ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಲಿ ಸದಾ ಸಮತೋಲನದಿಂದ ದೇಹದಲ್ಲಿ ಸಕ್ಕರೆ ಅಂಶ

Last Updated 5 ಅಕ್ಟೋಬರ್ 2021, 2:30 IST
ಅಕ್ಷರ ಗಾತ್ರ

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ತುಂಬಾ ಕಡಿಮೆಯಾದರೆ ಅಂತಹವರು ಕೋಮಾಸ್ಥಿತಿಯನ್ನು ತಲುಪಿ ಸಾಯಬಹುದು, ಅಥವಾ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಬಹುದು. ನಮ್ಮ ಮೆದುಳಿನ ಕಾರ್ಯಕ್ಕೆ ಗ್ಲುಕೋಸ್ ಸದಾ ಪೂರೈಕೆಯಾಗುತ್ತಿರಬೇಕು. ಹೀಗಾಗಿ ದೇಹದಲ್ಲಿ ಸಕ್ಕರೆ ಅಂಶ ಸದಾ ಸಮತೋಲನದಿಂದ ಇರಬೇಕು.

ಸಕ್ಕರೆಯಲ್ಲಿರುವ ಗ್ಲುಕೋಸ್ ಎಂಬ ಅಣು ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಈ ಗ್ಲುಕೋಸ್ ನಮ್ಮ ದೇಹದಲ್ಲಿನ ಪ್ರತಿಯೊಂದು ಜೀವಕೋಶಗಳ ಕಾರ್ಯನಿರ್ವಹಣೆಗೂ ತುಂಬಾ ಅತ್ಯಗತ್ಯ. ನಾವು ತಿಂದಂತಹ ಆಹಾರವೆಲ್ಲವೂ ಬೇರೆ ಬೇರೆ ಕಿಣ್ವಗಳಿಂದ ನಮ್ಮ ದೇಹದಲ್ಲಿ ಜೀರ್ಣವಾಗಿ ಕೊನೆಗೆ ಗ್ಲುಕೋಸ್, ಅಮೈನೋ ಆಮ್ಲಗಳು ಮತ್ತು ಕೊಬ್ಬಿನ ಆಮ್ಲಗಳ ರೂಪದಲ್ಲಿ ನಮ್ಮ ರಕ್ತನಾಳಗಳ ಮೂಲಕ ಹರಿದು ಬೇರೆ ಬೇರೆ ಅಂಗಗಳಲ್ಲಿರುವ ಜೀವಕೋಶಗಳನ್ನು ಸೇರುತ್ತವೆ. ಗ್ಲುಕೋಸ್ ಅಂಶ ನಮ್ಮ ದೇಹದಲ್ಲಿ ಸಮತೋಲನದಿಂದ ಇರಬೇಕು. ಇದು ಸಮತೋಲನದಿಂದ ಇದ್ದರೆ ಪ್ರತಿಯೊಬ್ಬರು ಆರೋಗ್ಯವಾಗಿರುತ್ತಾರೆ. ಈ ಸಮತೋಲನತೆಯನ್ನು ನಮ್ಮ ದೇಹದಲ್ಲಿರುವ ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಹಾರ್ಮೋನುಗಳು ನಿಯಂತ್ರಣದಲ್ಲಿಡುತ್ತವೆ. ಇವುಗಳ ನಿಯಂತ್ರಣ ತಪ್ಪಿ ನಮ್ಮ ದೇಹದಲ್ಲಿ ಗ್ಲುಕೋಸಿನ ಪ್ರಮಾಣ ಹೆಚ್ಚಾದರೆ ಆಗ ಮಧುಮೇಹ (ಸಕ್ಕರೆ ಕಾಯಿಲೆ), ಹೃದಯಸಂಬಂಧಿ ಕಾಯಿಲೆಗಳು, ಸ್ಥೂಲಕಾಯತೆ, ಕ್ಯಾನ್ಸರ್ ಇನ್ನೂ ಹಲವು ರೋಗಗಳು ಬರಬಹುದು. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ತುಂಬಾ ಕಡಿಮೆಯಾದರೆ ಅಂತಹವರು ಕೋಮಾಸ್ಥಿತಿಯನ್ನು ತಲುಪಿ ಸಾಯಬಹುದು, ಅಥವಾ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಬಹುದು. ನಮ್ಮ ಮೆದುಳಿನ ಕಾರ್ಯಕ್ಕೆ ಗ್ಲುಕೋಸ್ ಸದಾ ಪೂರೈಕೆಯಾಗುತ್ತಿರಬೇಕು. ಹೀಗಾಗಿ ದೇಹದಲ್ಲಿ ಸಕ್ಕರೆ ಅಂಶ ಸದಾ ಸಮತೋಲನದಿಂದ ಇರಬೇಕು.

ಭಾರತದಲ್ಲಿ ಇತ್ತೀಚಿನ ಕೆಲವು ದಶಕಗಳಲ್ಲಿ ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು, ಸ್ಥೂಲಕಾಯತೆ, ಕ್ಯಾನ್ಸರ್‌ ಹೆಚ್ಚಾಗಲು ಕಾರಣವೇನು? ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿಯಲ್ಲಿ ಆದ ಬಹು ಮುಖ್ಯ ಬದಲಾವಣೆ. ಏನು ಆ ಬದಲಾವಣೆ? ಅದು ನಮ್ಮಲ್ಲಿ ಆಗಿರುವ ಪಾಶ್ಚಾತ್ಯೀಕರಣ. ಎಂದರೆ ನಾವು ಯಾಂತ್ರಿಕ ಜೀವನಶೈಲಿಯನ್ನು ಅನುಸರಿಸಲು ಆರಂಭಿಸಿದ್ದು. ಕಳೆದ ಶತಮಾನದ ಎಂಬತ್ತರ ದಶಕದ ನಂತರ ಭಾರತದಲ್ಲಿ ಪ್ರತಿಯೊಬ್ಬರ ಮನೆಗೂ ಟಿ.ವಿ., ಫೋನುಗಳು ಬಂದವು; ದ್ವಿಚಕ್ರ ವಾಹನಗಳು, ಕಾರುಗಳು ಬಂದವು. ಅನಂತರ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ಬಂದವು. ನಡೆಯುವುದು ಕಡಿಮೆಯಾಯಿತು; ದಿನನಿತ್ಯದ ರುಬ್ಬುವ, ಬೀಸುವ ಕೆಲಸಕ್ಕೂ ಯಂತ್ರಗಳು ಬಂದವು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲೂ ಕಂಪ್ಯೂಟರುಗಳು ಬಂದವು. ಎಲ್ಲರ ದೈಹಿಕ ಶ್ರಮ ಕಡಿಮೆಯಾಗಿ ಕುಳಿತೇ ಮಾಡುವ ಕೆಲಸಗಳು ಹೆಚ್ಚಾದವು. ರಾತ್ರಿಯ ನಿದ್ರೆ ಕಡಿಮೆಯಾಗಿ ಎಲ್ಲರೂ ಟಿ.ವಿ., ಕಂಪ್ಯೂಟರ್, ಫೋನುಗಳ ದಾಸರಾಗುವಂತಾಯಿತು. ಇದರಿಂದ ನಮ್ಮ ನಮ್ಮ ದೇಹದ ದಿನನಿತ್ಯ ಕಾರ್ಯಗಳನ್ನು ನಿರ್ವಹಿಸುವ ಹಾರ್ಮೊನುಗಳಲ್ಲೂ ವ್ಯತಿರಿಕ್ತ ಪರಿಣಾಮವಾಯಿತು. ಅದರಲ್ಲೂ ಇನ್ಸುಲಿನ್ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳಾಗಿ ರಕ್ತದ ಗ್ಲುಕೋಸ್ ಹೆಚ್ಚಾಗುವಂತಾಯಿತು.

ಬೇಕರಿಗಳು, ಸಿದ್ಧ ತ್ವರಿತ ಆಹಾರದ ಗಾಡಿಗಳು ಹೆಚ್ಚಾದವು. ಹಿತ–ಮಿತವಾಗಿ ಆಹಾರ ತಿನ್ನುತ್ತಿದ್ದವರು ಕೂಡ ಅತಿಹೆಚ್ಚು ಕ್ಯಾಲೋರಿಯುಕ್ತ ಆಹಾರಗಳನ್ನು ತಿನ್ನಲು, ಪಾನೀಯಗಳನ್ನು ಕುಡಿಯಲು ಆರಂಭಿಸಿದರು. ಅದರಲ್ಲೂ ಹೆಚ್ಚು ಹೆಚ್ಚು ಸಕ್ಕರೆಯುಕ್ತ ಆಹಾರಗಳು, ಪಾನೀಯಗಳು ಹೆಚ್ಚಾದವು. ಈ ಪಾನೀಯಗಳಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಸೇರಿಸಿರುತ್ತಾರೆ. ಸಿಹಿತಿಂಡಿಗಳು ದಿನನಿತ್ಯವೂ ಕೈಗೆಟಕುವಂತಾಯಿತು. ಇದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಸ್ಥೂಲಕಾಯತೆ, ಕ್ಯಾನ್ಸರುಗಳು ಹೆಚ್ಚಾದವು. ಸ್ಥೂಲಕಾಯತೆ ಮತ್ತು ಮಧುಮೇಹಗಳು ಈಗ ಚಿಕ್ಕ ಚಿಕ್ಕ ಮಕ್ಕಳಲ್ಲೂ ಹೆಚ್ಚಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಮಕ್ಕಳಿಗೆ ಸರಿಯಾಗಿ ವ್ಯಾಯಾಮ ಸಿಗುತ್ತಿಲ್ಲ. ಅವುಗಳನ್ನು ಮನೆಯಿಂದ ಹೊರಗೆ ಕಳುಹಿಸಿ ಆಟ ಆಡಲು ಕೆಲವು ಪೋಷಕರು ಬಿಡುತ್ತಿಲ್ಲ. ಮಕ್ಕಳು ಸದಾ ವೀಡಿಯೋ ಗೇಮ್ಸ್, ಕಂಪ್ಯೂಟರ್, ಫೋನುಗಳನ್ನು ನೋಡುತ್ತ ಕಾಲ ಕಳೆಯುವಂತಾಗಿದೆ. ಗರ್ಭಿಣಿಯರು ಕೂಡ ಹಿತವಾಗಿ ಮಿತವಾಗಿ ವೈವಿಧ್ಯಮಯ ಆಹಾರಗಳನ್ನು ತಿನ್ನಬೇಕು. ಸಕ್ಕರೆ ಅಂಶವಿರುವ ಆಹಾರವನ್ನು ಕೂಡ ಹಿತವಾಗಿ ಮಿತವಾಗಿ ಸೇವಿಸಬೇಕು.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆಗಳು:

l ಉತ್ತಮ ಸಮತೋಲನ ಆಹಾರ.

l ಉತ್ತಮ ಜೀವನ ಶೈಲಿ.

l ಸಮಯಕ್ಕೆ ಸರಿಯಾಗಿ ನಿದ್ರೆ

l ಧ್ಯಾನ, ಯೋಗ, ವಾಯುವಿಹಾರ, ಸೂರ್ಯನಮಸ್ಕಾರಗಳ ಅಭ್ಯಾಸ

l ದೈಹಿಕ ಶ್ರಮದಲ್ಲಿ ತೊಡಗುವುದು.

l ನೀರನ್ನು ಹೆಚ್ಚು ಕುಡಿಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT