ಸೋಮವಾರ, ಮಾರ್ಚ್ 1, 2021
19 °C
ಸಾಮಾನ್ಯ ಹಾಸಿಗೆಗಳಿಗೂ ಆಮ್ಲಜನಕ ಸಂಪರ್ಕ

ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಆಧುನಿಕ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ಮಾತ್ರ ಸೀಮಿತವಾಗಿದ್ದ ಆಮ್ಲಜನಕ ಪೂರೈಕೆ ಹಾಗೂ ವಿವಿಧ ಅತ್ಯಾಧುನಿಕ ಸೌಲಭ್ಯಗಳು ಕೋವಿಡ್‌ ಕಾಣಿಸಿಕೊಂಡ ಬಳಿಕ ಸಾಮಾನ್ಯ ಹಾಸಿಗೆಗಳಿಗೆ ವಿಸ್ತರಿಸಿವೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳ ಹೆಚ್ಚು ಸುಸಜ್ಜಿತವಾಗಿವೆ.

ಕೋವಿಡ್ ಕಾಯಿಲೆ ಕಾಣಿಸಿಕೊಳ್ಳುವ ಮೊದಲು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 5,300 ಹಾಸಿಗೆಗಳು ಮಾತ್ರ ಆಮ್ಲಜನಕದ ಸಂಪರ್ಕ ಹೊಂದಿದ್ದವು. ಕಾಯಿಲೆ ವ್ಯಾಪಿಸಿಕೊಳ್ಳಲಾರಂಭಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಜಿಲ್ಲಾ ಆಸ್ಪತ್ರೆಗಳಲ್ಲಿ 100 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕವನ್ನು ಕಲ್ಪಿಸಿತು. ಅದೇ ರೀತಿ, ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳಿಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 30 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕವನ್ನು ಒದಗಿಸಿದೆ. 

ಈಗ 17 ಜಿಲ್ಲಾ ಆಸ್ಪತ್ರೆಗಳಲ್ಲಿ 1,700 ಆಮ್ಲಜನಕ ಸಂಪರ್ಕ ಹೊಂದಿದ ಹಾಸಿಗೆಗಳಿವೆ. ಅದೇ ರೀತಿ, 146 ತಾಲ್ಲೂಕು ಆಸ್ಪತ್ರೆಗಳಲ್ಲಿ 7,300 ಹಾಗೂ 204 ಸಮುದಾಯ ಆರೋಗ್ಯ ಕೇಂದ್ರಗಳ 6,120 ಹಾಸಿಗೆಗಳು ಆಮ್ಲಜನಕದ ಸಂಪರ್ಕ ಹೊಂದಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

‘ಕೋವಿಡ್‌ ಕಾಯಿಲೆಯು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲನ್ನು ತಂದೊಡ್ಡಿತ್ತು. ಇದೇ ಅವಧಿಯಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ ಕೂಡ ದೊರೆತಿದೆ. ಕಡಿಮೆ ಸಂಖ್ಯೆಯಲ್ಲಿ ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳನ್ನು ನಾವು ಹೊಂದಿದ್ದೆವು. ಕೋವಿಡ್‌ ಕಾಣಿಸಿಕೊಂಡ ಬಳಿಕ ದೊಡ್ದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಸಾಕಾರವಾಯಿತು’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು.

‘ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಈ ಮೊದಲು 5 ಸಾವಿರ ಹಾಸಿಗೆಗಳು ಆಮ್ಲಜನಕದ ಸಂಪರ್ಕ ಹೊಂದಿದ್ದವು. ಈಗ ಆ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ಈ ಸೌಕರ್ಯಗಳು ಕೋವಿಡ್‌ ನಿಯಂತ್ರಣವಾದರೂ ಮುಂದುವರಿಯಲಿವೆ’ ಎಂದು ವಿವರಿಸಿದರು.

ವೆಂಟಿಲೇಟರ್ ಪೂರೈಕೆ: ರಾಜ್ಯದಲ್ಲಿನ ತಾಲ್ಲೂಕು ಆಸ್ಪತ್ರೆಗಳು ಕೋವಿಡ್‌ ಕಾಯಿಲೆ ಕಾಣಿಸಿಕೊಳ್ಳುವ ಮೊದಲು ಕೇವಲ ಒಂದು ವೆಂಟಿಲೇಟರ್‌ ಹೊಂದಿದ್ದವು. ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ಒದಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ ಅಗತ್ಯವಿರುವುದನ್ನು ಅರಿತ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪಿ.ಎಂ ಕೇರ್ ನಿಧಿಯಡಿ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿತ್ತು. ಇದರಿಂದಾಗಿ ರಾಜ್ಯದ ತಾಲ್ಲೂಕು ಆಸ್ಪತ್ರೆಗಳು ಈಗ ನಾಲ್ಕು ವೆಂಟಿಲೇಟರ್‌ಗಳನ್ನು ಹೊಂದಿವೆ.

ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ‘ಕೋವಿಡ್ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ಪರಿಣಾಮ ಗುಣಮಟ್ಟದ ಸೇವೆ ಸಾಧ್ಯವಾಗುತ್ತಿದೆ. ಆಮ್ಲಜನಕ ಪೂರೈಕೆ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಎಲ್ಲೆಡೆ ವಿಸ್ತರಿಸಲಾಗಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಟ್ಯಾಂಕ್‌ಗಳನ್ನೂ ಕೂಡ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು