ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ-ಉಬರ್‌ನ 2 ಲಕ್ಷ ಚಾಲಕರಿಂದ ಮುಷ್ಕರ: ದೆಹಲಿ ಪ್ರಯಾಣಿಕರಿಗೆ ಸಂಕಷ್ಟ

Last Updated 1 ಸೆಪ್ಟೆಂಬರ್ 2020, 5:22 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತ ಓಲಾ ಮತ್ತು ಉಬರ್‌ ಕಾರು ಚಲಾಯಿಸುವ ಸುಮಾರು 2 ಲಕ್ಷ ಚಾಲಕರು, ಸಾಲ ಮರುಪಾವತಿಗೆ ಇದ್ದ ತಾತ್ಕಾಲಿಕ ತಡೆ ಅವಧಿಯನ್ನು ವಿಸ್ತರಿಸುವಂತೆ ಮತ್ತು ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಓಲಾ-ಉಬರ್ ಚಾಲಕರ ಒಕ್ಕೂಟಗಳಲ್ಲಿ ಒಂದಾದ ದೆಹಲಿಯ ಸರ್ವೋದಯ ಚಾಲಕರ ಸಂಘದ ಅಧ್ಯಕ್ಷ ಕಮಲ್ ಜೀತ್ ಸಿಂಗ್ ಗಿಲ್ ಅವರು, ಚಾಲಕರ ಮನವಿಗಳಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

'ಲಾಕ್‌ಡೌನ್‌ನಿಂದ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಚಾಲಕರು ತಮ್ಮ ಸಾಲದ ಕಂತುಗಳನ್ನು (ಇಎಂಐ) ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾಲ ಮರುಪಾವತಿಗೆ ಇದ್ದ ತಾತ್ಕಾಲಿಕ ನಿಷೇಧವು ಇಂದು ಕೊನೆಗೊಂಡಿದೆ. ಬ್ಯಾಂಕುಗಳು ಈಗಾಗಲೇ ಒತ್ತಡ ಹೇರಲು ಆರಂಭಿಸಿವೆ. ಒಂದು ವೇಳೆ ಇಎಂಐ ಪಾವತಿಸದಿದ್ದರೆ ಬ್ಯಾಂಕುಗಳು ವಾಹನಗಳನ್ನು ಜಪ್ತಿ ಮಾಡಬಹುದು ಎಂಬ ಆತಂಕದಲ್ಲಿ ಚಾಲಕರಿದ್ದಾರೆ' ಎಂದು ಸೋಮವಾರ ಹೇಳಿದ್ದಾರೆ.

'ಸದ್ಯದ ಸ್ಥಿತಿಯಲ್ಲಿ ತಮ್ಮ ಕುಟುಂಬಗಳಿಗೆ ಆಹಾರ ಒದಗಿಸುವುದಕ್ಕೂ ಹೆಚ್ಚಿನ ಚಾಲಕರಿಗೆ ಕಷ್ಟವಾಗಿದೆ. ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ಅವರಿಗೆ ಬೇರೆ ಮಾರ್ಗಗಳಿಲ್ಲ. ಸರ್ಕಾರ ಸಹಾಯ ಮಾಡದಿದ್ದರೆ, ನಾವು ವಾಹನ ಕಳೆದುಕೊಳ್ಳುವ ಭಯ ಬಿಟ್ಟು ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವೇಗದ ಚಾಲನೆ ವಿರುದ್ಧ ಚಾಲಕರಿಗೆ ನೀಡಲಾಗಿರುವ ಇ-ಚಲನ್ ಗಳನ್ನು ಸಾರಿಗೆ ಇಲಾಖೆ ಹಿಂಪಡೆಯಬೇಕು ಹಾಗೂ ಕ್ಯಾಬ್ ಕಂಪೆನಿಗಳು ಚಾಲಕರಿಗೆ ಹೆಚ್ಚಿನ ಕಮಿಷನ್ ನೀಡಬೇಕು ಎಂಬ ಒತ್ತಾಯಗಳೂ ಕೇಳಿಬಂದಿವೆ.

ಈ ಬಗ್ಗೆ ಓಲಾ-ಉಬರ್‌ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಮೆಟ್ರೊದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾರ್ಯನಿರ್ವಹಿಸದ ಮತ್ತು ಬಸ್ಸುಗಳು ಕಡಿಮೆ ಪ್ರಮಾಣದಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕ್ಯಾಬ್ ಚಾಲಕರು ಮುಷ್ಕರ ನಡೆಸುತ್ತಿರುವುದು, ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರತಿಭಟನೆ ಯೋಜನೆಯ ಭಾಗವಾಗಿ ಕ್ಯಾಬ್ ಚಾಲಕರು ಮಂಡಿ ಹೌಸ್ ಬಳಿ ಇರುವ ಹಿಮಾಚಲ ಭವನ ಎದುರು ಇಂದು ಜಮಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT