ಶನಿವಾರ, ಸೆಪ್ಟೆಂಬರ್ 18, 2021
26 °C

ಏನಾದ್ರೂ ಕೇಳ್ಬೋದು: ದಾಂಪತ್ಯದಲ್ಲಿ ಕಡಿಮೆಯಾದ ಆಸಕ್ತಿಗೆ ಪರಿಹಾರವೇನು?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Gatty Image

* ಪುರುಷ. ವಿವಾಹವಾಗಿ 5 ವರ್ಷವಾಗಿದೆ. ಇಬ್ಬರು ಮಕ್ಕಳಿದ್ದಾರೆ. ಲೈಂಗಿಕ ಜೀವನ ಚೆನ್ನಾಗಿದೆ. ಕಳೆದ 6 ತಿಂಗಳಿನಿಂದ ಕಾಮಾಸಕ್ತಿ ಕಡಿಮೆಯಾಗಿದೆ. ಏಕೆಂದು ಗೊತ್ತಾಗುತ್ತಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ಪತ್ರವನ್ನು ನೋಡಿದರೆ ಕಾಮಾಸಕ್ತಿ ನಿಮ್ಮ (ಪುರುಷರ) ಜನ್ಮಸಿದ್ಧ ಹಕ್ಕು ಎಂದು ತಿಳಿದುಕೊಂಡಿರುವಂತಿದೆ. ಮಧ್ಯವಯಸ್ಸಿನ ಕಡೆ ಸರಿದಂತೆ ಹಾರ್ಮೋನ್‌ಗಳ ಪ್ರಭಾವ ಕಡಿಮೆಯಾಗುವುದಲ್ಲದೆ ಇಬ್ಬರಿಗೂ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚುವುದರಿಂದ ಕಾಮದ ಒತ್ತಡ ಕಡಿಮೆಯಾಗುತ್ತದೆ. ಆದರೆ ಆಸಕ್ತಿ ಕಡಿಮೆಯಾಗುವುದಿಲ್ಲ. ಪತಿ–ಪತ್ನಿ ಮುಕ್ತವಾಗಿ ಮಾತನಾಡಿ ಇಬ್ಬರಿಗೂ ಇಷ್ಟವಾಗುವಂತೆ ಕಾಮಸುಖವನ್ನು ಹಂಚಿಕೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕು. ಅಂದರೆ ನಿಮ್ಮ ಆಸಕ್ತಿ, ಅಗತ್ಯಗಳಷ್ಟೇ ಪತ್ನಿಯ ಆಸಕ್ತಿ, ಅಗತ್ಯಗಳ ಕಡೆ ಕೂಡ ನೀವು ಗಮನಹರಿಸಬೇಕಾಗುತ್ತದೆ. ಇಬ್ಬರಿಗೂ ಕಾಮ ಆಕರ್ಷಕ ಎನ್ನಿಸಿದಾಗ ಆಸಕ್ತಿ ಕುಂದುವುದು ಹೇಗೆ ಸಾಧ್ಯ?

* 25ರ ಯುವಕ. ರೈತಾಪಿ ಕುಟುಂಬದಿಂದ ಬಂದಿದ್ದೇನೆ. ಯಾವ ದುರಭ್ಯಾಸವೂ ಇಲ್ಲ. ಏನಾದರೂ ಸಾಧಿಸಬೇಕೆಂದು ಕೆಎಎಸ್‌ ಪರೀಕ್ಷೆಗೆ ಓದುತ್ತಿದ್ದೇನೆ. ಸ್ಪಷ್ಟ ಗುರಿಯೊಂದಿಗೆ ಪ್ರಯತ್ನಿಸುತ್ತಿದ್ದರೂ ಆಗಾಗ ಕಾಮದ ಒತ್ತಡ ಹೆಚ್ಚಾಗಿ ಯಾರ ಜೊತೆಗಾದರೂ ಸೇರಬೇಕು ಎನ್ನಿಸುತ್ತದೆ. ನನ್ನ ಗುರಿಯನ್ನು ನೆನಪಿಸಿಕೊಂಡು ಹಿಡಿತಕ್ಕೆ ತರಲು ಪ್ರಯತ್ನಿಸುತ್ತೇನೆ. ಇನ್ನು ಮೂರು– ನಾಲ್ಕು ವರ್ಷ ಕಾಮಭಾವನೆ ಬರದಂತೆ ತಡೆಯುವುದು ಹೇಗೆ?

ಹೆಸರು, ಊರು ಇಲ್ಲ.

ಉತ್ತರ: ಹಸಿವು, ನಿದ್ದೆ, ನೀರಡಿಕೆಗಳು ಓದಿಗೆ ತೊಂದರೆ ಮಾಡುತ್ತಿದೆಯೇ? ಆದರೆ ಕಾಮದ ಬಯಕೆಯೊಂದೇ ಏಕಾಗ್ರತೆಗೆ ಹೇಗೆ ತೊಂದರೆಮಾಡುತ್ತಿದೆ ಗೊತ್ತೇ? ಮದುವೆಯಾಗುವವರೆಗೆ ಕಾಮದ ಆಕರ್ಷಣೆ ಕೆಟ್ಟದು, ಅದನ್ನು ಹಿಡಿತದಲ್ಲಿಡಬೇಕು ಎಂದು ಸಾಂಸ್ಕೃತಿಕವಾಗಿ ಬಂದಿರುವ ನಂಬಿಕೆ ನಿಮ್ಮ ಮನಸ್ಸಿನಾಳದಲ್ಲಿ ಬೇರುಬಿಟ್ಟಿದೆ. ಕಾಮ ತುಂಟ ಮಗುವಿನಂತೆ. ಹಿಡಿತದಲ್ಲಿಡಲು ಪ್ರಯತ್ನಿಸಿದಷ್ಟು ತುಂಟತನವನ್ನು ಹೆಚ್ಚಿಸುತ್ತದೆ! ಆಕರ್ಷಣೆ ಪ್ರಕೃತಿ ಸಹಜವಾದದ್ದು. ಅದನ್ನು ಸಾಮಾಜಿವಾಗಿ ಒಪ್ಪಿತವಾಗುವ ಮಿತಿಗಳಲ್ಲಿ ತೃಪ್ತಿಪಡಿಸಿಕೊಳ್ಳುವ ಪ್ರಜ್ಞೆಯನ್ನೂ ಪ್ರಕೃತಿ ನಮಗೆ ನೀಡಿದೆ. ಮನಸ್ಸಿನಲ್ಲಿ ಮೂಡುವ ಆಕರ್ಷಣೆಯನ್ನು ತಿರಸ್ಕರಿಸದೆ ಸಹಜವೆಂದು ಒಪ್ಪಿಕೊಂಡು ಆನಂದಿಸಿ. ಅದನ್ನು ಪೂರೈಸಿಕೊಳ್ಳಲು ಜೀವಮಾನವಿಡೀ ಸಮಯವಿರುವುದನ್ನು ನೆನಪಿಸಿಕೊಳ್ಳಿ. ನಂತರ ದೀರ್ಘವಾಗಿ ಉಸಿರಾಡುತ್ತಾ ಕಾಮದ ಹೊರತಾದ ನಿಮ್ಮ ಜೀವನದ ಸಂತೋಷಗಳೇನು, ಅವುಗಳನ್ನು ಸಾಧಿಸುವುದು ಹೇಗೆಂದು ಯೋಚಿಸಿ. ಆಗ ಕಾಮ ಆಕರ್ಷಣೆಯಾಗಿ ಉಳಿದರೂ ಕಾಡುವುದಿಲ್ಲ.

* 29ರ ಪುರುಷ. ಪತ್ನಿಗೆ 20 ವರ್ಷ. ಕಳೆದ ಹತ್ತು ವರ್ಷಗಳಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ. ಮದುವೆಯಾಗಿ 4 ತಿಂಗಳಾಗಿದ್ದು ನನಗೆ ಮಕ್ಕಳಾಗಲು ವೀರ್ಯಾಣುಗಳ ಸಮಸ್ಯೆ ಇರಬಹುದೇ ಎನ್ನುವ ಕೀಳರಿಮೆ ಕಾಡುತ್ತಿದೆ. ಪರಿಹಾರವೇನು?

ಉತ್ತರ:  ಹಸ್ತಮೈಥುನ ಮಾಡದೆ ಶೇಖರಿಸಿಟ್ಟ ವೀರ್ಯಾಣುಗಳು ಯಾವಾಗಲೂ ಜೀವಂತವಾಗಿರುತ್ತವೆ ಎನ್ನುವುದು ತಪ್ಪು ಕಲ್ಪನೆ. ದೇಹದ ಎಲ್ಲಾ ಜೀವಕೋಶಗಳಂತೆ ವೀರ್ಯಾಣುಗಳು ಕೂಡ ನಿರ್ದಿಷ್ಟ ಅವಧಿಯ ನಂತರ ನಾಶವಾಗಿ ಹೊಸದು ಉತ್ಪತ್ತಿಯಾಗುತ್ತಲೇ ಇರುತ್ತದೆ. ಹಸ್ತಮೈಥುನಕ್ಕೂ ಮಕ್ಕಳಾಗುವುದಕ್ಕೂ ಸಂಬಂಧವಿಲ್ಲ. ಮದುವೆಯಾಗಿ ನಾಲ್ಕು ತಿಂಗಳಾಗಿದ್ದು 20 ವರ್ಷದ ಚಿಕ್ಕವಯಸ್ಸಿನ ಪತ್ನಿ ಇರುವಾಗ ಈಗಲೇ ಮಕ್ಕಳನ್ನು ಹೊಂದುವ ಒತ್ತಡವೇಕೆ? ಸದ್ಯಕ್ಕೆ ಕಾಮಪ್ರೇಮಗಳನ್ನು ಹಂಚಿಕೊಳ್ಳುತ್ತಾ ಇಬ್ಬರ ನಡುವಿನ ಆತ್ಮೀಯತೆಯನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆಂದು ಮಾತನಾಡಿಕೊಳ್ಳಿ. ಇಬ್ಬರ ದೇಹ, ಮನಸ್ಸು ಮಕ್ಕಳ ಬೆಳವಣಿಗೆಗೆ ಬೆಂಬಲ ನೀಡಲು ಸಿದ್ಧವಾದ ಮೇಲೆ ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಬಹುದಲ್ಲವೇ? 

* 27ರ ಯುವಕ. ಎಮ್‌ಎಸ್‌ಸಿ ಓದಿದ್ದೇನೆ. ಸರ್ಕಾರೀ ಕೆಲಸ ಹಿಡಿಯುತ್ತಾನೆ ಎಂದು ಪೋಷಕರು ನಂಬಿಕೆಯಿಟ್ಟು ನನಗೆ ಎಲ್ಲಾ ಸಹಾಯ ಮಾಡಿದ್ದರು. ಎಲ್ಲಾ ಯುವಕರಂತೆ ಓದುವ ವಯಸ್ಸಿನಲ್ಲಿ ಪ್ರೀತಿ ಮಾಡುತ್ತಾ ಕಳೆದೆ ಮತ್ತು ಕೆಲಸವಿಲ್ಲದೆ ನಿಷ್ಪ್ರಯೋಜಕನಾಗಿದ್ದೇನೆ ಎಂದು ಈಗ ಗೊಂದಲವಾಗಿದೆ. ನಾನು ಸರ್ಕಾರೀ ಕೆಲಸಕ್ಕೆ ಪ್ರಯತ್ನಿಸಬಹುದೇ?

ಹೆಸರು, ಊರು ತಿಳಿಸಿಲ್ಲ.

ಉತ್ತರ: ವಿದ್ಯಾರ್ಥಿ ಜೀವನದ ಬಗೆಗೆ ನಿಮ್ಮಲ್ಲಿ ಆಳವಾದ ನೋವು, ಪಾಪಪ್ರಜ್ಞೆ ಕಾಡುತ್ತಿರಬೇಕಲ್ಲವೇ? ಈ ನೋವು, ಪಾಪಪ್ರಜ್ಞೆಗಳು ನಿಮಗೆ ಸಹಾಯ ಮಾಡುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ಗಮನಿಸಲಾಗದಷ್ಟು ನೀವು ಮಾನಸಿಕವಾಗಿ ಕುಗ್ಗಿಹೋಗಿದ್ದೀರಿ. ಇಂತಹ ಭಾವನೆಗಳು ನಿಮ್ಮ ಮುಂದಿನ ಬದಲಾವಣೆಗೆ ಪ್ರೇರಣೆಯಾಗಬಹುದು. ಇರುವ ಪಾಪಪ್ರಜ್ಞೆಯನ್ನು ಇಂದಿನಿಂದ ಹೆಚ್ಚು ಮಾಡಿಕೊಳ್ಳದಂತೆ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಸ್ನಾತಕೋತ್ತರ ಪದವಿಯನ್ನು ಬಳಸಿ ಸದ್ಯಕ್ಕೆ ಯಾವುದಾದರೊಂದು ಉದ್ಯೋಗವನ್ನು ಪಡೆಯವುದು ಸಾಧ್ಯವಿರಲೇಬೇಕಲ್ಲವೇ? ಸರ್ಕಾರೀ ಉದ್ಯೋಗದ ಹುಡುಕಾಟವನ್ನು ಜೊತೆಜೊತೆಗೆ ಮುಂದುವರೆಸಿ. ದೂರದ ದಾರಿಯನ್ನು ಕ್ರಮಿಸಲು ದಿನವೂ ಒಂದೊಂದೇ ಹೆಜ್ಜೆಗಳನ್ನಿಟ್ಟರೂ ಸ್ವಲ್ಪ ತಡವಾಗಿಯಾದರೂ ಕೊನೆಗೊಮ್ಮೆ ಗುರಿ ಸೇರಲೇಬೇಕಲ್ಲವೇ?   

* ಒಬ್ಬ ಯುವತಿಯನ್ನು ನೋಡಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನಂತರ ತಲೆಸುತ್ತು ಬರುತ್ತದೆ. ಕಾರಣ ಗೊತ್ತಿಲ್ಲ. ಸಹಾಯ ಮಾಡಿ.

ಸಿದ್ದು, ಊರಿನ ಹೆಸರಿಲ್ಲ.

ಉತ್ತರ: ಹಸ್ತಮೈಥುನವೂ ಕೂಡ ಲೈಂಗಿಕ ಕ್ರಿಯೆಯಷ್ಟೇ ದೇಹವನ್ನು ದಣಿಸುತ್ತದೆ. ಹಾಗಾಗಿ ನಂತರ ಸ್ವಲ್ಪ ವಿರಾಮದ ಅಗತ್ಯವಿರುತ್ತದೆ. ನೈರ್ಮಲ್ಯವನ್ನು ಕಾಪಾಡಿಕೊಂಡು ಇದನ್ನು ಮಲಗುವ ಮೊದಲು ಮಾಡುವುದು ಒಳ್ಳೆಯದು. ಹಸ್ತಮೈಥುನ ಅಪಾಯಕಾರಿ ಎನ್ನುವ ತಪ್ಪುತಿಳಿವಳಿಕೆ ಕೂಡ ನಿಮ್ಮ ತಲೆಸುತ್ತಿಗೆ ಕಾರಣವಿರಬಹುದು. ಇದು ಸಂಪೂರ್ಣ ಸುರಕ್ಷಿತ. ಅದರ ಸುಖವನ್ನು ಅನುಭವಿಸಲು ಸಾಧ್ಯವಿರುವ ವಾತಾವರಣದಲ್ಲಿ ಬಳಸಿ.

* 20ರ ಯುವಕ. ಕಳೆದ 6 ವರ್ಷದಿಂದ ಹಸ್ತಮೈಥುನದ ಚಟಕ್ಕೆ ದಾಸನಾಗಿದ್ದೇನೆ. ಹೊರಬರಲು ಆಗುತ್ತಿಲ್ಲ. ನಾನು ಒಳ್ಳೆಯ ಅಂಕ ಪಡೆಯುವ ವಿದ್ಯಾರ್ಥಿ. ಆದರೆ ಈಗ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ಮುಂದೆ ಏನಾಗುವುದೋ ಎನ್ನುವ ಭಯ. ದಯವಿಟ್ಟು ಪರಿಹಾರ ತಿಳಿಸಿ.

ವಿಕಾಸ್‌, ಊರಿನ ಹೆಸರಿಲ್ಲ.

ಉತ್ತರ: ಹಸ್ತಮೈಥುನ ಚಟವಲ್ಲ, ಸಂಪೂರ್ಣ ಆರೋಗ್ಯಕರ ಲೈಂಗಿಕ ಅಭಿವ್ಯಕ್ತಿ ಎಂದು ಈ ಅಂಕಣದಲ್ಲಿ ಹಲವಾರು ಬಾರಿ ತಿಳಿಸಲಾಗಿದೆ. ತಾ 30 01 2021ರ ಈ ಅಂಕಣವನ್ನು ಓದಿ. ಹಸ್ತಮೈಥುನ ಕುರಿತಾಗಿ ನಿಮ್ಮೊಳಗೆ ಬೇರುಬಿಟ್ಟಿರುವ ತಪ್ಪುತಿಳಿವಳಿಕೆಗಳು ಆತಂಕವನ್ನು ಮೂಡಿಸಿವೆ. ಇಂತಹ ಆತಂಕ ಭಯಗಳು ನಿಮಗೆ ತೊಂದರೆ ಕೊಡುತ್ತಿವೆ. ನಿಮ್ಮ ನೆನಪಿನ ಶಕ್ತಿಗೂ ಹಸ್ತಮೈಥುನ ಸಂಬಂಧವಿಲ್ಲ. ತಪ್ಪುತಿಳುವಳಿಕೆಗಳಿಂದ ಹೊರಬಂದು ನಿಶ್ಚಿಂತರಾಗಿ.

*25 ವರ್ಷದ ಯುವಕ.  ದಿನನಿತ್ಯ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಇದರಿಂದ ಮುಂದೆ ಲೈಂಗಿಕ ತೊಂದರೆಗಳಾಗುತ್ತದೆಯೇ?

ಹೆಸರು ಊರು ತಿಳಿಸಿಲ್ಲ.

ಉತ್ತರ: ದಯವಿಟ್ಟು ಮೇಲಿನ ಉತ್ತರಗಳನ್ನು ನೋಡಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು