ಗುರುವಾರ , ಜೂನ್ 24, 2021
27 °C
ಉತ್ತರ ಪ್ರದೇಶ: ಪಂಚಾಯಿತಿ ಚುನಾವಣೆಯಿಂದ ವ್ಯಾಪಕವಾಗಿ ಹರಡಿದ ಸೋಂಕು?

ಚುನಾವಣೆ ಕೆಲಸದಲ್ಲಿ ತೊಡಗಿದ್ದ 135 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯಿತಿ ಚುನಾವಣೆಯಿಂದಲೇ ಕೋವಿಡ್‌ ವ್ಯಾಪಕವಾಗಿ ಹಬ್ಬಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಚುನಾವಣೆಗೆ ನಿಯೋಜಿಸಲಾಗಿದ್ದ ಶಿಕ್ಷಕರು ಸೇರಿದಂತೆ 135 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಜತೆಗೆ, ಹಲವರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂಚಾಯಿತಿ ಚುನಾವಣೆಗಳು ಮುಗಿದ ಬಳಿಕ ಜಿಲ್ಲೆಗಳಲ್ಲಿನ ಕೋವಿಡ್‌–19 ಸೋಂಕಿನ ಪ್ರಕರಣಗಳ ಸಂಖ್ಯೆಗಳನ್ನು ಪರಿಶೀಲಿಸಿದಾಗ ಈ ವಿಷಯ ಗೊತ್ತಾಗಿದೆ. ಹಲವು ಸ್ಥಳಗಳಲ್ಲಿ ಸೋಂಕು ದೃಢಪಟ್ಟಿರುವುದು ಗೊತ್ತಾಗಿದೆ.

ಏಪ್ರಿಲ್‌ 15ರಂದು ನಡೆದ ಮತದಾನಕ್ಕೆ ಮುನ್ನ, ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಪೈಕಿ 18 ಜಿಲ್ಲೆಗಳಲ್ಲಿ ಶೇಕಡ 21ರಷ್ಟು ದೃಢಪಟ್ಟಿದ್ದವು. ಮತದಾನ ಮುಗಿದ ಬಳಿಕ ಕೇವಲ ಮೂರು ದಿನಗಳಲ್ಲೇ ಇದು ಶೇಕಡ 29ಕ್ಕೆ ಏರಿಕೆಯಾಯಿತು.

ಇದೇ ರೀತಿ, ಏಪ್ರಿಲ್‌ 19ರಂದು ನಡೆದ ಮುತದಾನಕ್ಕೆ ಮುನ್ನ ಇತರ 19 ಜಿಲ್ಲೆಗಳಲ್ಲಿ ಶೇಕಡ 40ರಷ್ಟು ಪ್ರಕರಣಗಳು ದೃಢಪಟ್ಟಿದ್ದವು. ಮತದಾನದ ಬಳಿಕ ಶೇಕಡ 44ಕ್ಕೆ ಏರಿಕೆಯಾಯಿತು. ಮತದಾನದ ಸಂದರ್ಭದಲ್ಲಿ ಕೆಲವರು ಮಾತ್ರ ಮಾಸ್ಕ್‌ಗಳನ್ನು ಧರಿಸಿದ್ದರು ಮತ್ತು ಮತಗಟ್ಟೆ ಮುಂದೆ ಗುಂಪುಗೂಡಿ ನಿಂತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಿಜೆಪಿಯ ಹಲವು ಸಂಸದರು, ಶಾಸಕರು ಸೇರಿದಂತೆ ವಿರೋಧ ಪಕ್ಷಗಳು ಮತ್ತು ಹಲವು ಸಂಘಟನೆಗಳ ಪ್ರಮುಖರು ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದರು. ಆದರೆ, ಈ ಒತ್ತಾಯಕ್ಕೆ ಚುನಾವಣಾ ಆಯೋಗ ಮಣೆ ಹಾಕಲಿಲ್ಲ.

ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕೋವಿಡ್‌–19 ನಿಯಮಾವಳಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್‌ ಸಹ ಜಾರಿಗೊಳಿಸಿತ್ತು.

ಶುಕ್ರವಾರ ಉತ್ತರ ಪ್ರದೇಶದಲ್ಲಿ 34,626 ಪ್ರಕರಣಗಳು ದೃಢಪಟ್ಟಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು