ಬುಧವಾರ, ಫೆಬ್ರವರಿ 8, 2023
17 °C

ಚರ್ಮ ಬಿರುಸಾಗುವ ಚಳಿದಿನಗಳು: ಇರಲಿ ಎಚ್ಚರ

ಡಾ. ಸತ್ಯನಾರಾಯಣ ಭಟ್ ಪಿ.  Updated:

ಅಕ್ಷರ ಗಾತ್ರ : | |

Prajavani

ಆಯುರ್ವೇದ ಸಂಹಿತೆಗಳ ಪ್ರಕಾರ ಹೇಮಂತ ಮತ್ತು ಶಿಶಿರ ಋತುಗಳ ಆಹಾರಪದ್ಧತಿ ಮತ್ತು ಆಚರಣೆಗಳು ಒಂದೇ ತರಹದ್ದು. ಆದರೆ ಒಂದು ಬಹು ದೊಡ್ಡ ವ್ಯತ್ಯಾಸವಿದೆ. ಶಿಶಿರ ಋತುವು ಮನುಷ್ಯರ ಬಲ ಕುಂದಿಸುವ ಆದಾನ ಕಾಲದ್ದು. ಹಾಗಾಗಿ ತುಂಬ ಎಚ್ಚರಿಕೆಯ ಜೀವನಶೈಲಿ ನಮ್ಮದಾಗಿಸಿಕೊಳ್ಳಬೇಕು. ಹಗಲಿನಲ್ಲಿ ಪ್ರಖರ ಸೂರ್ಯಸಂತಾಪ. ಆದರೆ ಇರುಳಲ್ಲಿ ಉದುರುವ ಇಬ್ಬನಿ ಹನಿ. ಇದಿರು ಬೀಸುವ ಕುಳಿರ್ಗಾಳಿ. ಹೇಮಂತಕ್ಕೂ ಮಿಗಿಲಾದ ಶೈತ್ಯ. ಚಳಿ, ಹಿಮ, ಇಬ್ಬನಿಗೆ ಮೈ ಒಡ್ಡಿದರೆ ಅನಾಹುತ. ಇವೆಲ್ಲವನ್ನು ಆರೋಗ್ಯ ಕಾಪಾಡುವ ಸಲುವಾಗಿ ನಾವು ತಪ್ಪಿಸಿಕೊಳ್ಳಲೇಬೇಕಾಗಿದೆ. ನನಗೆ ವಾಕಿಂಗ್ ತುಂಬ ಇಷ್ಟ. ನನ್ನ ದಿನಚರಿಯ ಆರಂಭದ ರಿವಾಜು ಎಂಬ ಹಟಮಾರಿತನ ಸಲ್ಲದು. ಮುಂಜಾವಿನ ಮಂಜಿನ, ಇದಿರುಗಾಳಿಗೆ ಮೈ ಒಡ್ಡಿಕೊಳ್ಳದಿರಿ. ಇದನ್ನು ‘ಪ್ರಾಗ್ವಾತ’ ಎನ್ನುತ್ತಾರೆ, ಚರಕರು. ಇಂತಹ ಗಾಳಿಗೆ ಎದುರು ನಡಿಗೆಯಿಂದ ಖಂಡಿತ ಅಪಾಯವಿದೆ. ಮಂಜು ಹನಿಗಳ ನಡುವಿನ ರವಿಕಿರಣ ಸಂತಾಪ ಮೈ ಸುಡುವಷ್ಟು ಪ್ರಖರ. ಆದರೆ ಅದರ ಅರಿವು ನಿಮಗಾಗದು.

ನನಗೆ ಮೈ ದಣಿವಾಗುವಂತಹ ಆಟೋಟ ತುಂಬ ಇಷ್ಟ. ‘ಆಡಿದರೆ ಮಾತ್ರ ನಾನು ಫಿಟ್’. ಹೀಗೆ ವಾದಿಸುವವರೂ ಇದ್ದಾರೆ. ಮುಟ್ಟು ತೀರುವಳಿಯ ಮಹಿಳೆಯರು, ಐವತ್ತು ದಾಟಿದ ಪುರುಷರು ಅಂತಹ ಫಿಟ್ನೆಸ್ ಬಗ್ಗೆ ಖಂಡಿತ ದುಂಬಾಲು ಬೀಳುವುದು ತರವಲ್ಲ. ಏಕೆಂದರೆ ಆದಾನ ಕಾಲದ ಮನುಷ್ಯಬಲ ನಿಧಾನವಾಗಿ ಇಳಿಮುಖ. ಚರಕ ಸಂಹಿತೆಯ ಕಿವಿ ಮಾತೊಂದು ಇಲ್ಲಿ ಪ್ರಸ್ತುತ. ಕ್ರಮೇಣ ದೇಹದ ಶ್ರಮಸಹಿಷ್ಣುತೆ ಕುಂದುವುದು ಬಹುತೇಕ ಇದೇ ಕಾಲದಲ್ಲಿ. ದೇಹದಲ್ಲಿ ನಮಗೆಷ್ಟು ಕಸುವು ಇದೆ ಎಂಬ ಅಂದಾಜು ನಮಗಿದೆ. ಅದರ ಅರ್ಧಶಕ್ತಿ ಮಾತ್ರ ನಾವು ವ್ಯಯ ಮಾಡೋಣ; ಉಳಿದರ್ಧವನ್ನು ನಾವು ಜತನ ಮಾಡೋಣ. ಅದು ನಮ್ಮ ರೋಗನಿರೋಧಕ ಶಕ್ತಿ ಕಾಪಾಡುವ ಭೀಮಬಲ. ಅದು ಸೂರೆಯಾಗದಂತೆ ನಾವು ನಮ್ಮ ಕಾರ್ಯಚಟುವಟಿಕೆಗಳನ್ನು ರೂಢಿಸಿಕೊಳ್ಳೋಣ. ಚರಕರಿತ್ತ ಒಂದು ನಿದರ್ಶನ ಬಲು ಸೂಕ್ತ. ಆನೆ ಮತ್ತು ಸಿಂಹಗಳೆರಡೂ ಬಲವಂತ ಮೃಗಗಳು. ಆದರೆ ಅತಿಯಾಗಿ ನಮ್ಮ ಶಕ್ತಿ ವ್ಯಯವಾಯಿತೆ? ಆಗ ಬಲಿಷ್ಠ ಆನೆಯನ್ನು ಸಿಂಹ ನಿಗ್ರಹಿಸಿದ ಹಾಗೆ ಏಕಾಏಕಿ ನಾವು ರೋಗಕ್ಕೆ ತುತ್ತಾಗುವ ಭಯವಿದೆ. ಇದನ್ನು ಮರೆಯದೆ ಶಿಶಿರದ ಸ್ವಾಸ್ಥ್ಯ ಸಂಹಿತೆಯನ್ನು ಅಳವಡಿಸಿಕೊಳ್ಳೋಣ.

ಶಿಶಿರದ ಚಳಿಗೆ ಚರ್ಮ ಹೆಚ್ಚು ಒಣಗುತ್ತದೆ; ಬಿರಿಯುತ್ತದೆ. ಅಂಗೈ–ಅಂಗಾಲು ಸಹ ಒಡೆದು ರಕ್ತ ಒಸರುವ ಪ್ರಮೇಯ. ಇದರಲ್ಲಿದೆ ವಾತದ ಕಾರುಬಾರು. ವಾತವನ್ನು ಹದ್ದುಬಸ್ತಿನಲ್ಲಿಡಲು ಮುಖ್ಯವಾಗಿ ‘ಸ್ನೇಹ’ದ ಬಳಕೆಗೆ ಒತ್ತು ನೀಡಬೇಕು. ಅಂದರೆ, ಒಳ ಹೊರಗೆಗೆ ಬಳಸುವ ಜಿಡ್ಡು. ಅಂದರೆ ಆಹಾರದಲ್ಲಿ ಸಾಕಷ್ಟು ಜಿಡ್ಡಿನಂಶ ಸೇರಿಸಿಕೊಳ್ಳಬೇಕು. ತೆಂಗಿನೆಣ್ಣೆ, ಎಳ್ಳೆಣ್ಣೆ, ಶೇಂಗಾ ಎಣ್ಣೆಗಳು ಆಹಾರದ ಸಂಗಡ ಕೂಡಿಸಿ ಬಳಸಬೇಕು. ತುಪ್ಪದ ಬಳಕೆಗೆ ಒತ್ತು ಕೊಡುಬೇಕು. ಹಸಿವೆಯಂತೂ ಚಳಿಯ ದಿನಗಳಲ್ಲಿ ತುಸು ಹೆಚ್ಚೇ ಸೈ. ಹಾಗಾಗಿ ಜಿಡ್ಡಿನ ಬಳಕೆಗೆ ಒತ್ತು ಕೊಡುವುದು ಸಮಂಜಸ. ಎಳ್ಳಿನ ಹಬ್ಬ ಸಂಕ್ರಾಂತಿ. ಎಳ್ಳಮಾವಾಸ್ಯೆಯ ತೀರ್ಥಸ್ನಾನದಿಂದ ಪುಣ್ಯ ಪ್ರಾಪ್ತಿ. ಪಿತೃಗಳಿಗೆ ಸದ್ಗತಿ. ಆದರೆ ಎಳ್ಳಿನ ಹೇರಳ ಬಳಕೆಗೆ ಒತ್ತು ಗಮನಿಸಿರಿ. ಆದಾನದ ದೇಹರೂಕ್ಷತೆ ತಪ್ಪಿಸಲು ಎಳ್ಳು ತಿನ್ನಿರಿ. ಎಳ್ಳೆಣ್ಣೆ ಬಳಿದುಕೊಳ್ಳಿರಿ. ನೆತ್ತಿಗೆ ಒತ್ತುವ ಎಣ್ಣೆಯ ಬಳಕೆಗೆ ‘ಮೂರ್ಧ್ನಿತೈಲ’ ಎಂಬ ಪರಿಭಾಷೆ. ನಿತ್ಯವೂ ಇದರಿಂದ ಲಾಭವಿದೆ. ಬರಿ ನೆತ್ತಿಗೆ ಮೀಯಬಾರದೆಂಬ ಜನಪದ ನಂಬಿಕೆ ಇದೆ. ಅನಂತರ ಹದ ಬಿಸಿನೀರಲ್ಲಿ ಮೀಯಿರಿ.
‘ಪೊಂಗಲ್’ ಎಂದರೆ ಹೆಸರು ಧಾನ್ಯದ ಆಹಾರ. ಹೆಸರನ್ನು ಅತಿಶಯ ಪಥ್ಯದ ದ್ವಿದಳ ಎನ್ನುತ್ತದೆ, ಆಯುರ್ವೇದ. ಕೇವಲ ಸಂಕ್ರಮಣಕ್ಕೆ ಮಾತ್ರ ಪೊಂಗಲ್ ಬಳಕೆ ಅಲ್ಲ. ಅಂದಿನಿಂದ ಶಿಶಿರ ಋತು ಪರ್ಯಂತ ಹೆಸರುಬೇಳೆಯನ್ನು ಬಳಸೋಣ.

ಕಹಿರಸವು ಶಿಶಿರದಲ್ಲಿ ಹೆಚ್ಚು ಬಲ. ಹಾಗಾಗಿ ಕಹಿ ತರಕಾರಿ ಬಳಸಬೇಕು. ಹೇಮಂತದಿಂದ ಕೊಂಚ ಕೊಂಚವೇ ದೇಹದಲ್ಲಿ ಕಫ ಸೇರಲು ಆರಂಭ. ಅದನ್ನು ತಡೆಯಲು ಮತ್ತು ನಿಗ್ರಹಿಸಲು ಕಹಿ ಬಳಕೆಗೆ ಆದ್ಯತೆ ಇರಲಿ. ಮೆಂತ್ಯ, ಧನಿಯಾ, ಸಾಸಿವೆ ಕಹಿರಸದ ಸಂಭಾರಗಳು; ಇವನ್ಳು ಬಳಸಲು ಅಡ್ಡಿಯಿಲ್ಲ. ನಿಮಗೆ ಈಗಲೇ ಅರಿವಾಗಿರುತ್ತದೆ. ಗಂಟೆ ಏಳಾದರೂ ಹೊತ್ತು ಹಗಲಾಗದು. ಚಳಿಯ ದಿನಗಳೇ ಹೀಗೆ. ಸುದೀರ್ಘ ಇರುಳಿನ ಬೆಚ್ಚನೆಯ ಮನೆ ವಾಸಕ್ಕೆ ಹೇಮಂತ, ಶಿಶಿರದಲ್ಲಿದೆ ಬಹಳ ಒತ್ತು. ಅಷ್ಟೆ ಅಲ್ಲ. ಮುಖಾದಿ ಸಕಲ ಪ್ರಕ್ಷಾಲನಕ್ಕೆ ಕೂಡ ಹಿತೋಷ್ಣ ಜಲ ಬಳಸಿರಿ ಎನ್ನುತ್ತದೆ ಆಯುರ್ವೇದ. ಧರಿಸುವ ಬಟ್ಟೆ, ಮಲಗುವ ಹಾಸಿಗೆ, ಹೊದಿಕೆಯ ಬಟ್ಟೆಗೆ ಸಹ ಇದಮಿತ್ಥಂ ಎಂಬ ಸೂಚನೆಗಳು ಇವೆ. ಉಣ್ಣೆಯ, ರೇಷ್ಮೆಯ ಬಟ್ಟೆಗೆ ಹೆಚ್ಚಿನ ಮಾನ್ಯತೆ.

ಈಗಂತೂ ಮಾರುಕಟ್ಟೆಯ ತುಂಬ ಯಾವು ಹಣ್ಣು ಬೇಕಾದರೂ ಇಡೀ ವರ್ಷ ಸಿಗುತ್ತದೆ. ಆಯುರ್ವೇದದ ಆಯಾ ಋತುವಿನಲ್ಲಿ ಲಭ್ಯವಾಗುವ ಹಣ್ಣು ಆಯಾ ಋತುವಿಗೆ ತಿನ್ನಲು ಯೋಗ್ಯ. ಎಲಚಿ ಅಥವಾ ಬೋರೆಯ ಹಣ್ಣು ಸಂಕ್ರಾಂತಿಯ ಎಳ್ಳು ಬೀರುವ ತಟ್ಟೆಗಷ್ಟೆ ಮೀಸಲಾಗಬಾರದು. ಇದೀಗ ಎಲಚಿಯ ಸೋದರ ಹಣ್ಣು ಬೋರೆ ಅಥವಾ ಬೇರ್ ಲಭ್ಯ. ಅದನ್ನು ಹೆಚ್ಚು ಬಳಸಿದರೆ ಆರೋಗ್ಯ ಎಂಬ ಸೂಚ್ಯಾರ್ಥ ಸಂಕ್ರಾಂತಿ ಎಳ್ಳು ತಟ್ಟೆಯಲ್ಲಿರುವ ಎಲಚಿಯ ಸಂದೇಶ. ದೋರೆಗಾಯಿ ಪಪಾಯಿಯು ಕೊಂಚ ಕಹಿ. ಆಗ ಅದರ ಬಳಕೆಗೆ ಅಡ್ಡಿಯಿಲ್ಲ. ಹೀಗೆ ಕಹಿಯ ಬಳಕೆ ಬೇವಿನ ಹಬ್ಬ ಯುಗಾದಿಯ ಪರ್ಯಂತ ಮರೆಯದಿರೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.