ಶುಕ್ರವಾರ, ಏಪ್ರಿಲ್ 23, 2021
22 °C

ಉತ್ತರ ಪ್ರದೇಶ: ಅಧಿವೇಶನ ಆರಂಭಕ್ಕೆ 2 ದಿನ; ಸಚಿವಾಲಯದ 20 ಸಿಬ್ಬಂದಿಗೆ ಕೋವಿಡ್-19

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಲಖನೌ: ಅಧಿವೇಶನ ಪ್ರಾರಂಭವಾಗುವ ಮೂರು ದಿನಗಳ ಮೊದಲು ಉತ್ತರಪ್ರದೇಶದ ವಿಧಾನಸಭೆಯ ಇಪ್ಪತ್ತು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಸೋಮವಾರ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯ ಮೂರು ದಿನಗಳ ಮುಂಗಾರು ಅಧಿವೇಶನವು ಗುರುವಾರದಿಂದ ಪ್ರಾರಂಭವಾಗಲಿದ್ದು, ಮುಂದಿನ ಸೋಮವಾರ ಮುಕ್ತಾಯಗೊಳ್ಳಲಿದೆ. 

ಸಚಿವಾಲಯದ 600 ಸಿಬ್ಬಂದಿಗೆ ಸೋಮವಾರ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪೈಕಿ 20 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 580 ಜನರ ವರದಿಯು ನೆಗೆಟಿವ್ ಆಗಿದೆ. ಸೋಂಕು ತಗುಲಿರುವವರನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ದೀಕ್ಷಿತ್ ಪಿಟಿಐಗೆ ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ ಸಚಿವೆ ಕಮಲ್ ರಾಣಿ ವರುಣ್ ಮತ್ತು ಸಚಿವರಾದ ಚೇತನ್ ಚೌಹಾನ್ ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಸಚಿವಾಲಯದ 20 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಧಾನಸಭೆಯಲ್ಲಿ ಶಾಸಕರು ತಮ್ಮ ನಡುವಿನ ಆಸನವನ್ನು ಖಾಲಿ ಬಿಟ್ಟು ಕುಳಿತುಕೊಳ್ಳುತ್ತಾರೆ. ಶಾಸಕರು 'ಹೌದು' ಮತ್ತು 'ಇಲ್ಲ' ಲಾಬಿಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಲಾಬಿಯಲ್ಲಿ 30 ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಬಹುದಾಗಿದೆ ಎಂದು ದೀಕ್ಷಿತ್ ತಿಳಿಸಿದ್ದಾರೆ.

ಶಾಸಕರು ಕುಳಿತುಕೊಳ್ಳಲು ಈ ಬಾರಿ ಸಂದರ್ಶಕರ ಗ್ಯಾಲರಿಯನ್ನು ಸಹ ಕಾಯ್ದಿರಿಸಲಾಗಿದ್ದು, ಕ್ಯಾಂಟೀನ್ ತೆರೆಯಲಾಗುವುದಿಲ್ಲ. ಪ್ರತಿಪಕ್ಷಗಳು ಸದನದ ಬಾವಿಗೆ ಹೋಗುವುದಿಲ್ಲ ಮತ್ತು ಅವರು ಅಂತರ ಕಾಪಾಡಿಕೊಳ್ಳುವ ಮಾನದಂಡಗಳಿಗೆ ಬದ್ಧರಾಗಿರುತ್ತಾರೆ. 'ಈ ಬಗ್ಗೆ ಅವರು ನಮಗೆ ಭರವಸೆ ನೀಡಿದ್ದಾರೆ' ಎಂದು ಹೇಳಿದರು.

ಬುಧವಾರ ನಡೆಯಲಿರುವ ಸರ್ವಪಕ್ಷ ಸಭೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದು, ವ್ಯವಹಾರ ಸಲಹಾ ಸಮಿತಿ ಸಭೆಯೂ ನಡೆಯಲಿದೆ. 403 ಸದಸ್ಯರು ಸದನಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು ಮತ್ತು ಅವರು ಖಂಡಿತವಾಗಿಯೂ ಮುಖಗವಸು ಧರಿಸಿ ಬರುತ್ತಾರೆ. ಒಂದು ವೇಳೆ ಮಾಸ್ಕ್ ಧರಿಸಿರದಿದ್ದರೆ ನಾವೇ ಅವರಿಗೆ ನೀಡುತ್ತೇವೆ ಎಂದು ತಿಳಿಸಿದರು.

ಇದಲ್ಲದೆ ಅಧಿವೇಶನಕ್ಕೆ ಬರುವಾಗ ಶಾಸಕರು ತಮ್ಮ ಸಹಾಯಕರನ್ನು ಸದನಕ್ಕೆ ಕರೆತರದಂತೆ ಕೇಳಿಕೊಳ್ಳಲಾಗಿದೆ. ಮಾಜಿ ಶಾಸಕರು ಅಧಿವೇಶನ ನಡೆಯುವ ವೇಳೆ ವಿಧಾನ ಭವನಕ್ಕೆ ಬರಬಾರದು ಎಂದು ವಿನಂತಿಸಿದ್ದೇನೆ. ಕೇಂದ್ರವು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಶಾಸಕಾಂಗ ಕಟ್ಟಡದ ಹವಾನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ ಎಂದು ದೀಕ್ಷಿತ್ ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು