ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬಾಧಿಸುವ ಕಾಯಿಲೆ

Last Updated 22 ಜನವರಿ 2016, 19:47 IST
ಅಕ್ಷರ ಗಾತ್ರ

ಹಲವಾರು ವರ್ಷಗಳ ಹಿಂದೆ ಸಿತಾಳ ಸಿಡುಬು ಅಥವಾ ಚಿಕನ್ ಪಾಕ್ಸ್ ಮಕ್ಕಳನ್ನು ಕಾಡುವ ಮುಖ್ಯ ಕಾಯಿಲೆಗಳಲ್ಲಿ ಒಂದಾಗಿತ್ತು. ಇದಕ್ಕೆ  ರೋಗ ನಿರೋಧಕ ಲಸಿಕೆಯ ಲಭ್ಯತೆ, ಹೆಚ್ಚು ಜನಜಾಗೃತಿಯಿಂದ ಮಕ್ಕಳಿಗೆ ತೊಂದರೆ ತಪ್ಪಿದೆ. ಆದರೆ ಈ ರೋಗಕ್ಕೆ ಹಲವಾರು ರೀತಿಗಳಲ್ಲಿ ಹೋಲುವ, ಹೆಚ್ಚು ಅಪಾಯ ಅಲ್ಲದ, ಈಗ ಹೆಚ್ಚು ಸುದ್ದಿಯಲ್ಲಿರುವ ಸೊಂಕಿನ ಕಾಯಿಲೆ - ಮಕ್ಕಳ ಕೈ, ಕಾಲು, ಬಾಯಿ ಕಾಯಿಲೆ (hand, foot & mouth Disease  ಸಂಕ್ಷಿಪ್ತವಾಗಿ HFMD).

ಹತ್ತು ವರ್ಷದೊಳಗಿನ ಮಕ್ಕಳಲ್ಲಿ ಹಾಗು ಬೆಸಿಗೆ, ಶರತ್ಕಾಲದಲ್ಲಿ ಸಾಮಾನ್ಯವಾದ ಈ ಕಾಯಿಲೆಗೆ ಕಾರಣ ಕಾಕ್‌ಸಾಕಿ   ವೈರಸ್ ಎ-16 ಎಂಬ ವೈರಾಣು. ಇದರ ವಾಸ ರೋಗಿಯ ಕರುಳಲ್ಲಿ. ರೋಗಿಯ ಕೆಮ್ಮು, ಸೀನು, ಜೊಲ್ಲು, ಮಲದ ಸಂಪರ್ಕದಿಂದ, ಮಲದಿಂದ ಕಲುಷಿತಗೊಂಡ ಆಹಾರ, ನೀರಿನಿಂದ ಇನ್ನೊಬ್ಬರಿಗೆ ಹರಡುತ್ತದೆ. ಕಲುಷಿತ ವಸ್ತುವನ್ನು (ಮಣ್ಣು, ಆಟಿಕೆ) ಮುಟ್ಟಿದ ಬೆರಳನ್ನು ಚೀಪುವದರಿಂದಲೂ ಸೋಂಕು ಸಾಧ್ಯ. ರೋಗಾಣುವಿನ ಸಂಪರ್ಕ ಹೊಂದಿದ 4-5 ದಿನ ನಂತರ ರೋಗ ಲಕ್ಷಣಗಳು ಕಾಣಿಸುತ್ತವೆ.

ಆರಂಭದಲ್ಲಿ 101 ರಿಂದ 103 ಡಿಗ್ರಿ ಜ್ವರ, ವಾಕರಿಕೆ, ವಾಂತಿ, ನಿಶಕ್ತಿ(ಮಗು ಹೆಚ್ಚು ನಿದ್ರಿಸುತ್ತದೆ), ಕಿರಿ ಕಿರಿ, ಹಸಿವೆ ಆಗದಿರುವುದು. 2-3 ದಿನ ನಂತರ ಅಂಗೈ, ಪಾದ, ಕುಂಡಿ, ಜನನಾಂಗ, ಮೂಗು, ಬಾಯಿ, ಗಂಟಲಿನಲ್ಲಿ ಸಾಸಿವೆ ಕಾಳಿನ ಆಕಾರದ ಕೆಂಪು ಚುಕ್ಕೆ ಕಾಣಿಸಿಕೊಳ್ಳುತ್ತವೆ. ನಂತರದ 1-2 ದಿನದಲ್ಲಿ , ಕೆಂಪು ಚುಕ್ಕೆಯಲ್ಲಿ ನೀರು ತುಂಬಿಕೊಂಡು, ಚಿಕ್ಕ ಚಿಕ್ಕ ನೀರ ಗುಳ್ಳೆಯಾಗುತ್ತವೆ. ಮತ್ತೆ 2-3 ದಿನದಲ್ಲಿ ಗುಳ್ಳೆ ಒಡೆದು ಹಕ್ಕಳೆಗಟ್ಟುತ್ತವೆ. ಬಾಯಿಯಲ್ಲಿನ ಗುಳ್ಳೆಯ ನೋವು, ಉರಿಯಿಂದಾಗಿ ಸರಿ ಉಟ ಮಾಡುವದಿಲ್ಲ. ಮೊಣಕಾಲು, ಪಾದದ ಮೇಲಿನ ಗುಳ್ಳೆಯಿಂದಾಗಿ ನಡೆಯಲು ಆಗದು.

ಜ್ವರ ಆರಂಭವಾದ 7-10 ದಿನಕ್ಕೆ ಪೂರ್ಣ ವಾಸಿ ಸಾಧ್ಯ. ಗುಳ್ಳೆ ಚರ್ಮದ ಹೊರ ಪದರನಲ್ಲಿ ಮಾತ್ರ ಇರುವದರಿಂದ, ಶಾಶ್ವತ ಕಲೆ ಉಳಿಯುವದಿಲ್ಲ.
ಶೇ.75 ಸಂದರ್ಭಗಳಲ್ಲಿ ಶಾಲೆಗಳು ಸೋಂಕಿನ ಮೂಲ ತಾಣ. ಹೀಗಾಗಿ ರಜೆ ನಂತರ ಶಾಲೆ ಆರಂಭವಾದಾಗ ಸೋಂಕಿನ ಸಂಭವ ಸಾಮಾನ್ಯ. ಬಹು ಮಹಡಿ ಕಟ್ಟಡದ ಮಕ್ಕಳು ಜೊತೆಗೂಡಿ ಆಟವಾಡುವುದರಿಂದ ಇವರಿಗೆ ಅಪಾಯ ಹೆಚ್ಚು.

ಚಿಕಿತ್ಸೆಗೆ ನಿರ್ದಿಷ್ಟ ಔಷಧಿಗಳಿಲ್ಲ. ಜ್ವರ, ನೋವಿಗಾಗಿ ನೋವು ನಿವಾರಕ ಪ್ಯಾರಾಸಿಟಮಾಲ್ ಸೂಕ್ತ. ಗುಳ್ಳೆ ಬೇಗ ಮಾಯಲು ಹಾಗು ತುರಿಕೆ ಕಡಿಮೆಯಾಗಲು ಇವುಗಳಿಗೆ ಕ್ಯಾಲಮೈನ್‌ ದ್ರವ ಲೇಪಿಸಿರಿ. ದ್ರವ ರೂಪದ ಆಹಾರ ಹೆಚ್ಚು ಕೊಡಿ. ಬಾಯಿಯಲ್ಲಿ ಗುಳ್ಳೆಗಳಿದ್ದಾಗ ಮಸಾಲೆ, ಖಾರದ, ಕರಿದ ಆಹಾರ ಬೇಡ. ಮಲ, ಗಂಟಲಿನ ಜೊಲ್ಲು, ಗುಳ್ಳೆಗಳಲ್ಲಿನ ದ್ರವದ ಮಾದರಿ ಪರೀಕ್ಷೆಯಿಂದ ರೋಗ ನಿರ್ಧಾರ ಸಾಧ್ಯ.

ಪ್ರತಿ ವರ್ಷ ಈ ರೋಗಾಣುವಿನ ಗುಣ ಲಕ್ಷಣಗಳು ಬದಲಾಗುವುದರಿಂದ ಕಾಯಿಲೆ ತಡೆಯಲು ರೋಗ ನಿರೋಧಕ ಲಸಿಕೆಗಳಿಲ್ಲ. ಹೀಗಾಗಿ ಸೊಂಕು ಬರದಂತೆ ತಡೆಯುವುದೇ ಜಾಣತನ. ಮಣ್ಣು, ಮರಳಿನಲ್ಲಿನ ಆಟದ ನಂತರ ಹಾಗು ವಿಶೇಷವಾಗಿ ಉಟದ ಮುಂಚೆ ಸಾಬೂನು ಹಾಗು ಶುದ್ದ ನೀರಿನಿಂದ ಕೈ, ಕಾಲು, ಬಾಯಿಯನ್ನು ಚೆನ್ನಾಗಿ ತೊಳೆದು ಕೊಳ್ಳುವುದು ಅತ್ಯವಶ್ಯ. ಮಗು ನೆಲ ಮುಟ್ಟಿ ಬೆರಳು ಚೀಪದಂತೆ ಜಾಗ್ರತೆ ವಹಿಸಿರಿ. ಹುಷಾರಿಲ್ಲದ ಅವಧಿಯಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುವುದು, ಆಟಿಕೆ ಹಂಚಿಕೊಳ್ಳುವುದು ಬೇಡ. ಜ್ವರ ಪೂರ್ಣ ಇಳಿದು, ಗುಳ್ಳೆ ಒಣಗುವವರೆಗೆ, 8 ರಿಂದ 10 ದಿನ ಶಾಲೆಗೆ ಕಳಿಸಬೇಡಿ. ಇದರಿಂದಾಗಿ ಮಗುವಿಗೆ ಪೂರ್ಣ ವಿಶ್ರಾಂತಿ ದೊರೆತು, ಇತರ ಮಕ್ಕಳಿಗೆ ಹರಡದಂತೆ ತಡೆಯಬಹುದು.

ವೈದ್ಯರ ಸಂಪರ್ಕಿಸುವದು ಯಾವಾಗ?
ಈ ಕಾಯಿಲೆಯಿಂದ ತೊಡಕುಗಳು ಅಪರೂಪ. ಆದರೆ ಕೆಲವು ಮಕ್ಕಳಲ್ಲಿ ಮೆದುಳು, ಹೃದಯಕ್ಕೆ ಸೊಂಕು ಹರಡುವ ಅಪಾಯವಿದೆ. ಹೀಗಾದಾಗ ಜ್ವರ ಬೇಗ ಕಡಿಮೆ ಆಗದು, ಪ್ರಜ್ಞಾಹಿನತೆ, ಅಪಸ್ಮಾರ, ಉಸಿರಾಟದ ತೊಂದರೆ ಸಾಧ್ಯ. ಉಗುರಿನ ಹತ್ತಿರ ಗುಳ್ಳೆ ಇದ್ದರೆ, ಉಗುರು ಉದರಿ ಬಿಳುವ ಸ೦ಭವವಿದೆ. ಇಂಥ ಸ್ಥಿತಿಯಲ್ಲಿ ವೈದ್ಯರ ಸಲಹೆ ಅವಶ್ಯ. ಜಾನುವಾರಗಳ ಕಾಲು, ಬಾಯಿ ಕಾಯಿಲೆಗೂ, ಮಕ್ಕಳ ಈ ಕಾಯಿಲೆಗೂ ಯಾವುದೇ ಸಂಭಂದವಿಲ್ಲ. ಪ್ರಾಣಿ ಸೊಂಕಿಗೆ  ಬೇರೆಯೆ ರೋಗಾಣು ಕಾರಣ. ಪ್ರಾಣಿಗಳ ಸಂಪರ್ಕದಿಂದ ಬಂದಿದೆ ಎಂಬ ಆತಂಕ ಬೇಡ.

(ಲೇಖಕರು ಮಕ್ಕಳ ಹಿರಿಯ ತಜ್ಞರು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT