ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

sikkim flood | ಸಾವಿರಾರು ಕೋಟಿ ನಷ್ಟ: ಮುಖ್ಯಮಂತ್ರಿ ಪ್ರೇಮ್‌ಸಿಂಗ್‌ ತಮಂಗ್‌

Published 7 ಅಕ್ಟೋಬರ್ 2023, 3:37 IST
Last Updated 7 ಅಕ್ಟೋಬರ್ 2023, 3:37 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌ : ಸಿಕ್ಕಿಂ ರಾಜ್ಯದಲ್ಲಿ ತೀಸ್ತಾ ನದಿ ಪ್ರವಾಹ ಪರಿಸ್ಥಿತಿಯಿಂದ ಪ್ರಾಣ ಹಾನಿಯ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಪ್ರೇಮ್‌ಸಿಂಗ್‌ ತಮಂಗ್‌ ಹೇಳಿದರು. 

‘ಹಾನಿಯ ಬಗ್ಗೆ ನಿಖರವಾದ ವಿವರ ನೀಡಲು ಸಾಧ್ಯವಿಲ್ಲ. ಜನರ ರಕ್ಷಣೆ ಮತ್ತು ಅವರಿಗೆ ತಕ್ಷಣದ ಪರಿಹಾರ ಒದಗಿಸುವುದು ಆದ್ಯತೆ.  ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ, ಸೇತುವೆಗಳು ಕೊಚ್ಚಿ ಹೋಗಿವೆ. ಸುಮಾರು 25 ಸಾವಿರ ಜನರು ಸಂಕಷ್ಟದಲ್ಲಿದ್ದಾರೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು. 

ಈ ನಡುವೆ ಪ್ರವಾಹ ಪೀಡಿತ ಜನರಿಗೆ ಪರಿಹಾರ ಒದಗಿಸಲು ಸಿಕ್ಕಿಂಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿಯ (ಎಸ್‌ಡಿಆರ್‌ಎಫ್‌) ಕೇಂದ್ರದ ಪಾಲಿನಿಂದ ₹ 44.8 ಕೋಟಿಯನ್ನು ಮುಂಗಡವಾಗಿ ಬಿಡುಗಡೆ ಮಾಡಲು ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ.

ಅಮಿತ್‌ ಶಾ ಅವರ ನಿರ್ದೇಶನದ ನಂತರ, ಗೃಹ ಸಚಿವಾಲಯ) ಅಂತರ ಸಚಿವಾಲಯದ ಕೇಂದ್ರ ತಂಡವನ್ನು) ರಚಿಸಿದೆ. ಈ ತಂಡ ಶೀಘ್ರದಲ್ಲೇ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಯ ಮೌಲ್ಯಮಾಪನ ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರವಾಹದಿಂದ ಸುಮಾರು 2,413 ಜನರನ್ನು ರಕ್ಷಿಸಲಾಗಿದ್ದರೂ 143 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದರು.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಸಾವಿರಾರು ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸೇನಾ ಸಿಬ್ಬಂದಿ ಮತ್ತು ನಾಗರಿಕರಿಗಾಗಿ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಶೋಧ ಕಾರ್ಯ ಮುಂದುವರೆಸಿವೆ ಎಂದರು.

ಪ್ರವಾಹದಿಂದಾಗಿ 13 ಸೇತುವೆ ಗಳು ನಾಶವಾಗಿವೆ. ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆ ಗಳು ಕೊಚ್ಚಿಹೋಗಿವೆ. ಶೋಧ ಕಾರ್ಯಾಚರಣೆಗೆ ಶ್ವಾನಗಳು ಮತ್ತು ವಿಶೇಷ ರೇಡಾರ್‌ಗಳನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. 

ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಸಿಲುಕಿರುವ ರಾಜ್ಯದ 160 ವಿದ್ಯಾರ್ಥಿ ಗಳನ್ನು ಸುರಕ್ಷಿತವಾಗಿ ಕರೆತರಲು ಇಬ್ಬರು ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಅಸ್ಸಾಂ ಬಿಸ್ವಾ ಶರ್ಮಾ ಹೇಳಿದ್ದಾರೆ.

‘ಕಳಪೆ ಕಾಮಗಾರಿ: ಒಡೆದ ಅಣೆಕಟ್ಟೆ’

‘ಚುಂಗ್‌ತಾಂಗ್‌ ಅಣೆಕಟ್ಟು ಕೊಚ್ಚಿಕೊಂಡು ಹೋಗಿದೆ. ಈ ಕಾರಣ ಕೆಳ ಪ್ರದೇಶಗಳಲ್ಲಿ ಅನಾಹುತ ಸಂಭವಿಸಿದೆ. ಮೇಘ ಸ್ಫೋಟವೂ ಆಗಿದೆ. ಲೋನಕ್‌ ಸರೋವರವೂ ಉಕ್ಕೇರಿದೆ. ಹಿಂದಿನ ಸರ್ಕಾರ ನಿರ್ಮಿಸಿದ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಅಣೆಕಟ್ಟೆ ಒಡೆದಿದೆ ಮತ್ತು ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹದಿಂದ ಭಾರಿ ತೊಂದರೆ ಆಗಿದೆ’ ಎಂದು ಮುಖ್ಯಮಂತ್ರಿ ತಮಂಗ್‌ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮತ್ತೊಂದು ನೀರ್ಗಲ್ಲು ಸರೋವರದಲ್ಲಿ ಪ್ರವಾಹ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಸಿಕ್ಕಿಂಗೆ  ಭೇಟಿ ನೀಡುವುದನ್ನು ಮುಂದೂಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

₹4 ಲಕ್ಷ ಪರಿಹಾರ

ಪ್ರವಾಹದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 4 ಲಕ್ಷ ಹಾಗೂ ಕಾಳಜಿ ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ₹ 2 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ತಮಂಗ್‌ ಹೇಳಿದ್ದಾರೆ. ಕಾಳಜಿ ಕೇಂದ್ರದಲ್ಲಿ ಸಂತ್ರಸ್ತ ಕುಟುಂಬಗಳನ್ನು ಅವರು ಭೇಟಿ ಮಾಡಿದರು. ಸ್ಥಳಾಂತರಗೊಂಡ ಕುಟುಂಬಗಳ ಪುನರ್ವಸತಿಗೆ ಎಲ್ಲಾ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT