ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ನಮ್ಮ ಹಿರಿಯರನ್ನು ರಕ್ಷಿಸಿ ಎಲ್ಲವನ್ನೂ ಉಳಿಸೋಣ

Last Updated 29 ಮಾರ್ಚ್ 2020, 7:00 IST
ಅಕ್ಷರ ಗಾತ್ರ

ಕೊರೊನಾ ಹರಡುತ್ತಿರುವಂತೆ ಆತಂಕ, ಗೊಂದಲ ಹೆಚ್ಚತೊಡಗಿವೆ. ಈ ಸನ್ನಿವೇಶದಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಆದರೆ ವೈಜ್ಞಾನಿಕ ಮಾಹಿತಿಗಳ ಆಧಾರದಲ್ಲಿ, ವಸ್ತುನಿಷ್ಠ ಚಿಂತನೆಯಿಂದ ಎಷ್ಟೇ ಕಷ್ಟದ ಸಮಸ್ಯೆಯಿದ್ದರೂ ಪರಿಹಾರವನ್ನು ಹುಡುಕಿಕೊಳ್ಳಬಹುದು.

ಕೊರೊನಾ ಸೋಂಕು ಸಾವಿರಗಟ್ಟಲೆ ಜನರನ್ನು ಬಾಧಿಸಿದರೂ, ಅದರಿಂದ ತೀವ್ರ ಸಮಸ್ಯೆಗೀಡಾಗಿ ಸಾವನ್ನಪ್ಪುವವರಲ್ಲಿ ಶೇ 99ರಷ್ಟು ಮಂದಿ ಹಿರಿಯರೇ ಆಗಿರುತ್ತಾರೆ ಎನ್ನುವುದು ಈಗ ಚೀನಾ, ಇಟಲಿ, ಸ್ಪೇನ್ ಸೇರಿದಂತೆಎಲ್ಲೆಡೆ ದೃಢಪಟ್ಟಿದೆ. ಎಷ್ಟೇ ಪ್ರಯತ್ನಿಸಿದರೂ ಕೊರೊನಾ ಹರಡುವುದನ್ನು ತಡೆಯುವುದು ಸುಲಭವಲ್ಲ ಎನ್ನುವುದೂ, ಕೊರೊನಾದಿಂದ ಒಂದೇ ಸಲಕ್ಕೆ ಹಲವು ಹಿರಿಯರು ಉಸಿರಾಟದ ಸಮಸ್ಯೆಗೀಡಾದರೆ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಕೂಡ ಸುಲಭವಲ್ಲ ಎನ್ನುವುದೂ ದೃಢಪಟ್ಟಿದೆ. ಈ ಕಷ್ಟಗಳಿಗೆ ಸರಳ, ಸುಲಭದ ಪರಿಹಾರ ಎಂದರೆ ಹಿರಿಯ ವಯಸ್ಕರನ್ನು ಸೋಂಕಿನಿಂದ ರಕ್ಷಿಸಿಡುವುದು.

ರೋಗಗಳ ನಿಯಂತ್ರಣದ ಬಗ್ಗೆ ವಿಶ್ವದಲ್ಲೇ ಅತ್ಯಂತ ಹಿರಿಮೆಯುಳ್ಳ ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಮಾರ್ಚ್ 24ರಂದು ಭಾರತದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಮತ್ತು ಅದರ ಪರಿಣಾಮಗಳ ಬಗ್ಗೆ ವರದಿಯನ್ನು ಪ್ರಕಟಿಸಿದೆ.

ಅದರಲ್ಲಿರುವ ಅತಿ ಮುಖ್ಯ ಹೇಳಿಕೆ ಹೀಗಿದೆ:

Immediate social distancing focused on the elderly population is essential. We have modeled a three-week period of complete isolation for the elderly. The longer this period, the more we are able to delay infections into the post-July period.

'ಹಿರಿಯರನ್ನು ತಕ್ಷಣದಿಂದ ದೂರವಿರಿಸುವುದು ಅತ್ಯಗತ್ಯವಾಗಿದೆ. ನಾವು ಹಿರಿಯರನ್ನು ಮೂರು ವಾರಗಳ ಕಾಲ ಸಂಪೂರ್ಣವಾಗಿ ಪ್ರತ್ಯೇಕಿಸಿಡುವ ಮಾದರಿಯನ್ನು ಸಿದ್ಧಪಡಿಸಿದ್ದೇವೆ. ಈ ಅವಧಿಯು ಹೆಚ್ಚಾದಷ್ಟೂ ಜುಲೈ ನಂತರದಲ್ಲಿ ಸೋಂಕು ಹರಡುವ ಸಾಧ್ಯತೆಗಳನ್ನು ಇನ್ನಷ್ಟು ಮುಂದೂಡಬಹುದು'.

ಹೀಗೆ ಹಿರಿಯರನ್ನು ಪ್ರತ್ಯೇಕಿಸಿಟ್ಟರೆ ಕೊರೊನಾ ಸೋಂಕಿತರ ಸಂಖ್ಯೆಯು ಅರ್ಧಕ್ಕರ್ಧ ಕಡಿಮೆಯಾಗುತ್ತದೆ, ತೀವ್ರ ಸಮಸ್ಯೆಗೊಳಗಾಗುವರ ಸಂಖ್ಯೆಯೂ ಬಹಳಷ್ಟು ಇಳಿಯುತ್ತದೆ; ಎಷ್ಟೆಂದರೆ, 1000 ವೆಂಟಿಲೇಟರ್ ಬೇಕಾಗುವಲ್ಲಿ ಕೇವಲ 150 ವೆಂಟಿಲೇಟರ್ ಇದ್ದರೆ ಸಾಕಾಗುತ್ತದೆ!

ಹಿರಿಯರನ್ನಷ್ಟೇ ಸಂರಕ್ಷಿಸಿದರೆ ಸೋಂಕಿನ ಹರಡುವಿಕೆ ಕಡಿಮೆಯಾಗುವುದು ಏಕೆ ಗೊತ್ತೇ? ಅತಿ ಹೆಚ್ಚು ಸಮಸ್ಯೆಗಳಾದವರೇ ಅದನ್ನು ಅತಿ ಹೆಚ್ಚು ಹರಡುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆಗೀಡಾಗಬಲ್ಲ ಹಿರಿಯರನ್ನು ಸೋಂಕಿನಿಂದ ರಕ್ಷಿಸಿದರೆ, ಸೋಂಕಿನ ಹರಡುವಿಕೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ! ಮಾತ್ರವಲ್ಲ, ಆಸ್ಪತ್ರೆಗಳನ್ನೂ, ವೈದ್ಯರನ್ನೂ, ವೈದ್ಯಕೀಯ ಸಿಬಂದಿಯನ್ನೂ ಕೂಡ ಸೋಂಕಿನಿಂದ ರಕ್ಷಿಸಿದಂತಾಗುತ್ತದೆ.

ಹೀಗೆ, 60 ವರ್ಷಗಳಿಗೆ ಮೇಲ್ಪಟ್ಟ ಹಿರಿಯರನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿ ಇರಿಸಿದರೆ ಈ ಎಲ್ಲಾ ಲಾಭಗಳಿವೆ:

ತೀವ್ರ ಉಸಿರಾಟದ ತೊಂದರೆಯಾಗಿ ವೆಂಟಿಲೇಟರ್ ಬೇಕಾಗುವವರ ಸಂಖ್ಯೆಯು ಆರೇಳು ಪಟ್ಟು ಕಡಿಮೆಯಾಗುತ್ತದೆ; 1000 ವೆಂಟಿಲೇಟರ್ ಬೇಕಾಗುವಲ್ಲಿ 150 ಸಾಕಾಗುತ್ತವೆ. ಕೊರೊನಾ ಸೋಂಕಿನ ಹರಡುವಿಕೆಯೂ ಅರ್ಧಕ್ಕರ್ಧ ಕಡಿಮೆಯಾಗುತ್ತದೆ.
ಆರೋಗ್ಯ ಸೇವೆಗಳ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗಿ ಉಳಿದೆಲ್ಲ ಆರೋಗ್ಯ ಸೇವೆಗಳನ್ನು ಅಬಾಧಿತವಾಗಿ ನಡೆಸಲು ಅನುಕೂಲವಾಗುತ್ತದೆ.

ನಮ್ಮ ಹಿರಿಯರನ್ನು ಕೊರೊನಾದಿಂದ ರಕ್ಷಿಸುವುದು ಹೇಗೆ?

ನಾವೆಲ್ಲರೂ ಸೇರಿ ಮನಸ್ಸು ಮಾಡಿದರೆ ಅದು ಅತಿ ಸುಲಭ. ಹೀಗೆ ಮಾಡಬೇಕೆಂಬ ಸಲಹೆಯನ್ನು ಮೊದಲ ಬಾರಿಗೆ ಮುಂದಿಟ್ಟಾಗ ಕೆಲವರು ಬೇಸರಿಸಿಕೊಂಡಿದ್ದರು, ಕೆಲವರು ಸಿಟ್ಟಾಗಿದ್ದುದೂ ಉಂಟು. ಮಕ್ಕಳು-ಮೊಮ್ಮಕ್ಕಳನ್ನು ಬಿಟ್ಟು ಅವರನ್ನು ಬೇರೆಯಾಗಿ ಇಡುವುದು ಹೇಗೆ ಎಂಬುದೇ ಹೆಚ್ಚಿನವರ ಆತಂಕವಾಗಿತ್ತು.

ಸ್ವಲ್ಪ ಶಾಂತಚಿತ್ತರಾಗಿ ಆಲೋಚಿಸಿ ನೋಡಿ. ಈಗಲೂ ಅದೆಷ್ಟೋ ಹಿರಿಯರು ತಾವಷ್ಟೇ ಮನೆಗಳಲ್ಲಿರುತ್ತಾರೆ, ದೇಶದ ಅಥವಾ ಯಾವುದೋ ವಿದೇಶದ ಬೇರೆ ಬೇರೆ ಭಾಗಗಳಲ್ಲಿರುವ ತಮ್ಮ ಮಕ್ಕಳು-ಮೊಮ್ಮಕ್ಕಳ ಜೊತೆ ದೂರ ಸಂಪರ್ಕದಲ್ಲೇ ಇರುತ್ತಾರೆ. ಕೊರೊನಾದಿಂದ ರಕ್ಷಿಸಲು ನಾವು ಅವರನ್ನೇನೂ ಬಹು ದೂರ ಕಳಿಸುವುದಿಲ್ಲ, ನಮ್ಮೂರಲ್ಲೇ ಬೇರೆಯೇ ಮನೆಯಲ್ಲೋ, ವಸತಿಯಲ್ಲೋ ಉಳಿಸುತ್ತೇವೆ, ಅಷ್ಟೇ. ಅವರ ಆರೋಗ್ಯ ರಕ್ಷಣೆಗೆ, ಜೀವ ರಕ್ಷಣೆಗೆ ಅಷ್ಟನ್ನು ಮಾಡಲಾರೆವೇ?

ನೆರೆಯೋ, ಸುನಾಮಿಯೋ ಬರುವ ಮುನ್ನೆಚ್ಚರಿಕೆಯಿದ್ದರೆ ಮೊಟ್ಟಮೊದಲು ದುರ್ಬಲರನ್ನೇ ಬೇರೆಡೆಗೆ ಸ್ಥಳಾಂತರಿಸುತ್ತೇವೆ, ಸಬಲರೆಲ್ಲರೂ ತಾವೇ ಈಜಿ ರಕ್ಷಿಸಿಕೊಳ್ಳುತ್ತಾರೆ. ಆ ವಿಕೋಪದಿಂದ ಈಜಿ ಉಳಿಯಲು ಅವರಿಗೆ ಸಾಧ್ಯವಾಗದು ಎಂಬ ಕಾರಣಕ್ಕೆ, ಹಾಗೆ ಮಾಡದಿದ್ದರೆ ವಿಕೋಪ ಘಟಿಸಿದಾಗ ಅವರನ್ನು ಉಳಿಸಲು ಇತರರಿಗೂ ಬಹು ಕಷ್ಟವಾದೀತು ಎಂಬ ಕಾರಣಕ್ಕೆ ಹೀಗೆ ದುರ್ಬಲರನ್ನು ಸ್ಥಳಾಂತರಿಸುತ್ತೇವೆ. ಈ ಕೊರೊನಾ ಎಂಬ ಸುನಾಮಿಯೂ ಹಾಗೆಯೇ - ಹಿರಿಯರನ್ನು ಈ ಕೂಡಲೇ ಸ್ಥಳಾಂತರಿಸದಿದ್ದರೆ ತೀವ್ರವಾಗಿ ಸೋಂಕಿತರಾದವರನ್ನು ಉಳಿಸುವುದು ಕಷ್ಟವಾಗಬಹುದು, ಮಾತ್ರವಲ್ಲ, ಮೇಲೆ ಹೇಳಿದಂತೆ, ಕೊರೊನಾ ಹರಡುವಿಕೆಯ ಇತರ ಸಮಸ್ಯೆಗಳೂ ಉಲ್ಬಣಗೊಳ್ಳಬಹುದು

ಆದ್ದರಿಂದ ನಮ್ಮ ಹಿರಿಯರನ್ನು ಉಳಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು. ಸರಕಾರದಿಂದ ಇದೆಲ್ಲವನ್ನೂ ಮಾಡುವುದು ಅಸಾಧ್ಯವಾದುದರಿಂದ ನಾವೇ ನಮ್ಮ ಕುಟುಂಬಗಳನ್ನು ರಕ್ಷಿಸಬಹುದು, ಇತರರಿಗೂ ಹಾಗೆ ಮಾಡಲು ನೆರವಾಗಬಹುದು.

ಒಂದೇ ಮನೆಯೊಳಗೆ ಅವರನ್ನು ಬೇರೆಯೇ ಕೊಠಡಿಯಲ್ಲಿಟ್ಟರೆ ಸ್ವಲ್ಪ ಮಟ್ಟಿನ ರಕ್ಷಣೆ ಸಿಗಬಹುದಾದರೂ, ಮನೆ ಮಂದಿ, ಅದರಲ್ಲೂ ಮಕ್ಕಳು, ಹೊರಗಿಂದ ಸೋಂಕನ್ನು ತಂದರೆ, ಮಕ್ಕಳು-ಮೊಮ್ಮಕ್ಕಳ ಸಂಪರ್ಕದಿಂದ ಹಿರಿಯರಿಗೆ ಸಮಸ್ಯೆಯಾಗುವ ಸಂಭವ ಇದ್ದೇ ಇರುತ್ತದೆ. ಆದ್ದರಿಂದ, ಸ್ವಲ್ಪ ಕಠಿಣ ಅಥವಾ ಅತಿರೇಕವೆಂದೆನಿಸಿದರೂ, ಯಾರಿಗೆಲ್ಲ, ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಹಿರಿಯರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ಸುರಕ್ಷಿತವಾಗಿರಿಸುವುದೇ ಒಳ್ಳೆಯದು.

ಮಾಡಬೇಕಾದದ್ದೇನು?

60 ವರ್ಷಕ್ಕೆ ಮೇಲ್ಪಟ್ಟ ಹಿರಿಯರನ್ನು (ಇಂಗ್ಲೆಂಡಿನಲ್ಲಿ 70ಕ್ಕೆ ಮೇಲ್ಪಟ್ಟವರನ್ನು ಸುರಕ್ಷಿತವಾಗಿರಿಸುವ ಯೋಜನೆ ಇದೆ), ಅವರಲ್ಲೂ ರಕ್ತದ ಏರೊತ್ತಡ (ಬಿಪಿ), ಸಕ್ಕರೆ ಕಾಯಿಲೆ (ಡಯಾಬಿಟಿಸ್), ಹೃದ್ರೋಗ, ಬೊಜ್ಜು, ಕ್ಯಾನ್ಸರ್, ಧೂಮಪಾನದ ಚಟ ಇರುವವರನ್ನು, ಮುಂದಿನ ಎರಡು ತಿಂಗಳ ಕಾಲ ಪ್ರತ್ಯೇಕವಾಗಿ, ಸುರಕ್ಷಿತವಾಗಿ ಇರಿಸುವುದು. ಇವರು ವಾಸಿಸುವ ಕಟ್ಟಡದ ಒಳಕ್ಕೆ ಬೇರೆ ಯಾರೂ ಬರಬಾರದು, ಒಳಗಿದ್ದವರು ಕೂಡ ಹೊರಕ್ಕೆ ಹೋಗಬಾರದು; ಹಾಗೇನಾದರೂ ಹೊರಕ್ಕೆ ಹೋದರೆ ಮತ್ತೆ ಆ ಕಟ್ಟಡದೊಳಕ್ಕೆ ಬರಬಾರದು.

ಆದ್ದರಿಂದ ಈ ಹಿರಿಯರನ್ನು ನೋಡಿಕೊಳ್ಳಲು, ಅವರಿಗೆ ಆಹಾರ ತಯಾರಿಸಲು, ಔಷಧ-ಆರೈಕೆ ಮಾಡಲು ಸಿದ್ಧರಿರುವವರು ಆ ಎರಡು ತಿಂಗಳು ಆ ಕಟ್ಟಡದೊಳಕ್ಕೆ ತಾವೂ ಪ್ರತಿಬಂಧಿತರಾಗಿ ಇರಲು ಸಿದ್ಧರಿರಬೇಕು. ಪ್ರತಿನಿತ್ಯ ತಮ್ಮ ಕೆಲಸಕ್ಕಾಗಿ ಹೊರಗೆ ಹೋಗಲೇಬೇಕಾದವರು ಈ ವ್ಯವಸ್ಥೆಯಲ್ಲಿ ಇರಲು ಸಾಧ್ಯವಿಲ್ಲ. ಅಂತಹಾ ಜವಾಬ್ದಾರಿಗಳಿಲ್ಲದವರು, ಉದಾಹರಣೆಗಾಗಿ, ಈಗ ಮನೆಯಿಂದಲೇ ಕೆಲಸ ಮಾಡಬಲ್ಲವರು, ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.

ಉದಾಹರಣೆ 1:ಒಂದು ಕುಟುಂಬದ ಸಹೋದರ-ಸಹೋದರಿಯರು ತಮ್ಮ ಹೆತ್ತವರನ್ನೂ, ಅತ್ತೆ ಮಾವಂದಿರನ್ನೂ ಒಂದೇ ಮನೆಯಲ್ಲಿ ಇರಿಸಿ, ಒಬ್ಬರು ದಂಪತಿ, ಬೇಕಿದ್ದರೆ ತಮ್ಮ ಒಬ್ಬಿಬ್ಬರು ಮಕ್ಕಳ ಸಹಿತ, ಆ ಮನೆಯಲ್ಲಿರಬೇಕು; ಕೊರೊನಾ ಪಿಡುಗು (ಸುನಾಮಿ) ಬಂದು ಹೋಗುವವರೆಗೆ ಆ ಮನೆಯಲ್ಲೇ ಅವರೆಲ್ಲರೂ ಇರಬೇಕು. ಇವರೆಲ್ಲರಿಗೆ ಬೇಕಾದ ದಿನಸಿ, ತರಕಾರಿ ಇತ್ಯಾದಿಗಳು ಗೇಟಿನಲ್ಲೇ ಪೂರೈಕೆಯಾಗಬೇಕು, ಅವನ್ನು ಪ್ರತ್ಯೇಕವಾಗಿ ಒಳತಂದು, ಶುದ್ಧೀಕರಿಸಿ, ಬಳಸಲಾರಂಭಿಸಬೇಕು. ಅಂತೂ ಯಾರೊಬ್ಬರೂ ಈ ಕಟ್ಟಡದ ಒಳಕ್ಕೆ ಹೊರಕ್ಕೆ ಹೋಗುವಂತಿರಬಾರದು.

ಉದಾಹರಣೆ 2:ಒಂದು ಬಹು ಮಹಡಿ ಅಪಾರ್ಟ್‌ಮೆಂಟಿನಲ್ಲಿ ಹೆಚ್ಚಿನ ಮನೆಗಳಲ್ಲಿ (ಪರಿಚಯದವರ, ಬಂಧುಗಳ ಮನೆಗಳಾಗಬಹುದು, ಇತರರದ್ದೂ ಆಗಬಹುದು, ಈ ಎರಡು ತಿಂಗಳಿಗೆ ಬೇರೆಯವರ ಮನೆಗಳಲ್ಲಿರಬೇಕಾದ/ ಬೇರೆಯವರಿಗೆ ಕೊಡಬೇಕಾದ ಅಗತ್ಯವಿದ್ದರೆ ಹಾಗೆ ಮಾಡಲು ಸಿದ್ಧರಾಗಬೇಕು) ಹಿರಿಯರಿಗೆ ವಾಸ್ತವ್ಯವನ್ನು ಕಲ್ಪಿಸಿ, ಅವರ ನೆರವಿಗೆ ಒಂದೆರಡು ಯುವ ದಂಪತಿಗಳಿರುವಂತೆ ಮಾಡಬಹುದು. ಹಿರಿಯರಿಗೆ ಬಿಟ್ಟುಕೊಟ್ಟ ಮನೆಗಳಲ್ಲಿದ್ದ ಯುವಜನರು/ಮಕ್ಕಳು ಆ ಹಿರಿಯರು ಮೊದಲಿದ್ದ ಮನೆಗಳನ್ನು ಬಳಸಬೇಕು. ಮೇಲೆ ಹೇಳಿದ ಉಳಿದೆಲ್ಲ ಎಚ್ಚರಿಕೆಗಳನ್ನು ಇಲ್ಲೂ ಪಾಲಿಸಬೇಕು.

ಉದಾಹರಣೆ 3:ಹೀಗೆ ಸ್ವಂತ ಮನೆ/ಅಪಾರ್ಟ್ ಮೆಂಟ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗದವರು, ಅದರಲ್ಲೂ ಬಡ, ನಿರ್ಗತಿಕ ಹಿರಿಯರಿಗೆ ಸರಕಾರ ಅಥವಾ ಸಂಘ ಸಂಸ್ಥೆಗಳು ಅಥವಾ ಧಾರ್ಮಿಕ ಸಂಘಟನೆಗಳು ಈಗ ಖಾಲಿಯಾಗಿರುವ ಹೋಟೆಲುಗಳು, ಹಾಸ್ಟೆಲುಗಳು, ಛತ್ರಗಳು ಮುಂತಾದ ಕಡೆಗಳಲ್ಲಿ ವಸತಿಯನ್ನು ಕಲ್ಪಿಸಿ, ಅವರಿಗೆ ಆಹಾರ, ಆರೈಕೆಗಳಿಗಾಗಿ ಅಗತ್ಯವಿರುವವರನ್ನು ನೇಮಿಸಿ, ಅವರೆಲ್ಲರೂ ಮೇಲೆ ಹೇಳಿದ ಪ್ರತಿಬಂಧಕ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಬೇಕು.

ಹೀಗೆ ಮಾಡುವುದು ಸುಲಭವಲ್ಲ, ಕಷ್ಟವಿದೆ. ಎಲ್ಲರೂ ಇದನ್ನು ಒಪ್ಪುವುದು ಕೂಡಾ ಸುಲಭವಲ್ಲ. ಈ ಪ್ರತಿಬಂಧಗಳನ್ನು ಹಿರಿಯರಾಗಲೀ, ಅವರ ಜೊತೆಗಿರಬೇಕಾದ ಕಿರಿಯರಾಗಲೀ ಒಪ್ಪಿಕೊಳ್ಳುವುದೂ ಸುಲಭವಲ್ಲ. ಆದರೆ ಈ ಕೊರೊನಾ ಸುನಾಮಿಯಿಂದ ರಕ್ಷಿಸಿಕೊಳ್ಳಬೇಕಾದರೆ ಇದಲ್ಲದೆ ಬೇರೆ ದಾರಿಯೂ ಇಲ್ಲ. ಆದ್ದರಿಂದ ಮುಂದಿನ ಎರಡು ತಿಂಗಳು ನಾವೆಲ್ಲರೂ ಒಂದಷ್ಟು ಹೊಸ ಬದಲಾವಣೆಗಳಿಗೆ, ಹೊಸ ಜೀವನ ಕ್ರಮಗಳಿಗೆ ಸಿದ್ಧರಾಗಬೇಕು.

ಇವನ್ನು ಮಾಡಬಯಸುವವರು ಮುಂದಿನ ವಾರದೊಳಗೆ, ಅಂದರೆ ಏಪ್ರಿಲ್ ಮೊದಲ ವಾರದೊಳಗೆ, ಇವನ್ನು ಮಾಡಬೇಕು. ಒಮ್ಮೆ ಸಮುದಾಯದೊಳಗೆ ಕೊರೊನಾ ಹರಡಲಾರಂಭಿಸಿದರೆ, ಕೆಲವರು ಹಿರಿಯರು ಸೋಂಕಿತರಾದರು ಎಂದರೆ, ಆ ಬಳಿಕ ಈ ವ್ಯವಸ್ಥೆ ಫಲಿಸದು. ಹಾಗೆ ಸೋಂಕಿತರಾದ ಒಬ್ಬರು ಈ ವ್ಯವಸ್ಥೆಯ ಒಳಹೊಕ್ಕರೆ ಇತರ ಎಲ್ಲರಿಗೂ ಅವರಿಂದಲೇ ಸೋಂಕು ಹರಡಬಹುದು.

ಈ ವ್ಯವಸ್ಥೆಯ ಹೊರಗೆ ಉಳಿದ ಯುವಕರಿಗೂ, ಮಕ್ಕಳಿಗೂ ಕೊರೊನಾ ತಗಲುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗೇನಾದರೂ ಅವರಿಗೆ ಕೊರೊನಾ ತಗಲಿದರೂ ಕೂಡ ಅವರೆಲ್ಲರೂ ಯಾವುದೇ ಚಿಕಿತ್ಸೆಯಿಲ್ಲದೆಯೇ ವಾರದೊಳಗೆ ಗುಣಮುಖರಾಗುತ್ತಾರೆ, ಹೆದರಬೇಕಾಗಿಯೇ ಇಲ್ಲ. ಅಮೆರಿಕಾದ ಹಿರಿಯ ಸಮುದಾಯ ಆರೋಗ್ಯ ತಜ್ಞರಾದ ಡೇವಿಡ್ ಕಾಟ್ಜ್ ಕೂಡ ಈಗ ಹಿರಿಯರನ್ನಷ್ಟೇ ರಕ್ಷಿಸಿಡುವ ಇಂಥದ್ದೇ ಯೋಜನೆಯನ್ನು ಮುಂದಿಡುತ್ತಿದ್ದಾರೆ.

ಹಿರಿಯರನ್ನು ಇಂದೇ ಪ್ರತ್ಯೇಕಿಸಿಟ್ಟು ರಕ್ಷಿಸೋಣ, ಅದಕ್ಕಾಗಿ ಕೆಲವು ಕಿರಿಯರು ಕಟಿಬದ್ಧರಾಗೋಣ, ಆ ಮೂಲಕ ಕೊರೊನಾ ಓಡಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT