ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಆರೋಗ್ಯ ದಿನ: ಯುವಕರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು...ಇರಲಿ ಎಚ್ಚರ!

ಡಾ. ವಿ. ಲಕ್ಷ್ಮೀನಾರಾಯಣ್‌
Published 6 ಏಪ್ರಿಲ್ 2024, 5:04 IST
Last Updated 6 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ವಿಶ್ವ ಆರೋಗ್ಯ ಸಂಸ್ಥೆ (who):  1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರ ಸ್ಮರಣಾರ್ಥ ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತೇವೆ.  

ವಿಶ್ವ ಆರೋಗ್ಯ ಸಂಸ್ಥೆ ಎಂಬುದು ಅಂತರರಾಷ್ಟ್ರೀಯ ಸಂಸ್ಥೆ (United Nations Agency). ಈ ಸಂಸ್ಥೆಯ ಧ್ಯೇಯವೇನೆಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಾರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು ಮತ್ತು ಆರೋಗ್ಯ ಮಟ್ಟವನ್ನು ಮೇಲೇರಿಸುವುದು. ಈಗ ಆಧುನಿಕ ಜಗತ್ತಿನಲ್ಲಿ ವಿಶ್ವದಾದ್ಯಂತ ಮಿತಿ ಇಲ್ಲದೆ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆ ಏನೆಂದರೆ ಯುವಜನಾಂಗದಲ್ಲಿ ಬೆಳೆಯುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳು ‘Non-communicable diseases in the youth‘ ಎಂದರೆ ತರುಣರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು. ತಾರುಣ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮಟ್ಟದಲ್ಲಿ ಬಾಲ್ಯದಿಂದಲೇ ಯುವಜನಾಂಗಕ್ಕೆ ತಿಳಿವಳಿಕೆ ಕೊಡುವ ಮಧುಮೇಹ ಕುರಿತ ಪಾಠಗಳನ್ನು ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಸೇರ್ಪಡೆಯಾಗುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿದರೆ ಒಳ್ಳೆಯದಾದೀತು.

2024ನೇ ಸಾಲಿನ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ ನನ್ನ ಹಕ್ಕು‘ (My health, My right) ಎಂಬುದು. ಆರೋಗ್ಯ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಆರೋಗ್ಯದ ಹಕ್ಕನ್ನು ಪಡೆಯಲು Prevention is better than cure ಎಂಬ ಗಾದೆ ಸತ್ಯ. ಚಿಕಿತ್ಸೆಗಿಂತ ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ, ಎಲ್ಲರಿಗಿಂತಲೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ತರುಣರು ಈ ಬಗೆಗೆ ಗಮನವನ್ನು ಹರಿಸಬೇಕೆಂಬ ದೃಷ್ಟಿಯಿಂದ ‘Non-communicable diseases in the youth' ಎಂಬ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. 

ಪ್ರಸ್ತಾವನೆ 

ವಿಶ್ವದಾದ್ಯಂತ ನವೀನ ವೈದ್ಯಕೀಯ ಪದ್ಧತಿಗಳಿಂದ ಬಹುತೇಕ ಸಾಂಕ್ರಾಮಿಕ ವ್ಯಾಧಿಗಳನ್ನು ಹತೋಟಿಗೆ ತಂದಿದ್ದೇವೆ. ಆದರೆ ಇಂದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸಾವುಗಳಿಗೆ ಪ್ರಮುಖವಾದ ಕಾರಣಗಳೆಂದರೆ ಸಾಂಕ್ರಾಮಿಕವಲ್ಲದ ರೋಗಗಳು. ಜಾಗತಿಕವಾಗಿ ಪ್ರತಿಶತ 74 ಮಿಲಿಯನ್ (7.4 ಕೋಟಿ) ಸಾವುಗಳು ಸಾಂಕ್ರಾಮಿಕವಲ್ಲದ ವ್ಯಾಧಿಗಳಿಂದ ಸಂಭವಿಸುತ್ತಿವೆ. ಸುಮಾರು 140 ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ ಪ್ರತಿಶತ 60 ಸಾವುಗಳಿಗೆ ಸಾಂಕ್ರಾಮಿಕವಲ್ಲದ ರೋಗಗಳು ಕಾರಣ. 1990ರಲ್ಲಿದ್ದ ಶೇಕಡವಾರು 37.9% ಸಾವಿನ ಸಂಖ್ಯೆ 2016ರ ಅಂಕಿಅಂಶಗಳ ಪ್ರಕಾರ 61.8%ಕ್ಕೆ ಏರಿಕೆಯಾಗಿದೆ. ಆದ್ದರಿಂದ ಈ ಲೇಖನದ ಉದ್ದೇಶವೇನೆಂದರೆ ಈ ಸಾವು ನೋವುಗಳಿಗೆ ಏನು ಕಾರಣ ಮತ್ತು ಹೇಗೆ ತಡೆಗಟ್ಟಬಹುದು ಎಂಬುದೇ ಆಗಿದೆ.

ಸಾಂಕ್ರಾಮಿಕವಲ್ಲದ ರೋಗಗಳು

ಇಂದು ಮಾನವಕುಲವನ್ನು ಹೆಚ್ಚಾಗಿ ಬಾಧಿಸುತ್ತಿರುವುವು, ಹೆಚ್ಚು ಸಾವು ನೋವುಗಳಿಗೆ ಕಾರಣವಾಗಿರುವುವು ಸಾಂಕ್ರಾಮಿಕೇತರ ರೋಗಗಳೇ ಆಗಿವೆ. ಮಧುಮೇಹ (Diabetes), ಅಧಿಕ ರಕ್ತದೊತ್ತಡ (Hypertension), ಹೃದ್ರೋಗಗಳು (Heart diseases), ಅರ್ಬುದವ್ಯಾಧಿಗಳು (Cancers) ದೀರ್ಘಕಾಲಿಕ ಶ್ವಾಸಕೋಶ ವ್ಯಾಧಿಗಳು ಮುಂತಾದವು ಅಸಾಂಕ್ರಾಮಿಕ ರೋಗಗಳು. ಹಿಂದೆ ಇವು ಹೆಚ್ಚು ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದುವು. ಆದರೆ ಈಗ ಆಧುನಿಕ ಜೀವನಶೈಲಿಯಿಂದ ವಯೋಭೇದ, ಲಿಂಗಭೇದ, ಸಾಮಾಜಿಕ ಭೇದ ಇಲ್ಲದೆ ಎಲ್ಲರಲ್ಲೂ ಗೋಚರಿಸುತ್ತಿವೆ. 

ಈ ನಾಲ್ಕು ರೋಗಗಳಿಗೆ ಮುಖ್ಯವಾದ ಕಾರಣಗಳು

1) ಆಹಾರ ಪದ್ಧತಿಗಳು
2) ಶ್ರಮರಹಿತ ಜೀವನಶೈಲಿ
3) ತಂಬಾಕು ಸೇವನೆ
4) ಜೊತೆಗೆ ರಕ್ತದೊತ್ತಡ, ಅತಿಯಾದ ಕೊಲೆಸ್ಟೆರಾಲ್, ಮಿತಿಮೀರಿದ ಸಕ್ಕರೆ ಅಂಶ, ಆನುವಂಶಿಕತೆ ಇತ್ಯಾದಿ.

ಸಾಂಕ್ರಾಮಿಕವಲ್ಲದ ರೋಗಗಳ ವ್ಯಾಪ್ತಿ

ಸಾಂಕ್ರಾಮಿಕವಲ್ಲದ ರೋಗಗಳು ಯಾವುದೇ ದೇಶಕ್ಕೆ ಅಥವಾ ಖಂಡಕ್ಕೆ ಸೀಮಿತವಲ್ಲ. ಮಧುಮೇಹ, ರಕ್ತದ ಅಧಿಕ ಒತ್ತಡ, ಹೃದಯ ರೋಗಗಳು, ಕ್ಯಾನ್ಸರ್ ಇವು ಎಲ್ಲ ದೇಶಗಳ ಜನರನ್ನೂ ಪೀಡಿಸುತ್ತಿವೆ. ಆದರೂ ಏಷ್ಯನ್ ಮೂಲದ ಜನರಿಗೆ ಇವು ಹೆಚ್ಚು ಕಾಟಕೊಡುತ್ತಿವೆ. ಮಕ್ಕಳಲ್ಲೂ ಯುವಕರಲ್ಲೂ ಇವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲವೇ ವರ್ಷಗಳಲ್ಲಿ ಭಾರತದೇಶ ಸಾಂಕ್ರಾಮಿಕವಲ್ಲದ ರೋಗಗಳ ರಾಜಧಾನಿಯಾಗಬಹುದು. ಎಷ್ಟು ಜನರು ಈ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವರೋ ಅದರ ಎರಡರಷ್ಟು ಜನರು ಅದರ ಬಗೆಗೆ ಅರಿವಿಲ್ಲದೆ ಇದ್ದು, ರೋಗ ಉಲ್ಬಣಿಸಿದ ಮೇಲೆ ಚಿಕಿತ್ಸೆಗೆ ಬರುತ್ತಾರೆ. ಆಗ ಕಾಲ ಮೀರಿರುವುದರಿಂದ ವಿವಿಧ ಪರಿಣಾಮಗಳನ್ನು ಎದುರಿಸುತ್ತಾರೆ. ನಿಯಂತ್ರಣವಿಲ್ಲದ ಮಧುಮೇಹದಿಂದ ಸೋಂಕುಗಳು ವಿಪರೀತವಾಗಿದ್ದಾಗ ಶಸ್ತ್ರ ಚಿಕಿತ್ಸೆಯಿಂದ ಪಾದಗಳನ್ನು ಕತ್ತರಿಸುವುದು, ಮೂತ್ರಪಿಂಡಗಳ ವೈಫಲ್ಯದಿಂದ ಡಯಾಲಿಸಿಸ್, ಕಣ್ಣಿನ ಶಕ್ತಿ ಕುಂದುವುದರಿಂದ ಕುರುಡುತನ ಮುಂತಾದ ತೊಂದರೆಗಳು ಅನಿವಾರ್ಯವಾಗುತ್ತವೆ. ಇಂತಹ ಸ್ಥಿತಿಯಲ್ಲಿ ಆರ್ಥಿಕ ಹೊರೆಯೂ ಹೆಚ್ಚಾಗಿ ಬದುಕು ದುರ್ಬರವಾಗುತ್ತದೆ. ಅಮೆರಿಕ ಮುಂತಾದ ದೇಶಗಳಲ್ಲಿ ವೈದ್ಯಕೀಯ ಸೇವೆಗಳ ವೆಚ್ಚ ಅತಿ ಹೆಚ್ಚಾಗಿರುವುದರಿಂದ ಅನೇಕ ರೋಗಿಗಳ ಕುಟುಂಬಗಳೇ ದಿವಾಳಿ ಆಗುವ ಸಂಭವವಿದೆ. ಹೀಗೆ ಅಸಾಂಕ್ರಾಮಿಕ ರೋಗಗಳು ವಿಶ್ವ ವ್ಯಾಪಿಯಾಗಿವೆ. ನನ್ನ 55 ವರ್ಷಗಳ ವೈದ್ಯಕೀಯ ಸೇವೆಯ ಅನುಭವದಿಂದ ಇದನ್ನು ಹೇಳುತ್ತಿದ್ದೇನೆ.

ಸಾಂಕ್ರಾಮಿಕವಲ್ಲದ ರೋಗಗಳಿಂದಾಗುವ ಹಾನಿ

ಸಾಂಕ್ರಾಮಿಕವಲ್ಲದ ರೋಗಗಳು ಶರೀರದಲ್ಲಿ ಬೆಳೆದ ಮೇಲೆ ಅವುಗಳ ನಿವಾರಣೆ ಅಥವಾ ಶಮನ ಅತಿಕಷ್ಟ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆಗಳು ಒಂದನ್ನೊಂದು ಅನುಸರಿಸಿಕೊಂಡು ಪ್ರಾಣಕ್ಕೇ ಕುತ್ತನ್ನು ತರುತ್ತವೆ. ವ್ಯಕ್ತಿಗಳು ಶರೀರದ, ಇಂದ್ರಿಯಗಳ ಮತ್ತು ಬುದ್ಧಿಯ ದೌರ್ಬಲ್ಯಗಳಿಗೆ ಒಳಗಾಗಬಹುದು. ರೋಗಿಯ ನೋವನ್ನು ತಗ್ಗಿಸುವುದಕ್ಕೆ ಮತ್ತು ಚಿಕಿತ್ಸೆಗೆ ಹಲವರ ನೆರವು ಬೇಕಾಗಬಹುದು. ಇಂತಹ ರೋಗಗಳ ಸಂಖ್ಯೆ ಹೆಚ್ಚಾದಾಗ ಇಡೀ ರಾಷ್ಟ್ರಕ್ಕೆ ನಷ್ಟವಾಗುವ ಮಾನವ ಸಂಪನ್ಮೂಲ ಮತ್ತು ಮಾನವ ಗಂಟೆಗಳೂ ಅಧಿಕ.

ಸಾಂಕ್ರಾಮಿಕವಲ್ಲದ ರೋಗಗಳ ಕಾರಣಗಳು

ಅಸಾಂಕ್ರಾಮಿಕ ರೋಗಗಳು ಇಪ್ಪತ್ತನೆಯ ಶತಮಾನದಲ್ಲಿ ಹೆಚ್ಚಾಗಿ ಇಪ್ಪತ್ತೊಂದನೆಯ ಶತಮಾನದಲ್ಲಿ ಅಧಿಕವಾಗುತ್ತಿವೆ. ಇದಕ್ಕೆ ಕಾರಣ ಒಂದು ದೃಷ್ಟಿಯಿಂದ ನೋಡಿದರೆ ಮಾನವನ ಸ್ವಯಂಕೃತ ಅಪರಾಧ. ಸುಖ ಸಾಧನಗಳನ್ನೂ, ವಾಹನಗಳನ್ನೂ ಬಳಸಿ, ಬೆವರನ್ನು ಸುರಿಸದೇ, ದೃಹಿಕ ಶ್ರಮ ಮಾಡುವುದನ್ನು ಮನುಷ್ಯ ಇಂದು ಮರೆತಿದ್ದಾನೆ. ರುಚಿಯಾದ ಆಹಾರಕ್ಕೆ ಮನಸೋತು ಸಕ್ಕರೆ, ಉಪ್ಪು, ಕೊಬ್ಬಿನಾಂಶ ಇರುವ ಆಹಾರ ಪದಾರ್ಥವನ್ನು ಅತಿಯಾಗಿ ಸೇವಿಸುತ್ತಾ ಸೋಮಾರಿಯಾಗಿದ್ದಾನೆ. ಇದು ಅಸಾಂಕ್ರಾಮಿಕ ರೋಗಕ್ಕೆ ಆಹ್ವಾನವನ್ನು ಕೊಟ್ಟಂತೆ ಆಗಿದೆ. ಮನುಷ್ಯನು ಬೆಳೆಸುತ್ತಿರುವ ದೊಡ್ಡ ಶತ್ರು ಎಂದರೆ ತಂಬಾಕು ಅಥವಾ ಹೊಗೆಸೊಪ್ಪು. ಇದು ಹಲವು ವಿಧದ ಕ್ಯಾನ್ಸರ್‌ಗಳ ಮೂಲಕಾರಣ. ಪ್ರಪಂಚದಲ್ಲಿ ತಂಬಾಕಿನ ಬೆಳೆಯನ್ನು ಪೂರ್ಣವಾಗಿ ನಿಷೇಧಿಸಿದರೆ ಔಷಧಗಳಿಗೆ ಮತ್ತು ಆಸ್ಪತ್ರೆಗಳಿಗೆ ಮಾಡುತ್ತಿರುವ ವೆಚ್ಚವನ್ನು ತಗ್ಗಿಸಬಹುದು. ಬೀದಿಗಳಲ್ಲಿ ಮಾರುವ ದಿಢೀರ್ ಆಹಾರಗಳು (Fast food) ಅನೇಕ ಸಾಂಕ್ರಾಮಿಕ ರೋಗಗಳ ಮೂಲ. ರೈತರು ಹೊಲಗದ್ದೆಗಳಲ್ಲಿ ಅತಿಯಾಗಿ ಬಳಸುವ ಕೀಟನಾಶಕ, ಔಷಧಗಳ ವಿಷ ಆಹಾರಧಾನ್ಯಗಳಲ್ಲಿ ಮತ್ತು ಹಣ್ಣು ತರಕಾರಿಗಳಲ್ಲಿ ಸೇರುವುದೂ ಈ ರೋಗಗಳ ಒಂದು ಕಾರಣವಾಗಿದೆ. ಆಧುನಿಕ ವೈಜ್ಞಾನಿಕ ಸಾಧನಗಳಾದ ಟಿ.ವಿ. ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಕೂತು ಕಾಲವನ್ನು ಕಳೆಯುವುದರಿಂದ ಅಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಿವೆ. 

ಒಂದು ವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ವಾರಕ್ಕೆ ಒಂದೇ ಸಲ 1 ಗಂಟೆ ಟಿ.ವಿ ನೋಡುವುದರಿಂದ, ಎರಡರಿಂದ ಹತ್ತು ಗಂಟೆ ಟಿ.ವಿ. ನೋಡುವವರಿಗೆ ಹೋಲಿಕೆ ಮಾಡಿದರೆ, ಮಧುಮೇಹ ಸಂಭವಿಸುವುದು ಶೇಕಡ 1.66ರಷ್ಟು ಕಡಿಮೆ.(ಆಧಾರ: Huet al: Arch inter Med 2001: 161: 1542-1548– ಮನುಕುಲದ ಅಗೋಚರ ಶತ್ರು ಮಧುಮೇಹ).

ಯುವಕರು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವಲ್ಲಿ ಮುಖ್ಯವಾದವರು? ಯಾಕೆ?

ಏಕೆಂದರೆ ತಾರುಣ್ಯವೆಂಬುದು ಯಾವ ವಯಸ್ಸೆಂದರೆ ಮಿದುಳು ಬೆಳೆಯುತ್ತಿರುವ ಮತ್ತು ಅಭ್ಯಾಸಗಳು ಪ್ರಾರಂಭವಾಗುವ ವಯಸ್ಸು. ಈ ವಯಸ್ಸಿನಲ್ಲಿ ಅಳವಡಿಸಿಕೊಳ್ಳುವ ಅಭ್ಯಾಸಗಳು ಮುಂದೆ ವಯಸ್ಕರಲ್ಲಿ ನಿರಂತರವಾಗುವುದು ಸಂಭವನೀಯ. ಹದಿಹರೆಯದಲ್ಲೇ ತಡೆಗಟ್ಟದಿದ್ದರೆ ಬೇರು ಬಿಟ್ಟ ದುರಭ್ಯಾಸಗಳನ್ನು ಆಮೇಲೆ ಬದಲಾಯಿಸುವುದು ತುಂಬ ಕಷ್ಟ. ಏಕೆಂದರೆ ಅವು ಅವಿಭಾಜ್ಯ ಜೀವನ ಶೈಲಿಯೇ ಆಗಿ ಬಿಡುತ್ತವೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?  2022ರ ಅಂಕಿಅಂಶಗಳ ಪ್ರಕಾರ ನಮ್ಮ ಜನಸಂಖ್ಯೆಯಲ್ಲಿ ಸುಮಾರು ಅರ್ಧಭಾಗ ಯುವ ಜನಾಂಗವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT