ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದಿಂದ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಿರ್ಮಲಾ ಸೀತಾರಾಮನ್, ಎಚ್‌ಡಿಕೆ ಹೇಳಿಕೆಗೆ ತಿರುಗೇಟು
Published : 29 ಜುಲೈ 2024, 6:42 IST
Last Updated : 29 ಜುಲೈ 2024, 6:42 IST
ಫಾಲೋ ಮಾಡಿ
Comments

ಮೈಸೂರು: ‘ಕೇಂದ್ರ ಬಜೆಟ್‌ನಲ್ಲಿ ಅತಿ ಹೆಚ್ಚು ಅನ್ಯಾಯವಾಗಿದ್ದರೆ ಅದು ಕರ್ನಾಟಕ ರಾಜ್ಯಕ್ಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ’ ಎಂಬ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ಸಮರ್ಥನೆಗೆ ಇಲ್ಲಿ ಸೋಮವಾರ ತಿರುಗೇಟು ನೀಡಿದರು.

‘ನೀತಿ ಆಯೋಗದ ಸಭೆಗೆ ಉದ್ದೇಶಪೂರ್ವಕವಾಗಿಯೇ ನಾನು ಹಾಜರಾಗಲಿಲ್ಲ. ಬಹಿಷ್ಕರಿಸಿದ್ದೇನೆ. ನಮ್ಮೊಂದಿಗೆ, ಬಿಜೆಪಿಯೇತರ ಸರ್ಕಾರಗಳೂ ಬಹಿಷ್ಕರಿಸಿವೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಆ ಸಭೆಗೆ ಹೋಗಿ ಏನು ಪ್ರಯೋಜನ?’ ಎಂದು ಕೇಳಿದರು.

‘ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಇಲ್ಲಿಂದ ರಾಜ್ಯಸಭಾ ಸದಸ್ಯರಾಗಿರುವ ಅವರು, ಕರ್ನಾಟಕದ ಋಣ ತೀರಿಸಿಬಾರದಾ? ನಾವು ಮನವಿ ಸಲ್ಲಿಸಿ ಹಲವು ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದೆವು. ಅದ್ಯಾವುದಕ್ಕೂ ಅನುದಾನವನ್ನೇ ಕೊಟ್ಟಿಲ್ಲ. ಕರ್ನಾಟಕದ ಹೆಸರನ್ನೇ ಪ್ರಸ್ತಾಪಿಸಿಲ್ಲ. ಇದು ಅನ್ಯಾಯವಲ್ಲದೇ ಮತ್ತೇನು?’ ಎಂದು ಕೇಳಿದರು.

ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ:

‘ಕುಮಾರಸ್ವಾಮಿ ಮಂಡ್ಯದಿಂದ ಆಯ್ಕೆಯಾಗಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಕಾರ್ಖಾನೆ ತಂದಿದ್ದಾರಾ, ಕೈಗಾರಿಕಾ ಕಾರಿಡಾರನ್ನಾದರೂ ಕೊಟ್ಟಿದ್ದಾರಾ’ ಎಂದು ಪ್ರಶ್ನಿಸಿದರು.

‘15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ದೇಶದ ಯಾವ ರಾಜ್ಯಕ್ಕೂ ಆಗಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ 2ನೇ ರಾಜ್ಯ ನಮ್ಮದು. ಆದರೂ ಅನ್ಯಾಯಾಗುತ್ತಿದೆ. ಆಂಧ್ರ, ಬಿಹಾರಕ್ಕೆ ಕೊಟ್ಟಿರುವುದೆಷ್ಟು, ನಮಗೆ ಕೊಟ್ಟಿರುವುದೆಷ್ಟು ಎಂಬುದನ್ನು ಸಚಿವರು ಹೇಳಲಿ’ ಎಂದು ಸವಾಲು ಹಾಕಿದರು. ‘ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆಯೇ?’ ಎಂದು ಆಕ್ರೋಶದಿಂದ ಕೇಳಿದರು.

‘ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ಹಗರಣವನ್ನಾದರೂ ಸಿಬಿಐಗೆ ಕೊಟ್ಟಿದ್ದರೆ ತೋರಿಸಲಿ’ ಎಂದು ಸವಾಲೆಸೆದ ಮುಖ್ಯಮಂತ್ರಿ, ‘ಈಗ ಸಿಬಿಐಗೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಪ್ಪೇ ಮಾಡಿಲ್ಲದಿರುವಾಗ ಬೇಸರವೇಕೆ?:

‘ಮುಡಾ ನಿವೇಶನ ಪಡೆದ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. ಆದರೂ ಜನರ ಮನಸ್ಸಿನಲ್ಲಿ ಅನುಮಾನ ಉಳಿಯದಿರಲೆಂದು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗದಿಂದ ತನಿಖೆ ಮಾಡಿಸುತ್ತಿದ್ದೇನೆ. ತಪ್ಪೇ ಮಾಡದಿರುವುದರಿಂದ ನನಗೇಕೆ ಬೇಸರವಾಗುತ್ತದೆ? ಬಿಜೆಪಿಯವರು ಬ್ಲಾಕ್‌ಮೇಲ್ ಮಾಡುವುದರಲ್ಲಿ, ಸುಳ್ಳು ಹೇಳುವುದರಲ್ಲಿ ಹಾಗೂ ಸುಳ್ಳನ್ನು ಸತ್ಯ ಮಾಡುವುದರಲ್ಲಿ ನಿಸ್ಸೀಮರು’ ಎಂದು ವಾಗ್ದಾಳಿ ನಡೆಸಿದರು.

‘ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನು ಸೃಷ್ಟಿಸುತ್ತಿದೆ. ಆ ಪಕ್ಷದವರಿಗೆ ಯಾವ ಸಿದ್ಧಾಂತವೂ ಇಲ್ಲ’ ಎಂದು ಟೀಕಿಸಿದರು.

‘ಕೇಂದ್ರ ಸಚಿವರಾದವರು ನ್ಯಾಯಾಂಗ ತನಿಖೆಯನ್ನು ಅನುಮಾನದಿಂದ ನೋಡಿದರೆ ಹೇಗೆ?’ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

‘ಬಿಜೆಪಿ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ. ಒಂದು ಪ್ರಕರಣದಲ್ಲಾದರೂ ನ್ಯಾಯಾಂಗ ತನಿಖೆ ಮಾಡಿಸಿದ್ರಾ. ಕೋವಿಡ್ ಸಮಯದಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ನುಂಗಿದರು. ಅದನ್ನು ತನಿಖೆ ಮಾಡಿಸಿದರಾ’ ಎಂದು ಕೇಳಿದರು.

ಪಾದಯಾತ್ರೆ ಮಾಡಲಿ, ಎದುರಿಸುವುದು ಗೊತ್ತಿದೆ:

‘ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ, ಅದನ್ನು ರಾಜಕೀಯವಾಗಿ ಹೆದರಿಸಲು ನಾವೂ ಸಿದ್ಧವಿದ್ದೇವೆ’ ಎಂದು ಹೇಳಿದರು.

‘ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಎಷ್ಟು ನಿವೇಶನ ಹೋಗಿದೆ ಗೊತ್ತಾ? ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ನಿವೇಶನ ಬರೆಸಿಕೊಂಡಿದ್ದಾರೆ ಎಂಬುದರ ಪಟ್ಟಿ ಕೊಡಲೇ? ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾದಿಂದ ನಿವೇಶನ ಪಡೆದಿದ್ದಾರೆ. ಅದರ ಸ್ವಾಧೀನ ಪತ್ರವನ್ನೂ ತೆಗೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೆ ಹೇಗೆ‌? ಸ್ವಾಧೀನ ಪತ್ರ ಪಡೆದಿಲ್ಲ ಎಂದು ಅವರು ಹೇಳುತ್ತಿರುವುದು ಸುಳ್ಳು’ ಎಂದರು.

‘ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳುವುದಿಲ್ಲ. ಆದರೆ, ಪ್ರಮಾಣ ಕಡಿಮೆಯಾಗುತ್ತಿದೆ.

ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಎಷ್ಟಿತ್ತು ಎಂಬುದನ್ನು ಇಡೀ ದೇಶವೇ ನೋಡಿದೆ. ಈಗ ಕರ್ನಾಟಕವನ್ನು ಭ್ರಷ್ಟಾಚಾರದ ರಾಜ್ಯ ಎಂದು ಬಿಂಬಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಕರ್ನಾಟಕಕ್ಕೆ ಭ್ರಷ್ಟಚಾರದ ಹಣೆಪಟ್ಟಿ ಕಟ್ಟುವ ಯತ್ನ ಸಂಸತ್‌ನಲ್ಲಿ ನಡೆಯುತ್ತಿದೆ. ಬಿಜೆಪಿಯವರಿಗೆ ಮಾನ– ಮರ್ಯಾದೆ ಇದೆಯಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಎನ್. ಚಲುವರಾಯಸ್ವಾಮಿ, ಶಾಸಕರಾದ ಕೆ.ಹರೀಶ್‌ಗೌಡ, ಡಿ. ರವಿಶಂಕರ್, ರವಿಕುಮಾರ್‌ ಗಣಿಗ, ಮುಡಾ ಅಧ್ಯಕ್ಷ ಕೆ.ಮರೀಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT