ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳನ್ನು ನಿಯಂತ್ರಿಸುವ ಶಹಜಹಾನ್‌ನನ್ನು ಪೊಲೀಸರು ಬಂಧಿಸುವುದಿಲ್ಲ: ಸುವೆಂದು

Published 25 ಫೆಬ್ರುವರಿ 2024, 2:52 IST
Last Updated 25 ಫೆಬ್ರುವರಿ 2024, 2:52 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಅವರನ್ನು ಪೊಲೀಸರು ಬಂಧಿಸುವುದಿಲ್ಲ. ಏಕೆಂದರೆ, ಅವರು ಅಲ್ಲಿನ ಮತಗಳನ್ನು ನಿಯಂತ್ರಿಸುತ್ತಾರೆ ಎಂದು ವಿಪಕ್ಷ ನಾಯಕ ಸುವೆಂದು ಅಧಿಕಾರಿ ದೂರಿದ್ದಾರೆ.

ಸಂದೇಶ್ ಖಾಲಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದು ಕೇವಲ ಬಿಜೆಪಿ ನಾಯಕರಿಗೆ ನಿರ್ಬಂಧ ಹಾಕಲು ಎಂದು ಅವರು ಹೇಳಿದ್ದಾರೆ.

‘ಪ್ರಕರಣದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ತಲೆಮರೆಸಿಕೊಂಡಿರುವ ಶಹಜಹಾನ್‌ಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಸಿಬಿಐ ಮತ್ತು ಎನ್‌ಐಎ ತನಿಖೆಗಳು ನಡೆಯಬೇಕು. ಸರ್ಕಾರ ಸೂಕ್ತ ಕ್ರಮ ಜರುಗಿಸುವುದನ್ನು ನೋಡಲು ಸಂದೇಶ್‌ಖಾಲಿ ಮತ್ತು ಪಶ್ಚಿಮ ಬಂಗಾಳದ ಜನ ಕಾಯುತ್ತಿದ್ದಾರೆ. ಅಲ್ಲಿ 144 ಸೆಕ್ಷನ್ ಜಾರಿ ಮಾಡಿರುವುದು ಬಿಜೆಪಿಯ ಸಂಸದರು, ಶಾಸಕರನ್ನು ತಡೆಯಲು ಮಾತ್ರ. ಇದು ರಾಜಕೀಯ ದುರುದ್ದೇಶದ ನಡೆ’ ಎಂದು ಅಧಿಕಾರಿ ಹೇಳಿದ್ದಾರೆ.

‘ಮಮತಾ ಬ್ಯಾನರ್ಜಿ ಅವರ ಪೊಲೀಸರು ಶೇಖ್ ಶಹಜಹಾನ್ ಅವರನ್ನು ಬಂಧಿಸುವುದಿಲ್ಲ. ಏಕೆಂದರೆ, ಅವರು(ಶೇಖ್) ಅಲ್ಲಿನ ಮತಗಳನ್ನು ನಿಯಂತ್ರಿಸುತ್ತಾರೆ, ಅವರನ್ನು ಬಂಧಿಸಿದರೆ ಟಿಎಂಸಿ ಬಸಿರ್‌ಹತ್ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಮಾರ್ಚ್ 6ರಂದು ಸಿಜೆಐ ಅವರ ಪೀಠದಲ್ಲಿ ಪ್ರಕರಣ ಸಂಬಂಧ ವಿಚಾರಣೆ ಇದೆ. ಪ್ರಕರಣವು ಸಿಬಿಐಗೆ ಹೋಗುತ್ತದೆ ಮತ್ತು ಅದಾದ, 24 ಗಂಟೆಗಳ ಒಳಗೆ ಶಹಜಹಾನ್ ಜೈಲಿನಲ್ಲಿರುತ್ತಾನೆ’ಎಂದು ಅವರು ಹೇಳಿದ್ದಾರೆ.

2013ರಲ್ಲಿ ಟಿಎಂಸಿ ಸೇರಿದ ಶಹಜಹಾನ್, ಅದಕ್ಕೂ ಮೊದಲು ಸಿಪಿಐ (ಎಂ)ನಲ್ಲಿ ಇದ್ದರು. ಭೂಮಾಫಿಯಾದಿಂದ ಶೇ 20ರಷ್ಟು ಲಂಚ ವಸೂಲಿ ಮಾಡಿ ವರಿಷ್ಠರಿಗೆ ಕಳುಹಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಬಿಜೆಪಿ ಎಲ್ಲಿಯೂ ರಾಷ್ಟ್ರಪತಿ ಆಳ್ವಿಕೆ ಹೇರಿಲ್ಲ, ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅಧಿಕಾರ ಬದಲಾವಣೆ ಮಾಡುವುದು ನಮ್ಮ ಪಕ್ಷದ ಉದ್ದೇಶ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಪರಿಸ್ಥಿತಿ ಇದೆ. ಆದರೆ, ಬಿಜೆಪಿ ನಾಯಕನಾಗಿ ನಾನು ಅದಕ್ಕೆ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT