ಮೈಸೂರು: ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಇಲ್ಲಿನ ಲೋಕಾಯುಕ್ತ ಎಸ್.ಪಿ. ಕಚೇರಿಗೆ ಧಾವಿಸಿದ್ದು, ಎಸ್.ಪಿ. ಟಿ.ಜೆ. ಉದೇಶ್ ಅವರಿಗಾಗಿ ಸುಮಾರು ಎರಡು ಗಂಟೆ ಕಾಲ ಕಾದಿದ್ದಾರೆ.
ಸಿದ್ದರಾಮಯ್ಯ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಆದೇಶದ ಆನ್‌ಲೈನ್ ಪ್ರತಿಯೊಂದಿಗೆ ಮಧ್ಯಾಹ್ನ 12.30ರ ಸುಮಾರಿಗೆ ಅವರು ಲೋಕಾಯುಕ್ತ ಕಚೇರಿಗೆ ಧಾವಿಸಿದರು. ಆದರೆ ಆ ಸಂದರ್ಭ ಎಸ್.ಪಿ. ಉದೇಶ್ ಕಚೇರಿಯಲ್ಲಿ ಇರಲಿಲ್ಲ.
'ಉದೇಶ್ ಅವರು ಎಲ್ಲಿ ಹೋಗಿದ್ದಾರೆ ಎಂದು ಇಲ್ಲಿನ ಕಚೇರಿ ಸಿಬ್ಬಂದಿಗೆ ಮಾಹಿತಿ ಇಲ್ಲ. ಮೊಬೈಲ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಇದೆನ್ನೆಲ್ಲ ಗಮನಿಸಿದರೆ ಸಿದ್ದರಾಮಯ್ಯ ಕಡೆಯವರೇ ಅಪಹರಣ ಮಾಡಿರುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆ ಒಳಗೆ ಬರದೇ ಇದ್ದರೆ ದೇವರಾಜ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸುತ್ತೇನೆ' ಎಂದು ಸ್ನೇಹಮಯಿ ಕೃಷ್ಣ ಮಾಧ್ಯಮದವರಿಗೆ ತಿಳಿಸಿದರು.