ಚೆನ್ನೈ (ಪಿಟಿಐ): ರಾಜ್ಯಕ್ಕೆ ಕಾವೇರಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡಿನ ಎಲ್ಲ ಪಕ್ಷಗಳ ಸಂಸದರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ಸರ್ವ ಪಕ್ಷಗಳ ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ತಿಳಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿರುವ ಕರ್ನಾಟಕದ ವಾದಗಳು ದೋಷಪೂರಿತ ಮತ್ತು ಆಧಾರರಹಿತವಾಗಿವೆ. ಹಾಗಾಗಿ ಇವುಗಳನ್ನು ಪರಿಗಣಿಸಬಾರದೆಂದು ಕೇಂದ್ರಕ್ಕೆ ತಿಳಿಸಲಾಗಿದೆ. ಕಾವೇರಿ ನೀರು ಕೋರಿ ಕೇಂದ್ರದ ಬಳಿಗೆ ತೆರಳಲಿರುವ ನಿಯೋಗದ ನೇತೃತ್ವವನ್ನು ರಾಜ್ಯ ಜಲಸಂಪನ್ಮೂಲ ಸಚಿವ ದುರೈಮುರುಗನ್ ವಹಿಸಲಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ನಿಯೋಗದ ಸದಸ್ಯರು, ಶೇಖಾವತ್ ಅವರಿಗೆ ಮನವಿ ಸಲ್ಲಿಸಿ, ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರವು ಸಲಹೆ ನೀಡುವಂತೆ ಒತ್ತಾಯಿಸಲಿದ್ದಾರೆ ಎಂದರು.
‘ಕರ್ನಾಟಕವು ಆಧಾರರಹಿತ ವಾದಗಳನ್ನು ಮುಂದಿಡುತ್ತಿದೆ ಮತ್ತು ತಮಿಳುನಾಡಿನ ನೀರಿನ ಅವಶ್ಯಕತೆಯ ಮನವಿಗೆ ವಿರುದ್ಧವಾಗಿ ಕೇಂದ್ರಕ್ಕೆ ಪತ್ರ ಬರೆದಿದೆ’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದರು.
‘ತಮಿಳುನಾಡಿನ ನೀರಿನ ಬೇಡಿಕೆಯು ಅಸಮಂಜಸ ಮತ್ತು ಅದು ನಿಯಮ ಮೀರಿ ತನ್ನ ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡಿದೆ ಎಂದು ಕರ್ನಾಟಕ ವಾದಿಸುತ್ತಿದೆ. ಈ ಸಂಬಂಧ ಇದೇ ತಿಂಗಳ 13 ರಂದು ಕರ್ನಾಟಕವು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದು, ಈಶಾನ್ಯ ಮಾನ್ಸೂನ್ ಸಮಯದಲ್ಲಿ ತಮಿಳುನಾಡಿಗೆ ಸಾಕಷ್ಟು ನೀರು ಸಿಗುತ್ತದೆ ಮತ್ತು ರಾಜ್ಯದ ಕಾವೇರಿ ಕಣಿವೆಯಲ್ಲಿ ಅಗತ್ಯ ಅಂತರ್ಜಲವಿದೆ’ ಎಂದೂ ಕರ್ನಾಟಕ ತಿಳಿಸಿದೆ. ಇಂತಹ ದೃಷ್ಟಿಕೋನವು ದೋಷಪೂರಿತವಾದುದು. ಕೇಂದ್ರವು ಇದನ್ನು ಪರಿಗಣಿಸಬಾರದು ಎಂದು ಸ್ಟಾಲಿನ್ ಹೇಳಿದರು.
ಕಾವೇರಿ ಜಲವಿವಾದಗಳ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ ಸ್ಟಾಲಿನ್, ಮಳೆ ಕೊರತೆಯ ವರ್ಷದಲ್ಲಿ ರಾಜ್ಯಗಳ ನಡುವೆ ‘ಅನುಪಾತ’ದ ಆಧಾರದ ಮೇಲೆ ನೀರು ಹಂಚಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.