ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಪ್ರಕರಣ: ಶಿವಮೂರ್ತಿ ಶರಣರ ಬಿಡುಗಡೆ

Published 16 ನವೆಂಬರ್ 2023, 7:52 IST
Last Updated 16 ನವೆಂಬರ್ 2023, 7:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ 14 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಗುರುವಾರ ಮಧ್ಯಾಹ್ನ 12.40ಕ್ಕೆ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಕಾರಾಗೃಹದಿಂದ ಹೊರಬಂದ ಶರಣರು ಭಕ್ತರ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರಿಂದ ದಾವಣಗೆರೆಯತ್ತ ತೆರಳಿದರು ಎನ್ನಲಾಗಿದೆ.

ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ಶಿವಮೂರ್ತಿ ಶರಣರಿಗೆ ಹೈಕೋರ್ಟ್ ನ.8ರಂದು ಜಾಮೀನು ನೀಡಿತ್ತು. ಜಾಮೀನು ಆದೇಶದ ಮೇರೆಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಬಿಡುಗಡೆ ಆದೇಶ ಹೊರಡಿಸಿತ್ತು. ಈ ಆದೇಶ ಕಾರಗೃಹ ತಲುಪುವುದು ವಿಳಂಬವಾಗಿದ್ದರಿಂದ ಬುಧವಾರ ಬಿಡುಗಡೆ ಆಗಿರಲಿಲ್ಲ.

ಎರಡನೇ ಪೋಕ್ಸೊ ಪ್ರಕರಣದಲ್ಲಿ ಶರಣರ ವಿರುದ್ಧ ಹೊರಡಿಸಿದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನದ ಆದೇಶವಾಗಿ ಪರಿವರ್ತಿಸುವಂತೆ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲರು ಮಾಡಿದ ಮನವಿಯ ವಿಚಾರಣೆಯನ್ನು ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಗುರುವಾರ ಬೆಳಿಗ್ಗೆ ಕೈಗೆತ್ತಿಕೊಂಡರು. ವಿಡಿಯೊ ಕಾನ್ಫರೆನ್ಸ್ ಮೂಲಕ ಶರಣರು ಜೈಲಿನಿಂದಲೇ ವಿಚಾರಣೆಗೆ ಹಾಜರಾಗಿದ್ದರು.

ಈ ವೇಳೆ ಕಾರಾಗೃಹದ ಅಧೀಕ್ಷಕಿ ಎಂ.ಎಂ.ಮರಕಟ್ಟಿ ಅವರು ನ್ಯಾಯಾಧೀಶರ ಎದುರು ಹಾಜರಾಗಿ, ಶರಣರ ಬಿಡುಗಡೆಗೆ ಇರುವ ಕಾನೂನು ತೊಡಕಿನ ಬಗ್ಗೆ ಅಭಿಪ್ರಾಯ ಕೇಳಿದರು. ಲಿಖಿತವಾಗಿ ಸಂವಹನ ನಡೆಸುವಂತೆ ಹೇಳಿದ ನ್ಯಾಯಾಧೀಶರು, ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಆ ಬಳಿಕ ಶರಣರ ಬಿಡುಗಡೆ ಪ್ರಕ್ರಿಯೆ ಕಾರಾಗೃಹದಲ್ಲಿ ನಡೆಯಿತು.

ಇಬ್ಬರು ವಿದ್ಯಾರ್ಥಿನಿರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಶಿವಮೂರ್ತಿ ಶರಣರ ವಿರುದ್ಧ 2022 ರ ಆ.26 ರಂದು ಮೈಸೂರಿನ ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ.27ರಂದು ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿತ್ತು.‌ ಸೆ.1ರಂದು ಶರಣರನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT