ಠಾಣೆ: ‘ಪೂರ್ವಜರು, ಸಂಸ್ಕೃತಿ, ಸಂಪ್ರದಾಯ ಮತ್ತು ನೆಲದ ಮೂಲವನ್ನು ಪರಿಗಣಿಸಿದರೆ ಭಾರತದಲ್ಲಿರುವ ಶೇ 99ರಷ್ಟು ಮುಸಲ್ಮಾನರು ‘ಹಿಂದೂಸ್ತಾನಿ’ಗಳೇ ಆಗಿದ್ದಾರೆ’ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪೂರ್ವಜನರನ್ನು ಪರಿಗಣಿಸಿದರೆ ಎಲ್ಲ ಭಾರತೀಯರ ಡಿಎನ್‌ಎ ಒಂದೇ ಆಗಿದೆ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರ ಅಭಿಪ್ರಾಯವನ್ನು ಅವರು ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು.
ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಇಲ್ಲಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
ದೇಶಕ್ಕಾಗಿ ಸಲ್ಲಿಸುವ ಕರ್ತವ್ಯವೇ ಪರಮೋಚ್ಛ ಎಂದು ನಾವು ಪರಿಗಣಿಸುತ್ತೇವೆ. ಉಳಿದಂತೆ ಎಲ್ಲವೂ ಪವಿತ್ರ ಗ್ರಂಥ ಕುರ್‌ಆನ್‌ನ ನಿರ್ದೇಶನದಂತೆ ನಡೆಯಲಿದೆ ಎಂದು ಇದ್ರೇಶ್ ಕುಮಾರ್ ಅವರು ಹೇಳಿರುವುದಾಗಿ ಎಂಆರ್‌ಎಂ ಹೇಳಿಕೆ ಬಿಡುಗಡೆ ಮಾಡಿದೆ.
‘ಇಂದ್ರೇಶ್ ಕುಮಾರ್ ಅವರು ಸಮಾನ ಡಿಎನ್ಎ ಕುರಿತ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ಇದರಲ್ಲಿ ‘ಡಿ’ ಎಂಬುದು ಕನಸು (ಡ್ರೀಮ್ಸ್), ‘ಎನ್’ –ರಾಷ್ಟ್ರ (ನೇಷನ್) ‘ಎ‘ –ಪೂರ್ವಜರನ್ನು (ಆನ್‌ಸೆಸ್ಟರ್ಸ್) ಬಿಂಬಿಸಲಿದೆ ಎಂದರು’ ಎಂದು ಹೇಳಿಕೆ ತಿಳಿಸಿದೆ.
‘ನಮ್ಮ ಪೂರ್ವಜರು ಸಮಾನರೇ ಆಗಿದ್ದಾರೆ. ಮೂಲವೂ ಒಂದೇ ರಾಷ್ಟ್ರವಾಗಿದೆ. ಹೀಗಾಗಿ, ನಮ್ಮ ಡಿಎನ್‌ಎ ಕೂಡಾ ಒಂದೇ ಆಗಿದೆ’ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಆಗಿರುವ ಇಂದ್ರೇಶ್ ಕುಮಾರ್ ಹೇಳಿದರು.
ಉತ್ತರ ಪ್ರದೇಶದ ವಿವಿಧ 40 ನಗರಗಳಿಂದ 250ಕ್ಕೂ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಎಂಆರ್‌ಎಂನ ರಾಷ್ಟ್ರೀಯ ಸಂಚಾಲಕರಾದ ಇರ್ಫಾನ್ ಅಲಿ ಪಿರ್ಜಾಡೆ, ವಿರಾಗ್ ಪಾಚ್‌ಪೋರೆ ಮತ್ತು ಇತರೆ ಪದಾಧಿಕಾರಿಗಳಿದ್ದರು.
ಎಂಆರ್‌ಎಂ 2002ರಲ್ಲಿ ಸ್ಥಾಪನೆಯಾಗಿದ್ದು, ತ್ರಿವಳಿ ತಲಾಖ್, ಜಮ್ಮು ಮತ್ತು ಕಾಶ್ಮೀರ, ಅಯೋಧ್ಯೆ, ಗೋಹತ್ಯೆ, ಭಯೋತ್ಪಾದನೆ ಸೇರಿ ವಿವಿಧ ವಿಷಯಗಳನ್ನು ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.