ಹಾಸನ: ‘ದೀರ್ಘಕಾಲದ ಯಕೃತ್ ಕ್ಯಾನ್ಸರ್‌ಗೆ ತುತ್ತಾಗಿದ್ದ ಜಿಲ್ಲೆಯ 52 ವರ್ಷದ ಮಹಿಳೆಗೆ ಮಗನೇ ಯಕೃತ್ ದಾನ ಮಾಡಿದ್ದು, ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ’ ಎಂದು ಫೋರ್ಟಿಸ್ ಆಸ್ಪತ್ರೆಯ ಜಠರ ರೋಗ ತಜ್ಞ ಡಾ.ಬಿ.ಎಸ್. ರವೀಂದ್ರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಕಸಿ ನಂತರ, ಶಸ್ತ್ರಚಿಕಿತ್ಸಕರು, ಜಠರ ರೋಗ ತಜ್ಞರು, ಅರಿವಳಿಕೆ ತಜ್ಞರು, ನೆಫ್ರಾಲಜಿಸ್ಟ್ ಮತ್ತು ಹೃದ್ರೋಗ ತಜ್ಞರು ಸೇರಿದಂತೆ ನಮ್ಮ ಬಹುಶಿಸ್ತಿಯ ತಂಡವು ಲೀಲಾ ಅವರ ಮೇಲ್ವಿಚಾರಣೆ ಮಾಡಿದೆ’ ಎಂದು ಮಾಹಿತಿ ನೀಡಿದರು.
ಈ ವೇಳೆ ಹಾಜರಿದ್ದ ಚಿಕಿತ್ಸೆಗೆ ಒಳಗಾದ ಮಹಿಳೆಯ ಮಗ ರಾಕೇಶ್ ಮಾತನಾಡಿ, ‘ನನ್ನ ಯಕೃತ್ತಿನ ಭಾಗವನ್ನು ದಾನ ಮಾಡಿದ ಕಾರಣ, ತಾಯಿಗೆ ಹೊಸ ಜೀವನ ಸಿಕ್ಕಿದಂತಾಯಿತು. ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ ಡಾ.ಕಿಶೋರ್ ಮತ್ತು ಡಾ.ಪಿಯೂಷ್ ಸಿನ್ಹಾ ಅವರನ್ನು ಒಳಗೊಂಡ ತಂಡವು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ’ ಎಂದು ಹರ್ಷದಿಂದ ಹೇಳಿದರು.
‘2021ರಲ್ಲಿ ತಾಯಿ ಲೀಲಾ ಅವರು ಮೊದಲು ಕಾಮಾಲೆಗೆ ತುತ್ತಾದರು. ಮೊದಲಿಗೆ ಹಾಸನದ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದರು. ಅಲ್ಟ್ರಾ ಸೌಂಡ್ ಪರೀಕ್ಷೆಯ ಮೂಲಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ದೀರ್ಘಕಾಲದ ಯಕೃತ್ತಿನ ಕಾಯಿಲೆಯ ಅಂತಿಮ ಹಂತ ತಲುಪಿದ್ದರಿಂದ, ಇದು ಯಕೃತ್ತಿನ ಕಾರ್ಯ ಮತ್ತು ರಚನೆಯನ್ನು ದುರ್ಬಲಗೊಳಿಸುತ್ತಿತ್ತು’ ಎಂದು ತಿಳಿಸಿದರು.
‘ಹೆಚ್ಚುವರಿಯಾಗಿ, ಅವರಿಗೆ ಅನ್ಸೆಟ್ಸ್ ಎಂದು ರೋಗ ನಿರ್ಣಯ ಮಾಡಲಾಯಿತು. ಈ ಸ್ಥಿತಿಯಿಂದ ಅವರಲ್ಲಿ ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗುತ್ತಿತ್ತು. ವೈದ್ಯಕೀಯ ನಿರ್ವಹಣೆಯ ಹೊರತಾಗಿಯೂ, ಯಕೃತ್ತಿನ ಸ್ಥಿತಿಯು, ಲೀಲಾ ಅವರ ಜೀವನಶೈಲಿಯ ಮೇಲೆ ತೀವ್ರ ಪರಿಣಾಮ ಬೀರಿತು. ಕೊನೆಯದಾಗಿ ಯಕೃತ್ತಿನ ಕಸಿ ಮಾಡುವ ತುರ್ತು ಅಗತ್ಯವಿದೆ ಎಂದು ವೈದ್ಯರು ತಿಳಿಸಿದರು’ ಎಂದು ರಾಕೇಶ್ ವಿವರಿಸಿದರು.
‘ನಂತರ ತಾಯಿಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಗ್ಯಾಸ್ಕೋ ತಂಡಕ್ಕೆ ತೋರಿಸಲಾಗಿದ್ದು, ಆಸ್ಪತ್ರೆಯಲ್ಲಿ ಪರಿಶೀಲನೆ ನಂತರ ಲೀಲಾ ಅವರು ಪಿತ್ತರಸ ನಾಳದಲ್ಲಿ ಕಲ್ಲುಗಳನ್ನು ಹೊಂದಿರುವುದು ಕಂಡು ಬಂದಿತು. ಜೊತೆಗೆ ಯಕೃತ್ತಿನ ಕ್ಯಾನ್ಸರ್‌ಗೆ ಏಕಕಾಲದಲ್ಲಿ ಚಿಕಿತ್ಸೆ ನೀಡಲು ಯಕೃತ್ತಿನ ಕಸಿ ಮಾಡಲು ವೈದ್ಯರು ಶಿಫಾರಸು ಮಾಡಿದರು’ ಎಂದರು.
‘ತಾಯಿಯ ಜೀವ ಉಳಿಸಲು ನನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದೆ. ಸರಿಯಾದ ಸಮಯದಲ್ಲಿ ಯಕೃತ್ತಿನ ಕಸಿ ಮಾಡಿಸಿಕೊಳ್ಳಲು ರೋಗಿಗಳಿಗೆ ಮಾಹಿತಿ ದೊರೆತರೆ, ಅವರು ಬದುಕುಳಿಯುವ ಅವಕಾಶ ಹೆಚ್ಚಿರುತ್ತದೆ. ಕಸಿ ಮಾಡುವ ಮೊದಲು ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸುವಲ್ಲಿ ವೈದ್ಯಕೀಯ ತಂಡವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಕೃತ್ತು ಕಸಿ ಶಸ್ತ್ರಚಿಕಿತ್ಸಕ ಡಾ.ಕಿಶೋರ್, ಡಾ.ಪಿಯೂಷ್ ಸಿನ್ಹಾ, ಚಿಕಿತ್ಸೆಗೆ ಒಳಗಾದ ಲೀಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.