ಇಪ್ಪತ್ತು ವರ್ಷಗಳ ನಂತರವೂ ಬೆಂಗಳೂರು ಚಿತ್ರೋತ್ಸವಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಹಾಗೂ ಸಿನಿಮಾ ಸಂಸ್ಕೃತಿಯ ಅಭಿವ್ಯಕ್ತಿಯಾಗುವುದು ಸಾಧ್ಯವಾಗಿಲ್ಲ.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫೆಸ್) 17ನೇ ಆವೃತ್ತಿ ನಿರಾಶಾದಾಯಕವಾಗಿ ಕೊನೆಗೊಂಡಿದೆ. ಇದರೊಂದಿಗೆ, ಮತ್ತೊಂದು ಔಪಚಾರಿಕ ಸಿನಿಮಾಋತು ಕೊನೆಗೊಂಡಿದೆ. ಎಂದಿನಂತೆ ಈ ಬಾರಿಯೂ ಗೊಂದಲ, ತರಾತುರಿ, ಅಸ್ಪಷ್ಟತೆ ಮತ್ತು ಮಹತ್ವಾಕಾಂಕ್ಷೆಯ ಕೊರತೆ ಚಿತ್ರೋತ್ಸವದಲ್ಲಿ ಎದ್ದು ಕಾಣಿಸುವಂತಿತ್ತು. ನಾಡಿನ ಐತಿಹಾಸಿಕ ಪರಂಪರೆ, ವೈಜ್ಞಾನಿಕ ಸಾಧನೆ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಿನಿಮಾ ಕ್ಷೇತ್ರಗಳ ಸಾಧನೆಯ ನಡುವೆಯೇ ಭಾರತೀಯ ಮತ್ತು ಅಂತರ ರಾಷ್ಟ್ರೀಯ ಸಿನಿಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಂಗಳೂರು ಬೆಳೆದು ನಿಂತಿದೆ ಎನ್ನುವ ‘ಬಿಫೆಸ್’ನ ಆಶಯ ಹೇಳಿಕೆಯಾಗಿಯಷ್ಟೇ ಉಳಿದಿದ್ದು, ರಾಜ್ಯದಲ್ಲಿ ಸಿನಿಮಾ ಸಂಸ್ಕೃತಿ ರೂಪುಗೊಳ್ಳಲು ಅಗತ್ಯವಾದ ರಚನಾತ್ಮಕ ಚಟುವಟಿಕೆಯಾಗಿ ಬೆಳೆಯುವಲ್ಲಿ ಚಿತ್ರೋತ್ಸವ ವಿಫಲವಾಗಿದೆ.

ಈ ವೈಫಲ್ಯಕ್ಕೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹೊಣೆಗೇಡಿತನವೇ ನೇರ ಕಾರಣವಾಗಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧ್ಯತೆಗಳ ರೂಪದಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ರೂಪಿಸುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಾಂಪ್ರದಾಯಿಕ ಆಚರಣೆಗಷ್ಟೇ ಚಿತ್ರೋತ್ಸವಗಳು ಸೀಮಿತವಾಗುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ವೃತ್ತಿಪರತೆ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಲು ವಿಫಲವಾಗುವುದರೊಂದಿಗೆ, ಅಂತರರಾಷ್ಟ್ರೀಯ ಸಿನಿಮಾದ ಗಮನವನ್ನು ರಾಜ್ಯದತ್ತ ಸೆಳೆಯುವುದಕ್ಕೂ ‘ಬಿಫೆಸ್’ಗೆ ಸಾಧ್ಯವಾಗಿಲ್ಲ. ಚಿತ್ರೋತ್ಸವ ನಡೆಸುವುದಕ್ಕೆ ಅಗತ್ಯವಾದ ನಿರ್ದೇಶ ನಾಲಯವೊಂದನ್ನು ರೂಪಿಸುವ ಇಚ್ಛಾಶಕ್ತಿಯನ್ನೂ ಸರ್ಕಾರ ಪ್ರದರ್ಶಿಸಿಲ್ಲ. ಇದರ ಫಲವಾಗಿಯೇ ಸಂತೆಗೆ ಮೂರು ಮೊಳ ಎನ್ನುವಂತೆ ಚಿತ್ರೋತ್ಸವಗಳನ್ನು ನಡೆಸಲಾಗುತ್ತಿದೆ.

ಯಾವುದೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ಲಕ್ಷಣ, ನಿಗದಿತ ಕ್ಯಾಲೆಂಡರ್ ಹೊಂದಿರುವುದು. ಆದರೆ, ನಿರ್ದಿಷ್ಟ ಕ್ಯಾಲೆಂಡರ್ ಹೊಂದದಿರುವ ಕಾರಣದಿಂದಾಗಿಯೇ ‘ಬಿಫೆಸ್’ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವುದರಿಂದ ವಂಚಿತವಾಗಿದೆ. ‘ಬಿಫೆಸ್’ನ ಮೊದಲ ಆವೃತ್ತಿ ನಡೆದುದು 2006ರಲ್ಲಿ. ಎರಡು ದಶಕಗಳ ನಂತರವೂ ಚಿತ್ರೋತ್ಸವಕ್ಕೊಂದು ಕ್ಯಾಲೆಂಡರ್ ಗೊತ್ತುಪಡಿಸುವುದು ಸರ್ಕಾರಕ್ಕೆ ಸಾಧ್ಯವಾಗದಿರುವುದು ದುರದೃಷ್ಟಕರ. ‘ಬಿಫೆಸ್’ ನಂತರ ಪ್ರಾರಂಭವಾದ ಚಿತ್ರೋತ್ಸವಗಳು ಕ್ಯಾಲೆಂಡರ್ ಹೊಂದುವ ಮೂಲಕ ವಿಶ್ವದ ಗಮನಸೆಳೆದಿರುವಾಗ, ನಾವಿನ್ನೂ ದಿನಾಂಕ ಸ್ಪಷ್ಟಪಡಿಸಿಕೊಳ್ಳಲೇ ಒದ್ದಾಡುತ್ತಿದ್ದೇವೆ. ಸರ್ಕಾರಕ್ಕೆ ಮನಸ್ಸು ಬಂದಾಗ ಚಿತ್ರೋತ್ಸವ ನಡೆಯುವಂತಾಗಿದೆ. ಜನರ ತೆರಿಗೆಯ ಹಣದಲ್ಲಿ ನಡೆಯುವ ಚಿತ್ರೋತ್ಸವಕ್ಕೆ ಅಗತ್ಯವಾದುದು ಅದ್ದೂರಿತನವಲ್ಲ, ಅರ್ಥಪೂರ್ಣ ಸಾಧ್ಯತೆಗಳು ಎನ್ನುವುದು ಚಿತ್ರೋತ್ಸವದ ಸಂಘಟಕರಿಗೆ ಅರ್ಥವಾದಂತಿಲ್ಲ. ಚಿತ್ರೋತ್ಸವವನ್ನು ಕಲಿಕೆಯ ಕಮ್ಮಟವಾಗಿ ರೂಪಿಸುವ ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆದಿಲ್ಲ. ಅಂತರರಾಷ್ಟ್ರೀಯ ಸಿನಿಮಾ ನಿರ್ಮಾತೃಗಳು ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಬೆಂಗಳೂರು ಚಿತ್ರೋತ್ಸವದ ಚೌಕಟ್ಟನ್ನೇ ಕುಗ್ಗಿಸುವಂತಿದೆ.

ಈ ವರ್ಷ ಪ್ರದರ್ಶನಗೊಂಡ ಸಿನಿಮಾಗಳ ಗುಣಮಟ್ಟ ಹಾಗೂ ಪ್ರದರ್ಶನದ ಸ್ಥಳವೂ ಚಿತ್ರರಸಿಕರ ಟೀಕೆಗೆ ಗುರಿಯಾಗಿದೆ. ಪ್ರತಿ ವರ್ಷ ಸಿನಿಮಾ ಪ್ರದರ್ಶನಗಳು ನಡೆಯುತ್ತಿದ್ದ ಸ್ಥಳವನ್ನು ಸಕಾರಣವಿಲ್ಲದೆ ಈ ವರ್ಷ ಬದಲಾಯಿಸಲಾಗಿತ್ತು. ಈ ಮೊದಲು ಉತ್ಸವ ನಡೆಯುತ್ತಿದ್ದ ಸ್ಥಳ ಸಾರ್ವಜನಿಕರಿಗೆ ಬಂದುಹೋಗಲು ಆಯಕಟ್ಟಿನ ಪ್ರದೇಶದಲ್ಲಿತ್ತು. ಸ್ಥಳಾವಕಾಶದ ದೃಷ್ಟಿಯಿಂದಲೂ ಹಿಂದಿನ ಸ್ಥಳ ಅನುಕೂಲಕರವಾಗಿತ್ತು. ಸ್ಪರ್ಧಾತ್ಮಕ ವಿಭಾಗದಲ್ಲಿನ ಕನ್ನಡ ಸಿನಿಮಾಗಳ ಆಯ್ಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರೂಪದಲ್ಲಿ ತನ್ನನ್ನು ಗುರ್ತಿಸಿಕೊಳ್ಳುವ ಚಿತ್ರೋತ್ಸವ, ಕನ್ನಡದ ಆದಿಕವಿ ಪಂಪನ ಜೀವನ–ಸಾಧನೆಯ ಕಥನವಾದ ‘ಮಹಾಕವಿ’ ಸಿನಿಮಾವನ್ನೇ ಸ್ಪರ್ಧಾತ್ಮಕ ವಿಭಾಗದಿಂದ ದೂರವಿಟ್ಟಿದೆ. ಗುಣಮಟ್ಟ, ಸಾಮಾಜಿಕ ಜವಾಬ್ದಾರಿ ಹಾಗೂ ನಾಡಿನ ಹಿರಿಮೆಯು ಮಾನದಂಡ ಆಗುವುದರ ಬದಲು ವೈಯಕ್ತಿಕ ಆಶೋತ್ತರಗಳು ಸಿನಿಮಾ ಆಯ್ಕೆಯಲ್ಲಿ ಮುಖ್ಯವಾಗುತ್ತಿವೆ ಎನ್ನುವ ಟೀಕೆಯಿಂದ ತಪ್ಪಿಸಿಕೊಳ್ಳುವುದು ‘ಬಿಫೆಸ್’ಗೆ ಈ ವರ್ಷವೂ ಸಾಧ್ಯವಾಗಿಲ್ಲ.

ಈ ವೈಫಲ್ಯದ ಹಿಂದೆ ಚಲನಚಿತ್ರ ಅಕಾಡೆಮಿಯ ಬೌದ್ಧಿಕ ದಾರಿದ್ರ್ಯವೂ ಇದೆ. ಸಿನಿಮಾದ ಶೈಕ್ಷಣಿಕ ಚಟುವಟಿಕೆಗಳ ವೇದಿಕೆಯಾಗಿದ್ದ ಅಕಾಡೆಮಿ, ಕಳೆದ ಕೆಲವು ವರ್ಷಗಳಿಂದ ತನ್ನನ್ನು ಚಿತ್ರೋತ್ಸವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದೆ. ‘ಬಿಫೆಸ್’ ಹಿಂದುಮುಂದಿನ ಎರಡು ಮೂರು ತಿಂಗಳುಗಳಲ್ಲಷ್ಟೇ ಅಕಾಡೆಮಿಯ ಅಸ್ತಿತ್ವ ಪ್ರಕಟಗೊಳ್ಳುತ್ತದೆ. ರಾಜಕೀಯ ಆಯ್ಕೆಗಳ ಮೂಲಕ ಅಕಾಡೆಮಿಯನ್ನು ಪ್ರವೇಶಿಸುವವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಬೆಂಗಳೂರು ಚಲನಚಿತ್ರೋತ್ಸವದ ಫಲಶ್ರುತಿಯ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಈಗಿನ ರೂಪದಲ್ಲಿ ಚಿತ್ರೋತ್ಸವವನ್ನು ಉಳಿಸಿಕೊಳ್ಳುವುದರಿಂದ ಹಣವನ್ನು ಪೋಲು ಮಾಡಿದಂತಾಗುತ್ತದೆಯೇ ಹೊರತು, ಅದರಿಂದ ಸಿನಿಮಾ ಸಂಸ್ಕೃತಿಗೆ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.