ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಾಳೆ ಜುಂಗಿನ ಪ್ಯಾಡ್

ತಾಳೆಯ ನಾರಿನಿಂದ ಸ್ಯಾನಿಟರಿ ಪ್ಯಾಡ್‌
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕತ್ತಾಳೆಯ ನಾರಿನಿಂದ ಉತ್ತಮವಾದ ಹಾಗೂ ಸುಸ್ಥಿರವಾದ ಸ್ಯಾನಿಟರಿ ಪ್ಯಾಡುಗಳನ್ನು ತಯಾರಿಸಬಹುದು.

ಸ್ಯಾ ನಿಟರಿ ಪ್ಯಾಡುಗಳು ಅವಶ್ಯಕ ವಸ್ತುಗಳು. ಭಾರತದಲ್ಲಿರುವ ವಯಸ್ಕ ಮಹಿಳೆಯರಲ್ಲಿ ಶೇಕಡ ಅರವತ್ತರಷ್ಟು ಮಂದಿ ಪ್ರತಿ ತಿಂಗಳೂ ಮುಟ್ಟಾದಾಗ ಅಥವಾ ಹೆರಿಗೆಯಾದಾಗ ಸ್ಯಾನಿಟರಿ ಪ್ಯಾಡುಗಳನ್ನು ಬಳಸುತ್ತಾರೆ. ಹತ್ತಿ ಬಟ್ಟೆಗಳಿಗಿಂತ ಹೆಚ್ಚು ತೇವವನ್ನು ಹೀರಿಕೊಳ್ಳುವುದಷ್ಟೆ ಅಲ್ಲದೆ ಒಣಗಿರುವುದರಿಂದಾಗಿ ಇವು ಜನಪ್ರಿಯ. ಇದೀಗ ಪ್ಯಾಡುಗಳಲ್ಲಿ ಸಾಮಾನ್ಯವಾಗಿ ಬಳಸುವ ಹತ್ತಿಯ ಬದಲಿಗೆ ಕತ್ತಾಳೆಯ ನಾರಿನಿಂದ ಮಾಡಿದ ಹತ್ತಿಯನ್ನು ಬಳಸಬಹುದಂತೆ.

ಹೀಗೆ ಕತ್ತಾಳೆಯ ನಾರನ್ನು ಹಿಂಜಿ ಹತ್ತಿಯಂತಾಗಿಸುವ ವಿಧಾನವನ್ನು ಅಮೆರಿಕದ ಸ್ಟಾನ್ಫರ್ಡ್ ವಿ.ವಿಯ ಎಂಜಿನಿಯರ್ ಮನು ಪ್ರಕಾಶ್ ರೂಪಿಸಿದ್ದಾರೆಂದು ಕಮ್ಯುನಿಕೇಷನ್ಸ್ ಎಂಜಿನಿಯರ್ ಪತ್ರಿಕೆ ವರದಿ ಮಾಡಿದೆ.

ಮುಟ್ಟು, ಹೆರಿಗೆ ಅಲ್ಲದೆ ಮಕ್ಕಳಿಗೆ ಹಾಗೂ ಮುಪ್ಪಾದವರಿಗೆ ತೊಡಿಸುವ ಪ್ಯಾಡುಗಳೆಲ್ಲದರಲ್ಲಿಯೂ ಹತ್ತಿ ಇದ್ದೇ ಇರುತ್ತದೆ. ಮುಟ್ಟಿನ ಸ್ರಾವ ಹಾಗೂ ಮೂತ್ರವನ್ನು ಹೀರಿಕೊಂಡು ಒಳಸಾಗಿಸುವುದು ಇದರ ಕೆಲಸ. ಒಳಗೆ ತನ್ನ ತೂಕದ ಹತ್ತುಸಾವಿರದಿಂದ ಇಪ್ಪತ್ತುಸಾವಿರ ಪಟ್ಟು ದ್ರವವನ್ನು ಹೀರಿಕೊಳ್ಳುವ, ಹಾಗೂ ಹೀರಿದ ಮೇಲೂ ದಪ್ಪವಾಗದ ಪಾಲಿಮರು ಇರುತ್ತದೆ. ಇವೆಲ್ಲವನ್ನೂ ನೀರು ಹರಿಯಬಿಡದ ಪಾಲಿಥೀನಿನಂತಹ ವಸ್ತು ಆವರಿಸಿರುತ್ತದೆ. ಹೀಗೆ ಮಗು ದಿನ ಪೂರ್ತಿ ಮೂತ್ರ ಮಾಡಿದರೂ ಒದ್ದೆಯೆ ಆಗದಂತೆ ಕಾಪಾಡಬಹುದು.ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಇದು ಬಹಳ ಅನುಕೂಲಿ.

ಹಾಗಿದ್ದರೂ ಪ್ರಪಂಚದಲ್ಲಿ ಏನಿಲ್ಲವೆಂದರೂ ಐವತ್ತು ಕೋಟಿಗೂ ಹೆಚ್ಚು ಮಹಿಳೆಯರಿಗೆ ಈ ಅನುಕೂಲವಿಲ್ಲ. ಹಳ್ಳಿಗಳಲ್ಲಿಯೂ ಪ್ಯಾಡು ತಯಾರಿಸುವಂತಾದರೆ ಅವರಿಗೂ ಈ ಅನುಕೂಲ ಒದಗಿಸಬಹುದು ಎನ್ನುವುದು ಪ್ರಕಾಶ್ ಅವರ ತರ್ಕ. ಇದಕ್ಕಾಗಿ ಪ್ರಕಾಶ್ ತಂಡ ಕಳೆಯಾಗಿ ಬೆಳೆಯುವ ಕತ್ತಾಳೆಯ ನಾರನ್ನೇ ಹತ್ತಿಯಂತೆ ಹಿಂಜಿದೆ.

ಬಾಳೆ, ಸೆಣಬಿನಂಥ ನಾರುಗಳನ್ನೂ ಬಳಸಲು ಯತ್ನಿಸಲಾಗಿದೆ. ಆದರೆ ಅವು ಯಾವುವೂ ಹತ್ತಿಯಷ್ಟು ತೇವವನ್ನು ಹೀರಲಾರವು. ಇದಕ್ಕೆ ಕಾರಣ ಆ ನಾರುಗಳಲ್ಲಿ ಇರುವ ಲಿಗ್ನಿನ್ ಎಂಬ ಅಂಟು. ಇದನ್ನು ತೆಗೆದಲ್ಲದೆ ನಾರುಗಳು ಬಿಡಿಸಿಕೊಂಡು ಹತ್ತಿಯಂತೆ ಜುಂಗು ಜುಂಗಾಗುವುದಿಲ್ಲ. ಕಾಗದಗಳನ್ನು ತಯಾರಿಸುವಾಗ ಈ ಲಿಗ್ನಿನನ್ನು ತೆಗೆಯಲು ಪ್ರಬಲವಾದ ದ್ರಾವಣಗಳನ್ನು ಬಳಸುತ್ತಾರೆ. ವಾರ್ಷಿಕ ಕನಿಷ್ಠ ನಾಲ್ಕು ಲಕ್ಷ ಟನ್‌ ಉತ್ಪಾದಿಸದಿದ್ದರೆ ಈ ತಂತ್ರ ದುಬಾರಿ ಆಗುತ್ತದೆ. ಹೀಗಾಗಿ ಸಣ್ಣ, ಪುಟ್ಟ ಉದ್ಯಮಗಳು ಇತ್ತ ಮುಖ ಹಾಕುವುದಿಲ್ಲ. ಇನ್ನು ಹಳ್ಳಿ, ಹಳ್ಳಿಯಲ್ಲಿಯೂ ಪ್ಯಾಡುಗಳನ್ನು ತಯಾರಿಸಲು, ಕಡಿಮೆ ಬೆಲೆಯಲ್ಲಿ, ಕಡಿಮೆ ಪ್ರಮಾಣದಲ್ಲಿ ತಯಾರಿಕೆಗೆ ಒಗ್ಗುವ ಹಿಂಜಿದ ನಾರು ಬೇಕಿತ್ತು. ಅದನ್ನು ಕತ್ತಾಳೆಯ ಎಲೆಗಳಿಂದ ಮಾಡಬಹುದು ಎನ್ನುತ್ತದೆ ಪ್ರಕಾಶ್‌ ತಂಡ.

ಪ್ರಕಾಶ್ ತಂಡ ಇದಕ್ಕಾಗಿ ಅಗೇವ್‌ ಸಿಸಲಾನಾ ಎನ್ನುವ ಕತ್ತಾಳೆಯ ಎಲೆಗಳನ್ನ ಬಳಸಿದೆ. ಈ ಕತ್ತಾಳೆ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ, ಬೇಲಿಯಾಗಿಯೋ, ಅಥವಾ ಬೆಂಗಾಡಿನಲ್ಲಿ ಕುರುಚಲಾಗಿಯೋ ಬೆಳೆಯುವ ಗಿಡ. ನಮ್ಮಲ್ಲಿ ಇದರ ಹೂವನ್ನಷ್ಟೆ ಒಮ್ಮೊಮ್ಮೆ ಬಳಸುವುದುಂಟು. ಈ ಗಿಡದ ದಪ್ಪ ಎಲೆಯನ್ನು ಜಜ್ಜಿ, ಬೇಯಿಸಿದರೆ ನಾರನ್ನು ಬೇರ್ಪಡಿಸಬಹುದು.ಹೀಗೆ ಬೇರ್ಪಡಿಸಿದ ನಾರನ್ನು ಪ್ರಕಾಶ್‌ ತಂಡ ಪರಾಕ್ಸಿ ಫಾರ್ಮಿಕ್ ಆಮ್ಲವನ್ನು ಬಳಸಿ ಲಿಗ್ನಿನನ್ನು ಕರಗಿಸಿದೆ. ಪರಾಕ್ಸಿ ಫಾರ್ಮಿಕ್‌ ಆಮ್ಲ ಇತರೆ ಆಮ್ಲಗಳಂತೆ ಪ್ರಬಲವಲ್ಲ. ಬಳಸುವುದು ಸುಲಭ. ಜೊತೆಗೆ ಇದು ಲಿಗ್ನಿನನ್ನು ಮಾತ್ರ ಕರಗಿಸಿ, ಎಳೆಗಳನ್ನು ಬಿಡಿಸುತ್ತದೆ. ಹೀಗೆ ಬಿಡಿಯಾದ ಎಳೆಗಳನ್ನು ಸೋಡಿಯಂ ಹೈಡ್ರಾಕ್ಸೈಡಿನ ದ್ರಾವಣದಲ್ಲಿ ಕೆಲವು ಗಂಟೆಗಳ ಕಾಲ ಅದ್ದಿ ತೆಗೆದಿದೆ. ನಂತರ ನೀರಿನಲ್ಲಿ ತೊಳೆದು, ಮಿಕ್ಸಿಯಲ್ಲಿ ರುಬ್ಬಿದೆ. ಹೀಗೆ ನಾರಿನಿಂದ ತೆಗೆದ ಸೂಕ್ಷ್ಮವಾದ ಎಳೆಗಳು ಹತ್ತಿಯುಂಡೆಯಂತೆಯೇ ಜುಂಗು ಜುಂಗಾಗುತ್ತವೆ ಎನ್ನುತ್ತಾರೆ ಪ್ರಕಾಶ್‌.

ಇವನ್ನು ಪ್ಯಾಡಿನಂತೆ ಮಾಡಿ ದಪ್ಪನೆಯ ದ್ರವವನ್ನು ಹೀರಲು ಕೊಟ್ಟಾಗ, ಅಷ್ಟೇ ದಪ್ಪದ ಹತ್ತಿಯ ಪ್ಯಾಡಿಗಿಂತ ಮೂವತ್ತು ಪಟ್ಟು ಹೆಚ್ಚು ದ್ರವವನ್ನು ಹೀರಿಕೊಂಡಿದೆ. ಹೀರಿಕೊಂಡು ಹತ್ತಿಯಂತೆ ಕುಗ್ಗದೆ ಇದ್ದ ಗಾತ್ರದಲ್ಲಿಯೇ ಉಳಿಯಿತೆಂದೂ ಈ ತಂಡ ವರದಿ ಮಾಡಿದೆ.

ಇದೇ ತಂತ್ರವನ್ನು ಬಳಸಿ ಸೆಣಬು ಹಾಗೂ ಅಗಸೆ ನಾರನ್ನೂ ಇವರು ಹಿಂಜಿದ್ದಾರೆ. ಅವುಗಳ ಕ್ಷಮತೆಯನ್ನೂ ಪರೀಕ್ಷಿಸಿದ್ದಾರೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ಅವುಗಳ ಎಳೆಗಳ ರಚನೆಯನ್ನು ಹೋಲಿಸಿದ್ದಾರೆ. ಈ ಎಲ್ಲ ಪರೀಕ್ಷೆಗಳಲ್ಲಿಯೂ, ಸೆಣಬು ಹಾಗೂ ಅಗಸೆಯ ನಾರುಗಳು ಹತ್ತಿ ಮತ್ತು ಕತ್ತಾಳೆಯ ನಾರಿನಷ್ಟು ನೀರನ್ನು ಅಥವಾ ದ್ರವವನ್ನು ಹೀರಿಕೊಳ್ಳಲಿಲ್ಲ. ಎಲ್ಲ ಪರೀಕ್ಷೆಗಳಲ್ಲಿಯೂ ಕತ್ತಾಳೆಯ ನಾರು ಮುಂದಿತ್ತು ಎಂದು ಕಮ್ಯೂನಿಕೇಷನ್ಸ್‌ ಎಂಜಿನಿಯರ್‌ ವರದಿ ಮಾಡಿದೆ.

ಇನ್ನೂ ಒಂದು ವಿಷಯದಲ್ಲಿ ಕತ್ತಾಳೆ ಉಳಿದವುಗಳಿಗಿಂತ ಮುಂದು. ಇದು ಪ್ರಪಂಚದ ಬಹುತೇಕ ಸ್ಥಳಗಳಲ್ಲಿ ಬೆಳೆಯುವ ಗಿಡ. ರಸ್ತೆ ಬದಿಯಲ್ಲಿ, ಸುಡುಗಾಡಿನಲ್ಲಿಯೂ ಬೆಳೆಯುವ ಕತ್ತಾಳೆಯ ನಾರುಗಳನ್ನು ತಯಾರಿಸಲು ಬೇಕಾಗುವ ನೀರು, ಬೆಳೆಯಲು ಬೇಕಾದ ನೀರಾವರಿ, ಗೊಬ್ಬರದ ಪ್ರಮಾಣವನ್ನೂ ಗಣಿಸಿ, ಹತ್ತಿಯದ್ದರ ಜೊತೆಗೆ ಹೋಲಿಸಿದ್ದಾರೆ. ಸುಲಭ, ಸರಳ ವಿಧಾನದಿಂದ ತೆಗೆಯಬಹುದಾದ ಕತ್ತಾಳೆಯ ಜುಂಗು ಹಳ್ಳಿಯ ಜನ ಅಲ್ಲಿಯೇ ಪ್ಯಾಡುಗಳನ್ನು ತಯಾರಿಸಿಕೊಳ್ಳಲು ತಕ್ಕುದಾಗಿದೆ ಎನ್ನುತ್ತಾರೆ ಪ್ರಕಾಶ್.

ಕೆಲವೇ ಕೆಲವು ಕಿಲೋಗಳಷ್ಟು ಜುಂಗನ್ನು ಕೂಡ ಲಾಭದಾಯಕವಾಗಿ ತಯಾರಿಸಬಹುದು ಎನ್ನುವುದು ಇನ್ನೊಂದು ಅಂಶ. ಹಳ್ಳಿಗಳಲ್ಲಿಯೇ ಇದನ್ನು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಬಳಸಲು ನೆರವಾಗುತ್ತದೆ. ಪ್ರತಿ ಕಿಲೋ ಹಿಂಜಿನ ನಾರನ್ನು ತಯಾರಿಸಲು ಹತ್ತಿ ಅಥವಾ ಸೆಣಬು ತಯಾರಿಸುವುದಕ್ಕೆ ಬೇಕಾಗುವ ನೀರಿನ ಮೂರರಲ್ಲೊಂದು ಪಾಲು ಕತ್ತಾಳೆಯ ಹತ್ತಿ ತಯಾರಿಸಲು ಸಾಕು. ಭಾರತದಲ್ಲಿ ಈಗಾಗಲೇ ಹಳ್ಳಿಗಳಲ್ಲಿಯೇ ಪ್ಯಾಡು ತಯಾರಿಸುವ ಯಂತ್ರಗಳು ತಯಾರಾಗುತ್ತಿವೆ. ಅದರ ಜೊತೆಗೆ ಕತ್ತಾಳೆಯ ಜುಂಗಿನಂತಹ ಅಗ್ಗದ ವಸ್ತುವೂ ಸೇರಿದರೆ, ಬಹುಶಃ ಇದೀಗ ಈ ಪ್ಯಾಡುಗಳು ಕೈಗೆಟುಕದ ಐವತ್ತು ಕೋಟಿ ಮಹಿಳೆಯರಿಗೂ ಲಾಭ ಆಗಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT