ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ವಿರೋಧಿ ಹೋರಾಟದ ವೇಳೆ ಹಿಂಸಾಚಾರ: ಸಿಕಂದರಾಬಾದ್‌ನಲ್ಲಿ ಒಂದು ಸಾವು

ಅಕ್ಷರ ಗಾತ್ರ

ಸಿಕಂದರಾಬಾದ್‌: ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯು ದೇಶದ ಪ್ರಮುಖ ರೈಲು ಜಂಕ್ಷನ್‌ಗಳಲ್ಲಿ ಒಂದಾದ ಸಿಕಂದರಾಬಾದ್ ರೈಲು ನಿಲ್ದಾಣಕ್ಕೂ ವ್ಯಾಪಿಸಿದೆ.

ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ನೇಮಕಾತಿ ಯೋಜನೆ ವಿರುದ್ಧ ದೇಶದಾದ್ಯಂತ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದು, ಹಲವು ಕಡೆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಸಿಕಂದರಾಬಾದ್‌ನಲ್ಲಿಯೂ ಶುಕ್ರವಾರ ಇದೇ ಗಲಾಟೆ ಮುಂದುವರಿಯಿತು. ಉದ್ರಿಕ್ತ ಗುಂಪು ರೈಲ್ವೆ ಜಂಕ್ಷನ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಮೂಲಕ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಆದರೆ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಗುಂಡು ಹಾರಿಸಬೇಕಾಯಿತು.

ಗಾಯಗೊಂಡ ಯುವಕರನ್ನು ಹತ್ತಿರದ ಸರ್ಕಾರಿ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರತಿಭಟನಾಕಾರರು ಅಜಂತಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಇಟ್ಟರು. ಅದರಲ್ಲಿದ್ದ ಕೆಲವು ಬೈಕ್‌ಗಳು ಸೇರಿದಂತೆ ಪಾರ್ಸೆಲ್ ವಸ್ತುಗಳು ಬೆಂಕಿಗೆ ಆಹುತಿಯಾದವು. ಕೆಲವು ಎಸಿ ಕೋಚ್‌ಗಳ ಗಾಜಿನ ಕಿಟಕಿಗಳನ್ನು ಕೂಡ ಒಡೆದು ಹಾಕಲಾಯಿತು. ಒಳಗೆ ಕುಳಿತಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಓಡಿದರು.

‘ಇಲ್ಲಿ ದಾಂಧಲೆ ನಡೆದಿರಬಹುದು. ಆದರೆ, ನಮ್ಮ ನೋವನ್ನು ಯಾರು ಕೇಳುತ್ತಾರೆ? ಕೋವಿಡ್-19 ನಂತಹ ಕಾರಣಗಳಿಂದ ಹಲವಾರು ಬಾರಿ ರದ್ದುಗೊಂಡ ನೇಮಕಾತಿಗಾಗಿ ನಾವು ಸುಮಾರು ಎರಡು ವರ್ಷಗಳಿಂದ ಕಾಯುತ್ತಿದ್ದೇವೆ. ಈಗ ಏಕಾಏಕಿ ಹೊಸ ಯೋಜನೆ ಘೋಷಿಸಲಾಗಿದೆ. ವಯಸ್ಸು ಇತ್ಯಾದಿ ಅಂಶಗಳ ಕಾರಣದಿಂದ ನಾವು ನೇಮಕಾತಿಗೆ ಅನರ್ಹರಾಗಲಿದ್ದೇವೆ’ ಎಂದು ಸೇನಾ ಉದ್ಯೋಗಾಂಕ್ಷಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.


ಕೇಂದ್ರದ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮೊದಲು ರೈಲುಗಳನ್ನು ತಡೆದರು. ‘ಜಸ್ಟೀಸ್ ಫಾರ್ ಆರ್ಮಿ ಆಸ್ಪಿರೆಂಟ್ಸ್‌’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಲಾಯಿತು. ನಂತರ ಬೋಗಿಗಳಿಗೆ ಬೆಂಕಿ ಹಚ್ಚಲಾಯಿತು.

‘ನಮ್ಮ ಸಮಸ್ಯೆಗಳನ್ನು ತಿಳಿಸಲು ನಾವು ಇಲ್ಲಿಗೆ ಬಂದಿದ್ದೆವು. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ’ ಎಂದು ಇನ್ನೊಬ್ಬ ಉದ್ಯೋಗಾಕಾಂಕ್ಷಿ ಹೇಳಿದರು.

ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ, ಗಾಬರಿಗೊಂಡ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದರು. 10 ಪ್ಲಾಟ್‌ಫಾರ್ಮ್‌ಗಳಿರುವ, ಸದಾ ಜನಸಂದಣಿಯಿಂದ ಗಿಜಿಗುಡುತ್ತಿದ್ದ ನಿಲ್ದಾಣವು ಕೆಲವೇ ನಿಮಿಷಗಳಲ್ಲಿ ನಿರ್ಜನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT