ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಖರ್ಗೆಗೆ ಸಿಡಬ್ಲ್ಯುಸಿ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಧಿಕಾರ

ಫಾಲೋ ಮಾಡಿ
Comments

ನವ ರಾಯ್‌ಪುರ (ಛತ್ತಿಸಗಢ): ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯುಸಿ) ಚುನಾವಣೆಯನ್ನು ನಡೆಸದಿರಲು ಹಾಗೂ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುವ ಕುರಿತು ಕಾಂಗ್ರೆಸ್‌ ಚಾಲನಾ ಸಮಿತಿಯು ಶುಕ್ರವಾರ ಸರ್ವಾನುಮತದಿಂದ ನಿರ್ಧರಿಸಿದೆ.

ನವರಾಯ್‌ಪುರದಲ್ಲಿ ಶುಕ್ರವಾರದ ನಡೆದ ಪಕ್ಷದ 85ನೇ ಮಹಾಅಧಿವೇಶನದ ಭಾಗವಾಗಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು 150 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾಗವಹಿಸಿರಲಿಲ್ಲ.

‘ಸಿಡಬ್ಲ್ಯುಸಿ ಸದಸ್ಯರ ನೇಮಕಾತಿ ಸೇರಿದಂತೆ ಪಕ್ಷದ ಎಲ್ಲಾ ಹಂತಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ಜಾತಿಗಳು, ಮಹಿಳೆಯರು, ಯುವಜನರು ಮತ್ತು ಅಲ್ಪಸಂಖ್ಯಾತರಿಗೆ ಎಲ್ಲಾ ಹಂತಗಳಲ್ಲೂ ಶೇ 50ರಷ್ಟು ಮೀಸಲಾತಿ ನೀಡುವ ನಿಟ್ಟಿನಲ್ಲಿ ಪಕ್ಷದ ಸಂವಿಧಾನದ ತಿದ್ಡಪಡಿ ಮಾಡಲು ಸಿದ್ಧವಾಗಿದೆ. ಸದ್ಯಕ್ಕೆ ಸದಸ್ಯರ ಆಯ್ಕೆಯನ್ನು ಘೋಷಿಸಲಾಗುವುದಿಲ್ಲ. ಆಯ್ಕೆಯ ಕುರಿತು ಸಮಾಲೋಚನೆಯ ನಂತರ ಘೋಷಿಸಲಾಗುವುದು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಿಡಬ್ಲ್ಯುಸಿಗೆ ಚುನಾವಣೆ ಮಾಡುವುದನ್ನು ಕೈಬಿಡಲು ದೊಡ್ಡ ಕಾರಣಗಳಿವೆ’ ಎಂದೂ ಅವರು ಹೇಳಿದ್ದಾರೆ.

‘ಚಾಲನಾ ಸಮಿತಿಯ ನಿರ್ಧಾರವನ್ನು ಸಭೆಯಲ್ಲಿ ಹಾಜರಿದ್ದ 45 ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿದರು. ಕೆಲವರು ವಿರೋಧಿಸಿದರೆ, ಮತ್ತೆ ಕೆಲವರು ಚುನಾವಣೆಗೆ ಒಲವು ತೋರಿದ್ದಾರೆ. ನಾವು ಚುನಾವಣೆ ನಡೆಸಿದರೆ ಆಗುವ ಪರಿಣಾಮಗಳ ಬಗ್ಗೆಯೂ, ಚುನಾವಣೆ ನಡೆಸದಿದ್ದರೆ ಪರಿಣಾಮ ಏನಾಗಬಹುದು ಎನ್ನುವ ಕುರಿತೂ ಚರ್ಚಿಸಿದ್ದೇವೆ. ಕೂಲಂಕಷ ಚರ್ಚೆಯ ನಂತರವೇ ಈ ನಿರ್ಧಾರಕ್ಕೆ ಬಂದಿದ್ದೇವೆ. ಎಐಸಿಸಿ ಮತ್ತು ಪಿಸಿಸಿ ಪ್ರತಿನಿಧಿಗಳು ಈ ಸರ್ವಾನುಮತದ ನಿರ್ಧಾರವನ್ನು ಬೆಂಬಲಿಸುತ್ತಾರೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ’ ಎಂದರು.

ಕಾಂಗ್ರೆಸ್‌ನ ಮಾಜಿ ಪ್ರಧಾನಿಗಳು ಮತ್ತು ಮಾಜಿ ಎಐಸಿಸಿ ಮುಖ್ಯಸ್ಥರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕಾಯಂ ಸದಸ್ಯರನ್ನಾಗಿ ನೇಮಿಸುವ ಸಲುವಾಗಿ ಪಕ್ಷವು ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಕುರಿತೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಒಂದು ವೇಳೆ ತಿದ್ದುಪಡಿಗೆ ಅನುಮೋದನೆ ದೊರೆತರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಿಡಬ್ಲ್ಯುಸಿಯ ಕಾಯಂ ಸದಸ್ಯರಾಗಲಿದ್ದಾರೆ. ಅಷ್ಟೇ ಅಲ್ಲ, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕರನ್ನೂ ಸಿಡಬ್ಲ್ಯುಸಿಯಲ್ಲಿ ಒಳಗೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ.

ಡ್ರಗ್ಸ್ ಸೇವನೆಗೆ ನಿರ್ಬಂಧ: ಪಕ್ಷದ ಸಂವಿಧಾನದಲ್ಲಿನ ಪ್ರಮುಖ ತಿದ್ದುಪಡಿಯು ಸದಸ್ಯರು ಯಾವುದೇ ರೀತಿಯ ಮಾನಸಿಕ ಕಾಯಿಲೆಗಳ ನೀಡುವ ಔಷಧಿಯ ಸೇವನೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಸ್ತಾಪಿಸಿದೆ. ಅಂತೆಯೇ ಮದ್ಯಪಾನ ನಿಷೇಧಿಸುವ ಕುರಿತೂ ತಿದ್ದುಪಡಿಸಿ ತರಬೇಕೆಂದು ಕೆಲವು ನಾಯಕರು ಬಯಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಮಹಾಅಧಿವೇಶನದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಈ ವೇಳೆ ಅವರು,ಬಿಜೆಪಿಯ ವಿರುದ್ಧ ಪಕ್ಷವು ಯಾವ ರೀತಿಯಾಗಿ ಹೋರಾಟ ಮಾಡಬೇಕು ಎನ್ನುವ ಕುರಿತು 15 ಸಾವಿರ ಪ್ರತಿನಿಧಿಗಳು ಹಾಗೂ 1,825 ಎಐಸಿಸಿ ಪ್ರತಿನಿಧಿಗಳ ಮುಂದೆ ಯೋಜನೆಯನ್ನು ಮುಂದಿಡುವ ನಿರೀಕ್ಷೆ ಇದೆ.

ಖರ್ಗೆಯವರ ಭಾಷಣದ ನಂತರ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಮಾತನಾಡುವರು. ರಾಜಕೀಯ, ಆರ್ಥಿಕ ಮತ್ತು ಅಂತರರಾಷ್ಟ್ರೀಯ ವಿಷಯಕ್ಕೆ ಸಂಬಂಧಿಸಿದಂತೆ ಮೂರು ನಿರ್ಣಯಗಳನ್ನು ಮಂಡಿಸಲಾಗುವುದು. ಈ ವಿಚಾರಗಳ ಕುರಿತು ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾನುವಾರದ ಮಹಾಅಧಿವೇಶನದ ಸಮಾರೋಪದಲ್ಲಿ ರಾಹುಲ್ ಗಾಂಧಿ ಹಾಗೂ ಖರ್ಗೆ ಮಾತನಾಡಲಿದ್ದಾರೆ. ಸಮಾರೋಪದ ಬಳಿಕ ನಡೆಯುವ ಸಾರ್ವಜನಿಕ ರ‍್ಯಾಲಿಯಲ್ಲಿ ಖರ್ಗೆ, ರಾಹುಲ್ ಮತ್ತು ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT