ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತೆ ಬಿಡಿ, ಧ್ಯಾನ ಮಾಡಿ, ನೆಮ್ಮದಿಯಾಗಿರಿ

Last Updated 8 ಜುಲೈ 2022, 20:15 IST
ಅಕ್ಷರ ಗಾತ್ರ

ಬಸ್ಸು ತಕ್ಕಮಟ್ಟಿಗೆ ರಶ್ ಇತ್ತು. ಸೀಟು ಸಿಕ್ಕವರು ತಮ್ಮ ಅದೃಷ್ಟದ ಬಗ್ಗೆ ಖುಷಿಪಡುತ್ತಲೂ, ಸೀಟು ಸಿಗದವರು ತಮ್ಮ ದುರಾದೃಷ್ಟಕ್ಕೆ ಹಳಹಳಿಸುತ್ತಲೂ ಇದ್ದರು. ಕಂಬಕ್ಕೆ ಒರಗಿ ನಿಂತಿದ್ದ ವ್ಯಕ್ತಿಯೊಬ್ಬರು ನಿಂತಿದ್ದ ಸ್ಥಿತಿಯಲ್ಲಿಯೇ ಕಣ್ಮುಚ್ಚಿ ನಿಧಾನವಾಗಿ ಉಸಿರಾಡುತ್ತಿದ್ದರು. ಅವರ ಉಸಿರಾಟದ ಗತಿ ಎಂದಿನಂತೆ ಇರಲಿಲ್ಲ. ಬಸ್ಸಿನ ವಾಲಾಟ, ಪ್ರಯಾಣಿಕರ ಜೋರು ದನಿಯ ಮಾತು, ಮೊಬೈಲ್‌ಗಳಲ್ಲಿ ತೇಲಿ ಬರುತ್ತಿದ್ದ ಚಿತ್ರವಿಚಿತ್ರ ಸಂಗೀತಕ್ಕೆ ಅವರ ಸ್ಪಂದನೆ ಎಳ್ಳಷ್ಟೂ ಇರಲಿಲ್ಲ. 20 ಕಿಲೋಮೀಟರ್ ಹೋದ ಮೇಲೆ ಅವರಿಗೆ ಸೀಟು ಸಿಕ್ಕಿದಾಗ ಬೆನ್ನನ್ನು ಒರಗಿಸದೇ ನೇರ ಕುಳಿತ ಅವರು ಮತ್ತೆ ಕಣ್ಮುಚ್ಚಿದರು. ಎಲ್ಲರೂ ತಮ್ಮತಮ್ಮದೇ ಲೋಕದಲ್ಲಿ ಮುಳುಗಿರುವ ಬಸ್ಸಿನಲ್ಲಿ ಈ ಧ್ಯಾನ ಸಾಧಕನ ಬಗ್ಗೆ ಯಾರಿಗೂ ಅಷ್ಟಾಗಿ ಗಮನಕ್ಕೆ ಬರಲಿಲ್ಲ.

ಧ್ಯಾನ ಅಂದ್ರೆ ಇಷ್ಟೇ ನೋಡಿ. ಆದರೆ ಅದನ್ನು ಸಾಧಿಸಲು, ಸುತ್ತಲಿನ ಜಂಜಡಗಳನ್ನು ನಿರ್ಲಕ್ಷಿಸಿ, ಏಕಾಗ್ರತೆಯ ಸ್ಥಿತಿ ತಲುಪಲು ಮಾತ್ರ ಸತತ ಪ್ರಯತ್ನ ಬೇಕು. ಒಮ್ಮೆ ಅದು ದಕ್ಕಿತು ಎಂದರೆ ನೆಮ್ಮದಿ ಎಲ್ಲಿದೆ ಎಂದು ನಾವು ಹುಡುಕಬೇಕಿಲ್ಲ. ಏಕೆಂದರೆ ನೆಮ್ಮದಿಯೇ ನಮ್ಮ ಮನದಲ್ಲಿ ಸದಾ ಮನೆ ಮಾಡಿ ನಗುನಗುತ್ತಾ ಇರುತ್ತದೆ.

ಧ್ಯಾನದ ಬಗ್ಗೆ ಆಸಕ್ತಿಯಿದ್ದರೆ ಈ ಆರು ಅಂಶಗಳನ್ನು ಅನುಸರಿಸಿ...

ಜಾಗ ಹುಡುಕಿ

ತುಸು ಏಕಾಂತ ಸಿಗುವ ಸ್ಥಳ ಹುಡುಕಿಕೊಳ್ಳಿ. ಹೊರಗಿನ ಸದ್ದು ಎಷ್ಟಿದೆ ಎನ್ನುವುದಕ್ಕಿಂತಲೂ ಆ ಸದ್ದಿನಿಂದ ನಿಮ್ಮ ಮನಸ್ಸಿಗೆ ಕಿರಿಕಿರಿಯಾಗುವಂತೆ ಆಗಬಾರದು ಎನ್ನುವುದು ಮುಖ್ಯ.

ಸಮಯ ನಿಗದಿ

ನೀವು ಈಗಿನ್ನೂ ಧ್ಯಾನದ ಜಗತ್ತು ಪ್ರವೇಶಿಸುತ್ತಿದ್ದೀರಿ. ಆದ್ದರಿಂದ ಮೊದಲು ಒಂದೆಡೆ ಅಲುಗಾಡದೆ ಕುಳಿತುಕೊಳ್ಳುವುದು ರೂಢಿಯಾಗಬೇಕು. ಹೀಗಾಗಿ ಕನಿಷ್ಠ 5 ನಿಮಿಷ, ಗರಿಷ್ಠ 10 ನಿಮಿಷ ನಿಮ್ಮ ದೇಹಕ್ಕೆ ಸುಖ ಎನಿಸುವ ರೀತಿಯಲ್ಲಿ ನಿಶ್ಚಲವಾಗಿ ಕಣ್ಮುಚ್ಚಿ ಕುಳಿತುಕೊಳ್ಳುವ ಅಭ್ಯಾಸ ಮಾಡಿ.

ದೇಹವನ್ನು ಗಮನಿಸಿ

ನಿಮ್ಮ ದೇಹದ ಉಸಿರಾಟದ ಚಲನೆ ಗಮನಿಸಿ. ಹೃದಯದ ಬಡಿತ ಆಲಿಸಿ.

ಮನಸ್ಸು ಹತ್ತಿಕ್ಕದಿರಿ

ಹೊರ ಜಗತ್ತಿನ ಬಗ್ಗೆ ಮನಸ್ಸು ಗಮನ ಕೊಡುವುದು ಸಹಜ. ಅದನ್ನು ಬಲವಂತವಾಗಿ ಹತ್ತಿಕ್ಕಬೇಡಿ. ಆದರೆ ಅದು ಎಲ್ಲಿಗೆ ಹೋಗುತ್ತಿದೆ? ಏನು ಯೋಚಿಸುತ್ತಿದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಗಮನಿಸಿ.

ನಿಮ್ಮೊಡನೆ ಮಾತಾಡಿ

ನಿಮ್ಮ ಮನಸ್ಸಿನೊಂದಿಗೆ ನಿಧಾನವಾಗಿ ಮಾತನಾಡಿ. ಅದು ಏನು ಹೇಳಲು ಇಷ್ಟಪಡುತ್ತಿದೆ ಎನ್ನುವುದನ್ನು ಕೇಳಿಸಿಕೊಳ್ಳಿ. ಸಣ್ಣ ಮಗುವನ್ನು ರಮಿಸುವಂತೆ ಅದಕ್ಕೆ ತಿಳಿಸಿಹೇಳಿ. ಧ್ಯಾನಕ್ಕೆ ಸಹಕರಿಸಲು ವಿನಂತಿಸಿ.

ನಿಮ್ಮನ್ನು ಪ್ರೀತಿಸಿ

ಪ್ರೀತಿಯಿಲ್ಲದವರಿಗೆ ಧ್ಯಾನ ಒಲಿಯದು. ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ. ನಿಮ್ಮ ಕುಟುಂಬ, ನೀವು ಇಷ್ಟಪಡುವ ದೇವರು, ಗೆಳೆಯರು, ಸಮಾಜ ಎಲ್ಲರನ್ನೂ ನಾನೂ ಪ್ರೀತಿಸುತ್ತೇನೆ ಅವರೂ ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಿಕೊಳ್ಳಿ. ಇದೇ ಭಾವನೆಯಲ್ಲಿ ಕಣ್ಣು ಬಿಡಿ.

ಮಜಾ ಇದೆ ಅಲ್ವಾ. ಇದರ ಪರಿಣಾಮವೂ ಚೆನ್ನಾಗಿರುತ್ತೆ. ಕಳೆದುಕೊಳ್ಳೋದು ಏನಿದೆ? 10 ನಿಮಿಷ ಸಮಯ ಸಿಕ್ಕಾಗ ಪ್ರಯತ್ನಪಟ್ಟು ನೋಡಿ. ಇಷ್ಟವಾದರೆ ಮುಂದುವರಿಸಿ. ಆದರೆ ಒಂದು ವಿಷಯ ನೆನಪಿನಲ್ಲಿರಲಿ. ಧ್ಯಾನ ಎನ್ನುವುದೇ ಒಂದು ದೊಡ್ಡ ಜಗತ್ತು. ಮೇಲೆ ವಿವರಿಸುವ 6 ಮೆಟ್ಟಿಲುಗಳು ಅದರ ಆರಂಭಿಕ ಹಂತ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT