ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಾಸ ಪರಿಹಾರಕ್ಕೂ ಇದೆ ಮನೆ ಮದ್ದು!

Last Updated 8 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಇತ್ತೀಚಿನ ಬದಲಾದ ಜೀವನಶೈಲಿ, ಆಹಾರಕ್ರಮ ಮುಂತಾದ ಕಾರಣಗಳಿಂದ ಆಯಾಸ ಎನ್ನುವುದು ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಯಾಸ ಕಾಡುತ್ತಲೇ ಇರುತ್ತದೆ. ಕುಳಿತರೂ ಸುಸ್ತು, ನಿಂತರೂ ಸುಸ್ತು ಎಂದು ಅಲವತ್ತುಕೊಳ್ಳುವವರು ಹಲವರು. ಆಯಾಸದ ಕಾರಣದಿಂದ ನಮ್ಮಲ್ಲಿನ ಚುರುಕುತನವೇ ಮಾಯವಾಗಿದೆ ಎಂದು ಗೋಳು ತೋಡಿಕೊಳ್ಳುವವರೂ ಇದ್ದಾರೆ. ಆದರೆ ಆಯಾಸವನ್ನು ಕಡಿಮೆ ಮಾಡಿಕೊಂಡು ಚೈತನ್ಯ ಪುನರುಜ್ಜೀವನಗೊಳಿಸಿ ಶಕ್ತಿಯ ವರ್ಧನೆಗಾಗಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು. ಇವುಗಳು ವೈಜ್ಞಾನಿಕವಾಗಿಯೂ ಸಾಬೀತಾಗಿವೆ.

ಹೂವಿನ ಅಂದವನ್ನು ಕಣ್ತುಂಬಿಕೊಳ್ಳಿ

ಹೆಚ್ಚಿನವರಿಗೆ ಮನೆಗೆಲಸ, ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ, ಸತತವಾದ ಮೀಟಿಂಗ್ ಈ ಎಲ್ಲಾ ಕಾರಣಗಳಿಂದ ಮನಸ್ಸು, ದೇಹ ಎರಡಕ್ಕೂ ಆಯಾಸವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕಿಟಕಿಯಿಂದ ಹೊರಗೆ ಇಣುಕಿ ಹೂದೋಟದ ಅಂದವನ್ನು ಅನುಭವಿಸಬೇಕು. ಕೆಲ ನಿಮಿಷಗಳ ಕಾಲ ಅರಳಿದ ಹೂವನ್ನು ನೋಡುತ್ತಲೇ ಇರುವುದರಿಂದ ಆಯಾಸವನ್ನು ನಿಧಾನಕ್ಕೆ ಕಡಿಮೆ ಮಾಡಿಕೊಳ್ಳಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಇದು ತಕ್ಷಣಕ್ಕೆ ನಮಗೆ ಶಕ್ತಿ ನೀಡುವುದಲ್ಲದೇ ಮನಸ್ಸಿಗೆ ಚೈತನ್ಯ ಮರಳುವಂತೆ ಮಾಡುತ್ತದೆ.

ಗಾಢ ಬಣ್ಣಗಳು ಮೆದುಳಿನ ಬೀಟಾ ಕಿರಣಗಳಲ್ಲಿ ಚೈತನ್ಯವನ್ನು ಹೆಚ್ಚಿಸಿ ಮೆದುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತವೆ. ಇದು ಸೆರೆಬ್ರಲ್‌ ಕಾರ್ಟೆಕ್ಸ್ ಅನ್ನು ಉತ್ತೇಜಿಸಿ ಮೆದುಳಿನ ತೀಕ್ಷ್ಣತೆ ಹೆಚ್ಚಲು ಸಹಾಯ ಮಾಡುತ್ತದೆ.

ಮೊಸರು ಸೇವನೆ

ಊಟದ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರಿಳಿತವಾಗುವುದರಿಂದ ಕೊಂಚ ನಿದ್ದೆ ಬಂದಂತೆ ಭಾಸವಾಗುವುದು ಸಾಮಾನ್ಯ. ಆದರೆ ಇದರ ನಿವಾರಣೆಗೆ ಸಂಶೋಧಕರು ಸುಲಭ ಔಷಧಿಗಳನ್ನು ಕಂಡುಹಿಡಿದಿದ್ದಾರೆ. ನಿರಂತರವಾಗಿ ಮೊಸರು ಹಾಗೂ ಚೀಸ್‌ನ ಚೂರುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತವನ್ನು ಕಡಿಮೆ ಮಾಡಬಹುದು. ಇದರ ಸೇವನೆಯಿಂದ ಶೇ 60 ರಷ್ಟು ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಡೈರಿ ಉತ್ಪನ್ನಗಳಲ್ಲಿನ ಪ್ರೊಟೀನ್‌, ಕ್ಯಾಲ್ಸಿಯಂ ಹಾಗೂ ಕೊಬ್ಬಿನಾಂಶವು ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಕೊಬ್ಬಿನಾಂಶವಿರುವ ವಿವಿಧ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್‌ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವಿಧ ಸಂಶೋಧನೆಗಳಿಂದ ತಿಳಿದು ಬಂದಿದೆ.

ಸಂಗೀತ ಆಲಿಸುವುದು

ಬಿಸಿಲು ಹಾಗೂ ಅತಿಯಾದ ಉಷ್ಣಾಂಶದ ಕಾರಣದಿಂದಲೂ ಆಯಾಸ ಕಾಣಿಸಿಕೊಳ್ಳುವುದು ಸಾಮಾನ್ಯ. ಅಲ್ಲದೇ ಥೈರಾಯ್ಡ್‌ ಹಾರ್ಮೋನ್‌ಗಳ ವ್ಯತ್ಯಾಸದ ಕಾರಣದಿಂದಲೂ ಆಯಾಸವಾಗುತ್ತದೆ. ಥೈರಾಯ್ಡ್‌ ತನ್ನ ಕಾರ್ಯವನ್ನು ಕುಗ್ಗಿಸುವುದರಿಂದ ಆಯಾಸ ಉಂಟಾಗುತ್ತದೆ. ಜಗತ್ತಿನ ಶೇ 50 ರಷ್ಟು ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಆಯಾಸವನ್ನು ತಗ್ಗಿಸಲು ಸಂಗೀತವನ್ನು ಆಲಿಸುವುದು ಉತ್ತಮ. ಸಂಗೀತವು ಮನಸ್ಸು ಹಾಗೂ ದೇಹದ ಆಯಾಸ ನಿವಾರಣೆಗೆ ಉತ್ತಮ ಔಷಧಿ. ಲಘು ಸಂಗೀತವು ಸುಸ್ತನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ಸಲಹೆ ನೀಡಿವೆ. ಸಂಗೀತವು ಮನಸ್ಸಿಗೆ ಒತ್ತಡ ತರುವ ಹಾರ್ಮೋನ್‌ಗಳ ಉತ್ಪಾದನೆಯನ್ನು ಶೇ 30 ರಷ್ಟು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT