ಗುರುವಾರ , ಜೂನ್ 4, 2020
27 °C
ಕುಟುಂಬದ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪ ಸಣ್ಣ ಸಾಂಸ್ಕೃತಿಕ ಭಿನ್ನತೆಯನ್ನೂ ಗೊಂದಲಮಯವಾಗಿಸುತ್ತದೆ

ಮರ್ಯಾದೆಗೇಡು ಹತ್ಯೆ: ಸಾಮಾಜಿಕ ಕ್ಯಾನ್ಸರ್

ಕೆ.ಬಿ.ಕೆ. ಸ್ವಾಮಿ Updated:

ಅಕ್ಷರ ಗಾತ್ರ : | |

Deccan Herald

ಸಂಗಾತಿಯ ಆಯ್ಕೆಯು ಮಕ್ಕಳ ವೈಯಕ್ತಿಕ ಹಕ್ಕು ಎನ್ನುವ ಪ್ರಬುದ್ಧ ಭಾವ ಪೋಷಕರಲ್ಲಿ ಇಲ್ಲದಿದ್ದರೆ ಮತ್ತು ಅವರ ಆಯ್ಕೆಯನ್ನು ಗೌರವದಿಂದ ಕಾಣುವ ಭಾವನೆ ಇಲ್ಲದೇ ಹೋದರೆ ಬದುಕನ್ನು ಚಿಂದಿ ಚಿಂದಿಯಾಗಿಸಲು ಕಾದು ಕುಳಿತವರಲ್ಲಿ ಹೆತ್ತವರೇ ಮೊದಲಿಗರಾಗುತ್ತಾರೆ.

ಕುಟುಂಬದ ಪ್ರತಿಷ್ಠೆಯ ಹೆಸರಿನಲ್ಲಿ, ಜಾತಿ– ಧರ್ಮದ ಶ್ರೇಷ್ಠತೆಯ ಅಮಲಿನಲ್ಲಿ ಜರುಗುವ ಮರ್ಯಾದೆಗೇಡು ಹತ್ಯೆಗಳು ಯಾವುದೇ ಒಂದು ಪ್ರದೇಶ, ಧರ್ಮ, ವರ್ಗಕ್ಕೆ ಸೀಮಿತವಾಗಿಲ್ಲ. ಇದು, ಜಾಗತಿಕವಾಗಿ ಹಬ್ಬಿರುವ ಸಾಮಾಜಿಕ ಪಿಡುಗು. ಜಾತಿ– ಜಾತಿಗಳ ನಡುವಿನ ಸಾಂಸ್ಕೃತಿಕ ಆಚರಣೆಗಳ ಭಿನ್ನತೆ, ಆಹಾರ ಪದ್ಧತಿಯ ಭಿನ್ನತೆ, ಉಡುಗೆತೊಡುಗೆ ಮತ್ತು ಜೀವನ ಕ್ರಮಗಳ ಭಿನ್ನತೆಯಂತಹ ಕಾರಣಗಳೇ ನೂರಾರು ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿವೆ.

ಒಪ್ಪಿತ ಲೈಂಗಿಕ ಸಂಬಂಧ, ವಿಧವೆಯರ ಗುಪ್ತ ಖಾಸಗಿ ಸಂಬಂಧ, ವಯಸ್ಕರ ಪ್ರೇಮ ಪ್ರಕರಣಗಳು, ಸಲಿಂಗಕಾಮದಂತಹ ಸಂಗತಿಗಳು ‘ನೈತಿಕವಾದಿ’ಗಳ ಹಸ್ತಕ್ಷೇಪದ ಕಾರಣಕ್ಕಾಗಿಯೇ ಹಿಂಸಾತ್ಮಕ ರೂಪ ತಾಳಿ, ಹಲವಾರು ಹತ್ಯೆಗಳು ನಡೆದಿವೆ ಎಂಬ ಸಂಗತಿಯನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊದ ಅಂಕಿಅಂಶಗಳು ಹೇಳುತ್ತವೆ.

ಶಕ್ತಿವಾಹಿನಿ ಮತ್ತು ಭಾರತ ಸರ್ಕಾರ ನಡುವಿನ ಪ್ರಕರಣದಲ್ಲಿ ನಮ್ಮ ಸುಪ್ರೀಂ ಕೋರ್ಟ್‌ ‘ಸಂಗಾತಿಯ ಆಯ್ಕೆಯ ಹಕ್ಕನ್ನು’ ಸಂವಿಧಾನದ ವಿಧಿ 21 ಮತ್ತು 19 (1) (ಎ) ಅಡಿಯಲ್ಲಿ ಗುರುತಿಸಿದ್ದು, ವಯಸ್ಕರ ಬಾಳ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮೂರನೇ ವ್ಯಕ್ತಿಗೆ ಯಾವುದೇ ಅಧಿಕಾರ ಇಲ್ಲ ಎಂದು ಘೋಷಿಸಿದೆ. ಅಲ್ಲದೇ ವಯಸ್ಕರ ವಿವಾಹದ ಕುರಿತಾದ ಹಕ್ಕುಗಳಿಗೆ ಚ್ಯುತಿಯನ್ನು ಉಂಟು ಮಾಡುವವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಆದೇಶಿಸಿದೆ.

ವಯಸ್ಕರ ವಿವಾಹ ಕುರಿತಾಗಿ ಮತ್ತು ಬಾಳ ಸಂಗಾತಿಯ ಆಯ್ಕೆಯ ವಿಚಾರವಾಗಿ ಜರುಗುವ ಸಮುದಾಯದ ಸಭೆಗಳು, ಖಾಪ್ ಪಂಚಾಯತ್, ಕಟ್ಟಾ ಪಂಚಾಯತ್‌ಗಳನ್ನು ಅಕ್ರಮ ಕೂಟಗಳೆಂದು ಭಾವಿಸತಕ್ಕದೆಂದು ಈ ಮೇಲಿನ ತೀರ್ಪು ಹೇಳಿದೆ.

‘Assertion of choice is an insegregable facet of liberty and dignity’ ಎಂದು ಹೇಳಿದ್ದ ಫ್ರೆಂಚ್ ಚಿಂತಕ ಸೈಮೋನ್ ವೇಲ್ ಅವರನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟಿನ ತೀರ್ಪು, ಅಗತ್ಯ ಸನ್ನಿವೇಶಗಳಲ್ಲಿ ವಯಸ್ಕ ಜೋಡಿಗಳಿಗೆ ವಾಸಿಸಲು ಸುರಕ್ಷಿತವಾದ ಮನೆಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಸ್ಥಾಪಿಸಬೇಕೆಂದು ಪ್ರತಿಯೊಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾದ ಆದೇಶ ಮಾಡಿದೆ.

ಮರ್ಯಾದೆಗೇಡು ಹತ್ಯೆಗಳು ಜರುಗಲು ಕುಟುಂಬ ಗೌರವವಷ್ಟೇ ಪ್ರಧಾನ ಕಾರಣವಾಗಿ ಉಳಿದಿಲ್ಲ. ಏಕೆಂದರೆ ಹಲವು ಪ್ರಕರಣಗಳಲ್ಲಿ ಜಾತಿ, ವೈಯಕ್ತಿಕ ಪ್ರತಿಷ್ಠೆ ಜೊತೆಗೆ ಸ್ಥಳೀಯ ರಾಜಕೀಯ ತಳಕು ಹಾಕಿಕೊಂಡಿರುವ ಹತ್ತಾರು ಉದಾಹರಣೆಗಳು ಲಭ್ಯವಿವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವಕ– ಯುವತಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಅವರ ಕುಟುಂಬಗಳಲ್ಲಿನ ಆರ್ಥಿಕ ಅಸಮಾ
ನತೆಯು ಬಹುದೊಡ್ಡ ಕಾರಣವಾಗಿ ಪರಿಣಮಿಸಿ ಪ್ರತಿಷ್ಠೆಗಾಗಿ ಹತ್ಯೆ, ಹಿಂಸೆಯ ಮಾರ್ಗವನ್ನು ತುಳಿಯಲಾಗಿದೆ. ಅಲ್ಲದೇ ಮರ್ಯಾದೆಗೇಡು ಹತ್ಯೆಗಳಿಗೆ ಎರಡು ಭಿನ್ನ ಲಿಂಗಿಗಳ ನಡುವಿನ ದೈಹಿಕ ಸಂಬಂಧ ಮಾತ್ರವೇ ಕಾರಣವಾಗುವುದಿಲ್ಲ. ಸಲಿಂಗಕಾಮದಲ್ಲಿ ತೊಡಗಿರುವವರು ಸಹ ಕುಟುಂಬದ ಗೌರವದ ಹೆಸರಿನಲ್ಲಿ ಬಲಿಯಾಗಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್‌ ಬ್ಯೂರೊ, 2015ರಲ್ಲಿ ವರದಿ ಮಾಡಿದಂತಹ ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಉತ್ತರಪ್ರದೇಶದಲ್ಲೇ ಜರುಗಿವೆ ಎಂಬುದು ಆತಂಕಕಾರಿ. ಆ ವರದಿಯನ್ನು ವಿಕಾಸ್ ಯಾದವ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಿನ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ಗೆ
ಸಲ್ಲಿಸಲಾಗಿತ್ತು. ಅಂತರಜಾತಿ ವಿವಾಹಗಳು, ಪ್ರೇಮ ಪ್ರಕರಣಗಳು, ಒಪ್ಪಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರನ್ನು ನಿಗ್ರ
ಹಿಸಲೆಂದೇ ರಚಿಸಲಾದ ಖಾಪ್ ಪಂಚಾಯತ್‌ಗಳನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಮರ್ಯಾದೆಗೇಡು ಹತ್ಯೆಗಳು, ಹಿಂಸಾತ್ಮಕ ಪ್ರತಿಕ್ರಿಯೆಗಳು, ಕಿರುಕುಳದ ಪ್ರಕರಣಗಳು ಇಂದು ನಿನ್ನೆಯವಲ್ಲ. ಮನುಷ್ಯನು ನಾಗರಿಕತೆಯ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದಂತೆ ವಿವಿಧ ಕಾಲಘಟ್ಟಗಳಲ್ಲಿ ಇಂತಹ ಅಮಾನವೀಯ ಕೃತ್ಯಗಳ ಮೊರೆ ಹೋಗಿರುವುದು ಐತಿಹಾಸಿಕವಾಗಿ ದಾಖಲಾಗಿದೆ.

ಜಾತಿರಹಿತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದಬಸವಣ್ಣನವರು ಸಮಗಾರ ಹರಳಯ್ಯನ ಮಗ ಮತ್ತು ಬ್ರಾಹ್ಮಣರ ಮಧುವರಸನ ಮಗಳಿಗೂ ಅಂತರ್ಜಾತಿ ವಿವಾಹ ಮಾಡಿಸಿದ್ದರು. ಇಂತಹ ಸಾಮಾಜಿಕ ಆಂದೋಲನವನ್ನು ಸಹಿಸದ ಸಂಪ್ರದಾಯವಾದಿಗಳು
ಅವರ ಕೈಕಾಲು ಬಿಗಿದು ಅವರನ್ನು ಆನೆಯ ಕಾಲಿಗೆ ಕಟ್ಟಿಸಿ ಊರ ತುಂಬಾ ಎಳೆದಾಡಿಸಿ, ‘ಎಳೆಹೊಟೆ’ ಶಿಕ್ಷೆಯನ್ನು ನೀಡಿ ಇತರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು.

ನಾಗರಿಕರ ಜೀವನ ಸಂಗಾತಿಯ ಆಯ್ಕೆಯ ಹಕ್ಕುಗಳನ್ನು ಇದಕ್ಕಿಂತ ಹಿಂದೆಯೂ ಹಲವಾರು ರೀತಿಗಳಲ್ಲಿ ಹತ್ತಿಕ್ಕಲಾಗುತ್ತಿತ್ತು. ಇಷ್ಟೆಲ್ಲಾ ಐತಿಹಾಸಿಕ ಉದಾಹರಣೆಗಳಿದ್ದರೂ ಅಲ್ಲೊಂದು ಇಲ್ಲೊಂದು ಜನಪರವಾದ ನಿಲುವು ಹೊಂದಿರುವವರ ಸಣ್ಣ ಗುಂಪು, ಸಮುದಾಯ ಎಲ್ಲಾ ಕಾಲದಲ್ಲೂ ಕಾರ್ಯಪ್ರವೃತ್ತವಾಗಿ ಇರುತ್ತದೆ ಎಂಬುದು ಸಮಾಧಾನಕರ.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿನ ಪ್ರಣಯ್ ಪೆರುಮಾಳ್‌ ಹತ್ಯೆ ಪ್ರಕರಣ ಮರ್ಯಾದೆಗೇಡು ಹತ್ಯೆಯ ಕರಾಳ ಇತಿಹಾಸಕ್ಕೆ ಹೊಸ ಸೇರ್ಪಡೆಯಷ್ಟೇ. 24ರ ಹರೆಯದ ಪ್ರಣಯ್, ದಲಿತ ಕ್ರೈಸ್ತ. ಅವರು ವೈಶ್ಯ ಸಮುದಾಯದ ಅಮೃತವರ್ಷಿಣಿ ಅವರನ್ನು ವಿವಾಹವಾಗುತ್ತಾರೆ. ಅವರ ದಾಂಪತ್ಯಕ್ಕೆ ಮುಳ್ಳಾದವರು ಯುವತಿಯ ತಂದೆಯೇ. ಐದು ತಿಂಗಳ ಗರ್ಭಿಣಿಯಾಗಿದ್ದ ಅಮೃತ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಕರೆದೊಯ್ದಿದ್ದ ಪ್ರಣಯ್, ಆಸ್ಪತ್ರೆಯಿಂದ ಆಚೆ ಬಂದು ರಸ್ತೆಯಲ್ಲಿ ತನ್ನ ಸಂಗಾತಿಯೊಡನೆ ಸಾಗುತ್ತಿರುವಾಗಲೇ ಮಚ್ಚಿನೇಟಿಗೆ ಬಲಿಯಾಗಿಹೋದ ದುರ್ದೈವಿ.

ಸಾಮಾಜಿಕ ಕಟ್ಟಳೆ, ಸಾಂಪ್ರದಾಯಿಕ ಆಚರಣೆಗಳನ್ನುವಿರೋಧಿಸಿಯೇ ತಂದೆಯ ಶ್ರೇಷ್ಠತೆಯ ಅಮಲನ್ನು ಧಿಕ್ಕರಿಸಿ ಬಂದು ವಿವಾಹವಾಗಿದ್ದ ಅಮೃತ, ತನ್ನ ಬಾಳ ಸಂಗಾತಿಯನ್ನು ಈ ರೀತಿಯಲ್ಲಿ ಕಳೆದುಕೊಂಡದ್ದು ನಾಗರಿಕ ಸಮಾಜವು ತಲೆ ತಗ್ಗಿಸಬೇಕಾದ ಸನ್ನಿವೇಶ.

ಇಂತಹುದೇ ಪ್ರಕರಣವೊಂದು ತಮಿಳುನಾಡಿನ ಉದುಮಲ್‌ಪೇಟದಲ್ಲಿ 2016ರ ಮಾರ್ಚ್‌ 13ರಂದು ಜರುಗಿತ್ತು. ನೈತಿಕ ಕಟ್ಟುಪಾಡುಗಳನ್ನು ಮೀರಿ, ಕುಟುಂಬವನ್ನು ತೊರೆದು ಹಳ್ಳಿಯಿಂದ ವಲಸೆ ಬಂದಿದ್ದ ಯುವ ಜೋಡಿಗೆ ನಗರದ ಜೀವನವು ಸುರಕ್ಷಿತ ಮತ್ತು ಮುಕ್ತ ಎಂಬ ಭಾವನೆ ಹುಸಿಯಾಗಲು ತೆಗೆದುಕೊಂಡಿದ್ದು ಕೆಲವು ತಿಂಗಳುಗಳು ಮಾತ್ರ. ಜಾತಿಯ ಕುಲುಮೆಯಲ್ಲಿ ಕೊತ ಕೊತನೆ ಕುದ್ದು ಹೊಂಚು ಹಾಕಿದ್ದ ಹಗೆಯ ಕೆನ್ನಾಲಿಗೆಯು ಉತ್ಕಟ ಪ್ರೇಮವನ್ನು ನಡು ರಸ್ತೆಯಲ್ಲೇ ಹೊಸಕಿ ಹಾಕಿತ್ತು. ಅಂತರ್ಜಾತಿ ವಿವಾಹದ ಕಾರಣಕ್ಕೆ ತನ್ನ ತಂದೆ, ತಾಯಿ, ಬಂಧುಗಳೇ ಸೇರಿ ಪ್ರಿಯಕರನನ್ನು ಕೊಂದು ಹಾಕಿದರೆಂಬ ಆಕೆಯ ಸಾಕ್ಷ್ಯವನ್ನಾಧರಿಸಿ ತಿರುಪುರ್‌ನ ಸೆಷನ್ಸ್ ನ್ಯಾಯಾಲಯವು ಯುವತಿಯ ತಂದೆ ಮತ್ತು ಬಂಧುಗಳನ್ನು ಮರಣದಂಡನೆಗೆ ಗುರಿ ಮಾಡಿ ಆದೇಶ ನೀಡಿತ್ತು.

ಇಂದಿನ ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಇನ್ನೂ ಪುರಾತನವಾದ ಕಿಲುಬು ತಗುಲಿದ ಸಂಪ್ರದಾಯ ವಾದಕ್ಕೆ ಜೋತು ಬಿದ್ದು ಅಮಾನುಷವಾಗಿ ನಡು ರಸ್ತೆಯಲ್ಲೇ ಪ್ರೇಮಿಗಳನ್ನು ಕೊಚ್ಚಿ ಹಾಕುತ್ತಾರೆ ಎಂದರೆ ಅಂಥವರಿಗೆ ಶ್ರೇಷ್ಠತೆಯ ಅಮಲು ಅದಿನ್ನೆಷ್ಟು ಮತಿಭ್ರಮಣೆ ಮಾಡಿರಬಹುದು!

ಮರ್ಯಾದೆಗೇಡು ಹತ್ಯೆಗಳ ಕುರಿತು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯು 1999ರಲ್ಲಿ ಗಣತಿಯನ್ನು ನಡೆಸಿತ್ತು. ತಳ ಸಮುದಾಯಗಳು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದೆಡೆಗೆ ಇಟ್ಟಂತಹ ದಿಟ್ಟ ಹೆಜ್ಜೆಗಳೇ ಹಿಂಸೆಗೆ ಮೂಲ ಕಾರಣ ಎಂದು ಇದರಲ್ಲಿ ಕಂಡುಬಂದಿತ್ತು. ಸಾಂವಿಧಾನಿಕ ಹಕ್ಕುಗಳಿಗಾಗಿ ಸೆಟೆದು ನಿಂತ ಉತ್ಸಾಹಿ ಯುವ ಪಡೆಗೆ ಮೇಲ್ವರ್ಗದವರು ನೀಡಿದ ಜವಾಬು ಮರ್ಯಾದೆಗೇಡು ಹತ್ಯೆಯಾಗಿತ್ತು.

ಪರಿಶಿಷ್ಟ ಜಾತಿಗೆ ಸೇರಿದ ಧರ್ಮಪುರಿಯ ಇಳವರಸನ್ ಮತ್ತು ವನ್ನಿಯಾರ್ ಸಮುದಾಯದ ದಿವ್ಯಾ ಪ್ರೇಮ ಪ್ರಕರಣವು ರಾಜಕೀಯ ಕುಲುಮೆಯೊಳಗೆ ಬಡಿಸಿಕೊಂಡು ಬೆಂಡಾಗಿ ಹೋಯಿತು. ಈ ಪ್ರಸಂಗವು ಸರಿಸುಮಾರು ಎರಡು ವರ್ಷಗಳ ಕಾಲ ದಲಿತರನ್ನು ದಲಿತೇತರರಿಂದ ಬೇರೆ ಮಾಡಲು ವ್ಯವಸ್ಥಿತವಾಗಿ ಬಳಕೆಯಾಯಿತು. ಪಟ್ಟಾಳಿ ಮಕ್ಕಳ್ ಕಚ್ಚಿ ಎಂಬ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯು ಕಾಲೇಜುಗಳಲ್ಲಿ ‘ಲವ್ ಡ್ರಾಮಾ’ ಎಂಬ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿ ಸಮುದಾಯವನ್ನು ಹಗೆತನಕ್ಕೆ ದೂಡುವಲ್ಲಿ ಯಶ ಕಂಡಿತು. ಇಂತಹ ಹೇಯ ಕೃತ್ಯ ನಡೆದಾಗ ಇಡೀ ಸರ್ಕಾರಿ ಯಂತ್ರವು ಕಣ್ಣುಮುಚ್ಚಿ ಕುಳಿತಿತ್ತು.

ವೈಡ್‌ನಿ ಬ್ರೌನ್ ಎಂಬ ಜಾಗತಿಕ ಮಟ್ಟದ ಮಾನವ ಹಕ್ಕುಗಳ ಹೋರಾಟಗಾರರು, ‘ಮರ್ಯಾದೆಗೇಡು ಹತ್ಯೆಗಳನ್ನು ಎಲ್ಲಾ ಕಾಲದಲ್ಲೂ ಎಲ್ಲಾ ಪ್ರದೇಶಗಳ ಎಲ್ಲಾ ಧರ್ಮೀಯರು ಮಾಡಿಕೊಂಡು ಬಂದಿದ್ದಾರೆ’ ಎಂದು ಪ್ರತಿಪಾದಿಸುತ್ತಾರೆ. 2002ರಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಲಾದ ವರದಿಯಲ್ಲಿ ಜೋರ್ಡನ್, ಲೆಬನಾನ್, ಮೊರಾಕ್ಕೊ, ಅರಬ್ ಎಮಿರೇಟ್ಸ್, ಟರ್ಕಿ, ಯೆಮನ್, ಫ್ರಾನ್ಸ್, ಜರ್ಮನಿ, ಬ್ರಿಟನ್ ದೇಶಗಳಲ್ಲಿ ಜರುಗಿದ್ದ ವ್ಯಾಪಕ ಮರ್ಯಾದೆಗೇಡು ಹತ್ಯೆಗಳ ಕುರಿತು ಉಲ್ಲೇಖಿಸಲಾಗಿದೆ.

ಲಂಡನ್‌ನಲ್ಲಿ ಸಂಭವಿಸಿದ್ದ ಬರ್ಬರ ಮರ್ಯಾದೆಗೇಡು ಹತ್ಯೆಯ ಕುರಿತು ತಯಾರಾದ ‘ಬನಾಜ್–ಎ ಲವ್ ಸ್ಟೋರಿ’ ಎಂಬ ಸಾಕ್ಷ್ಯಚಿತ್ರಕ್ಕೆ 2013ರಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ‘ಎಮ್ಮಿ’ ಪುರಸ್ಕಾರ ಲಭಿಸಿತ್ತು. ಗಂಡನ ಕಿರುಕುಳ ಮತ್ತು ನಿರಂತರ ದೈಹಿಕ ಹಲ್ಲೆಗಳಿಂದ ಜರ್ಜರಿತಳಾದ ಬನಾಜ್ ಮೊಹಮದ್ ಎಂಬ ಮಹಿಳೆಯು ಗಂಡನ ಕಪಿಮುಷ್ಟಿಯಿಂದ ಪಾರಾಗಿ ಲಂಡನ್‌ಗೆ ಬಂದು ನೆಲೆಸುತ್ತಾಳೆ. ಹಿಂಸೆಯ ಕುಲುಮೆಯಲ್ಲಿ ಬೆಂದು ಬಸವಳಿದವಳಿಗೆ ಪ್ರೇಮದ ಸಿಂಚನ ಮಾಡುವ ಯುವಕನೊಡನೆ ಆಪ್ತತೆ ಬೆಳಯುತ್ತಾ ಸಾಗುತ್ತದೆ. ಇದನ್ನು ಸಹಿಸದ ಆಕೆಯ ತಂದೆ ತನ್ನ ಬಂಧುವಿನೊಡನೆ ಸೇರಿ ಆಕೆಯನ್ನು ಕ್ರೂರವಾಗಿ ನೇಣುಹಾಕಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಡುತ್ತಾನೆ. ಬನಾಜ್‌, ತನ್ನ ಜೀವಿತದ 20 ವರ್ಷಗಳಲ್ಲಿ ತನ್ನ ಅಭಿವ್ಯಕ್ತಿ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಲು ಆಗದೇ ಅತ್ಯಂತ ಅಮಾನವೀಯವಾಗಿ ಹತ್ಯೆಯಾದ ಪ್ರಕರಣವಿದು. ಪುರುಷ ಪ್ರಧಾನ ಮನಸ್ಥಿತಿಯ ಇಂತಹ ದಮನಕಾರಿ ಧೋರಣೆಗೆ ಬಲಿಯಾದ ಹತ್ತಾರು ಕಥೆಗಳು ಮಹಿಳಾ ಸ್ವಾತಂತ್ರ್ಯದ ಹೋರಾಟಕ್ಕೂ ಕಾವು ನೀಡಿವೆ.

ವ್ಯಭಿಚಾರದಲ್ಲಿ ತೊಡಗಿರುವ ವಿವಾಹಿತ ಮಹಿಳೆಯರನ್ನು ಹತ್ಯೆಗೈಯುವ, ಆಕೆಯ ಬಂಧುಗಳನ್ನು ಶಿಕ್ಷೆಗೆ ಗುರಿಮಾಡದೇ ಮಾಫಿ ಮಾಡುವ ಪದ್ಧತಿಯು ಹೈಟಿ, ಜೋರ್ಡನ್, ಸಿರಿಯಾ, ಮೊರಾಕ್ಕೊದ ನ್ಯಾಯಾಲಯಗಳಲ್ಲಿದೆ. ಇಂತಹ ಅನಾಗರಿಕ ಆಚರಣೆಗಳು ಮಹಿಳೆಯರನ್ನು, ತಳ ಸಮುದಾಯದವರನ್ನು, ಆರ್ಥಿಕವಾಗಿ ದುರ್ಬಲರಾದವರನ್ನು, ಲೈಂಗಿಕ ಅಲ್ಪಸಂಖ್ಯಾತರನ್ನು ಬಲಿಹಾಕಿಬಿಡುತ್ತವೆ.

ಭಾರತದಂತಹ ಬಹುರೂಪಿ ಸಂಸ್ಕೃತಿಯಲ್ಲಿ ಇಂಥ ಹಗೆ ಹತ್ಯೆಗಳನ್ನು ಕಾನೂನು ರೀತ್ಯಾ ಶಿಕ್ಷಿಸದೇ ಹೋದರೆ
ಮುಂದೊಂದು ದಿನ ಹಿಂಸಾಪ್ರಿಯರು ಹೆಚ್ಚು ಸಂಘಟಿತರಾಗಿ ದುರ್ಬಲರ ಮೇಲೆ ದಾಳಿಗಳನ್ನು ಸಂಘಟಿಸಿ ಕೋಮು ಸಾಮರಸ್ಯವನ್ನು ಹಾಳು ಮಾಡಬಲ್ಲರು. ಇದನ್ನು ಮನಗಂಡ ಭಾರತದ ಸುಪ್ರೀಂ ಕೋರ್ಟ್, ವಿಕಾಸ್ ಯಾದವ್ ಪ್ರಕರಣದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ಅತ್ಯಂತ ಕಟುವಾದ ಮಾತುಗಳಿಂದ ಖಂಡಿಸಿದೆ. ಈ ಬಗೆಯ ಅಪರಾಧಗಳು ವಿರಳಾತಿವಿರಳ ಪ್ರಕರಣಗಳ ವ್ಯಾಪ್ತಿಗೆ ಬರುತ್ತವೆಂದೂ ಇಂಥ ಕೃತ್ಯಗಳಿಗೆ ಮರಣದಂಡನೆಯೇ ಸೂಕ್ತವಾದ ಶಿಕ್ಷೆಯೆಂದೂ ಅಭಿಪ್ರಾಯಪಟ್ಟಿದೆ.

ಅಲ್ಲದೇ ಮಾಯಾ ಕೌರ್ ಮತ್ತು ಬಲದೇವ್ ಸಿಂಗ್ ಸರ್ದಾರ್ ಪ್ರಕರಣದಲ್ಲಿ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ಜರುಗುವ ಹಗೆತನದ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬಾರದೆಂದು ತನ್ನ ಅಧೀನ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ.

ನ್ಯಾಯದಾನದಲ್ಲಿನ ಬಿಗಿಯಾದ ನಿಲುವೊಂದೇ ಸಾಲದು. ಭಾರತ ಸಂವಿಧಾನದಲ್ಲಿನ ಮೂಲ ಆಶಯಗಳಲ್ಲೊಂದಾದ ಭ್ರಾತೃತ್ವ ನೆಲೆಸಲು ನಾಗರಿಕರ ಅಂತರಂಗದ ಆಲೋಚನೆಗಳು ಮೃದುವಾಗಬೇಕು.

ಸಂಗಾತಿಯ ಆಯ್ಕೆಯಂತಹ ವೈಯಕ್ತಿಕ ಸಂಗತಿಗಳಲ್ಲಿ ಅಥವಾ ಕುಟುಂಬದ ಆಂತರಿಕ ವಿಷಯಗಳಲ್ಲಿ ಹೊರಗಿನವರ ಹಸ್ತಕ್ಷೇಪವು ಅತಿ ಸಣ್ಣ ಸಾಂಸ್ಕೃತಿಕ ಭಿನ್ನತೆಯನ್ನೂ ಗೊಂದಲಮಯ ಆಗಿಸಬಲ್ಲದು. ಸಾಂಸ್ಕೃತಿಕ, ಸಾಂಪ್ರದಾಯಿಕ ಭಿನ್ನತೆಯ ಸಂಘರ್ಷಕ್ಕೆ ಧಾರ್ಮಿಕ ಮತ್ತು ರಾಜಕೀಯವು ತಳಕು ಹಾಕಿಕೊಂಡರೆ ಸಮಸ್ಯೆ ಜಟಿಲಗೊಳ್ಳುತ್ತದೆ. ಇಂತಹ ಸಾಮಾಜಿಕ ಸೋಂಕಿನ ಕುರಿತು ಹೇಳುವುದಾದರೆ ದ.ರಾ. ಬೇಂದ್ರೆ ಅವರ ‘ಸ್ವೈರಣೆಗೂ ಸ್ವಾತಂತ್ರ್ಯಕ್ಕೂ ಇಹುದು ಅಜಗಜಾಂತರ. ಮತದ ಹೆಮ್ಮೆ ಬರಡು ಎಮ್ಮೆ’ ಎಂಬ ಮಾತುಗಳು ಅರ್ಥಪೂರ್ಣವೆನ್ನಿಸುತ್ತವೆ.

ಲೇಖಕ: ಹೈಕೋರ್ಟ್ ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು