ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ ಚಳವಳಿಗೆ ಸೋಲುಣಿಸಿದ ‘ಇಂಡಿಯಾ’ ಕೂಟ: ರಾಹುಲ್ ಗಾಂಧಿ

ಅಹಮದಾಬಾದ್: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ
Published : 6 ಜುಲೈ 2024, 14:34 IST
Last Updated : 6 ಜುಲೈ 2024, 14:34 IST
ಫಾಲೋ ಮಾಡಿ
Comments

ಅಹಮದಾಬಾದ್: ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ‘ಇಂಡಿಯಾ’ ಮೈತ್ರಿಕೂಟವು ರಾಮಮಂದಿರ ಚಳವಳಿಯನ್ನು ಮಣಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

ಗುಜರಾತ್‌ ಭೇಟಿಯಲ್ಲಿರುವ ಅವರು ಶನಿವಾರ ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರಾಹುಲ್‌ ಅವರು ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂಗಳನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಗುಜರಾತ್‌ ಪ್ರದೇಶ ಕಾಂಗ್ರೆಸ್‌ ಸಮಿತಿ (ಜಿಪಿಸಿಸಿ) ಕಚೇರಿಗೆ ಮುತ್ತಿಗೆ ಹಾಕಿದ್ದರು. ಅದರ ಮರುದಿನ ರಾಹುಲ್‌ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ್ದಾರೆ.

‘ಬೆದರಿಸುವ ಮತ್ತು ಕಚೇರಿಗೆ ಹಾನಿ ಉಂಟುಮಾಡುವ ಮೂಲಕ ಬಿಜೆಪಿಯವರು ನಮಗೆ ಸವಾಲು ಹಾಕಿದ್ದಾರೆ. ಅವರು ನಮ್ಮ ಕಚೇರಿಗೆ ಹಾನಿ ಮಾಡಿದ ರೀತಿಯಲ್ಲೇ ನಾವು ಒಟ್ಟಾಗಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಹೊರಟಿದ್ದೇವೆ. ಅಯೋಧ್ಯೆಯಲ್ಲಿ ಮಾಡಿದಂತೆ ನಾವು ಗುಜರಾತ್‌ನಲ್ಲೂ ಬಿಜೆಪಿಯನ್ನು ಮಣಿಸುತ್ತೇವೆ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ’ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಪಕ್ಷವು ಅಧಿಕ್ಕಾರಕ್ಕೇರಲಿದ್ದು, ಗುಜರಾತ್‌ನಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಚೆಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫೈಜಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ (ಅಯೋಧ್ಯೆ ರಾಮಮಂದಿರ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿದೆ) ಬಿಜೆಪಿಯ ಸೋಲನ್ನು ಪ್ರಸ್ತಾಪಿಸುವ ಮೂಲಕ ರಾಹುಲ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

‘ನಾನು ದೊಡ್ಡ ವಿಷಯವೊಂದನ್ನು ನಿಮಗೆ ಹೇಳುತ್ತಿದ್ದೇನೆ. ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟವು ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದೆ. ಆ ಮೂಲಕ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಆರಂಭಿಸಿದ್ದ ರಾಮಮಂದಿರ ಚಳವಳಿಯನ್ನು ಮಣಿಸಿದೆ’ ಎಂದು ತಿಳಿಸಿದರು. 

‘ಪ್ರಧಾನಿ ತಮ್ಮನ್ನು ತಾವು ‘ಮನುಷ್ಯಾತೀತ’ ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ಸಂಸತ್ತಿನಲ್ಲಿ ‘ನೀವು ಮನುಷ್ಯರೇ’ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದೆ. ನೀವು ದೇವರೊಂದಿಗೆ ನೇರ ಸಂಪರ್ಕ ಹೊಂದಿರುವಿರಾದರೆ, ನಿಮಗೆ ಅಯೋಧ್ಯೆಯಲ್ಲಿ ಸೋಲು ಎದುರಾದದ್ದು ಹೇಗೆ?’ ಎಂದು ರಾಹುಲ್‌ ಲೇವಡಿ ಮಾಡಿದರು.

ವಾರಾಣಸಿಯಲ್ಲಿ ನಮ್ಮ ಚುನಾವಣಾ ಕಾರ್ಯತಂತ್ರದಲ್ಲಿ ಕೆಲವು ಲೋಪಗಳು ಸಂಭವಿಸದೇ ಇದ್ದಲ್ಲಿ ಪ್ರಧಾನಿ ಮೋದಿ ಅವರನ್ನು ಮಣಿಸುತ್ತಿದ್ದೆವು
ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT