ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಮಯ ನಿನಗಾಗಿ

Last Updated 10 ಮೇ 2013, 19:59 IST
ಅಕ್ಷರ ಗಾತ್ರ

ಕುಟುಂಬ ಹಾಗೂ ಮಕ್ಕಳು `ಅವಳ' ಆದ್ಯತೆ. ಕರ್ತವ್ಯ ಮತ್ತು ಹೊಣೆಗಾರಿಕೆಯೇ `ಅವಳ' ಬದುಕು. ಇವುಗಳ ನಡುವೆ ಆಕೆಗೆ ತನ್ನ ಆರೋಗ್ಯದ ಕಡೆಗೂ ಗಮನ ಹರಿಸಲು ಸಾಧ್ಯವಾಗದು. ಇಂದಿನ ದಿನಗಳಲ್ಲಿ ಅವಳು ಕುಟುಂಬ ಮತ್ತು ವೃತ್ತಿ ಎರಡನ್ನೂ ನಿಭಾಯಿಸುತ್ತಾಳೆ. ಅವಳು ಅಮ್ಮ...!

ತಾಯಂದಿರ ದಿನದ ಈ ಸಂದರ್ಭ, ಇಂದಿನ ಅಮ್ಮಂದಿರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರಿಯಾದ ಸಮಯ. 30- 50ರ ವಯೋಮಾನದ ಹೆಣ್ಣಿನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗೆ ಕಾರಣವಾಗುವ ಹಾರ್ಮೋನುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
* * *
ಹದಿಹರೆಯದ ಇಬ್ಬರು ಗಂಡು ಮಕ್ಕಳ ತಾಯಿ ಕವಿತಾ ರಾಜನ್. ಅವರನ್ನು `ಆದರ್ಶ ಅಮ್ಮ' ಎಂದು ಸಹ ಕರೆಯಬಹುದು, ಆಕೆಯ ದೈನಂದಿನ ಚಟುವಟಿಕೆಗಳು ಮಕ್ಕಳ ಓದು, ಶಾಲೆ, ಕ್ರಿಕೆಟ್ ತರಬೇತಿ, ಅವರ ಆಹಾರ, ಆರೋಗ್ಯದ ಉಸ್ತುವಾರಿಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಆಕೆ ಮನೆಯಿಂದಲೇ ತನ್ನ ಪತಿಯ ಕೇಟರಿಂಗ್ ವ್ಯವಹಾರಕ್ಕೆ ನೆರವಾಗುವುದಲ್ಲದೆ, ತಮ್ಮ ವೃದ್ಧ ಅತ್ತೆ ಮಾವಂದಿರ ಯೋಗಕ್ಷೇಮವನ್ನೂ ನೋಡಿಕೊಳ್ಳುತ್ತಾರೆ.

ಆದರೆ ಕಳೆದ ಆರು ತಿಂಗಳಿನಿಂದಲೂ ಆಕೆಯ ತೂಕ ಹೆಚ್ಚಾಗಿ, ಕೂದಲು ಉದುರಲಾರಂಭಿಸಿದೆ. ತ್ವಚೆ ಶುಷ್ಕವಾಗಲಾರಂಭಿಸಿದೆ. ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಗೆಳತಿಯೊಬ್ಬಳು ಸೂಚಿಸಿದಾಗ, `ಮಕ್ಕಳ ಬೇಸಿಗೆ ಶಿಬಿರವಿದೆ, ಈಗ ಸಮಯವಿಲ್ಲ, ಶಾಲೆ ಆರಂಭವಾದ ನಂತರ ಹೋದರಾಯಿತು' ಎಂದು ಸಬೂಬು ಹೇಳುತ್ತಿದ್ದರು.

ಇದು ಭಾರತಿಯ ಮಹಿಳೆಯರ ಸಾಮಾನ್ಯ ನಡವಳಿಕೆ. ಇತರರಿಗಾಗಿ ಕಾಳಜಿ ವಹಿಸುವ ಅವರು ತಮ್ಮ ಆರೋಗ್ಯವನ್ನೇ ಉಪೇಕ್ಷಿಸುತ್ತಾರೆ. ಆರಂಭಿಕ ಹಂತದಲ್ಲೇ ಸೂಚನೆಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದೊಂದು ದಿನ ಪರಿಸ್ಥಿತಿ ಬಿಗಡಾಯಿಸಿ ಗಂಭೀರವಾಗುತ್ತದೆ.

ಕವಿತಾ ರಾಜನ್‌ಗೂ ಹೀಗೇ ಆಯಿತು. ಆಕೆಯ ಪತಿ ಆರೋಗ್ಯ ತಪಾಸಣೆಗೆ ಕರೆತಂದಾಗ ಥೈರಾಯಿಡ್ ಸಮಸ್ಯೆ ಇರುವುದು ಪತ್ತೆಯಾಯಿತು. ವಿಶೇಷವಾಗಿ 30ರ ಹರೆಯದಲ್ಲಾಗುವ ಹಾರ್ಮೋನುಗಳ ಏರಿಳಿತ ಆತಂಕದ ಪ್ರಮುಖ ಕಾರಣ. ಇಂದಿನ ಜೀವನಶೈಲಿ ಈ ಸಮಸ್ಯೆಯನ್ನು ಜಟಿಲವಾಗಿಸಿದೆ. ಮಾನವ ದೇಹದ ಹಾರ್ಮೋನುಗಳು ಸಂಗೀತದ ವಾದ್ಯಗೋಷ್ಠಿ ಇದ್ದಂತೆ. ಪ್ರತಿಯೊಬ್ಬರೂ ಅರಿತು ರಾಗಗಳನ್ನು ನುಡಿಸುತ್ತಿದ್ದರೆ ಸ್ವರಗಳು ಚೆನ್ನ.

ಯಾರಾದರೂ ಒಬ್ಬರು ಲಯ ತಪ್ಪಿದರೂ ಸ್ವರ ಮಾಧುರ್ಯ ಹಳಿ ತಪ್ಪುತ್ತದೆ. ಹಾರ್ಮೋನುಗಳು ದೇಹದ ವಿವಿಧ ಗ್ರಂಥಿಗಳಿಂದ ಸಾಮರಸ್ಯದಿಂದ ಸ್ರವಿಸುವ ರಾಸಾಯನಿಕಗಳಾಗಿದ್ದು, ಪ್ರತಿ ಹಾರ್ಮೋನಿಗೂ ಒಂದು ನಿರ್ದಿಷ್ಟ ಕಾರ್ಯೋದ್ದೇಶ ಇರುತ್ತದೆ. ಉದಾಹರಣೆಗೆ, ಈಸ್ಟ್ರೋಜಿನ್ ಒಂದು ಪ್ರಮುಖ ಸ್ತ್ರೀ ಹಾರ್ಮೋನ್. ಋತುಚಕ್ರದ ಸಂದರ್ಭದಲ್ಲಿ ಇದರ ಕೊರತೆ ಆಗುವುದರಿಂದ ಕೀಲು ನೋವು, ಮನೋಭಾವದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಲ್ಲದೆ, ಮಹಿಳೆ ಸ್ಥೂಲದೇಹಿ ಆಗಿದ್ದರೆ ಈಸ್ಟ್ರೋಜಿನ್ ಪ್ರಮಾಣ ಹೆಚ್ಚಾಗಿ, ಸ್ತನ ಅಥವಾ ಮೂತ್ರನಾಳದ ಕ್ಯಾನ್ಸರ್ ಸಹ ಉಂಟಾಗಬಹುದು.

ಈ ದಿನಗಳಲ್ಲಿ ಥೈರಾಯಿಡ್ ಅಸಮತೋಲನ ಹೆಚ್ಚುತ್ತಿದ್ದು, ಹೈಪರ್ ಥೈರಾಯಿಡಿಸಂ ಎಂಬ ಸ್ಥಿತಿ ಉಂಟಾಗುತ್ತದೆ. ತೂಕದ ಇಳಿತ, ಹೆಚ್ಚಿದ ಎದೆ ಬಡಿತ, ಬೆವರುವಿಕೆ, ಆತಂಕ, ಕೂದಲು ಉದುರುವುದು ಹಾಗೂ ಶುಷ್ಕ ಚರ್ಮ ಇದರ ಲಕ್ಷಣಗಳು. ಆದರೆ ಸಾಕಷ್ಟು ಥೈರಾಯಿಡ್ ಉತ್ಪತ್ತಿಯಾಗದಿದ್ದಲ್ಲಿ ಹೈಪೊ ಥೈರಾಯಿಡ್ ಸಮಸ್ಯೆ ಉಂಟಾಗಿ ಇದ್ದಕ್ಕಿದ್ದಂತೆ ತೂಕ ಹೆಚ್ಚುವುದು, ಬೇಗನೇ ಸುಸ್ತಾಗುವುದು, ಆಲಸ್ಯ ಮತ್ತು ಮಂಪರು ಕಾಣಿಸಿಕೊಳ್ಳುತ್ತದೆ.

ಅಂಡಾಶಯ ಮತ್ತು ಅಡ್ರೆನಲ್ ಗ್ರಂಥಿಗಳಿಂದ ಲೈಂಗಿಕ ಹಾರ್ಮೋನುಗಳ ಉತ್ಪಾದನೆ ಕಡಿಮೆಯಾದಾಗ ಟೆಸ್ಟೊಸ್ಟಿರಾನ್ ಮಟ್ಟ ಕಡಿಮೆಯಾಗಿ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಟೆಸ್ಟೊಸ್ಟಿರಾನ್‌ನ ಅಧಿಕ ಉತ್ಪಾದನೆಯಿಂದ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹದ ಮೇಲೆ ಅನಗತ್ಯವಾಗಿ ಹೆಚ್ಚು ಕೂದಲು ಬೆಳೆದು, ಗಂಡಸರಂತೆ ಬೊಕ್ಕತಲೆ, ಗಡಸು ಧ್ವನಿ ಮತ್ತು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತದೆ.

ಹೀಗೆ ಹಾರ್ಮೋನುಗಳ ವ್ಯತ್ಯಾಸದಿಂದ ಉಂಟಾಗುವ ಅನೇಕ ಸಮಸ್ಯೆಗಳಿಂದಾಗಿ ಮುಟ್ಟು ನಿಲ್ಲುವ ಮುಂಚಿನ ಅವಧಿಯಲ್ಲಿನ (ಪೆರಿ ಮೆನೋಪಾಸ್) ಲಕ್ಷಣಗಳು ಕಡಿವೆು ವಯೋಮಾನದವರಲ್ಲೂ ಕಾಣಿಸಿಕೊಳ್ಳುತ್ತಿವೆ.

ಅಲ್ಲದೆ ಬಾಲಕಿಯರಲ್ಲಿ ಋತುಚಕ್ರ ಪ್ರಾರಂಭವಾಗುವ ವಯೋಮಾನವು ತಗ್ಗುತ್ತಿದೆ. ಮಹಿಳೆಯ ಸಂತಾನೋತ್ಪತ್ತಿ ಹಾರ್ಮೋನಿನ ಅಸಮತೋಲನ ಇರುವ ಬಹುಪಾಲು ಮಹಿಳೆಯರು, ಹಾರ್ಮೋನು ಬದಲಿ ಚಿಕಿತ್ಸೆಗೆ (ಎಚ್‌ಆರ್‌ಟಿ)  ಹಿಂಜರಿಯುತ್ತಿರುವುದರಿಂದ, ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ಕ್ರಮಗಳು ಜನಪ್ರಿಯವಾಗುತ್ತಿವೆ.

ಅಂಡಾಶಯಗಳು ಸ್ತ್ರೀ ಬೆಳವಣಿಗೆಯ ಪ್ರಮುಖ ಅಂಶಗಳಾಗಿದ್ದು, `ಈಸ್ಟ್ರೋಜಿನ್', `ಪ್ರಜೆಸ್ತರೋನ್' ಮತ್ತು `ಟೆಸ್ಟೊಸ್ಟಿರಾನ್'ಗಳನ್ನು ಉತ್ಪಾದಿಸುತ್ತವೆ. ಇವು ಮುಟ್ಟು, ಋತುಚಕ್ರ, ಗರ್ಭಧಾರಣೆ, ಶಿಶುಜನನ ಮತ್ತು ಮುಟ್ಟು ನಿಲ್ಲುವಿಕೆಯನ್ನು ನಿಯಂತ್ರಿಸುತ್ತವೆ.

ಹೆಣ್ಣಿನ ಬದುಕಿನ ನಾಲ್ಕು ಪ್ರಮುಖ ವಲಯಗಳೆಂದರೆ ದೈಹಿಕ (ಚರ್ಮ, ಕೂದಲು, ಎತ್ತರ, ತೂಕ ಇತ್ಯಾದಿ) ಭಾವನಾತ್ಮಕ (ಸಂವೇದನೆ, ಭಾವನೆಗಳು, ಆತ್ಮವಿಶ್ವಾಸ ಇತ್ಯಾದಿ) ಮಾನಸಿಕ (ಚಿಂತನೆ, ಪ್ರಾಯೋಗಿಕತೆ, ವೃತ್ತಿಪರತೆ) ಹಾಗೂ ಸಾಮಾಜಿಕ (ನಡವಳಿಕೆ, ಸಂಬಂಧಗಳು, ಹೊಂದಾಣಿಕೆ). ಹಾರ್ಮೋನು ವೈಪರೀತ್ಯಗಳು ಉಂಟಾದಾಗ ಇವುಗಳಲ್ಲಿ ಎರಡಕ್ಕಿಂತ ಹೆಚ್ಚು ವಲಯಗಳು ದುಷ್ಪರಿಣಾಮಕ್ಕೆ ಒಳಗಾಗುತ್ತವೆ.

ವಿಶೇಷವಾಗಿ ಆಕೆ ತಾಯಿಯಾಗಿದ್ದು, ವಿವಿಧ ವಲಯಗಳಲ್ಲಿ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಇದ್ದಕ್ಕಿದ್ದಂತೆ ಆಕೆಗೆ ತನ್ನ ದೇಹ ಸಹಕರಿಸುತ್ತಿಲ್ಲ ಎನಿಸತೊಡಗುತ್ತದೆ. ತನ್ನ ವ್ಯಕ್ತಿತ್ವ ಬದಲಾಗುತ್ತಿದ್ದು, ತಾನು ಕಳೆದು ಹೋಗಿದ್ದೇನೆ ಎಂದು ಅನಿಸತೊಡಗುತ್ತದೆ. ಮುಟ್ಟು ನಿಲ್ಲುವ ಸಮಯದಲ್ಲಿ ಆಕೆಗೆ ತನ್ನ ಯೌವನ ಕಳೆದು ಹೋಗುತ್ತಿದೆ, ಪತಿಗೆ ತಾನು ಆಕರ್ಷಕಳಾಗಿ ಕಾಣುತ್ತಿಲ್ಲ ಎನಿಸುತ್ತದೆ. ಅವಳ ಆತ್ಮಗೌರವ ಕುಸಿಯತೊಡಗುತ್ತದೆ. ನೂರಾರು ಆಂತರಿಕ ಸಂಘರ್ಷಗಳು ಆಕೆಯ ಮನಸ್ಸನ್ನು ಆವರಿಸಿಕೊಳ್ಳುತ್ತವೆ.

ಮಹಿಳೆಗೆ ಪುನಃ ಎದ್ದು ನಿಲ್ಲಲು ಇದು ಸೂಕ್ತ ಸಮಯ. ಈ ಸಮಯದಲ್ಲಿ ಗಂಡ ಮತ್ತು ಮಕ್ಕಳ ಬೆಂಬಲದ ಅವಶ್ಯಕತೆ ಆಕೆಗಿರುತ್ತದೆ. ತನ್ನನ್ನು ತಾನು ನಿಯಂತ್ರಿಸಿಕೊಂಡು ದೇಹದ ತೂಕ, ರಕ್ತದ ಒತ್ತಡ, ರಕ್ತದ ಗ್ಲೂಕೋಸ್ ಮಟ್ಟ ಹಾಗೂ ಕೊಲೆಸ್ಟ್ರಾಲ್, ಕ್ಯಾಲ್ಸಿಯಂ, ವಿಟಮಿನ್ ತಪಾಸಣೆಗೆ ಆಕೆ ಮುಂದಾಗಬೇಕು.

ಈ ಪ್ರಶ್ನೆಗಳಲ್ಲಿ ಯಾವುದಾದರು 6 ಪ್ರಶ್ನೆಗಳಿಗೆ ಉತ್ತರ `ಹೌದು' ಎಂದಾದರೆ, ಅಂತಹ ಮಹಿಳೆಗೆ ಆರೋಗ್ಯ ತಪಾಸಣೆಯ ಅವಶ್ಯಕತೆ ಇರುತ್ತದೆ ಎಂದರ್ಥ. ಅಂತಹವರು ವೈದ್ಯರನ್ನು ಸಂಪರ್ಕಿಸಬೇಕು.

1.  ನಿಮಗೆ ನಿಶ್ಶಕ್ತಿ ಅಥವಾ ಸುಸ್ತು ಆಗುತ್ತಿದೆಯೇ?
2.  ನಿಮಗೆ ಕೆಳಕಂಡ ಯಾವುದಾದರೂ ಅಲರ್ಜಿ ಇದೆಯೇ?ದೂಳು, ಬಿಸಿಲು, ಆಹಾರ, ಹವಾಮಾನ, ಔಷಧ... ಇತ್ಯಾದಿ
3.  ನಿಮಗೆ ಚರ್ಮದ ಸಮಸ್ಯೆ ಇದೆಯೇ ಅಥವಾ ಇತ್ತೇ?
4.  ನಿಮ್ಮ ಕೂದಲು ಉದುರುತ್ತಿದೆಯೇ?
5.  ನಿಮಗೆ ಕೀಲುಗಳ ನೋವು ಇದೆಯೇ?
6.  ತಲೆನೋವು ಇದೆಯೇ?
7.  ಮುಟ್ಟಿನ ಮೊದಲು ಸಮಸ್ಯೆ ಆಗುತ್ತದೆಯೇ?
8.  ಋತುಚಕ್ರ ಅನಿಯಮಿತವಾಗಿದೆಯೇ?
9.  ಅನಿಯಮಿತ ಋತುಚಕ್ರದ ರಕ್ತಸ್ರಾವ ಆಗುವುದೇ?
10. ಖಿನ್ನತೆ ಅಥವಾ ಮನಃಸ್ಥಿತಿ ಏರಿಳಿತ ಆಗುವುದೇ?
11. ನೀವು ಸಾಮಾನ್ಯವಾಗಿ ಮರೆಯುವಿರಾ ಅಥವಾ ನೆನಪಿನ ಸಮಸ್ಯೆ ಉಂಟೇ?
12. ಬೇಗನೇ ಭಯ, ಆತಂಕ ಉಂಟಾಗುವುದೇ?
13. ನಿದ್ರೆಯ ಸಮಸ್ಯೆ ಇದೆಯೇ?
14. ಅನಗತ್ಯ ಕೂದಲ ಬೆಳವಣಿಗೆ ಹೆಚ್ಚಿದೆಯೇ?
15. ಛಳುಕು (ಹಾಟ್ ಫ್ಲ್ಯಾಷ್) ಅಥವಾ ಶೀಘ್ರ ಬೆವರುವಿಕೆ ಇದೆಯೇ?
16. ಬಿಳಿ ಸೆರಗು ಹೋಗುವುದೇ?
17. ನಿಮ್ಮ ರಕ್ತದ ಒತ್ತಡ ಹೆಚ್ಚಿದೆಯೇ?
18. ಸಕ್ಕರೆ ಕಾಯಿಲೆ ಇದೆಯೇ?
19. ನಿಮ್ಮ ತೋಳು, ತೊಡೆಗಳ ಭಾಗದಲ್ಲಿ ನರಗಳು ನೀಲಿ/ ನೇರಳೆಯಾಗಿವೆಯೇ?
20. ನಿಮಗೆ ರಕ್ತ ಸಂಚಾರ ಇಲ್ಲದಂತಾಗಿ ಜೋಮು ಹಿಡಿಯುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT