ಮಂಗಳವಾರ, ಜನವರಿ 18, 2022
23 °C

ಫಿಟ್‌ನೆಸ್‌ನ ಹೊಸ ನೋಟಗಳು: ದೇಹಕ್ಕೂ ಬೇಕು ರೆಗ್ಯುಲರ್‌ ಚೆಕ್‌ಅಪ್‌

ವರುಣ್‌ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯ ಎನ್ನುವುದು ಒಂದು ಪಯಣ. ಆರೋಗ್ಯವನ್ನು ಇದೇ ರೀತಿ ಪರಿಗಣಿಸಬೇಕು. ಈ ಪಯಣಕ್ಕೆ ಸಜ್ಜಾದಾಗ ಎಲ್ಲವೂ ಸರಿಯಾಗಿದೆಯೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮೊಬೈಲ್‌, ಕಾರ್‌ ಮೊದಲಾದ ಸಾಧನಗಳನ್ನು ಬ್ರೇಕ್‌ಡೌನ್‌ ಆಗುವ ಮುನ್ನವೇ ಸರ್ವೀಸ್‌ ಮಾಡಿಸುತ್ತೇವೆ. ಏಕೆಂದರೆ ಈ ಪದ್ಧತಿಯನ್ನು ನಾವು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ಆದರೆ ಆರೋಗ್ಯದ ಬಗ್ಗೆ ನಾವು ಇನ್ನೂ ಗಂಭೀರವಾಗಿಲ್ಲ.

ಜಿಮ್‌ಗೆ ಹೋದ ಮಾತ್ರಕ್ಕೆ ಆರೋಗ್ಯವಂತರಾಗಿರುತ್ತೇವೆ ಎನ್ನುವ ಭ್ರಮೆ ಬೇಡ. ಕಟ್ಟುಮಸ್ತಾದ ದೇಹ, ಸಿಕ್ಸ್‌ ಪ್ಯಾಕ್‌ ಇದ್ದರೆ ಆರೋಗ್ಯವಂತ ಎನ್ನುವ ತಪ್ಪು ತಿಳಿವಳಿಕೆ ಇನ್ನೂ ಇದೆ. ವಾಸ್ತವದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಲು ನಾವು ನಮ್ಮ ಆರೋಗ್ಯವನ್ನು ಬಲಿ ಕೊಡುತ್ತಿದ್ದೇವೆ. ಸೌಂದರ್ಯಕ್ಕಾಗಿ ಆರೋಗ್ಯವನ್ನು ಬಲಿ ಕೊಟ್ಟರೆ ವರ್ಕ್‌ಔಟ್‌ ಮಾಡುವ ಪ್ರಯೋಜನವೇನು? ಸೌಂದರ್ಯ ಎನ್ನುವುದು ಉತ್ತಮ ಆರೋಗ್ಯದ ಭಾಗ.

ಆರೋಗ್ಯವಾಗಿರಲು ಅನುಸರಿಸಬೇಕಾದ ಜೀವನಕ್ರಮಕ್ಕೆ ಆರಂಭ ಏನು ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. ಆಸ್ಪತ್ರೆಗೆ ಹೋದರೆ ಒಂದಿಷ್ಟು ಪರೀಕ್ಷೆಗಳ ಬಳಿಕ, ನಿಮಗೆ ಕಾಯಿಲೆ ಇದೆಯೇ ಇಲ್ಲವೇ ಎನ್ನುವುದನ್ನು ಹೇಳುತ್ತಾರೆ. ಆದರೆ ಇದು ಆರೋಗ್ಯವಾಗಿದ್ದೀರಿ ಎನ್ನುವುದಕ್ಕೆ ಉತ್ತರವಲ್ಲ. ಕಾಲೇಜಿನಲ್ಲಿ 35 ಅಂಕ ತೆಗೆದುಕೊಂಡರೆ ಜಸ್ಟ್‌ ಪಾಸ್‌ ಆದಂತೆ ಇದು. ಆರೋಗ್ಯಕ್ಕೆ ಜಸ್ಟ್‌ ಪಾಸ್‌ ಆದರೆ ಸಾಲುವುದಿಲ್ಲ. ಹೃದಯ ಹಾಗೂ ರಕ್ತನಾಳಗಳಲ್ಲಿ ಏನಾದರೂ ಸಮಸ್ಯೆ ಇದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.  

ದೇಹವೂ ಗಾಡಿಯಂತೆ. ಕಾರಿಗೆ ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್‌ ಹಾಕಿದರೆ, ಓಡುತ್ತದೆ. ಆದರೆ ಎಷ್ಟು ಸಮಯದವರೆಗೆ ಇದು ಓಡುತ್ತದೆ ಎನ್ನುವುದು ಪ್ರಶ್ನೆ. ನಿಮ್ಮ ದೇಹದ ಮೈಲೇಜ್‌ ಹೆಚ್ಚಾಗಬೇಕಾದರೆ ಅದಕ್ಕೆ ಪೂರಕವಾಗಿರುವುದನ್ನೇ ಸೇವಿಸಬೇಕು. ಆದರೆ ನಾವು ಅಂತಿಮ ಫಲಿತಾಂಶದ ಬಗ್ಗೆ ಯೋಚಿಸುತ್ತೇವೆಯೇ ಹೊರತು ನಡುವಿನ ಪ್ರಕ್ರಿಯೆಯನ್ನು ಮರೆಯುತ್ತೇವೆ.

ಆರೋಗ್ಯದ ಮೇಲೆ ಹಣ ವ್ಯಯಿಸುವುದು ಅನಿವಾರ್ಯ. ಕಾಯಿಲೆ ಉಲ್ಬಣವಾದಾಗ ಹೆಚ್ಚು ಹಣ ವ್ಯಯಿಸಿ ಜೀವ ಉಳಿಸಿಕೊಳ್ಳುತ್ತೀರಾ ಅಥವಾ ಕಾಲಕಾಲಕ್ಕೆ ಆರೋಗ್ಯದ ಮೇಲೊಂದಿಷ್ಟು ಬಂಡವಾಳ ಹೂಡಿ, ಜೀವನಕ್ರಮ ಬದಲಾಯಿಸಿಕೊಳ್ಳುತ್ತೀರಾ ಎನ್ನುವುದು ಮುಖ್ಯ. ಯುವಜನತೆ ಇಂದು ಸಿಂಗಲ್‌ ಡಿಜಿಟ್‌ ಬಾಡಿ ಫ್ಯಾಟ್‌ಗಾಗಿ ಆರೋಗ್ಯವನ್ನೇ ಬಲಿಕೊಡುತ್ತಿದ್ದು, ಅವರ 30–40ನೇ ವಯಸ್ಸಿನಲ್ಲಿ ಇದರ ಪರಿಣಾಮ ಅನುಭವಿಸುತ್ತಿದ್ದಾರೆ. ನನಗಿನ್ನೂ 20–30 ವರ್ಷ, ಏನೂ ಆಗುವುದಿಲ್ಲ ಎನ್ನುವ ಮನಃಸ್ಥಿತಿಯಿಂದ ಮೊದಲು ಹೊರಬರಬೇಕು. 

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಮನುಷ್ಯನ ದೇಹ ಎಲ್ಲ ರೀತಿಯ ಚಟುವಟಿಕೆಗಳಿಗೆ ಹೊಂದಿಕೊಳ್ಳುತ್ತದೆ. ಕ್ರೀಡೆ, ನಡಿಗೆ, ಓಡುವುದು, ಸೈಕ್ಲಿಂಗ್‌, ಈಜು, ಲಿಫ್ಟಿಂಗ್‌ ಹೀಗೆ ಎಲ್ಲವನ್ನೂ ಮಿತಿಮೀರದ ಹಾಗೆ ಮಾಡಿ. ಅತಿಯಾದರೆ ಅಮೃತವೂ ವಿಷ. ದೇಹಕ್ಕೆ ಹೆಚ್ಚಿನ ಒತ್ತಡವಾಗದ ರೀತಿ ಚಟುವಟಿಕೆಗಳು ಇರಲಿ. ನೀವು ಹಾಕುವ ಒತ್ತಡವನ್ನು ದೇಹಕ್ಕೆ ಅಥವಾ ಮನಸ್ಸಿಗೆ ತಡೆದುಕೊಳ್ಳಲು ಆಗದೇ ಇದ್ದಾಗ ಸಮಸ್ಯೆಗಳು ಆರಂಭವಾಗುತ್ತವೆ. ಪ್ರತಿಯೊಬ್ಬರ ದೇಹವೂ ಭಿನ್ನ. ಇದನ್ನು ಮೊದಲು ಅರಿತುಕೊಳ್ಳಿ. ನಿಮ್ಮ ಆರೋಗ್ಯಕ್ಕೆ ಉತ್ತರ ನಿಮ್ಮ ದೇಹದಲ್ಲೇ ಇದೆ. ಇದನ್ನು ಹುಡುಕದೇ ಇದ್ದರೆ ಜಿಪಿಎಸ್‌ ಇಲ್ಲದೇ ಗಾಡಿ ಓಡಿಸಿದಂತೆ. ಗುರಿ ತಲುಪುತ್ತೀರೋ ಇಲ್ಲವೋ ತಿಳಿಯುವುದಿಲ್ಲ.

ಲೇಖಕ: ಬೆಂಗಳೂರಿನ ಇನ್‌ವಿಕ್ಟಸ್‌ ಪರ್ಫಾರ್ಮೆನ್ಸ್‌ ಲ್ಯಾಬ್‌ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು