ಶುಕ್ರವಾರ, ಅಕ್ಟೋಬರ್ 7, 2022
28 °C

ಮೂಲ ಸೌಕರ್ಯಗಳ ಕೊರತೆ ಖಂಡಿಸಿ ಹಾಸ್ಟೆಲ್‌ಗೆ ಬೀಗ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದ ಅಲ್-ಅಮೀನ್ ಆಸ್ಪತ್ರೆ ಬಳಿಯ ಮೆಟ್ರಿಕ್ ನಂತರದ ಸರ್ಕಾರಿ ವಸತಿ ನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಖಂಡಿಸಿ, ನಿಲಯದ ವಿದ್ಯಾರ್ಥಿಗಳು ಸೋಮವಾರ ಅಡುಗೆ ಕೋಣೆಗೆ ಬೀಗ ಹಾಕಿ ದಿಢೀರ್ ಪ್ರತಿಭಟಿಸಿದರು.

ವಸತಿ ನಿಲಯಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ ನಂತರವೇ ಬೀಗ ತೆರೆಯಲಾಗುವುದು ಎಂದು ತಮ್ಮ ಆಕ್ರೋಶ ಹೊರಹಾಕಿದರು.

‘ನಾವಿರುವ ಸರ್ಕಾರಿ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಕನಿಷ್ಠ ಮೂಲ ಸೌಕರ್ಯಗಳು ಸಹ ಇಲ್ಲಿಲ್ಲ. ಶೌಚಕ್ಕೆ ಒಂದೆಡೆ ಇರಲಿ, ಕುಡಿಯಲು ಸಹ ನೀರಿಲ್ಲ. ನೀರಿನ ಟ್ಯಾಂಕ್ ಯಾವಾಗಲೂ ಖಾಲಿ ಇರುತ್ತದೆ. ಬಿಸಿಲಿನ ಬೇಗೆ ಒಂದೆಡೆ, ಕುಡಿಯುವ ನೀರಿನ ಸಮಸ್ಯೆ ಇನ್ನೊಂದೆಡೆ. ಕುಡಿಯುವ ನೀರು ಸಹ ದೊರಕದೆ ವಿದ್ಯಾರ್ಥಿಗಳು ತ್ರಾಸು ಅನುಭವಿಸಬೇಕಿದೆ’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಸಾಮೂಹಿಕವಾಗಿ ದೂರಿದರು.

‘ಕಟ್ಟಡಕ್ಕೆ ಮೂಲ ಸೌಕರ್ಯವಿಲ್ಲ. ಶೌಚಾಲಯ, ಸ್ನಾನಗೃಹಗಳ ಅವ್ಯವಸ್ಥೆಯಂತೂ ಹೇಳತೀರದು. ಹಲ ಬಾರಿ ತೊಟ್ಟಿಗಳಲ್ಲಿ ನೀರೇ ಬರುವುದಿಲ್ಲ. ನೀರು ಪೂರೈಸಿ ಎಂದು ಕೇಳಿದರೂ ಸ್ಪಂದಿಸಲ್ಲ. ಹಿಂಗಾದರೆ ನಾವೇನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ಇವೆಲ್ಲ ಸಮಸ್ಯೆಗಳ ನಡುವೆ ಓದಲು ಗ್ರಂಥಾಲಯದಲ್ಲಿ ಪುಸ್ತಕಗಳೇ ಇಲ್ಲ. ಒಟ್ಟಾರೆ ಸಮಸ್ಯೆಗಳ ಚಿತ್ರಣವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ವಿದ್ಯಾರ್ಥಿ ಸಮೂಹ ದೂರಿತು.

ಪ್ರತಿಭಟನೆ ಸುದ್ದಿ ತಿಳಿದೊಡನೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಮಸ್ಯೆಗೆ ಇತಿಶ್ರೀ ಹಾಕುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿ ಸಮೂಹ ಪ್ರತಿಭಟನೆ ಹಿಂಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು