ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22,217 ಚುನಾವಣಾ ಬಾಂಡ್‌ ಖರೀದಿ: ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ SBI

Published 13 ಮಾರ್ಚ್ 2024, 9:47 IST
Last Updated 13 ಮಾರ್ಚ್ 2024, 9:47 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಪಕ್ಷಗಳು 2019ರ ಏಪ್ರಿಲ್‌ 1ರಿಂದ ಈ ವರ್ಷದ ಫೆಬ್ರುವರಿ 15ರ ನಡುವೆ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, ಆ ‍‍ಪೈಕಿ 22,030 ಬಾಂಡ್‌ಗಳನ್ನು ನಗದಾಗಿ ಪರಿವರ್ತಿಸಿಕೊಂಡಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಅಫಿಡವಿಟ್‌ ಸಲ್ಲಿಸಿರುವ ಎಸ್‌ಬಿಐ, ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಮಾರ್ಚ್‌ 12ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಡಿಜಿಟಲ್ ರೂಪದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದೆ.

ಪ್ರತಿ ಚುನಾವಣಾ ಬಾಂಡ್‌ನ ಖರೀದಿ ದಿನಾಂಕ, ಖರೀದಿದಾರರ ಹೆಸರು, ಖರೀದಿಸಿದ ಬಾಂಡ್‌ಗಳ ಮುಖಬೆಲೆ, ಅವುಗಳ ನಗದೀಕರಿಸಿದ ದಿನಾಂಕ, ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರು ಸೇರಿದಂತೆ ವಿವರಗಳನ್ನು ಒದಗಿಸಲಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್‌ ಕುಮಾರ್‌ ಖಾರಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

2019ರ ಏಪ್ರಿಲ್‌ 1ರಿಂದ 2019ರ ಏಪ್ರಿಲ್‌ 11ರವರೆಗೆ ಒಟ್ಟು 3,346 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದ್ದು, ಅವುಗಳಲ್ಲಿ 1,609 ಅನ್ನು ನಗದೀಕರಿಸಲಾಗಿದೆ. 2019ರ ಏಪ್ರಿಲ್‌ 12ರಿಂದ ಈ ವರ್ಷದ ಫೆಬ್ರುವರಿ 15ರವರೆಗೆ ಒಟ್ಟು 18,871 ಬಾಂಡ್‌ಗಳನ್ನು ಖರೀದಿಸಲಾಗಿದ್ದು, ಅವುಗಳಲ್ಲಿ 20,421 ಅನ್ನು ನಗದೀಕರಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಲಾಗಿದೆ. 

ಈ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪತ್ರದ ಪ್ರತಿಯನ್ನೂ ಅಫಿಡವಿಟ್‌ನಲ್ಲಿ ಲಗತ್ತಿಸಲಾಗಿದೆ.

15 ದಿನಗಳ ಸಿಂಧುತ್ವದ ಅವಧಿಯೊಳಗೆ ರಾಜಕೀಯ ಪಕ್ಷಗಳು ನಗದೀಕರಿಸಿಕೊಳ್ಳದ ಬಾಂಡ್‌ಗಳ ಮೊತ್ತವನ್ನು, 2018 ಜನವರಿ 2ರ ಅಧಿಸೂಚನೆ ಪ್ರಕಾರ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಚುನಾವಣಾ ಬಾಂಡ್‌ಗಳ ವಿವರಗಳನ್ನು ಮಾರ್ಚ್‌ 12ರಂದು ಕಚೇರಿ ಅವಧಿಯೊಳಗೆ ಆಯೋಗಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 11ರಂದು ಎಸ್‌ಬಿಐಗೆ ತಾಕೀತು ಮಾಡಿತ್ತು.  ಬ್ಯಾಂಕ್‌ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ವಿವರಗಳನ್ನು ಮಾರ್ಚ್‌ 15ರ ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಗಡುವಿನೊಳಗೆ ಹಂಚಿಕೊಳ್ಳುತ್ತೇವೆ: ಆಯೋಗ

ಜಮ್ಮು: ಚುನಾವಣಾ ಬಾಂಡ್‌ಗಳ ಕುರಿತ ವಿವರಗಳನ್ನು ನಿಗದಿತ ಗಡುವಿನ ಒಳಗೆ ಹಂಚಿಕೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ ಆಯೋಗವು ಸಂಪೂರ್ಣ ಪಾರದರ್ಶಕತೆಯಲ್ಲಿ ನಂಬಿಕೆಯಿಟ್ಟಿದೆ ಎಂದರು.

‘ಎಸ್‌ಬಿಐ ಮಾರ್ಚ್‌ 12ರೊಳಗೆ ದತ್ತಾಂಶ ಸಲ್ಲಿಸಬೇಕಿತ್ತು. ಅದರಂತೆ ಅವರು ಗಡುವಿನೊಳಗೆ ವಿವರಗಳನ್ನು ನಮಗೆ ನೀಡಿದ್ದಾರೆ. ನಾನು ಹಿಂತಿರುಗಿದ ಬಳಿಕ ಅದನ್ನು ಗಮನಿಸಿ ನಿಗದಿತ ಗಡುವಿನೊಳಗೆ ಬಹಿರಂಗಪಡಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಆಯೋಗವು ಮಾಹಿತಿ ಬಹಿರಂಗಪಡಿಸುವಿಕೆಯಲ್ಲಿ ನಂಬಿಕೆ ಹೊಂದಿದೆ’ ಎಂದು ಉತ್ತರಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ನಡೆಸಲು ಆಯೋಗ ಸಿದ್ಧವಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು. 

‘ಪ್ರಧಾನಿಗೆ ಭಯ ಯಾಕೆ?’

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಯಾವ ಪಕ್ಷಗಳು ಎಷ್ಟು ದೇಣಿಗೆ ಪಡೆದಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ವಿಳಂಬ ಮಾಡಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೂಲಕ ಕೇಂದ್ರ ಸರ್ಕಾರವು ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಬುಧವಾರ ದೂರಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟು ಭಯ ಯಾಕೆ" ಎಂದು ಎಕ್ಸ್‌ ಮಾಧ್ಯಮದಲ್ಲಿ ಪ್ರಶ್ನಿಸಿರುವ ಅವರು ಚುನಾವಣಾ ಬಾಂಡ್‌ಗಳ ಮಾಹಿತಿಯಿಂದ ಹೊಸ ಹಗರಣ ಬಯಲಿಗೆ ಬರಬಹುದೇ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT