ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಮನೆಗೆ ಒಂದು ಉದ್ಯೋಗ: ಚೌಹಾಣ್‌ ಭರವಸೆ

Published 30 ಸೆಪ್ಟೆಂಬರ್ 2023, 15:57 IST
Last Updated 30 ಸೆಪ್ಟೆಂಬರ್ 2023, 15:57 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದರೆ, ಪ್ರತಿ ಮನೆಗೊಂದು ಉದ್ಯೋಗ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಭರವಸೆ ನೀಡಿದ್ದಾರೆ.

‘ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿಯ ಚೌಹಾಣ್‌ ನೇತೃತ್ವದ ಸರ್ಕಾರ ವಿಫಲವಾಗಿದೆ’ ಎಂದು ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಟೀಕಿಸುತ್ತಿರುವುದರ ನಡುವೆಯೇ, ಅಲಿರಾಜ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ರ್‍ಯಾಲಿಯಲ್ಲಿ ಚೌಹಾಣ್‌ ಅವರು ಈ ಭರವಸೆ ನೀಡಿದ್ದಾರೆ.

‘ನಾನು ರಾಜ್ಯದ ಜನರ ಕಷ್ಟಗಳನ್ನು ದೂರ ಮಾಡುತ್ತೇನೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೂ ಉದ್ಯೋಗ ನೀಡಲಾಗುವುದು. ಇದರಿಂದಾಗಿ ಇಲ್ಲಿನ ಜನರು ವಲಸೆ ಹೋಗುವುದು ತಪ್ಪುತ್ತದೆ. ಸ್ವಸಹಾಯ ಗುಂಪುಗಳ ಮೂಲಕ ಅಥವಾ ಉದ್ಯಮ ಕ್ರಾಂತಿ ಯೋಜನೆ ಮೂಲಕ ಅಥವಾ ಸರ್ಕಾರದ ಮೂಲಕ ಉದ್ಯೋಗಗಳನ್ನು ನೀಡಲಾಗುವುದು’ ಎಂದಿದ್ದಾರೆ.

‘ನಾನು ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಮುಖ್ಯಮಂತ್ರಿಯಾದವನು. ಜನರ ಜೀವನ ಮಟ್ಟ ಸುಧಾರಿಸಲು ಹಗಲು– ರಾತ್ರಿ ಶ್ರಮಿಸುತ್ತೇನೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಟೀಕೆ‌: ಶಿವರಾಜ್‌ ಸಿಂಗ್ ಚೌಹಾಣ್‌ ಅವರು ನೀಡಿರುವ ಭರವಸೆ ಕುರಿತು ಟೀಕಿಸಿರುವ ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ. ಮಿಶ್ರಾ ಅವರು, ‘ಯುವಜನರ ಹಾದಿ ತಪ್ಪಿಸಲು ಚೌಹಾಣ್‌ ಇಂಥ ಹೇಳಿಕೆ ನೀಡಿದ್ದಾರೆ’ ಎಂದಿದ್ದಾರೆ.

‘ಕಳೆದ 18 ವರ್ಷಗಳಿಂದ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವವರಿಗೆ ಉದ್ಯೋಗ ನೀಡಲು ಚೌಹಾಣ್‌ ನೇತೃತ್ವದ ಸರ್ಕಾರ ವಿಫಲವಾಗಿದೆ. ಹಾಗಿದ್ದ ಮೇಲೆ ಭವಿಷ್ಯದಲ್ಲಿ ಉದ್ಯೋಗ ನೀಡಲಾಗುವುದು ಎಂದು ಅವರು ಹೇಗೆ ಭರವಸೆ ನೀಡುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT