ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ಗರ್ಭಧಾರಣೆಗೆ ಸಂಭಾವ್ಯ ದಿನ ಯಾವುದು?

Last Updated 12 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ನನಗೆ 26 ವರ್ಷ. 2017ರಲ್ಲಿ ಹೆರಿಗೆಯಾಗಿ ಮಗು ಸತ್ತಿದೆ (ಮೆಟಬಾಲಿಕ್ ಸಿಂಡ್ರೋಮ್? ). ನಂತರ ಕಾಪರ್‌ ಟಿ ಹಾಕಿಸಿಕೊಂಡು ತೆಗೆಸಿ ಎರಡು ವರ್ಷದೊಳಗೆ ಎರಡು ತಿಂಗಳೊಳಗಾಗಿ 2 ಬಾರಿ ಗರ್ಭಪಾತವಾಗಿದೆ. ನಾನು ಮತ್ತೆ ಮಗು ಪಡೆಯಲು ಯಾವ ರೀತಿಯ ಆಹಾರ, ವ್ಯಾಯಾಮ, ಅನುಸರಿಸಿ ಯಾವ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡಬೇಕು? ಒತ್ತಡ ನಿವಾರಣೆ ಹೇಗೆ ಎನ್ನುವುದನ್ನು ತಿಳಿಸಿ. (ತಜ್ಞರ ವೈದ್ಯಕೀಯ ವರದಿಯನ್ನು ಲಗತ್ತಿಸಲಾಗಿದೆ).
-
ಪ್ರಿಯಾ ಬಿ.ಜಿ., ಊರಿನ ಹೆಸರಿಲ್ಲ.

ಉತ್ತರ: ಪ್ರಿಯಾರವರೇ, ನಿಮಗೆ ಎರಡು ಬಾರಿ ಗರ್ಭಪಾತವಾಗಿ, ಒಂದು ಮಗು ಹುಟ್ಟಿ ಸತ್ತಿರುವುದರಿಂದ ಆಗಿರುವ ನಿರಾಶೆಯಿಂದ ಹೊರಬನ್ನಿ. ನೀವು ಕಳುಹಿಸಿರುವ ವರದಿಯ ಪ್ರಕಾರ ನಿಮ್ಮ ಮಗುವಿಗೆ ಮೆಟಬಾಲಿಕ್ ಸಿಂಡ್ರೋಮ್ ಇರಲಿಲ್ಲ. ನಿಮ್ಮ ಪತಿಯ ವೀರ್ಯ ತಪಾಸಣೆಯ ವರದಿಯು ಸರಿಯಾಗಿಯೇ ಇದೆ. ಹಾಗಾಗಿ ಇನ್ನೊಂದು ಮಗುವಿಗಾಗಿ ಖಂಡಿತ ಪ್ರಯತ್ನಿಸಿ. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ 30 ದಿನಗಳಿಗೊಮ್ಮೆ ಋತುಚಕ್ರವಾಗುತ್ತಿದ್ದರೆ ಅದಕ್ಕೂ 14 ದಿನ ಮೊದಲು ಅಂದರೆ 16ನೇ ದಿನ ಅಂಡೋತ್ಪತ್ತಿಯಾಗುತ್ತದೆ. ಬಿಡುಗಡೆಯಾದ ಅಂಡಾಣು ಎರಡು ದಿನ ಜೀವಂತವಾಗಿರುತ್ತದೆ. ಗಂಡಸಿನ ವೀರ್ಯಾಣು ಸ್ತ್ರೀ ಜನನಾಂಗದಲ್ಲಿ ನಾಲೈದು ದಿನಗಳವರೆಗೂ ಜೀವಂತವಾಗಿರುತ್ತದೆ. ಅಂಡೋತ್ಪತ್ತಿ (ಓವ್ಯುಲೇಶನ್)ಯಾಗಿ ಎರಡು ದಿನ ಮೊದಲು ಹಾಗೂ ಎರಡು ದಿನ ನಂತರ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ.

14ನೇ ದಿನದಿಂದ 18ನೇ ದಿನದವರೆಗೂ ಗರ್ಭಧಾರಣೆಯ ಸಂಭಾವ್ಯ ದಿನಗಳಾಗಿರುತ್ತವೆ. ಹಸಿರುಸೊಪ್ಪು, ತರಕಾರಿ, ಬೇಳೆಕಾಳುಗಳು, ಹಣ್ಣುಗಳನ್ನೊಳಗೊಂಡ ಪ್ರಕೃತಿದತ್ತ ಸಾತ್ವಿಕ ಆಹಾರ ಹೆಚ್ಚು ಸೇವಿಸಿ. ದಿನಾ ಕನಿಷ್ಠ ಒಂದು ಗಂಟೆ ಕಾಲ ದೈಹಿಕಶ್ರಮ (ಸೈಕ್ಲಿಂಗ್, ನಡಿಗೆ, ಈಜು, ಏರೋಬಿಕ್ಸ್ ಇತ್ಯಾದಿ) ಅತ್ಯಗತ್ಯ. ಯೋಗಾಸನದಲ್ಲಿ ಬದ್ಧಕೋಣಾಸನ, ಉಪವಿಷ್ಠಕೋಣಾಸನ, ಜಾನುಶೀರ್ಷಾಸನ, ಸೇತುಬಂಧಾಸನ ಇವೆಲ್ಲಾ ಸಹಾಯಕ. ಸಮತೂಕ ಹೊಂದಿ. ಪ್ರಾಣಾಯಾಮ, ಧ್ಯಾನ ಹಾಗೂ ಸಕಾರಾತ್ಮಕ ಚಿಂತನೆಯಿಂದ ನಿಮಗೆ ಬೇಗನೆ ಆರೋಗ್ಯವಂತ ಮಗುವಾಗುತ್ತದೆ.

***

ವಯಸ್ಸು 21 ವರ್ಷ. ಕಳೆದ 7 ವರ್ಷಗಳಿಂದ ಎರಡು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದೇನೆ. ತಜ್ಞರ ಸಲಹೆಯ ಪ್ರಕಾರ ದೈಹಿಕ ವ್ಯಾಯಾಮ ಮಾಡಿದಾಗ ಒಂದು ವರ್ಷ ಕಾಲ ಸರಿಯಾಗಿ ಮುಟ್ಟಾದೆ. ವ್ಯಾಯಾಮ ನಿಲ್ಲಿಸಿದಾಗ ಮತ್ತೆ ಎರಡು ತಿಂಗಳಿಗೊಮ್ಮೆ ಆಗುತ್ತಿದ್ದೇನೆ. ಪರಿಹಾರ ತಿಳಿಸಿ.
-
ಹೆಸರು, ಊರು ಬೇಡ

ಉತ್ತರ: ಮಾಸಿಕ ಋತುಚಕ್ರ ಸಂಪೂರ್ಣ ಹಾರ್ಮೋನ್‌ಗಳಿಂದ ನಿಯಂತ್ರಿತವಾದ ವೈಜ್ಞಾನಿಕ ಪ್ರಕ್ರಿಯೆ. ಹಾರ್ಮೋನ್‌ಗಳ ಮಟ್ಟ ಸಮತೋಲನದಲ್ಲಿರಲು ಪ್ರತಿಯೊಬ್ಬ ಹೆಣ್ಣಿನ ಜೀವನಶೈಲಿ ಬಹಳ ಮುಖ್ಯ. ಜೀವನಶೈಲಿ ಬದಲಾವಣೆಯಾದಾಗ ದೇಹದ ತೂಕ ಹೆಚ್ಚಾಗಿ ಮುಟ್ಟಿನಲ್ಲಿ ವ್ಯತ್ಯಾಸವಾಗಬಹುದು. ಜೊತೆಗೆ ಮಾನಸಿಕ ಒತ್ತಡ, ಥೈರಾಯಿಡ್ ಸಮಸ್ಯೆ, ಪಿಸಿಓಡಿ ಸಮಸ್ಯೆಯಲ್ಲೂ ಮಾಸಿಕ ಮುಟ್ಟಿನಲ್ಲಿ ಏರುಪೇರಾಗುತ್ತದೆ. ನಿಯಮಿತ ವ್ಯಾಯಾಮ ಅಂದರೆ ಕನಿಷ್ಠ ದಿನಕ್ಕೆ ಒಂದು ಗಂಟೆಯಂತೆ ವಾರದಲ್ಲಿ 5 ದಿನವಾದರೂ ಮಾಡಿ.

***

17 ವರ್ಷ. ಕಳೆದ ನಾಲ್ಕು ವರ್ಷಗಳಿಂದ ಮುಟ್ಟಾದಾಗ ತುಂಬಾ ನೋವಾಗುತ್ತದೆ. ಅದಕ್ಕಾಗಿ ನಾನು ಮೆಫ್ತಾಲ್ ಮಾತ್ರೆ ನುಂಗಿದಾಗ ಸ್ವಲ್ಪ ಕಡಿಮೆಯಾಗುತ್ತದೆ. ಮಾತ್ರೆಯಿಂದ ತೊಂದರೆಯಿದೆಯೇ? ಸಮಸ್ಯೆ ಪರಿಹಾರ ಹೇಗೆ?
-
ವೈಢೂರ್ಯ ಪಾಟೀಲ್, ಊರಿನ ಹೆಸರಿಲ್ಲ.

ಉತ್ತರ: ನಿಮಗಿರುವುದು ಪ್ರಾಥಮಿಕ ಋತುರೋಧನ (ಪ್ರೈಮರಿ ಡಿಸ್‌ಮೆನೋರಿಯಾ) ಎಂಬ ಹರೆಯದ ಹೆಣ್ಣುಮಕ್ಕಳ ಸಾಮಾನ್ಯ ಸಮಸ್ಯೆ. ಗರ್ಭಧಾರಣೆಯಾಗದಿದ್ದಲ್ಲಿ ಗರ್ಭಕೋಶದ ಲೋಳೆಪದರ ಛಿದ್ರವಾಗಿ ಹೊರಬರುವುದೇ ಮಾಸಿಕಮುಟ್ಟು ಎನಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಗರ್ಭಕೋಶದ ಒಳಾವರಣದಲ್ಲಿ ಉತ್ಪತ್ತಿಯಾಗುವ ಪ್ರೊಸ್ಟಗ್ಲಾಂಡಿನ್‌ಗಳಿಂದ ಗರ್ಭಕೋಶದ ಸ್ನಾಯು ಎಳೆಗಳು ತೀವ್ರವಾಗಿ ಸಂಕುಚಿಸಿ ಗರ್ಭಕೋಶ ಬಿಗಿದ ಹಾಗಾಗಿ ನೋವುಂಟಾಗುತ್ತದೆ. ಅಂಡೋತ್ಪತ್ತಿಯಾದ ಋತುಚಕ್ರದಲ್ಲಿ ಇಂತಹ ನೋವು ಹೆಚ್ಚು.

ಗರ್ಭಕೋಶ ಹಿಂದಕ್ಕೆ (ರೆಟ್ರೋವರ್ಟೆಡ್)ಇದ್ದರೂ ಈ ರೀತಿ ನೋವಾಗಬಹುದು. ಮೆಫೆನೆಮಿಕ್ ಆಸಿಡ್ ಮಾತ್ರೆ ಒಂದೆರಡು ತೆಗೆದುಕೊಳ್ಳುವುದರಿಂದ ತೊಂದರೆ ಇಲ್ಲ. ನಿಮಗಿನ್ನೂ 17 ವರ್ಷ, 20-22 ವರ್ಷದೊಳಗೆ ಇದು ಸರಿಹೋಗಬಹುದು. ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಆಗದ ಹಾಗೆ ನಾರಿನಾಂಶ, ನೀರಿನಾಂಶ ಸೇವನೆ ಸರಿ ಇರಲಿ. ನಿಮಗೆ ಮುಟ್ಟಿನ ಬಗ್ಗೆ ಸಕಾರಾತ್ಮಕ ನಿಲುವಿರಲಿ. ನಿಯಮಿತ ಸೂರ್ಯ ನಮಸ್ಕಾರ, ಬದ್ಧಕೋಣಾಸನ, ಶಿರ್ಷಾಸನ, ಮರೀಚಾಸನಾ, ಪಾಶಾಸನ, ಸುಪ್ತವೀರಾಸನಾ ಇತ್ಯಾದಿಗಳನ್ನು ಸರಿಯಾದ ಮಾರ್ಗದರ್ಶನದಲ್ಲಿ ಕಲಿತು, ನಿತ್ಯ ಮಾಡಿದರೆ ಮುಟ್ಟಿನ ನೋವಿನ ತೀವ್ರತೆ ಖಂಡಿತ ಕಡಿಮೆಯಾಗುತ್ತದೆ. ಬಿಸಿನೀರಿನ ಬ್ಯಾಗ್‌ನಿಂದ ಶಾಖ ತೆಗೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT