ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಲಾಕ್‌ಡೌನ್‌?: ಇದು ಬಂಧನವೋ? ಹೊಸತನದ ಅವಕಾಶವೋ? ಒಂದ್ನಿಮಿಷ ಇಲ್ಲಿ ನೋಡಿ

Last Updated 11 ಜನವರಿ 2022, 0:30 IST
ಅಕ್ಷರ ಗಾತ್ರ

ಇದೀಗ ಲಾಕ್‌ಡೌನ್‌ನ ಆತಂಕ ಮತ್ತೆ ಎದುರಾಗಿದೆ. ಆದರೆ ಇದಕ್ಕೆ ಹೆದರಬೇಕಿಲ್ಲ, ಸರಿಯಾಗಿ ಬಳಸಿಕೊಂಡರೆ ಇದು ನಮ್ಮ ಬೆಳವಣಿಗೆಗೆ ಪೂರಕವೂ ಆಗಬಹುದು.

ಲಾಕ್‌ಡೌನ್‌ ಎಂದ ಕೂಡಲೇ ಬಹುತೇಕ ಮಂದಿಗೆ ನಿರಾಶೆಯ ಮೋಡ ಕವಿಯುತ್ತದೆ. ಇದು ಸಹಜ ಕೂಡ. ಅಂದಿನಂದಿನ ಬದುಕಿಗೆ ಹೊಂದಿಕೊಂಡವರ ಪಾಡು ಕಷ್ಟವೇ. ಆದರೆ ಯಾರು ಮಳೆಗಾಲಕ್ಕೆ ಆಹಾರ ಸಂಗ್ರಹಿಸಿದ ಇರುವೆಯಂತೆ ಪುಡಿಗಾಸನ್ನಾದರೂ ಉಳಿಸಿದ್ದಾರೋ ಅವರು ಇದ್ದುದ್ದರಲ್ಲಿ ಕಷ್ಟದ ನದಿ ದಾಟುತ್ತಾರೆ. ಆದರೆ ಯಾರು ಅಧಿಕ ಆದಾಯವೇ ಇದ್ದರೂ ಅನಿಯಮಿತ ಖರ್ಚಿಗೆ ಬಲಿಯಾಗಿರುತ್ತಾರೋ ಅವರು ಕಷ್ಟಕ್ಕೆ ಸಿಲುಕುತ್ತಾರೆ.

ಅದು ಹಾಗಾದರೆ ಮತ್ತೊಂದು ವರ್ಗವಿದೆ. ಅದು ಈ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಆರ್ಥಿಕವಾಗಿ ಬೆಳೆಯಲು ಮತ್ತು ವೈಯಕ್ತಿಕ ಕೌಶಲವನ್ನು ಬೆಳೆಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ಆನ್‌ಲೈನ್‌ ಉದ್ಯಮ ಈ ಕಾಲದಲ್ಲಿ ಹೆಚ್ಚು ಲಾಭ ದಾಖಲಿಸಿದೆ. ಅನೇಕ ಹೊಸ ಬಗೆಯ ಆನ್‌ಲೈನ್‌ ತರಗತಿಗಳು ಆರಂಭವಾಗಿವೆ. ಜನರು ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹೊಸ ಭಾಷೆಗಳನ್ನು ಕಲಿಯಲು ಆರಂಭಿಸಿದವರು, ಸಂಗೀತ, ಬರವಣಿಗೆ ರೂಢಿಸಿಕೊಂಡವರು ಇದ್ದಾರೆ. ಲಾಕ್‌ಡೌನ್‌ ಶಾಪವೋ ವರವೋ ಎಂಬುದು ನಮ್ಮ ನಮ್ಮ ಮನಃಸ್ಥಿತಿಗೆ ಅನುಗುಣವಾಗಿ ನಿರ್ಧರಿತವಾಗುತ್ತದೆ.

ಮನುಷ್ಯ ನಿಜವಾಗಿಯೂ ಬೆಳೆಯಬೇಕಾದರೆ ಹೊರಮುಖವಾದ ಅವನ ಮನಸ್ಸು ಅಂತರ್ಮುಖವಾಗಬೇಕು. ‘ಹುತ್ತಗಟ್ಟದೆ ಚಿತ್ತ’ ವಾಲ್ಮೀಕಿಯಾಗಲೀ ರಾಮಾಯಣವಾಗಲೀ ಹುಟ್ಟುವುದಿಲ್ಲ. ಜಗತ್ತಿಗೆ ವಿಮುಖವಾಗಿ ನಿಲ್ಲುವುದೇ ಒಂದು ತಪಸ್ಸು. ಇದು ನಮ್ಮ ಸ್ವ-ಇಚ್ಛೆಯಿಂದಾದರೆ ಬಹಳ ಸಂತೋಷ.

ಇಲ್ಲವಾದರೆ ಕಾಲಘಟ್ಟದಲ್ಲಿ ಅದು ಬಲವಂತವಾಗಿಯಾದರೂ ನಡೆಯುತ್ತದೆ. ರೋಗ, ವೃದ್ಧಾಪ್ಯ ಇವೆಲ್ಲವೂ ಇದರತ್ತ ಒತ್ತಾಯದ ತಳ್ಳುವಿಕೆ. ಇದನ್ನು ಒಪ್ಪಿಕೊಳ್ಳದೆ ತಹತಹಿಸಿ ಒದ್ದಾಡುವುದಕ್ಕಿಂತ ಜಂಜಡವಿಲ್ಲದ ಕನಿಷ್ಠ ಸಂಪರ್ಕದಲ್ಲಿ ಬದುಕಿನ ಅಂತರ್ದನಿಯನ್ನು ಕೇಳಲು ಇವು ಒಂದು ಅವಕಾಶವೆಂದು ತಿಳಿಯಬೇಕು.

ಲಾಕ್‌ಡೌನ್‌ ಕೂಡ ಇದಕ್ಕೆ ಒಂದು ಪೂರ್ವತಯಾರಿ ಎಂದು ಭಾವಿಸಬೇಕು. ಮನುಷ್ಯ ಒಂಟಿತನವನ್ನು ಇಷ್ಟಪಡುವುದಿಲ್ಲ. ಹಾಗೆ ದ್ವೀಪದಂತೆ ಇರಲು ಮಾನಸಿಕ ಸಿದ್ಧತೆ ಬೇಕು. ಜಗತ್ತಿನಿಂದ ತನ್ನನ್ನು ಬೇರ್ಪಡಿಸುವ ಕ್ರಮವೇ ಲಾಕ್‌ಡೌನ್‌ ಎಂದು ಮನಸ್ಸು ಭಾವಿಸಿ ರಚ್ಚೆ ಹಿಡಿಯುತ್ತದೆ. ಆದರೆ ಯಾವ ಮನಸ್ಸಿಗೆ ಶಿಸ್ತಿದೆಯೋ ಅದು ಈ ಬಗೆಯ ಕ್ರಮಗಳನ್ನು ಸಂತೋಷದಿಂದ ಒಪ್ಪಿಕೊಂಡು ತನ್ನ ಕಾರ್ಯದಲ್ಲಿ ಮಗ್ನವಾಗಿಬಿಡುತ್ತದೆ. ಯಾರಿಗೆ ಒಂಟಿತನ ಸಹನೀಯವಲ್ಲ ಎನಿಸುತ್ತದೋ ಅವರು ಸಂಗವನ್ನೂ ಗದ್ದಲವನ್ನೂ ಬಯಸಿ ಖಿನ್ನರಾಗುತ್ತಾರೆ.

ನಮ್ಮಲ್ಲಿ ಕೆಲವರಿದ್ದಾರೆ, ಒಂಟಿಯಾಗಿರಲು ಹೆದರಿ ವಾಚಾಳಿಗಾಗಿ ಹಂಬಲಿಸುತ್ತಾರೆ. ಒಂಟಿತನದ ಮೌನ ಅಂತಹವರ ಕಣ್ಣುಗಳಿಗೆ ಅವರದೇ ಬೆತ್ತಲನ್ನು ತೋರಿ ಅವರು ಅದರಿಂದ ಪಾರಾಗಲು ಪರಿತಪಿಸುವಂತಾಗುತ್ತದೆ. ಮತ್ತೆ ಕೆಲವರಿದ್ದಾರೆ, ಯಾವುದೇ ತಿಳಿವಳಿಕೆಯಿಲ್ಲದೆ ಅಥವಾ ಮುಂಗಾಣ್ಕೆ ಇಲ್ಲದೆ ತಮಗೇ ಅರ್ಥವಾಗದ ಸತ್ಯವನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರಿದ್ದಾರೆ, ಅವರೊಳಗೆ ಸತ್ಯವಿದೆ. ಆದರೆ ಅದನ್ನು ಅವರು ಮಾತುಗಳಲ್ಲಿ ಹೇಳುವುದಿಲ್ಲ. ಇವರ ಎದೆಯೊಳಗೆ ಚೈತನ್ಯವು ಮೌನದ ತಾಳದೊಂದಿಗೆ ನೆಲೆಸಿರುತ್ತದೆ’. ಇವು ಖಲೀಲ್‌ ಗಿಬ್ರಾನನ ಮಾತುಗಳು.

ಎಲ್ಲ ಸವಲತ್ತುಗಳು ಇದ್ದರೂ ಮನುಷ್ಯ ಅದೇಕೆ ಲಾಕ್‌ಡೌನ್‌ನಂಥ ಪರಿಸ್ಥಿತಿಗೆ ಹೆದರುತ್ತಾನೆ ಎಂಬುದಕ್ಕೆ ಸ್ಪಷ್ಟ ಉತ್ತರ ಮೇಲಿದೆ. ರೂಮಿ ಇದನ್ನು ಇನ್ನೂ ಸೊಗಸಾಗಿ ‘ಮೌನ ಭಗವಂತನ ಭಾಷೆ, ಉಳಿದೆಲ್ಲವು ಕಳಪೆ ಅನುವಾದ’ ಎಂದುಬಿಡುತ್ತಾನೆ. ಮನುಷ್ಯ ಗದ್ದಲದ ಜಗದೊಳಗೆ ಮೌನಕ್ಕೂ ಏಕಂಗಿತನಕ್ಕೂ - ಇವೆಲ್ಲವುಗಳಿಗೂ ಮಾನಸಿಕವಾಗಿ ಸಿದ್ಧನಿರಬೇಕಾದ್ದು ಮುಖ್ಯ. ‘ಬುದ್ಧಿಮಾತಿದು ನಿನಗೆ: ಸಿದ್ಧನಿರು ಸಕಲಕ್ಕಂ, ಎದ್ದು ಕುಣಿಯಲಿ ಕರ್ಮ, ದೈವ ನಿದ್ರಿಸಲಿ, ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ, ಸಿದ್ದನಾಗೆಲ್ಲಕಂ’ ಎಂದಿದ್ದಾರೆ, ಕಗ್ಗದ ಕವಿ. ಲಾಕ್‌ಡೌನ್‌ ಸಮಯದಲ್ಲಿ ದಿನಕ್ಕೊಂದು ಕಗ್ಗ ಬಾಯಿಪಾಠ ಮಾಡಿಕೊಂಡರೂ ಜೀವನದ ಸೊಗಸು ಹೆಚ್ಚಿದಂತೆ ಅಲ್ಲವೇ?

‘ಲಾಕ್‌ಡೌನ್‌ ಕಾರಣದಿಂದ ಮಗ ಶಾಲೆಗೆ ಹೋಗದೆ ಮನೆಯಲ್ಲಿ ಆನ್‌ಲೈನ್‌ ಪಾಠ ಕೂಡ ಕೇಳದೆ ಶುದ್ಧ ಶುಂಠಿಯಾಗುತ್ತಿದ್ದಾನೆ ನೋಡಿ…’ ಪೋಷಕರೊಬ್ಬರ ಅಹವಾಲು. ಆದರೆ ಆ ವಯಸ್ಸಿನ ಮಕ್ಕಳು ಸುಮ್ಮನಿರುವುದಾದರೆ ಅದು ಕಾಯಿಲೆಯೇ. ವಯೋಸಹಜ ಚೇಷ್ಟೆ, ಚಂಚಲತೆ ಇರಬೇಕು, ಅದೇ ಆರೋಗ್ಯ. ‘ಹೌದೇ? ಅವನು ಸಮಯವನ್ನು ಹೇಗೆ ಕಳೆಯುತ್ತಾನೆ?’ ನಾನು ಕೇಳಿದೆ, ‘ಯಾವ ವಿಷಯದಲ್ಲಿ ಅವನಿಗೆ ಆಸಕ್ತಿ?’ ಎಂದೂ ಕೇಳಿದೆ.

‘ಅವನಿಗೆ ಶಾಲೆಯ ಯಾವ ವಿಷಯದಲ್ಲಿಯೂ ಆಸಕ್ತಿಯಿಲ್ಲ. ಆದರೆ ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಸಮಯ ಕಳೆಯುತ್ತಾನೆ. ಗಣಿತ ಕಂಡರಂತೂ ಆಗುವುದೇ ಇಲ್ಲ’ ಮತ್ತೆ ದೂರು. ನನಗೂ ಕೊಂಚ ಆತಂಕ ಎನಿಸಿತು. ಮೊಬೈಲ್‌ ಗೀಳು ಬಿಡಿಸುವುದು ಕೊಂಚ ಸವಾಲಿನ ಕೆಲಸ. ‘ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಏನು ಮಾಡುತ್ತಿರುತ್ತಾನೆ?’ ತಿರುಗಿ ಕೇಳಿದೆ. ‘ಓ, ಅದು ಪ್ರೊಗ್ರಾಮಿಂಗ್‌ ಕಲಿಯುತ್ತಿದ್ದಾನೆ, ಜೊತೆಗೆ ಆ್ಯಪ್‌ಗಳನ್ನೂ ಗೇಮ್‌ಗಳನ್ನೂ ತಯಾರಿಸುತ್ತಿರುತ್ತಾನೆ’ ಎಂದರು. ‘ಎಂತಹ ಅದೃಷ್ಟಶಾಲಿಗಳು ನೀವು! ಅವನು ಇಂದಿನ ಜಗತ್ತಿಗೆ ಹೊಂದಿಕೊಳ್ಳುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾನೆ. ಖುಷಿಪಡಿ. ಗಣಿತ ಕಲಿಯದಿದ್ದರೇನು, ಅವನ ತರ್ಕ, ಆಲೋಚನೆ ಚಂದವಿದ್ದರೆ ಮಾತ್ರ ಅವನು ಹಾಗೆಲ್ಲ ಕಂಪ್ಯೂಟರ್‌, ಮೊಬೈಲ್‌ ಬಳಸಬಲ್ಲ’ ಎಂದು ಸಮಾಧಾನ ಹೇಳಿದೆ.

ಲಾಕ್‌ಡೌನ್‌ ಅನ್ನು ದೂರುವುದನ್ನು ಬಿಟ್ಟು, ಸಮಯದ ಸದ್ಬಳಕೆಯತ್ತ ಗಮನ ಹರಿಸೋಣ.

–ರಘು ವಿ

(ಲೇಖಕ: ಶಿಕ್ಷಣತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT