ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾಂತ್ವನ | ಈ ಕಾಯಿಲೆಗೇಕೆ ಕಳಂಕ?

Last Updated 1 ಮೇ 2020, 20:15 IST
ಅಕ್ಷರ ಗಾತ್ರ
ADVERTISEMENT
""

ಕೋವಿಡ್‌–19 ಪಿಡುಗು ಜನರಲ್ಲಿ ಏಕಾಏಕಿ ಸಾಕಷ್ಟು ಭೀತಿಯನ್ನು ಉಂಟುಮಾಡಿದೆ. ಇದು ಒಂದು ನಿರ್ದಿಷ್ಟ ಗುಂಪಿನ ಜನರಿಗೆ ಮಾತ್ರ ಸಂಬಂಧಿಸಿದೆ ಎಂಬ ತಪ್ಪು ಕಲ್ಪನೆಯಿಂದ ಅಂಥವರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ. ಇದು ಕೋವಿಡ್ -19 ರೋಗದೊಂದಿಗೆ ಹೋರಾಡಲು ಗಂಭೀರ ತಡೆಗೋಡೆ ಉಂಟುಮಾಡಬಹುದು.

ನಿತೇಶ್ ಕುಲಾಲ್, ಕಿರಿಯ ಸಂಶೋಧನಾ ಸಹೋದ್ಯೋಗಿ, ನಿಮ್ಹಾನ್ಸ್

ಆರೋಗ್ಯ ವೃತ್ತಿಪರರು

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವವರು ಆರೋಗ್ಯ ವೃತ್ತಿಪರರು. ಅಂದರೆ ವೈದ್ಯರು, ದಾದಿಯರು, ಹಾಗೂ ಇತರ ವೈದ್ಯಕೀಯ ಸಿಬ್ಬಂದಿ. ಆದರೆ ಈಗ ಇವರು ಕೂಡ ಸಾಮಾಜಿಕ ಕಳಂಕವನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಜನರು ಆರೋಗ್ಯ ವೃತ್ತಿಪರರಿಂದ ಸೋಂಕು ತಗುಲಬಹುದು ಎಂಬ ಭಯದಿಂದ ವೈದ್ಯರು ಮತ್ತು ಇತರ ಆಸ್ಪತ್ರೆಯ ಸಹಾಯಕ ಸಿಬ್ಬಂದಿಗಳಿಂದ ದೂರವಾಗುತ್ತಿದ್ದಾರೆ. ಮನೆಯ ಮಾಲೀಕರು ಆರೋಗ್ಯ ವೃತ್ತಿಪರರನ್ನು ಮನೆ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿರುವ ಹಾಗೂ ಕೆಲವು ಆರೋಗ್ಯ ವೃತ್ತಿಪರರು ಮನೆ ಖಾಲಿ ಮಾಡಿ ಬೀದಿಗೆ ಬಂದಿರುವ ಪ್ರಕರಣಗಳಿವೆ. ಅದೇ ರೀತಿ ಲಾಕ್‌ಡೌನ್ ಅವಧಿಯಲ್ಲಿ ಅವರಲ್ಲಿ ಕೆಲವರು ದೈಹಿಕ ಕಿರುಕುಳಕ್ಕೆ ಒಳಗಾಗಿರುವ ನಿದರ್ಶನ ಕಣ್ಣ ಮುಂದೆ ಇದೆ.

ಕ್ವಾರೆಂಟೈನ್‌ನಲ್ಲಿ ಇರುವವರು

ಕೊರೊನಾ ವೈರಸ್ ಸೋಂಕು ಅಥವಾ ಸಂಭವನೀಯ ಸೋಂಕಿನ ಜನರನ್ನು ವಿವರಿಸಲು ಬಳಸುವ ಕೆಲವೊಂದು ಪದಗಳು ಉದಾಹರಣೆಗೆ ‘ಶಂಕಿತ ಪ್ರಕರಣ’, ‘ಬಲಿಪಶು’ ಇತ್ಯಾದಿ ಪದಗಳಿಂದ ಇವರ ಮನಸ್ಸಿಗೆ ಇನ್ನಷ್ಟು ಭಯ, ದುಃಖ ಉಂಟಾಗುವ ಸಾಧ್ಯತೆಗಳಿರುತ್ತವೆ ಮತ್ತು ತಮಗೆ ಸಾಮಾಜಿಕ ಬೆಂಬಲವಿಲ್ಲವೆಂದು ಭಾವಿಸಬಹುದು. ಇದು ಕೇವಲ ರೋಗಿಗಳಿಗೆ ಅಥವಾ ಕ್ವಾರೆಂಟೈನ್‌ನಲ್ಲಿ ಇರುವವರಿಗೆ ಮಾತ್ರ ಸೀಮಿತವಾಗಿರದೆ ಕೋವಿಡ್‌–19 ಚಿಕಿತ್ಸೆಯಿಂದ ಚೇತರಿಸಿಕೊಂಡು ಮರಳಿ ಬಂದವರಿಗೆ ಇದೇ ರೀತಿಯ ಕಳಂಕ ಮತ್ತು ತಾರತಮ್ಯ ಎದುರಾಗಬಹುದು.

ಕ್ವಾರೆಂಟೈನ್‌ನಲ್ಲಿರುವವರಿಗೆ ಸೋಂಕು ಇಲ್ಲದಿದ್ದರೂ ಬೇರೆ ಯಾವುದೋ ಕಾರಣಗಳಿಂದ ಉಸಿರಾಟದ ತೊಂದರೆ ಅಥವಾ ಇತರ ಲಕ್ಷಣಗಳಾದ ಜ್ವರ, ಕೆಮ್ಮು ಶೀತವಿದ್ದರೆ ಅಂಥವರು ಹಾಗೂ ಅವರ ಸಂಬಂಧಿಗಳೆಲ್ಲರೂ ತಾರತಮ್ಯಕ್ಕೆ ಒಳಗಾಗಬಹುದು. ಅದೇ ರೀತಿ ಕೋವಿಡ್‌–19ರಿಂದ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವವರೂ ಇಂತಹ ತಾರತಮ್ಯಕ್ಕೆ ತುತ್ತಾಗಬಹುದು.

ಕಳಂಕದ ಪರಿಣಾಮಗಳು

*ಅಗತ್ಯವಿದ್ದಾಗ ಕೋವಿಡ್‌–19 ಕಾಯಿಲೆಗೆ ಸಹಾಯ ಪಡೆಯುವುದಕ್ಕೆ ತೊಂದರೆ ಉಂಟಾಗುತ್ತದೆ.

*ರೋಗಲಕ್ಷಣಗಳನ್ನು ಹೊಂದಿದ್ದರೂ ಸಹ ತಾರತಮ್ಯಕ್ಕೆ ಹೆದರಿ ಮರೆಮಾಚಲು ಪ್ರಯತ್ನಿಸಬಹುದು.

*ವೈದ್ಯಕೀಯ ವೃತ್ತಿಪರರಿಗೆ ಅವರ ಕುಂಟುಬದವರು ಉದ್ಯೋಗ ತ್ಯಜಿಸಲು ಒತ್ತಡ ಹೇರಬಹುದು.

*ಕೋವಿಡ್‌–19 ರೋಗಿಗಳಿಗೆ ಮುಂಚೂಣಿಯಲ್ಲಿರುವ ಆರೋಗ್ಯ ವೃತ್ತಿಪರರು ಚಿಕಿತ್ಸೆ ನೀಡುವಲ್ಲಿ ಆಸಕ್ತಿ ಕಡಿಮೆ ಮಾಡಬಹುದು.

ಏನು ಮಾಡಬಹುದು?

*ರೋಗದ ಬಗ್ಗೆ ಚರ್ಚಿಸಿ: ಈ ಕಾಯಿಲೆಗೆ ತುತ್ತಾಗಿರುವ, ಚೇತರಿಸಿಕೊಳ್ಳುತ್ತಿರುವ ಅಥವಾ ಸಂಭವನೀಯ ಸೋಂಕಿರುವ ಜನರ ಬಗ್ಗೆ ಮಾತನಾಡಿ. ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿ. ಇದು ಬಹುತೇಕರಿಗೆ ಗುಣವಾಗಬಹುದಾದ ರೋಗ ಎಂದು ತಿಳಿಹೇಳಿ.

*‘ವುಹಾನ್ ವೈರಸ್ / ಚೈನೀಸ್ ವೈರಸ್’ ಇತ್ಯಾದಿ ಪದಗಳನ್ನು ಬಳಸಬೇಡಿ. ಭಯ ಹುಟ್ಟುವಂಥ ನಕಾರಾತ್ಮಕ ಪದಗಳನ್ನು ಬಳಸದಿರಿ ಅಥವಾ ವದಂತಿಗಳನ್ನು ಹಂಚಿಕೊಳ್ಳಬೇಡಿ.

*ರೋಗ ತಡೆ ಮತ್ತು ಆರಂಭಿಕ ತಪಾಸಣೆಯ ಮಹತ್ವವನ್ನು ಪ್ರೋತ್ಸಾಹಿಸಿ.

*ಆರೋಗ್ಯ ಕಾರ್ಯಕರ್ತರು, ವೈದ್ಯರು, ಸ್ವಯಂಸೇವಕರು ಮತ್ತು ಸಮುದಾಯದ ಮುಖಂಡರನ್ನು ಪ್ರೋತ್ಸಾಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT