ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಎಂದರೆ; ‘ಸಾವು’ ಸಮಸ್ಯೆ ಎನ್ನುವುದಕ್ಕಿಂತ, ‘ಸಾವಿನ ಭಯ’ವೇ ಸಮಸ್ಯೆ...

Last Updated 8 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಮನುಷ್ಯನಿಗೆ ಸಾವಿನ ಅರಿವು ಉಂಟಾಗುವುದು ಬಾಲ್ಯದಲ್ಲಿ. 3-4 ವರ್ಷದ ಮಕ್ಕಳಲ್ಲಿ ಹಲವು ರೀತಿಯ ಭಯಗಳು ಕಂಡುಬರುತ್ತವೆಯಷ್ಟೆ. ಕತ್ತಲಲ್ಲಿ ದೆವ್ವ-ಪಿಶಾಚಿಗಳ ಭಯ, ಹೆತ್ತವರಿಂದ ದೂರವಾದೇನೆಂಬ ಹೆದರಿಕೆ, ಇಂಥವು. ಹಂತಹಂತವಾಗಿ ಮಕ್ಕಳು ಇಂಥ ಭಯಗಳಿಂದ ಹೊರಬರುತ್ತಾರೆ. ಇಷ್ಟೆಲ್ಲಾ ಭಯಗಳಿದ್ದರೂ ‘ಸಾವಿನ ಭಯ ಚಿಕ್ಕಮಕ್ಕಳಲ್ಲಿ ಕಂಡುಬರುವುದು ಬಲು ಕಡಿಮೆ. ಸಾವು ‘ಮತ್ತೆ ಮರಳಿ ಬಾರದಂತಹ ಅವಸ್ಥೆ’ ಎಂಬ ತಿಳಿವು ಅವರಿಗಿರದಿರುವುದೇ ಇದಕ್ಕೆ ಪ್ರಮುಖ ಕಾರಣ. ಸುಮಾರು 7-8 ವರ್ಷಗಳ ಹೊತ್ತಿಗೆ ಸಾವು ‘ಹಿಂದಿರುಗಿ ಬಾರದ ಸ್ಥಿತಿ’ ಎಂಬುದು ಗೊತ್ತಾಗುತ್ತದೆ.

ನಮ್ಮ ವಾಹನಕ್ಕೆ ಅಪಘಾತವಾಗುವುದಿಲ್ಲ ಎಂದು ದೃಢವಾಗಿ ನಂಬಿರುತ್ತೇವೆ. ಬೇರೆಯವರಿಗೆ ಕೋವಿಡ್ ಬಂದು ಸಾಯಬಹುದು ಎಂದು ಒಪ್ಪಿದರೂ, ನಮಗೆ ಕೋವಿಡ್ ಬರಲು ಸಾಧ್ಯವಿಲ್ಲ ಎಂಬುದು ನಮ್ಮ ನಂಬಿಕೆ! ಮನೋವೈಜ್ಞಾನಿಕವಾಗಿಯೂ ಈ ನಂಬಿಕೆ ಜೀವಿಸಲು ಬಹು ಮುಖ್ಯ. ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ‘ನಮಗೆ ಯಾರಿಗೂ ನಮ್ಮ ಸಾವಿನಲ್ಲಿ ನಂಬಿಕೆಯೇ ಇಲ್ಲ’. ಅಂದರೆ ನಾವು ಸಾಯುವುದನ್ನು ಕಲ್ಪಿಸಿಕೊಳ್ಳಲೇ ಮನುಷ್ಯರಿಗೆ ಸಾಧ್ಯವಿಲ್ಲ. ಒಂದೊಮ್ಮೆ ನಾವು ಹಾಗೆ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ನಾವಿನ್ನೂ ನಮ್ಮ ಸಾವಿನ ವೀಕ್ಷಕರೇ ಆಗಿರುತ್ತೇವಷ್ಟೇ. ಸುಪ್ತ ಮನಸ್ಸಿನಲ್ಲಿ ನಮಗಿರುವ ಗಟ್ಟಿ ಭರವಸೆ ‘ನಾನು ಅಮರ’ ಎನ್ನುವುದು! ‘ಸಾವು’ ಎಂಬುದು ಹೆಚ್ಚಿನವರಿಗೆ ಭಯ ಯಾವಾಗಲಾದರೊಮ್ಮೆ ತಂದರೂ ಕೆಲವರಿಗೆ ಅದು ಅತಿಭಯವಾಗಿ ಎರಗುತ್ತದೆ. ಇಲ್ಲಿ ‘ಸಾವು’ ಸಮಸ್ಯೆ ಎನ್ನುವುದಕ್ಕಿಂತ, ‘ಸಾವಿನ ಭಯ’ವೇ ಸಮಸ್ಯೆ ಎನ್ನುವುದು ಗಮನಾರ್ಹ. ಆತಂಕಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳಲ್ಲಿ ಇದು ಕಂಡುಬರುತ್ತದೆ. ಮನೋವಿಜ್ಞಾನ ಇದನ್ನು ‘ತೆನಟೋಫೋಬಿಯಾ’ ಎಂದು ಕರೆಯುತ್ತದೆ.

‘ಸಾವಿನ ಭಯ’ ಎಂದು ಮನೋವೈದ್ಯರ ಬಳಿ ಬರುವ ಬಹಳಷ್ಟು ಜನ ಹೇಳುವುದು ‘ನನಗೆ ಏನಾದರೂ ಆದರೆ ಪರವಾಗಿಲ್ಲ ಡಾಕ್ಟ್ರೇ, ಆದರೆ ನನ್ನ ಚಿಕ್ಕ ಮಕ್ಕಳು ನಾನಿಲ್ಲದೆ ಹೇಗಿರುತ್ತಾರೋ ಎಂಬ ಚಿಂತೆ’. ಭಯದಲ್ಲಿ ಅವರು ಮತ್ತೆ ಮತ್ತೆ ತಮ್ಮ ಸಾವಿನ ಅನಂತರದಲ್ಲಿ ತಮ್ಮ ಮಕ್ಕಳು ಕಷ್ಟಪಡುವುದನ್ನು, ಚಿತ್ರಿಸಿಕೊಳ್ಳುವುದು ಸಾಮಾನ್ಯ. ವೃದ್ಧಾಪ್ಯದಲ್ಲಿ ಸಾವಿನ ಭಯದ ರೀತಿ ಬದಲಾಗುತ್ತದೆ.

ವೈಜ್ಞಾನಿಕವಾಗಿ ನಾವು ಸಾವನ್ನು ಕುರಿತು ಯೋಚಿಸುವ ರೀತಿ, ದೈನಂದಿನ ಬದುಕಿನಲ್ಲಿ ಧೋರಣೆ ಮತ್ತು ನಡವಳಿಕೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ, 2016ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಸಾವಿನ ಭಯ, ಸೇಡು ಮತ್ತು ರಾಜಕೀಯ ಹಿಂಸೆಯ ಮನೋಭಾವವನ್ನು ಹೆಚ್ಚಿಸಿದ್ದು ಕಂಡುಬಂತು. ನೋವು ಮತ್ತ ಸಾವು ಎರಡರ ಬಗೆಗೂ ಪ್ರತ್ಯೇಕವಾಗಿ ಯೋಚಿಸಿ, ರಾಜಕೀಯ ಸಂಘರ್ಷಗಳ ಪರಿಹಾರವನ್ನು ಸೂಚಿಸಲು ಹೇಳಲಾಯಿತು. ಸಾವಿನ ಬಗ್ಗೆ ಕೇಂದ್ರೀಕರಿಸಿದ ಜನರು ಸೂಚಿಸಿದ ಮೊದಲ ಪರಿಹಾರ ಮಿಲಿಟರಿ ಕಾರ್ಯಾಚರಣೆ. ಸಾವಿನ ಭಯ, ಇತರ ಆತ್ಮೀಯರ ಸಾವಿನ ಶೋಕದ ಪ್ರಕ್ರಿಯೆಯನ್ನೂ ಸಂಕೀರ್ಣವಾಗಿಸುತ್ತದೆ.

ಮತ್ತೆ ಮತ್ತೆ ಅಪಾಯಕ್ಕೀಡಾಗುವುದು ಮೃತ್ಯುಭಯವನ್ನು ಕಡಿಮೆಯಾಗಿಸುವ ಬದಲು ಹೆಚ್ಚಿಸಬಹುದು. ದೈಹಿಕ ಆರೋಗ್ಯ ನಿರೀಕ್ಷೆಯಂತೆ ಮೃತ್ಯುಭಯವನ್ನು ಕಡಿಮೆ ಮಾಡುತ್ತದೆ. ಉತ್ತಮ ಸಂಬಂಧಗಳು, ಮತ್ತೊಬ್ಬರ ಬಳಿ ಆತಂಕಗಳನ್ನು ಹೇಳಿಕೊಳ್ಳುವುದು, ಸಾಮಾಜಿಕವಾಗಿ ಬೆರೆಯುವುದು ಭಯವನ್ನು ತಡೆಯುತ್ತದೆ. ವೃದ್ಧಾಪ್ಯದಲ್ಲಿರುವ ಹಿರಿಯರು ತಮ್ಮ ನಂತರದ ಪೀಳಿಗೆಯ ಕಿರಿಯರಿಗೆ ಮಾರ್ಗದರ್ಶನ ಮಾಡುವುದು, ತಮ್ಮ ಜೀವನದ ಹಿಂದಿನ ದಿನಗಳನ್ನು ಯಾವುದೇ ಪಶ್ಚಾತ್ತಾಪಗಳಿರದೆ ನೋಡುವ ಕಲೆಯನ್ನು ಕಲಿಸುವ ಅವಕಾಶ ತೆರೆಯುತ್ತದೆ. ಇದು ಸಾವನ್ನು ‘ಸಹಜ ಹಂತ’ ಎಂದು ಸ್ವೀಕರಿಸುವುದನ್ನು ಸಾಧ್ಯವಾಗಿಸುತ್ತದೆ. ಬದುಕಿಗೊಂದು ಅರ್ಥವನ್ನು ಹುಡುಕಿಕೊಳ್ಳುವುದು ಸಾವಿನ ಭಯವನ್ನು ಕಡಿಮೆಯಾಗಿಸುವುದಷ್ಟೇ ಅಲ್ಲ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮಾರ್ಕ್ ಟ್ವೈನ್ ಹೇಳಿದ ಮಾತು: ‘ಸಾವಿನ ಭಯವೆಂದರೆ, ಅದು ಹುಟ್ಟುವುದು ಬದುಕಲು ಹೆದರುವುದರಿಂದ! ಪೂರ್ಣವಾಗಿ ಬದುಕುವ ವ್ಯಕ್ತಿ ಯಾವ ಸಮಯದಲ್ಲಿಯೂ ಸಾಯಲು ಸಿದ್ಧನಾಗಿರುತ್ತಾನೆ!’ ನಿಮ್ಮ ಕಲ್ಪನೆಯ ಅರ್ಥಪೂರ್ಣ ಬದುಕು ಯಾವುದೇ ಆಗಲಿ, ಅದನ್ನು ಬದುಕಲು ಆರಂಭಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT