ಭಾನುವಾರ, ಮೇ 29, 2022
30 °C

'ಶೇ 30ರಷ್ಟು ಜನರಲ್ಲಿ ಲಸಿಕೆ ಪಡೆದ 6 ತಿಂಗಳ ಬಳಿಕ ರೋಗನಿರೋಧಕ ಶಕ್ತಿ ಇರಲ್ಲ'

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆಯು ಏರಿಕೆಯಾಗುತ್ತಿದೆ. ಆದರೆ, 'ಲಸಿಕೆ ತೆಗೆದುಕೊಂಡ ಮೂವರಲ್ಲಿ ಒಬ್ಬ ವ್ಯಕ್ತಿಯಲ್ಲಿ ಲಸಿಕೆ ಪಡೆದ ಆರು ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ' ಎಂದು ಬುಧವಾರ ಹೊಸ ಅಧ್ಯಯನವೊಂದು ಹೇಳಿದೆ.

'ಈ ವ್ಯಕ್ತಿಗಳು ಮುಖ್ಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ ಮತ್ತು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಕಾಯಿಲೆಗಳನ್ನು ಹೊಂದಿರುವವರಾಗಿರುತ್ತಾರೆ. ಈ ಜನರು ಎರಡು ಡೋಸ್ ಲಸಿಕೆ ಪಡೆದ ಆರು ತಿಂಗಳ ನಂತರ ಗಮನಾರ್ಹವಾಗಿ ಕಡಿಮೆ ಪ್ರತಿಕಾಯ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ. ಹೀಗಾಗಿ, SARS-CoV-2 ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ' ಎಂದು ಏಷ್ಯನ್ ಹೆಲ್ತ್‌ಕೇರ್ ಫೌಂಡೇಶನ್ ಜೊತೆಗೆ ಎಐಜಿ ಆಸ್ಪತ್ರೆ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.

ಆರು ತಿಂಗಳ ನಂತರ ಈ ದುರ್ಬಲ ಜನರಿಗೆ ಬೂಸ್ಟರ್‌ ಡೋಸ್ ನೀಡುವ ಅಗತ್ಯವನ್ನು ಈ ಅಧ್ಯಯನ ಒತ್ತಿಹೇಳುತ್ತದೆ.

'ದೇಶದಾದ್ಯಂತ ಕೋವಿಡ್ ಉಲ್ಬಣವನ್ನು ನಾವು ನೋಡುತ್ತಿದ್ದೇವೆ. ಅದೃಷ್ಟವಶಾತ್, ಲಸಿಕೆಯ ಪರಿಣಾಮ, ರೂಪಾಂತರದ ಸ್ವಾಭಾವಿಕ ಗುಣಲಕ್ಷಣಗಳು ಮತ್ತು ಜನರಲ್ಲಿರುವ ನೈಸರ್ಗಿಕ ರೋಗನಿರೋಧಕ ಶಕ್ತಿ ಸೇರಿದಂತೆ ಅನೇಕ ಅಂಶಗಳಿಂದಾಗಿ ರೋಗದ ತೀವ್ರತೆಯು ಸೌಮ್ಯವಾಗಿದೆ' ಎಂದು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ. ಡಿ ನಾಗೇಶ್ವರ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ದೀರ್ಘಾವಧಿಯಲ್ಲಿ ಪ್ರಸ್ತುತ ಲಸಿಕೆಗಳ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳುವ ಮತ್ತು ಆರಂಭಿಕ ಹಂತದಲ್ಲಿ ಯಾರಿಗೆಲ್ಲ ಬೂಸ್ಟರ್ ಡೋಸ್ ಅಗತ್ಯವಿದೆ ಎಂಬುದನ್ನು ತಿಳಿಯುವ ಗುರಿಯನ್ನು ಅಧ್ಯಯನ ಹೊಂದಿತ್ತು' ಎಂದು ಅವರು ಹೇಳಿದರು.

ಎರಡೂ ಡೋಸ್ ಲಸಿಕೆಯನ್ನು ಪಡೆದ 1,636 ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಗಿದೆ.

'ಅಧ್ಯಯನದಲ್ಲಿ ಭಾಗವಹಿಸಿದ್ದವರಲ್ಲಿ SARS-CoV-2 ಗೆ IgG ವಿರೋಧಿ S1 ಮತ್ತು IgG ವಿರೋಧಿ S2 ಪ್ರತಿಕಾಯಗಳನ್ನು ಸಂಶೋಧಕರು ಅಳೆದಿದ್ದಾರೆ. 100 AU/ml ನ ಪ್ರತಿಕಾಯ ಮಟ್ಟವು ವೈರಸ್ ವಿರುದ್ಧ ರಕ್ಷಣೆಗಾಗಿ ಕನಿಷ್ಠ ಮಟ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ 100 AU/ml ಗಿಂತ ಕಡಿಮೆ ಪ್ರತಿಕಾಯ ಮಟ್ಟವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ' ಎಂಬುದನ್ನು ಕಂಡುಕೊಳ್ಳಲಾಗಿದೆ.

'15 AU/ml ಗಿಂತ ಕಡಿಮೆ ಇರುವ ಪ್ರತಿಕಾಯಗಳ ಮಟ್ಟವನ್ನು ಪ್ರತಿಕಾಯ ಋಣಾತ್ಮಕ ಎಂದು ಪರಿಗಣಿಸಲಾಗುತ್ತದೆ, ಅಂದರೆ ಅವರು ವೈರಸ್ ವಿರುದ್ಧ ಯಾವುದೇ ರಕ್ಷಣಾತ್ಮಕ ಶಕ್ತಿಯನ್ನು ಹೊಂದಿರುವುದಿಲ್ಲ. ಒಟ್ಟಾರೆಯಾಗಿ, 6 ಪ್ರತಿಶತದಷ್ಟು ಜನರಲ್ಲಿ ಯಾವುದೇ ರೋಗನಿರೋಧಕ ರಕ್ಷಣೆಯು ಕಂಡುಬಂದಿಲ್ಲ' ಎಂದು ಡಾ. ರೆಡ್ಡಿ ತಿಳಿಸಿದ್ದಾರೆ.

ವಯಸ್ಸಾದಂತೆ ರೋಗನಿರೋಧಕ ಶಕ್ತಿ ಕ್ಷೀಣಿಸುವುದು ಕೂಡ ನೇರ ಅನುಪಾತದಲ್ಲಿರುತ್ತದೆ. ಅಂದರೆ, ವಯಸ್ಸಾದ ಜನರಿಗಿಂತ ಕಿರಿಯರು ನಿರಂತರವಾದ ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿದ್ದಾರೆ ಎಂಬುದನ್ನು ಫಲಿತಾಂಶಗಳು ಸ್ಪಷ್ಟವಾಗಿ ಸೂಚಿಸುತ್ತಿವೆ. ಸದ್ಯ ಬೂಸ್ಟರ್ ಡೋಸ್ ಪಡೆಯಲು ಎರಡನೇ ಲಸಿಕೆ ಡೋಸ್ ಪಡೆದು 9 ತಿಂಗಳು ಕಳೆದಿರಬೇಕು. ಹೀಗಾಗಿ ಜನಸಂಖ್ಯೆಯ ಶೇ 70ರಷ್ಟು ಜನರಿಗೆ ಇದು ಪ್ರಯೋಜನಕಾರಿಯಾಗಿದೆ. ಹೀಗಾಗಿ ಅವರು ಆರು ತಿಂಗಳಿಗಿಂತ ಹೆಚ್ಚಿನ ಕಾಲ ಪ್ರತಿಕಾಯ ಮಟ್ಟವನ್ನು ಉಳಿಸಿಕೊಳ್ಳಬಹುದು.

'ಆದಾಗ್ಯೂ, ನಮ್ಮ ದೇಶದಲ್ಲಿ ಶೇ 30 ರಷ್ಟು ಜನ ವಿಶೇಷವಾಗಿ ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿಗಳಂತಹ ರೋಗಗಳನ್ನು ಹೊಂದಿರುವವರು ಸಂಪೂರ್ಣ ಲಸಿಕೆ ಪಡೆದ ಆರು ತಿಂಗಳ ನಂತರ ಸೋಂಕಿಗೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ. ಇಂತಹವರನ್ನು ಮುಖ್ಯವಾಗಿ ಬೂಸ್ಟರ್ ಡೋಸ್‌ಗೆ ಪರಿಗಣಿಸಬೇಕು' ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು