ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Sunil Chhetri ವಿದಾಯ; ವಿರಾಟ್ ಸೇರಿದಂತೆ ಚೆಟ್ರಿ ಸಾಧನೆ ಕೊಂಡಾಡಿದ ಕ್ರೀಡಾ ಲೋಕ

Published 16 ಮೇ 2024, 10:42 IST
Last Updated 16 ಮೇ 2024, 10:42 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಸಾಧನೆಯನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ಲೋಕದ ಪ್ರಮುಖರು ಕೊಂಡಾಡಿದ್ದಾರೆ.

ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಜೂನ್ 6ರಂದು ಕೋಲ್ಕತ್ತದಲ್ಲಿ ಚೆಟ್ರಿ ಕೊನೆಯ ಪಂದ್ಯವನ್ನು ಆಡಲಿದ್ದಾರೆ.

ಇಂದು (ಗುರುವಾರ) ಅಭಿಮಾನಿಗಳೊಂದಿಗೆ ವಿಡಿಯೊ ಸಂದೇಶ ಹಂಚಿಕೊಂಡಿರುವ ಭಾರತೀಯ ಫುಟ್‌ಬಾಲ್ ತಂಡದ ಅತ್ಯಂತ ದೀರ್ಘಾವಧಿಯ ನಾಯಕ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, 'ನನ್ನ ಗೆಳೆಯ, ಹೆಮ್ಮೆಯಿದೆ' ಎಂದು ತಿಳಿಸಿದ್ದಾರೆ.

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ ಹಾಗೂ ಮಾಜಿ ಫುಟ್‌ಬಾಲ್ ತಾರೆ ಬೈಚುಂಗ್ ಭುಟಿಯಾ ಸಹ ಚೆಟ್ರಿ ಅವರ ಸಾಧನೆಯನ್ನು ಮೆಲುಕು ಹಾಕಿದ್ದಾರೆ.

150 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 39 ವರ್ಷದ ಚೆಟ್ರಿ ಅವರನ್ನು 'ದಂತಕಥೆ' ಎಂದು ಯುವಿ ಬಣ್ಣಿಸಿದ್ದು, ಅವರ ಸಾಧನೆ ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಹೇಳಿದ್ದಾರೆ.

ಚೆಟ್ರಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂದು ಭುಟಿಯಾ ಗುಣಗಾನ ಮಾಡಿದ್ದಾರೆ. 'ನಾನು ಭಾರತ ತಂಡಕ್ಕೆ ಬಂದಾಗ ಐಎಂ ವಿಜಯನ್ ನನಗೆ ಸೀನಿಯರ್ ಆಗಿದ್ದರು. ಆ ಬಳಿಕ ಚೆಟ್ರಿ ಬಂದರು. ಭಾರತೀಯ ಫುಟ್‌ಬಾಲ್‌ನ ಇಬ್ಬರು ದಿಗ್ಗಜರ ನಡುವಿನ ಅವಧಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿರುವ ನಾನು ಅದೃಷ್ಟಶಾಲಿಯಾಗಿದ್ದೇನೆ' ಎಂದು ಹೇಳಿದ್ದಾರೆ.

2005ರಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಚೆಟ್ರಿ ಫುಟ್‌ಬಾಲ್‌ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ದಾಖಲೆಯ 94 ಗೋಲುಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT