ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ಥಾನ ಇಬ್ಭಾಗ, ಎಲ್ಲೆಲ್ಲೂ ಅರಾಜಕತೆ, ಕ್ರೌರ್ಯ

Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಪ್ರತೀ ಬಾನುವಾರ ನಾನು ರೆಜಿಮೆಂಟ್‌ನ ಗುರುದ್ವಾರಕ್ಕೆ ಹೋಗುತ್ತಿದ್ದೆ. ಏನಾದರೂ ಧಾರ್ಮಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿದ್ದುವು. ಗುರು ನಾನಕ್ ಅವರ ಸಂದೇಶಗಳು, ಗುರುಗೋಬಿಂದ್ ಸಿಂಗ್ ಅವರ ಯುದ್ಧ ಸಾಹಸಗಳು, ಅವರ ಧರ್ಮದ ಬಗ್ಗೆಗಿನ ತಿಳುವಳಿಕೆಗಳು –ಇತ್ಯಾದಿಗಳನ್ನೆಲ್ಲಾ ಕೇಳುತ್ತಾ ಅವರ ಬಗ್ಗೆ ಅಭಿಮಾನ ಬೆಳೆಸಿಕೊಂಡೆ. ಅವರ ಬೈಸಾಕಿ, ಸಂಕ್ರಾಂತಿ, ಲೋರಿಯಂತಹ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ಭಾಂಗ್ರಾ ನೃತ್ಯ, ಸಿಖ್‍ರ ಬಾರಾ ಖಾನಾ ಮತ್ತು ಅವರ ಆಹಾರ ಶೈಲಿಗಳನ್ನೆಲ್ಲಾ ನಾನೂ ರೂಢಿಸಿಕೊಂಡಿದ್ದೆ. ಈ ಮೂಲಕ ಅವರ ಎಲ್ಲಾ ಜೀವನಶೈಲಿಗೆ ನಾನು ಒಗ್ಗಿಕೊಂಡಿದ್ದೆ. ನನ್ನ ಹೆಸರಿಗೂ ಅವರು ಸಿಂಗ್‌ ಸಾಬ್‌ ಎಂಬ ವಿಶೇಷಣ ಜೋಡಿಸಿದ್ದರು.

1971- ಭಾರತದ ಇತಿಹಾಸ ಎಂದೂ ಮರೆಯಲಾರದ ವರ್ಷ-ಸೈನಿಕನಾಗಿ ನನಗೀಗಲೂ ಮೈ ರೋಮಾಂಚನಗೊಳಿಸುವ ವರ್ಷ!

ಅದು ಶೇಖ್ ಮುಝೀಬರ್ ರಹಮಾನ್ ಪಾಕಿಸ್ಥಾನದಲ್ಲಿ ಬಹುಮತ ಪಡೆದ ವರ್ಷ. ಅಂದಿನ ಪಶ್ಚಿಮ ಪಾಕಿಸ್ಥಾನ ಇವರನ್ನು ಪ್ರಧಾನಿಯನ್ನಾಗಿ ಸ್ವೀಕರಿಸಿದರೆ, ಪೂರ್ವ ಪಾಕಿಸ್ಥಾನ ಕಟುವಾಗಿ ವಿರೋಧಿಸಿತು. ಪರಿಣಾಮವಾಗಿ ಪಾಕಿಸ್ಥಾನ ಇಬ್ಭಾಗವಾಯಿತು. ಎಲ್ಲೆಲ್ಲೂ ಅರಾಜಕತೆ, ಕ್ರೌರ್ಯ ಆರಂಭವಾಯಿತು. ಗಲಭೆ, ಕೊಲೆ, ಸುಲಿಗೆಗಳು ನಿತ್ಯದ ಮಾತಾದುವು. ಆಗ ಪಶ್ಚಿಮ ಪಾಕಿಸ್ಥಾನ ಮುಝೀಬರ್‍ನನ್ನು ಜೈಲಿಗೆ ಕಳಿಸಿತು. ಆಗ ಉಂಟಾದ ಅರಾಜಕತೆಯ ಕಾರಣದಿಂದ ಸಾವಿರಾರು ಜನ ಪಾಕ್ ತೊರೆದು, ನಿರಾಶ್ರಿತರಾಗಿ ನಮ್ಮ ದೇಶದ ಪಶ್ಚಿಮ ಬಂಗಾಲ, ಅಸ್ಸಾಂ ಮತ್ತು ಉತ್ತರ ಪೂರ್ವ ರಾಜ್ಯಗಳನ್ನು ಪ್ರವೇಶಿಸಿದರು. ಇದರ ಪರಿಣಾಮ ಭಾರತದ ಮೇಲೆ ಭೀಕರವಾಗುತ್ತಲೇ ಹೋಯಿತು. ನಮ್ಮ ಸುರಕ್ಷತೆ ನಮಗೆ ಮುಖ್ಯವಾಗಿತ್ತು. ನಮಗೆಲ್ಲರಿಗೂ ನಮ್ಮ ನಮ್ಮ ಸ್ಥಳಗಳಿಗೆ ತೆರಳಿ, ಯುದ್ಧ ಸನ್ನದ್ಧರಾಗುವಂತೆ ಆಜ್ಞೆ ಬಂತು. ನಮ್ಮ ದೇಶದ ಸ್ಥಳಗಳನ್ನು ಪಾಕಿಗಳು ಆಕ್ರಮಿಸುತ್ತಿರುವಾಗ, ಅದನ್ನು ಉಳಿಸಿಕೊಳ್ಳಲು ನಮ್ಮ ಸೈನ್ಯದೊಳಗೆ ವ್ಯೂಹ ರಚನೆಯನ್ನು ಮಾಡಲಾಯಿತು. ಅಮೃತ್‍ಸರ ಮತ್ತು ಲಾಹೋರ್ ನಡುವಿನ ನಮ್ಮ ಭೂಭಾಗದ ರಕ್ಷಣೆಯ ಹೊಣೆಯನ್ನು ನಮಗೆ ವಹಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಕಮಾಂಡಿಂಗ್ ಆಫೀಸರ್‌ಗೆ, ತನಗೊಬ್ಬ ಅತ್ಯಂತ ಅನುಭವಿ, ಮೇಧಾವಿ ಮತ್ತು ಅಗತ್ಯ ಸಂದರ್ಭದ ಯಾವುದೇ ತೀರ್ಮಾನಗಳನ್ನು ನಿಭಾಯಿಸ ಬಲ್ಲ, ಭೂಭಾಗದ ನಕ್ಷೆಯನ್ನು ಸಮರ್ಥವಾಗಿ ಅರ್ಥೈಸಿಕೊಳ್ಳಬಲ್ಲ ಆಫೀಸರ್ ಬೇಕಾಗಿತ್ತು. ಹಾಗೆ ಅವರ ವಿಶ್ವಾಸಕ್ಕೆ ಪಾತ್ರನಾಗಿ ಆಯ್ಕೆಯಾದದ್ದು ನಾನು!.

ನಮ್ಮ ಬೆಟಾಲಿಯನ್ ನ್ನು ಡಿವಿಶನಲ್ ರಿಸರ್ವ್‌ಡ್ ಬೆಟಾಲಿಯನ್ ಎಂದು ಕರೆಯುತ್ತಿದ್ದರು. ಇದರರ್ಥ ನಮಗೆ ಕೆಲ ವಿಶೇಷ ಕರ್ತವ್ಯಗಳಿದ್ದುವು. ಆ ಭೂಪ್ರದೇಶದ ಪ್ರತೀ ಪ್ರದೇಶದ ಬಗ್ಗೆ ತಿಳಿದುಕೊಂಡು ಪರಿಸ್ಥಿತಿಗನುಗುಣವಾಗಿ ನಾವು ಸಿದ್ಧರಾಗಿರಬೇಕಾಗಿತ್ತು. ಎಲ್ಲಾ ರೀತಿಯ ಯುದ್ಧ ತಂತ್ರಗಳಲ್ಲಿ ನಾವೇ ಮುಂಚೂಣಿಯಲ್ಲಿರಬೇಕಾಗಿತ್ತು. ನಮ್ಮ ಭೂ ಪ್ರದೇಶವನ್ನು ಅತಿಕ್ರಮಿಸಿಕೊಂಡ ಶತ್ರು ಸೈನಿಕರನ್ನು ಯಾವುದೆ ಸಂದರ್ಭದಲ್ಲೂ ಹೊಡೆದುರುಳಿಸಲು ಆಜ್ಞೆ ನೀಡುವ ಅಧಿಕಾರ, ವಿವೇಚನೆ ನಮ್ಮದಾಗಿತ್ತು. ಅಕ್ರಮಣವಾದ ಭೂ ಭಾಗವನ್ನು ಮರಳಿ ವಶಪಡಿಸಿಕೊಳ್ಳಬೇಕಾಗಿತ್ತು. ಇದರಲ್ಲೂ 15ನೇ ಇನ್‌ಫೆಂಟ್ರಿ ಡಿವಿಶನ್‌ ವಿಭಾಗದ ಜವಾಬ್ದಾರಿ ಎಂದರೆ ಉತ್ತರ ಪಂಜಾಬ್‍ನಲ್ಲಿನ ಅಂತರರಾಷ್ಟ್ರೀಯ ಗಡಿ ನಿರ್ವಹಣೆಯ ಜವಾಬ್ದಾರಿ ಇತ್ತು. ಹೀಗೆ ಇಂಟೆಲಿಜೆನ್ಸ್ ಆಫೀಸರ್ ಆಗಿ ನಾನು ಯುದ್ಧ ನೀತಿ, ರಣತಂತ್ರ ಇತ್ಯಾದಿಗಳಲ್ಲಿ ಪರಿಣತಿಯನ್ನು ಗಳಿಸುತ್ತಾ ಹೋದೆ. ಯುದ್ಧ ರಂಗದಲ್ಲಿ, ಸೈನ್ಯದಲ್ಲಿ ಕಾಲ ಕಾಲಕ್ಕೆ ಬೇಕಾದ ತಿಳಿವಳಿಕೆ, ಅನುಭವ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲಾ ಹಂತದಲ್ಲೂ ನನ್ನೊಳಗಿನ ನಾಯಕತ್ವ ಗುಣ, ಸವಾಲುಗಳನ್ನೆದುರಿಸುತ್ತಾ, ಯಶಸ್ವಿಯಾಗುತ್ತಾ ಸಾಗಿದ್ದೇನೆ. ಅದೆಲ್ಲಾ ನನ್ನ ಅದೃಷ್ಟವೆಂದೇ ಪರಿಗಣಿಸಿದ್ದೇನೆ.

ಈ ಎಲ್ಲಾ ಪರಿಣತಿಗಳನ್ನೂ ಒರೆಗೆ ಒಡ್ಡುವಂತೆ ಕೊನೆಗೂ ಯುದ್ಧ ಘೋಷಣೆಯಾಯ್ತು. ಓರ್ವ ಸೈನಿಕನಾಗಿ ಇದುವರೆಗೆ ನಾನು ರೂಪುಗೊಂಡ ಬಗೆ, ತರಬೇತಿಗಳನ್ನು ಪಡೆಯುತ್ತಾ ನೀಡುತ್ತಾ ಕಲಿತ ಬಗೆ ಹೇಳಿದೆನಾದರೆ ಯುದ್ಧಕ್ಷಣಗಳನ್ನು ಹೇಳುವಾಗೆಲ್ಲಾ ತೀರಾ ಭಾವುಕನೂ ಆಗುತ್ತೇನೆ-ಆಗಾಗ ಶತ್ರುಗಳ ಮೇಲಿನ ಕ್ರೋಧವೂ ಮಡುಗಟ್ಟುತ್ತದೆ.

ಮುಂದಿನ ವಾರ :ಪ್ರಜಾಪ್ರಭುತ್ವ ದೇಶದಲ್ಲಿ ಯುದ್ಧಸಿದ್ಧತೆಯೇ ಸವಾಲು

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT