ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Exit Poll 2024 | ಮೋದಿ ‘ಹ್ಯಾಟ್ರಿಕ್’: ಮತಗಟ್ಟೆ ಸಮೀಕ್ಷೆ ಭವಿಷ್ಯ

ಎನ್‌ಡಿಎ ಮೈತ್ರಿಕೂಟ 350ಕ್ಕೂ ಅಧಿಕ ಸ್ಥಾನ ಗೆಲ್ಲುವ ಅಂದಾಜು
Published 1 ಜೂನ್ 2024, 23:37 IST
Last Updated 1 ಜೂನ್ 2024, 23:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ‘ಹ್ಯಾಟ್ರಿಕ್‌’ ಗೆಲುವಿನತ್ತ ಮುನ್ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಎನ್‌ಡಿಎಗೆ 350ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದ್ದು, ಮತ ಎಣಿಕೆ ಮಂಗಳವಾರ (ಜೂನ್‌ 4) ನಡೆಯಲಿದೆ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳು ಬೇಕು. 2019ರ ಚುನಾವಣೆಯಲ್ಲಿ ಎನ್‌ಡಿಎ, 353 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿತ್ತು. ‘ಇಂಡಿಯಾ’ ಮೈತ್ರಿಕೂಟಕ್ಕೆ 125 ರಿಂದ 150ರ ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಬಿಜೆಪಿ 65ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಮಲ ಪಾಳಯ ಇಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ತನ್ನ ಭದ್ರಕೋಟೆ ಎನಿಸಿರುವ ಗುಜರಾತ್, ಛತ್ತೀಸಗಢ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

‘ಇಂಡಿಯಾ ಟಿವಿ –ಸಿಎನ್ಎಕ್ಸ್’ ಸಮೀಕ್ಷೆಯು ಎನ್‌ಡಿಎಗೆ ಅತಿಹೆಚ್ಚು ಸ್ಥಾನಗಳನ್ನು ಅಂದಾಜು ಮಾಡಿದ್ದು, 371 ರಿಂದ 401 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದೆ. ಎನ್‌ಡಿಎ ಈ ಬಾರಿ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಚುನಾವಣಾ ಪ್ರಚಾರದ ಉದ್ದಕ್ಕೂ ಈ ಮಾತು ಪುನರುಚ್ಚರಿಸಿದ್ದರು.  

ಪಶ್ಚಿಮ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ ಎಂಬುದರತ್ತ ಸಮೀಕ್ಷೆಗಳು ಬೊಟ್ಟುಮಾಡಿವೆ. ತಮಿಳುನಾಡಿನಲ್ಲಿ ಎನ್‌ಡಿಎ ಐದು ಸ್ಥಾನಗಳನ್ನು ಗೆಲ್ಲಬಹುದು ಎಂದು ‘ಜನ್‌ ಕೀ ಬಾತ್’ ಸಮೀಕ್ಷೆ ಹೇಳಿದರೆ, ಕೇರಳದಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆಯಲಿದೆ ಎಂದು ಕೆಲವು ಸಮೀಕ್ಷೆಗಳು ಅಂದಾಜು ಮಾಡಿವೆ. ಪ್ರಧಾನಿ ಮೋದಿ ಅವರು ಈ ಎರಡೂ ರಾಜ್ಯಗಳಲ್ಲಿ ಹಲವು ಪ್ರಚಾರ ಸಭೆಗಳು, ರೋಡ್‌ ಶೋ ನಡೆಸಿದ್ದರು. 

ಎನ್‌ಡಿಎ ಮೈತ್ರಿಕೂಟವು ಬಂಗಾಳದಲ್ಲಿ 22, ಆಂಧ್ರಪ್ರದೇಶದಲ್ಲಿ 18 ಮತ್ತು ಒಡಿಶಾದಲ್ಲಿ 15 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT