ನವದೆಹಲಿ: ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚರಣ್ ಸಿಂಗ್ ಹಾಗೂ ‘ಹಸಿರು ಕ್ರಾಂತಿ’ಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಮರಣೋತ್ತರವಾಗಿ ಘೋಷಿಸಲಾಗಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೆ ಕೆಲವೇ ದಿನಗಳಿರುವಾಗ ಈ ಘೋಷಣೆ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
‘ಈ ಮೂವರು ಮಹನೀಯರು ದೇಶಕ್ಕಾಗಿ ನೀಡಿದ ಸೇವೆಯನ್ನು ಪರಿಗಣಿಸಿ ಅತ್ಯುನ್ನತ ನಾಗರಿಕ ಗೌರವಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದರೊಂದಿಗೆ ಈ ವರ್ಷ ಒಟ್ಟು ಐವರು ಗಣ್ಯರು ‘ಭಾರತ ರತ್ನ’ಕ್ಕೆ ಪಾತ್ರರಾದಂತಾಗಿದೆ. ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ನೀಡುವುದಾಗಿ ಈಚೆಗೆ ಘೋಷಣೆ ಮಾಡಲಾಗಿತ್ತು.
ಇದುವರೆಗೆ ಒಟ್ಟು 53 ಸಾಧಕರಿಗೆ ಈ ಗೌರವ ಸಂದಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ 10 ಗಣ್ಯರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಲಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಮಾಜ ಸುಧಾರಕ ಮದನ್ ಮೋಹನ್ ಮಾಳವೀಯ, ಆರ್‌ಎಸ್‌ಎಸ್ ಮುಖಂಡ ನಾನಾಜಿ ದೇಶಮುಖ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಸಂಗೀತ ಮಾಂತ್ರಿಕ ಭೂಪೇನ್ ಹಜಾರಿಕಾ ಅವರು ಈ ಗೌರವಕ್ಕೆ ಪಾತ್ರರಾದ ಇತರರು.
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಮತ್ತೆ ಮೂವರನ್ನು ಅತ್ಯುನ್ನತ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಇವೆ ಎಂದು ವಿಶ್ಲೇಷಿಸಲಾಗಿದೆ.
ಅವಿಭಜಿತ ಆಂಧ್ರ ಪ್ರದೇಶಕ್ಕೆ ಸೇರಿರುವ ನರಸಿಂಹ ರಾವ್ ಅವರಿಗೆ ಗೌರವ ನೀಡಲು ತೀರ್ಮಾನಿಸಿರುವುದರ ಹಿಂದೆ ತೆಲುಗು ಮತಗಳನ್ನು ಸೆಳೆಯುವ ಉದ್ದೇಶ ಅಡಗಿದೆ ಎನ್ನಲಾಗುತ್ತಿದೆ. ಮೋದಿ ಅವರು ರಾವ್ ಅವರನ್ನು ಈ ಹಿಂದೆ ಹಲವು ಸಲ ಶ್ಲಾಘಿಸಿದ್ದರು. ಕಾಂಗ್ರೆಸ್ ಪಕ್ಷವು ಅವರನ್ನು ಮೂಲೆಗುಂಪು ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿತ್ತು. ಗಾಂಧಿ ಕುಟುಂಬದೊಂದಿಗೆ ರಾವ್ ಅವರ ಸಂಬಂಧವೂ ಚೆನ್ನಾಗಿರಲಿಲ್ಲ.
ತಮಿಳುನಾಡು ಮೂಲದ ಖ್ಯಾತ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರ ಆಯ್ಕೆಯ ಹಿಂದೆ ತಮಿಳು ಮತದಾರರನ್ನು ಗುರಿಯಾಗಿಸಿರುವುದು ಸ್ಪಷ್ಟ.
‘ಮಾಜಿ ಪ್ರಧಾನಿ ಚರಣ್ ಸಿಂಗ್ ಅವರು ರೈತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನ ಮುಡುಪಾಗಿಟ್ಟಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಗೃಹ ಸಚಿವರಾಗಿ ಮತ್ತು ಒಬ್ಬ ಶಾಸಕರಾಗಿದ್ದಾಗಲೂ ಅವರು ರಾಷ್ಟ್ರ ನಿರ್ಮಾಣಕ್ಕೆ ಚಾಲಕ ಶಕ್ತಿಯಾಗಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಅವರು ತೋರಿದ್ದ ಬದ್ಧತೆ ಇಡೀ ದೇಶಕ್ಕೆ ಸ್ಪೂರ್ತಿದಾಯಕವಾಗಿದೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
‘ನರಸಿಂಹರಾವ್ ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತಲ್ಲದೆ, ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟಿತು’ ಎಂದು ಶ್ಲಾಘಿಸಿದರು.
‘ಸವಾಲಿನ ಸಮಯದಲ್ಲಿ ಭಾರತವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸ್ವಾಮಿನಾಥನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶದ ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಲು ಮಹೋನ್ನತ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಧಾನಿ ಹೇಳಿದರು.
It is a matter of immense joy that the Government of India is conferring the Bharat Ratna on Dr. MS Swaminathan Ji, in recognition of his monumental contributions to our nation in agriculture and farmers’ welfare. He played a pivotal role in helping India achieve self-reliance in… pic.twitter.com/OyxFxPeQjZ
— Narendra Modi (@narendramodi) February 9, 2024
ಜಾಟರು ರೈತರು ಗುರಿ?
ಚರಣ್ ಸಿಂಗ್ ಅವರ ಮೊಮ್ಮಗ ರಾಜ್ಯಸಭಾ ಸದಸ್ಯ ಜಯಂತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷವು ‘ಇಂಡಿಯಾ’ ಮೈತ್ರಿಕೂಟ ತೊರೆದು ಎನ್‌ಡಿಎ ಜತೆ ಸೇರುವ ತಯಾರಿಯಲ್ಲಿದೆ.
ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ಘೋಷಣೆಯಾದ ಕೆಲ ದಿನಗಳ ಬಳಿಕ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ‘ಇಂಡಿಯಾ’ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಕೂಟ ಸೇರಿತು.
ಮೋದಿ ಅವರು ‘ಭಾರತ ರತ್ನ’ ಘೋಷಿಸಿರುವುದನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಟ್ಯಾಗ್ ಮಾಡಿರುವ ಜಯಂತ್ ‘ದಿಲ್ ಜೀತ್ ಲಿಯಾ’ (ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ) ಎಂದು ಬರೆದುಕೊಂಡಿದ್ದಾರೆ.
ಆರ್‌ಎಲ್‌ಡಿಯನ್ನು ಎನ್‌ಡಿಎಗೆ ಸೇರಿಸಿಕೊಳ್ಳುವ ಪ್ರಯತ್ನದ ಬೆನ್ನಲ್ಲೇ ಚರಣ್ ಸಿಂಗ್ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಬಿಜೆಪಿಯು ಜಾಟ್ ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡಿದೆ. ಅದೇ ರೀತಿ ರೈತ ಸಮುದಾಯವು ತನ್ನ ಮೇಲೆ ಹೊಂದಿರುವ ಆಕ್ರೋಶವನ್ನು ತಣ್ಣಗಾಗಿಸುವ ಕಸರತ್ತು ನಡೆಸಿದೆ ಎಂದು ವಿಶ್ಲೇಷಿಸಲಾಗಿದೆ.
ಐವರಿಗೆ ನೀಡಿದ್ದು ಇದೇ ಮೊದಲು
‘ಭಾರತ ರತ್ನ’ ಗೌರವವನ್ನು ಒಂದೇ ವರ್ಷ ಐವರಿಗೆ ನೀಡಿದ್ದು ಇದೇ ಮೊದಲು. ಒಂದೇ ವರ್ಷ ನಾಲ್ಕು ಮಂದಿಗೆ (1999ರಲ್ಲಿ) ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು. 2019 1997 1992 1991 1955 ಹಾಗೂ 1954 ರಲ್ಲಿ ತಲಾ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿತ್ತು.
ಈ ಮೂವರು ಗಣ್ಯರನ್ನು ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಇವರ ದೂರದೃಷ್ಟಿ ಕಠಿಣ ಪರಿಶ್ರಮವನ್ನು ಪಕ್ಷವು ಶ್ಲಾಘಿಸುತ್ತದೆ.–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇನೆ.–ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕಿ
ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಿಸಿರುವುದು ನಮ್ಮ ದೇಶದ ಇತಿಹಾಸವನ್ನು ರೂಪಿಸಿದ ಅಪ್ರತಿಮ ರಾಜನೀತಿಜ್ಞನಿಗೆ ಸಂದಂತಹ ಗೌರವವಾಗಿದೆ– ಅಮಿತ್ ಶಾ, ಗೃಹ ಸಚಿವ
ಕೇಂದ್ರವು ಒಂದೆಡೆ ರಾವ್ ಅವರಿಗೆ ಭಾರತ ರತ್ನ ಘೋಷಣೆ ಮಾಡುತ್ತದೆ. ಇನ್ನೊಂದೆಡೆ ರಾವ್ ಅವರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ಮನಮೋಹನ್ ಸರ್ಕಾರದ ಕುರಿತ ‘ಶ್ವೇತ ಪತ್ರ’ ಬಿಡುಗಡೆ ಮಾಡುತ್ತದೆ–ರಾಜೀವ್ ಶುಕ್ಲಾ, ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.