ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಬಿಜೆಪಿಯ ‘ಮಿಷನ್‌ 80’ ಹಾದಿ ಕಠಿಣ

ಕಳೆದ ಬಾರಿ ಅಲ್ಪ ಅಂತರದಲ್ಲಿ ಗೆದ್ದ ಕಡೆ ಸವಾಲು ಸಾಧ್ಯತೆ
-ಸಂಜಯ್‌ ಪಾಂಡೆ
Published 26 ಮಾರ್ಚ್ 2024, 20:52 IST
Last Updated 26 ಮಾರ್ಚ್ 2024, 20:52 IST
ಅಕ್ಷರ ಗಾತ್ರ

ಲಖನೌ: ಬಿಜೆಪಿಯ ‘ಅಬ್‌ಕಿ ಬಾರ್ 400 ಪಾರ್’ (ಈ ಬಾರಿ 400 ಕ್ಕೂ ಅಧಿಕ ಸ್ಥಾನಗಳು) ಘೋಷಣೆಯ ಯಶಸ್ಸು, ಉತ್ತರ ಪ್ರದೇಶದಲ್ಲಿ ಪಕ್ಷವು ತೋರುವ ಸಾಧನೆಯನ್ನು ಮುಖ್ಯವಾಗಿ ಅವಲಂಬಿಸಿರುತ್ತದೆ.

ಉತ್ತರ ಪ್ರದೇಶವು ಲೋಕಸಭೆಗೆ ಅತ್ಯಧಿಕ, ಅಂದರೆ 80 ಸಂಸದರನ್ನು ಕಳುಹಿಸಿಕೊಡುತ್ತದೆ. ಕೇಸರಿ ಪಕ್ಷವು ಚುನಾವಣಾ ಕಾರ್ಯತಂತ್ರದ ಭಾಗವಾಗಿ ಈ ಬಾರಿ ಸಣ್ಣ ಹಾಗೂ ಜಾತಿ ಆಧಾರಿತ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದೆ. ಆದರೂ ಎಲ್ಲ ಸ್ಥಾನಗಳನ್ನು ಗೆದ್ದು ‘ಮಿಷನ್–80’ ಗುರಿ ಈಡೇರಿಸುವ ಕಾರ್ಯ ಕಷ್ಟಕರವಾಗಿದೆ.

ಉತ್ತರ ಪ್ರದೇಶದಲ್ಲಿ ‘ಕ್ಲೀನ್‌ ಸ್ವೀಪ್’ ಮಾಡುವ ಬಿಜೆಪಿಯ ಹಾದಿಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮಾತ್ರ ಪ್ರಮುಖ ತಡೆಯಾಗಿಲ್ಲ. 2019 ರಲ್ಲಿ ಅಲ್ಪ ಅಂತರದಲ್ಲಿ ಜಯಿಸಿದ್ದ ಸುಮಾರು 10 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಬಲುದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಶಾದ್‌ ಪಕ್ಷ ಮತ್ತು ಅಪ್ನಾ ದಳ್ (ಅನುಪ್ರಿಯಾ ಪಟೇಲ್) ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, 64 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಎಸ್‌ಪಿ ಮತ್ತು ಬಿಎಸ್‌ಪಿ 15 ಕ್ಷೇತ್ರಗಳನ್ನು ಜಯಿಸಿತ್ತು. ಇನ್ನೊಂದು ಸ್ಥಾನ ಕಾಂಗ್ರೆಸ್‌ ಪಾಲಾಗಿತ್ತು.

ಬಿಜೆಪಿಯು 64 ಸ್ಥಾನಗಳಲ್ಲಿ ಸುಮಾರು 10 ಕ್ಷೇತ್ರಗಳನ್ನು ಕೆಲವೇ ಸಾವಿರ ಮತಗಳ ಅಂತರದಿಂದ ಜಯಿಸಿತ್ತು. ಒಂದು ಕ್ಷೇತ್ರದಲ್ಲಿ (ಮಚ್‌ಲೀ ಶಹರ್) ಗೆಲುವು ಕೇವಲ 181 ಮತಗಳಿಂದ ದಕ್ಕಿತ್ತು. ಇತರ ಮೂರು ಕ್ಷೇತ್ರಗಳಲ್ಲಿ ಗೆಲುವಿನ ಅಂತರ 10 ಸಾವಿರ ಮತಗಳಿಗಿಂತ ಕಡಿಮೆಯಿತ್ತು. 

ಫಿರೋಜಾಬಾದ್‌ ಕ್ಷೇತ್ರವನ್ನು ಬಿಜೆಪಿ 29 ಸಾವಿರ ಮತಗಳ ಅಂತರದಿಂದ ಗೆದ್ದಿತ್ತು. ಆದರೆ ಕಳೆದ ಬಾರಿ ಅಖಿಲೇಶ್‌ ಯಾದವ್ ಅವರ ಮಾವ ಶಿವಪಾಲ್‌ ಯಾದವ್ (ಪ್ರಗತಿಶೀಲ ಸಮಾಜವಾದಿ ಪಕ್ಷದಿಂದ) ಕಣದಲ್ಲಿದ್ದರಲ್ಲದೆ, 91 ಸಾವಿರ ಮತಗಳನ್ನು ಪಡೆದಿದ್ದರು. ಇದು ಬಿಜೆಪಿ ಗೆಲುವಿಗೆ ನೆರವು ನೀಡಿತ್ತು. ಈ ಬಾರಿ ಶಿವಪಾಲ್‌ ಅವರು ಅಖಿಲೇಶ್‌ ಜತೆಗಿರುವುದರಿಂದ ಬಿಜೆಪಿಗೆ ಪ್ರಬಲ ಸವಾಲು ಎದುರಾಗಲಿದೆ.

ಕಳೆದ ಬಾರಿ ಕನೌಜ್‌ ಕ್ಷೇತ್ರದಲ್ಲಿ ಎಸ್‌ಪಿ ಸೋಲಿಗೆ ಶಿವಪಾಲ್‌ ಅವರು ಪರೋಕ್ಷವಾಗಿ ಕಾರಣರಾಗಿದ್ದರು. ಅಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಅಖಿಲೇಶ್‌ ಅವರ ಪತ್ನಿ, ಡಿಂಪಲ್‌ ಯಾದವ್‌ ಅವರು 12 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿದ್ದರು.

ಮೀರತ್‌ ಮತ್ತು ಮುಜಫ್ಫರ್‌ನಗರ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕ್ರಮವಾಗಿ ಐದು ಸಾವಿರ ಮತ್ತು ಆರು ಸಾವಿರದಷ್ಟಿತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಈ ಬಾರಿ ತುರುಸಿನ ಹೋರಾಟ ನಡೆಯುವುದರಲ್ಲಿ ಅನುಮಾನವಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT