ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery Water Dispute | ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ಸಿದ್ದರಾಮಯ್ಯ

Published 26 ಸೆಪ್ಟೆಂಬರ್ 2023, 7:42 IST
Last Updated 26 ಸೆಪ್ಟೆಂಬರ್ 2023, 7:42 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಕಾವೇರಿ ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸಿದ್ಧವಿದ್ದು, ಈ ಬಗ್ಗೆ ನರೇಂದ್ರ ಮೋದಿ ಆಸಕ್ತಿ ತೋರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಸಾಮಾನ್ಯ ಮಳೆಯ ವರ್ಷಗಳಲ್ಲಿ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಬಿಡುವಂತೆ ನ್ಯಾಯಾಲಯದ ತೀರ್ಪು ನೀಡಿದೆ. ಆದರೆ ಸಂಕಷ್ಟದ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಸೂತ್ರ ಇಲ್ಲ. ಅಂತಹ ವರ್ಷಗಳಲ್ಲಿ ಮಾತುಕತೆ ಮೂಲಕ ಮಾತ್ರ ನೀರು ಹಂಚಿಕೆ ಸಾಧ್ಯ. ಇದಕ್ಕೆ ಸಂಕಷ್ಟ ಸೂತ್ರ ರಚನೆ ಅತ್ಯಗತ್ಯ’ ಎಂದರು. ‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಎರಡೂ ರಾಜ್ಯಗಳಿಗೆ ಅನುಕೂಲ ಆಗಲಿದೆ’ ಎಂದು ಹೇಳಿದರು.

ಬೆಂಗಳೂರು ಬಂದ್ ಕುರಿತು ಪ್ರತಿಕ್ರಿಯಿಸಿ ‘ ಬಿಜೆಪಿ–ಜೆಡಿಎಸ್‌ ಕಾವೇರಿ ವಿವಾದವನ್ನು ರಾಜಕೀಯಕೋಸ್ಕರ ರಾಜಕಾರಣಗೊಳಿಸುತ್ತಿವೆಯೇ ಹೊರತು ಜನರ ಹಿತದೃಷ್ಟಿಯಿಂದ ಅಲ್ಲ. ಬಂದ್ ಮಾಡಲಿಕ್ಕೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಆದರೆ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೋರಾಟಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಹೋರಾಟ ನಮ್ಮ ಹಕ್ಕು. ಆದರೆ ಅದರಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು’ ಎಂದರು.

ಕಾವೇರಿ ವಿವಾದದ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ವಾದ ಮಂಡಿಸಿಲ್ಲ ಎಂಬ ಬಿಜೆಪಿ–ಜೆಡಿಎಸ್‌ ಆರೋಪಗಳ ಕುರಿತು ಪ್ರತಿಕ್ರಿಯಿಸಿ ‘ ಎಚ್‌.ಡಿ. ದೇವೇಗೌಡರ ಕಾಲದಲ್ಲಿ, ಬಿಜೆಪಿ ಆಡಳಿತದಲ್ಲೂ ಇದ್ದದ್ದು ಇದೇ ಕಾನೂನು ಪರಿಣಿತರ ತಂಡ. ಸಮರ್ಥ್ಯವಾಗಿ ವಾದ ಮಂಡಿಸಿದರೂ ಕೂಡ ನಮಗೆ ಈ ರೀತಿಯ ಆದೇಶ ಹೊರಬಿದ್ದಿದೆ. ಮತ್ತೆ ಇಂದು (ಮಂಗಳವಾರ) ವಿಚಾರಣೆ ಇದೆ. ಖಂಡಿತ ಸಮರ್ಥವಾಗಿ ವಾದ ಮಂಡಿಸುತ್ತೇವೆ’ ಎಂದರು.

ಸ್ಪಂದನೆ ಇಲ್ಲ: ‘ಕೇಂದ್ರ ತಂಡವು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಜಲಾಶಯಗಳ ಸ್ಥಿತಿಗತಿ ಅರಿಯಬೇಕು ಎಂದು ನಾನು ಈಗಾಗಲೇ ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇದೀಗ ಬಿಜೆಪಿ–ಜೆಡಿಎಸ್ ಹೊಸ ಸ್ನೇಹ ಶುರುವಾಗಿದ್ದು, ದೇವೇಗೌಡರು ಸಹ ಪತ್ರ ಬರೆದಿದ್ದಾರೆ. ಅವರ ಮಾತಿಗೆ ಆದರೂ ಕೇಂದ್ರ ಬೆಲೆ ಕೊಡುತ್ತದೆಯೇ ನೋಡೋಣ. ಬಿಜೆಪಿಯವರು ಚೆಡ್ಡಿ ಮೆರವಣಿಗೆ ಮಾಡುವುದನ್ನು ಬಿಟ್ಟು, ತಮ್ಮ 25 ಸಂಸದರ ಮೂಲಕ ಪ್ರಧಾನಿಗೆ ಒತ್ತಡ ಹಾಕಬೇಕು’ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕೋರಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಸದ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದರು.

ಚಾಮರಾಜನಗರ ಭೇಟಿ ಕುರಿತು ಪ್ರತಿಕ್ರಿಯಿಸಿ ‘ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಚಾಮರಾಜನಗರಕ್ಕೆ ಹೋಗಿದ್ದೆ. ಈಗಲೂ ಹೋಗುತ್ತೇನೆ. ನಾನು ಹೋದ ಬಳಿಕ ಆ ಜಿಲ್ಲೆ ಬಗ್ಗೆ ಇದ್ದ ಮೂಢನಂಬಿಕೆ ಹೋಗಿದೆ’ ಎಂದರು.

ಕಾಂಗ್ರೆಸ್‌ ತಮಿಳುನಾಡಿನ ಡಿಎಂಕೆ ಬಿ ಟೀಂ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ‘ ಹಾಗಿದ್ದರೆ ಬಿಜೆಪಿ ಎಐಎಡಿಎಂಕೆ ಜೊತೆ ಇದೆಯಲ್ಲ, ಅವರನ್ನು ಏನೆಂದು ಕರೆಯುತ್ತಾರೆ? ರಾಜಕೀಯಕೋಸ್ಕರ ಏನೇನನ್ನೋ ಮಾತನಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT