ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾ ಕರಂದ್ಲಾಜೆ ಕ್ಷೇತ್ರ ಬಿಟ್ಟುಕೊಡಲಿ: ಮೀನುಗಾರರ ಮುಖಂಡರ ನಿಯೋಗ ಒತ್ತಾಯ

ಪ್ರಮೋದ್ ಮಧ್ವರಾಜ್‌ಗೆ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವಂತೆ ಮೀನುಗಾರರ ಸಮಯದಾಯ ಒತ್ತಾಯ
Published 26 ಜನವರಿ 2024, 12:44 IST
Last Updated 26 ಜನವರಿ 2024, 12:44 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೀನುಗಾರರ ಸಮುದಾಯ ಇದುವರೆಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಜಕೀಯವಾಗಿ ಬೆಂಬಲ ನೀಡುತ್ತಾ ಬಂದಿದೆ. ಇದಕ್ಕೆ ಪ್ರತಿಯಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಕ್ಷೇತ್ರ ತ್ಯಾಗ ಮಾಡಬೇಕು ಎಂದು ಮೀನುಗಾರರ ಮುಖಂಡರ ನಿಯೋಗ ಒತ್ತಾಯಿಸಿದೆ.

ಶುಕ್ರವಾರ ಅಂಬಲಪಾಡಿಯ ಕಾರ್ತಿಕ್‌ ಎಸ್ಟೇಟ್‌ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ.ಸುವರ್ಣ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರ ಬದಲಾಗಿ ಮೊಗವೀರ ಸಮುದಾಯದ ಮುಖಂಡರಾದ ಪ್ರಮೋದ್ ಮಧ್ವರಾಜ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕು.

ಪ್ರಮೋದ್ ಮಧ್ವರಾಜ್‌ ಮೀನುಗಾರ ಸಮುದಾಯಕ್ಕೆ ಸೇರಿದವರಾಗಿದ್ದು ಕಡಲ ಮಕ್ಕಳ ಕಷ್ಟಗಳ ಅರಿವಿದೆ. ಮೀನುಗಾರರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿದ್ದಾರೆ. 6 ವರ್ಷ ರಾಷ್ಟ್ರೀಯ ಮೀನುಗಾರರ ವೇದಿಕೆ ಕಾರ್ಯದರ್ಶಿಯಾಗಿ, 12 ವರ್ಷ ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 12 ವರ್ಷ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ದುಡಿದಿದ್ದಾರೆ.

ಎರಡು ಅವಧಿಗೆ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2018ರಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ನಂಬರ್ 1 ಶಾಸಕ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ರಾಜಕೀಯ ಹಿನ್ನೆಲೆ, ಶುದ್ಧ ಕಳಂಕ ರಹಿತ ವ್ಯಕ್ತಿತ್ವ ಹಾಗೂ ಪ್ರಾಮಾಣಿಕ ರಾಜಕಾರಣಕ್ಕೆ ಹೆಸರಾಗಿರುವ ಪ್ರಮೋದ್‌ ಮಧ್ವರಾಜ್ ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಹಾಲಿ ಸಂಸದೆಯಾದ ಶೋಭಾ ಕರಂದ್ಲಾಜೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ತುಮಕೂರು ಕ್ಷೇತ್ರದಿಂದಲೂ ಟಿಕೆಟ್‌ ನೀಡಬಹುದು. ಆದರೆ, ಮೊಗವೀರ ಸಮುದಾಯಕ್ಕೆ ಸೇರಿರುವ ಪ್ರಮೋದ್ ಮಧ್ವರಾಜ್‌ಗೆ ಮೀನುಗಾರರು ಹೆಚ್ಚಾಗಿ ನೆಲೆಸಿರುವ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್‌ ನೀಡಿದರೆ ಮಾತ್ರ ಗೆಲುವಿಗೆ ಪೂರಕವಾಗಲಿದೆ ಎಂದು ವಾದ ಮಂಡಿಸಿದರು.

ದುಸ್ಥಿತಿಯಲ್ಲಿರುವ ರಾಜ್ಯದ 14 ಕನ್ಸೂಮರ್ ಮೀನುಗಾರರ ಡೀಸೆಲ್‌ ಮಾರಾಟ ಸಮಸ್ಯೆಗಳನ್ನು ಬಗೆಹರಿಸಬೇಕು. ಮೀನುಗಾರರ ಈ ಬೇಡಿಕೆಗಳು ಈಡೇರಬೇಕಾದರೆ ಮೀನುಗಾರರ ಸಮುದಾಯಕ್ಕೆ ಸೇರಿದ ವ್ಯಕ್ತಿ ಉಡುಪಿ–ಚಿಕ್ಕಮಗಳುರು ಕ್ಷೇತ್ರದಿಂದ ಆಯ್ಕೆಯಾಗಬೇಕು  ಎಂದು ಕಿಶೋರ್ ಡಿ.ಸುವರ್ಣ ಅಭಿಪ್ರಾಯಪಟ್ಟರು.

ಅಖಿಲ ಭಾರತ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್‌, ಕ್ರಿಯಾ ಸಮಿತಿಯ ಕಾರ್ಯದರ್ಶಿ ಜಗನ್ನಾಥ್‌, ಮಲ್ಪೆ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಅಮೀನ್, ಅಖಿಲ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಸುವರ್ಣ, ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸುಭಾಶ್ ಮೆಂಡನ್‌, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಟ್ರಾಲ್ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಕುಂದರ್, ಆಳಸಮುದ್ರ ತಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮುಖಂಡರಾದ ಯೋಗೇಶ್‌ ಸಾಲ್ಯಾನ್‌ ಇದ್ದರು. 

‘ಮೀನುಗಾರರರ ಸಮಸ್ಯೆಗೆ ಬೇಕು ಸಮರ್ಪಕ ಸ್ಪಂದನೆ’ ‘ಸಮುದಾಯದ ಪರ ಹೋರಾಟ ಮಾಡುತ್ತಿರುವ ಮಧ್ವರಾಜ್‌’ ‘ರಾಜ್ಯದಲ್ಲಿ ಒಂದು ಕ್ಷೇತ್ರವನ್ನು ಮೀನುಗಾರ ಸಮುದಾಯಕ್ಕೆ ಕೊಡಿ’

ಮೂಲಸೌಕರ್ಯಗಳಿಂದ ನರಳುತ್ತಿರುವ ಮಲ್ಪೆ ಬಂದರು‌

ಮೀನುಗಾರಿಕಾ ಕ್ಷೇತ್ರ ಸಂಕಷ್ಟದಲ್ಲಿದ್ದು ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಮೀನುಗಾರಿಕಾ ಬಂದರು ಖ್ಯಾತಿಗೆ ಒಳಗಾಗಿರುವ ಮಲ್ಪೆ ಬಂದರು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದಿ ಉಡುಪಿಯಿಂದ ಮಲ್ಪೆ ಬಂದರಿಗೆ ಸಂಪರ್ಕ ಕಲ್ಲಿಸುವ ಮೂರುವರೆ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲು ಸಾದ್ಯವಾಗಿಲ್ಲ. ಮಲ್ಪೆ ಬಂದರು ವರ್ಷಕ್ಕೆ ₹1000 ಕೋಟಿ ವಿದೇಶಿ ವಿನಿಮಯ ಸಂಗ್ರಹಿಸುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರತ್ಯಕ್ಷ ಪರೋಕ್ಷ ಉದ್ಯೋಗ ನೀಡಿದೆ. ಒಂದು ಕೋಟಿಗೂ ಹೆಚ್ಚು ಜನರಿಗೆ ಶುದ್ಧ ಮೀನಿನ ಆಹಾರ ಪೂರೈಸುತ್ತಿದೆ. ಆದರೂ ಮಲ್ಪೆ ಬಂದರು ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಂದ ನರಳುತ್ತಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಎಲ್ಲ ಮೀನುಗಾರರಿಗೆ ಸಿಗಬೇಕು ನನೆಗುದಿಗೆ ಬಿದ್ದಿರುವ ಮಲ್ಪೆ ಆದಿ ಉಡುಪಿ ಹೆದ್ದಾರಿ ಶೀಘ್ರ ನಿರ್ಮಾಣವಾಗಬೇಕು ವಿಮಾನ ನಿಲ್ದಾಣ ಸ್ಥಾಪನೆಯಾಗೇಕು ಪ್ರವಾಸಿತಾಣಗಳ ಅಭಿವೃದ್ಧಿಯಾಗಬೇಕು ಮಲ್ಪೆ–ಇಂದ್ರಾಳಿ ಗೂಡ್ಸ್‌ ರೈಲ್ವೆ ಯೋಜನೆ ಕಾರ್ಯರೂಪಕ್ಕೆ ಬರಬೇಕು ಮೀನುಗಾರಿಕೆಗೆ ಆಧುನಿಕತೆಯ ಸ್ಪರ್ಶ ನೀಡಬೇಕು ಎಂದು ಕಿಶೋರ್ ಡಿ.ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT