ್ತದೆ. ಇದರಿಂದ ಹಲವಾರು ಕಾಯಿಲೆಗಳಿಗೆ ಶರೀರ ನೆಲೆಯಾಗಬಹುದು. ಅಲ್ಲದೇ, ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳ ನಿಯಂತ್ರಣ ತಪ್ಪುತ್ತದೆ. ಆತಂಕ, ಭೀತಿ, ದುಃಖ, ಕಿರಿಕಿರಿ, ಖಿನ್ನತೆ, ಹತಾಶೆ, ಅನಗತ್ಯ ಕೋಪ, ತಾಳ್ಮೆ ಕಳೆದುಕೊಳ್ಳುವುದು – ಮೊದಲಾದುವು ಒತ್ತಡದ ಪರಿಣಾಮಗಳು. ಒಟ್ಟಾರೆ, ಸತತ ಒತ್ತಡದ ಪರಿಸ್ಥಿತಿ ಆರೋಗ್ಯಕ್ಕೆ ಹಿತಕರವಲ್ಲ. ತಲೆನೋವು, ಅಜೀರ್ಣ, ಉಸಿರಾಟದ ಏರುಪೇರು, ಹೃದಯದ ಏರುಬಡಿತ, ಮೈ-ಕೈ ನೋವು, ಸಂಕಟ ಮೊದಲಾದುವು ಒತ್ತಡದ ಕಾರಣದಿಂದ ಭೌತಿಕ ಶರೀರದ ಆಗುವ ಬದಲಾವಣೆಗಳು. ಒತ್ತಡದ ಕಾರಣದಿಂದ ಉಂಟಾಗುವ ಅನಾರೋಗ್ಯಗಳಿಂದ ವರ್ಷಕ್ಕೆ ಸರಾಸರಿ ಇಪ್ಪತ್ತನಾಲ್ಕು ದಿನಗಳು ಕೆಲಸದಿಂದ ವಿಮುಖರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. 

ಒತ್ತಡ ಮೇಲ್ನೋಟಕ್ಕೆ ಕಾಣುವಂತಹದಲ್ಲ. ಒತ್ತಡದಿಂದ ಬಳಲುವವರು ಇತರರಿಂದ ಅಂತರ ಕಾಯ್ದುಕೊಳ್ಳುತ್ತಾರೆ; ನಿರ್ಧಾರಗಳನ್ನು ಸುಲಭವಾಗಿ ಮಾಡಲಾರರು; ಮಾಡಿದ ತಪ್ಪು ನಿರ್ಧಾರಗಳನ್ನು ತಿದ್ದಿಕೊಳ್ಳಲಾರರು; ಭಾವನಾತ್ಮಕವಾಗಿ ಸೂಕ್ಷ್ಮವಾಗುತ್ತಾರೆ; ಸಣ್ಣ ವಿಷಯಗಳಿಗೂ ತೀವ್ರವಾಗಿ ದುಃಖಿಸುತ್ತಾರೆ; ನಿದ್ರಾಹೀನತೆಯಿಂದ ಬಳಲುತ್ತಾರೆ; ಸಂಸಾರದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ; ಮದ್ಯಪಾನ, ಸಿಗರೇಟುಗಳಂತಹ ಚಟಗಳಿಗೆ ಮೊರೆ ಹೋಗುತ್ತಾರೆ; ಜೀವನೋತ್ಸಾಹ ಕಡಿಮೆಯಾಗುತ್ತದೆ; ಹೊಟ್ಟೆಯ ಹುಣ್ಣುಗಳು, ಜೀರ್ಣಶಕ್ತಿಯಲ್ಲಿ ದೋಷಗಳು, ನೆನಪಿನ ಶಕ್ತಿ ಕುಂದುವಿಕೆ, ಹೃದ್ರೋಗ ಮೊದಲಾದ ಆರೋಗ್ಯಸಮಸ್ಯೆಗಳು ಎದುರಾಗುತ್ತವೆ. ವಿಲೋಮವಾಗಿ, ಒತ್ತಡದ ಸಮರ್ಥ ನಿರ್ವಹಣೆ ಆರೋಗ್ಯದ ಸುಧಾರಣೆಗೆ ದಾರಿಯಾಗುತ್ತದೆ. ಇದನ್ನು ಸಾಧಿಸಲು ತಜ್ಞರು ಕೆಲವು ಮಾರ್ಗಗಳನ್ನು ಸೂಚಿಸುತ್ತಾರೆ.

1. ಬದುಕಿನಲ್ಲಿ ಅಧಿಕ ಒತ್ತಡದ ಅಸ್ತಿತ್ವವನ್ನು ಮನಗಾಣಬೇಕು; ಒತ್ತಡವನ್ನು ಹೇರುತ್ತಿರುವ ಪರಿಸ್ಥಿತಿಗಳನ್ನು ವಿಶ್ಲೇಷಿಸಬೇಕು. ಕೆಲವೊಮ್ಮೆ ಇದು ಸುಲಭಸಾಧ್ಯವಲ್ಲ. ನಮಗೇ ಅರಿವಿಲ್ಲದ ಯಾವುದೋ ಬದಲಾವಣೆ, ಹೊಂದಾಣಿಕೆಯಾಗದ ಸಂಬಂಧಗಳು ಒತ್ತಡದ ಮೂಲಗಳಾಗಿರಬಹುದು. ಬಹುತೇಕ ಸಂದರ್ಭಗಳಲ್ಲಿ ನಮ್ಮ ಆಲೋಚನೆಗಳು, ವರ್ತನೆಗಳು, ಭಾವನೆಗಳ ಮೇಲೆ ನಿಗಾ ಇರುವುದಿಲ್ಲ. ಹೀಗಾಗಿ ಆತ್ಮಾವಲೋಕನ ಕಷ್ಟವಾಗುತ್ತದೆ. ಇದರ ಪರಿಹಾರಕ್ಕಾಗಿ ನಮ್ಮ ವರ್ತನೆಗಳನ್ನು ಪ್ರಯತ್ನಪೂರ್ವಕವಾಗಿ ದಾಖಲಿಸಬೇಕು. ಯಾವುದಾದರೂ ಸಂದರ್ಭದಲ್ಲಿ ನಮ್ಮ ವರ್ತನೆ ಅನಪೇಕ್ಷಿತವಾಗಿತ್ತೇ? ಹಾಗೆ ವರ್ತಿಸಿದ ನಂತರ ಮೂಡಿದ ಭಾವನೆಗಳೇನು? ಇದನ್ನು ಬದಲಾಯಿಸಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು,. ಇದರಿಂದ ಒತ್ತಡದ ಮೂಲಗಳನ್ನು ತಿಳಿಯಬಹುದು.

2. ಕೆಲವು ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು; ಕೆಲವನ್ನು ಬದಲಾಯಿಸಬಹುದು; ಕೆಲವದರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು; ಕೆಲವನ್ನು ಮಾತ್ರ ಒಪ್ಪಿಕೊಂಡೇ ಮುಂದುವರೆಯಬೇಕು. ಈ ನಾಲ್ಕು ಆಯ್ಕೆಗಳ ನಡುವೆ ಯಾವುದನ್ನು ಹೇಗೆ ಮಾಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು. ಈ ಸಂದರ್ಭದಲ್ಲಿ ಆತ್ಮೀಯರು, ಮಾನಸಿಕ ತಜ್ಞರು, ಆಪ್ತಸಲಹೆಗಾರರು ನೆರವಾಗಬಲ್ಲರು. ನಮ್ಮ ಒತ್ತಡವನ್ನು ಎಲ್ಲರಲ್ಲೂ ಜಾಹೀರು ಮಾಡಿಕೊಳ್ಳುವುದು ಒಳ್ಳೆಯದಲ್ಲ. ತೀರಾ ಆಪ್ತರಾದ, ಸರಿಯಾದ ಪರಿಹಾರ ಸೂಚಿಸಬಲ್ಲ ಗೆಳೆಯರ, ಸಂಬಂಧಿಗಳ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ಸಮಸ್ಯೆಗಳು ಹಗುರವಾಗಬಲ್ಲವು. ನಮ್ಮ ಮಿತಿಯನ್ನು ಮೀರಿದ ಕೆಲಸಗಳನ್ನು ಒಲ್ಲೆನೆನ್ನುವ ಮನಃಸ್ಥಿತಿ ಬೆಳೆಯಬೇಕು. ಎಲ್ಲರಿಗೂ ಒಳ್ಳೆಯವರಾಗುವ ಪ್ರಯತ್ನದಲ್ಲಿ ನಮ್ಮನ್ನು ನಾವು ದಹಿಸಿಕೊಳ್ಳಬಾರದು. ಒತ್ತಡವನ್ನು ಹೆಚ್ಚಿಸುವ ಜನರಿಂದ, ಸುದ್ದಿಮೂಲಗಳಿಂದ ದೂರವಿರುವುದು ಸೂಕ್ತ. ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ಸಂಚಾರ ದಟ್ಟಣೆಯಂತಹ ಪ್ರಸಂಗಗಳು ನಮ್ಮ ಒತ್ತಡದ ಮಟ್ಟವನ್ನು ಏರಿಸಲು ಬಿಡಬಾರದು. ನಮ್ಮ ದೈನಂದಿನ ಕೆಲಸಗಳ ಪಟ್ಟಿಯನ್ನು ಸಾಧ್ಯವಾದಷ್ಟೂ ಹಗುರವಾಗಿಸಬೇಕು; ನಡುನಡುವೆ ವಿಶ್ರಾಂತಿಗೆ, ಆತ್ಮಾವಲೋಕನಕ್ಕೆ, ವಿಶ್ಲೇಷಣೆಗೆ ಸ್ಥಳಾವಕಾಶ ದೊರೆಯಬೇಕು. ಕೆಲವೊಮ್ಮೆ ಪರಿಸ್ಥಿತಿಯ ಜೊತೆಗೆ ರಾಜಿಗೆ ಸಿದ್ಧವಿರಬೇಕಾಗುತ್ತದೆ. ಸಮತೋಲಿತ ಚಿಂತನೆಗಳು ಮನಸ್ಸನ್ನು ನಿರಾಳವಾಗಿಸುತ್ತವೆ.  

3. ಸಮಸ್ಯೆಗಳ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಬೇಕು: ಕೆಲವೊಂದು ಸಮಸ್ಯೆಗಳು ನಾವು ಊಹಿಸಿಕೊಂಡಷ್ಟು ಗಾಢವಾಗಿರುವುದಿಲ್ಲ. ಸಮಸ್ಯೆಯನ್ನು ಒಮ್ಮೆ ಸರಿಯಾದ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡರೆ, ಅದರ ಪರಿಹಾರ ಸುಲಭವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವೇ ಬೇಕೆಂದಿಲ್ಲ; ಕೆಲವೊಂದನ್ನು ಸಮಯಾನುಸಾರ ತಹಬಂದಿಗೆ ತಂದರೂ ಸಾಕು. ಕೆಲವು ಸಂದರ್ಭಗಳು ಮೂಲತಃ ಸಮಸ್ಯೆ ಎನಿಸಿದರೂ, ಕಾಲಕ್ರಮದಲ್ಲಿ ಸೂಕ್ತವಾಗಿ ವಿಶ್ಲೇಷಿಸಿದಾಗ ಅವು ಅವಕಾಶಗಳ ರೂಪ ಪಡೆಯುತ್ತವೆ.

4. ಜಿದ್ದಿನ ಮನಃಸ್ಥಿತಿ ಒಳ್ಳೆಯದಲ್ಲ: ಜೀವನದಲ್ಲಿ ಕೆಲವನ್ನು ಕ್ಷಮಿಸಿ ಮುಂದೆ ಸಾಗಬೇಕು. ಸೇಡನ್ನು ಗುರಿಯಾಗಿಸಿ ಚಿಂತಿಸುವುದು ಋಣಾತ್ಮಕ ಆಲೋಚನೆಗಳನ್ನೇ ಹುಟ್ಟುಹಾಕುತ್ತವೆ. ಇದು ಆರೋಗ್ಯಕ್ಕೆ ಹಾನಿಕರ. ಕ್ರಮಬದ್ಧ ವ್ಯಾಯಾಮ, ಪ್ರಾಣಾಯಾಮ, ಧ್ಯಾನ – ಇವು ನಮ್ಮ ಸೈರಣೆಯನ್ನು ಹಿಗ್ಗಿಸುತ್ತವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಕಳೆಯಲು ಸಹಕಾರಿ. ಇದರ ಜೊತೆಗೆ ಮನಸ್ಸಿಗೆ ಆಹ್ಲಾದ ನೀಡುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಆರೋಗ್ಯಕರ ಆಹಾರ, ಚಟಗಳಿಂದ ದೂರವಿರುವುದು, ಸಾಕಷ್ಟು ವಿಶ್ರಾಂತಿ, ನಿದ್ರೆಗಳು ಒತ್ತಡ ನಿರ್ವಹಣೆಯನ್ನು ಸುಲಭವಾಗಿಸುತ್ತವೆ.      

5. ವೈಯಕ್ತಿಕ ಸಂಬಂಧಗಳ ಅಭಿವೃದ್ಧಿ ಹಲವಾರು ಹಂತಗಳಲ್ಲಿ ಒತ್ತಡ ನಿರ್ಮೂಲನೆಗೆ ದಾರಿಯಾಗುತ್ತದೆ. ಕೌಟುಂಬಿಕ ಸಂಬಂಧಗಳು, ಸ್ನೇಹಿತರು, ವೃತ್ತಿಜೀವನದ ಒಡನಾಡಿಗಳು, ಪರಿಚಿತರ ಜೊತೆಯಲ್ಲಿ ಪ್ರಾಮಾಣಿಕ ಆತ್ಮೀಯತೆಯಿಂದ ವ್ಯವಹರಿಸುವುದು ದೀರ್ಘಕಾಲಿಕ ನೆಲೆಗಟ್ಟಿನಲ್ಲಿ ಪರಸ್ಪರರ ಒತ್ತಡವನ್ನು ತಗ್ಗಿಸುತ್ತದೆ. ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಒತ್ತಡಗಳ ನಿವಾರಣೆಯಲ್ಲಿ ನೆರವಾಗಿರುತ್ತೇವೆ.

ಕೆಲಸ ಮತ್ತು ಒತ್ತಡಗಳ ಸಮರ್ಥ ನಿರ್ವಹಣೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದಾರಿಗಳು ಬೇರೆಬೇರೆಯಾದರೂ, ಒತ್ತಡ ನಿರ್ವಹಣೆಯ ಮೂಲತತ್ತ್ವಗಳು ಒಂದೇ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡರಹಿತವಾಗಿ ಬದುಕುವ ಪ್ರಯತ್ನಗಳಿಗಿಂತಲೂ, ಒತ್ತಡವನ್ನು ವಿಶ್ಲೇಷಿಸಿ, ಅವುಗಳನ್ನು ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಕಾಪಿಟ್ಟುಕೊಳ್ಳುವ ಯಶಸ್ವಿ ವಿಧಾನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು