ಶುಕ್ರವಾರ, ಏಪ್ರಿಲ್ 16, 2021
31 °C

ಬಂಧಿಸಲು ಬರುವ ಪೊಲೀಸರಿಗೆ ಮುತ್ತಿಗೆ ಹಾಕಲು ರೈತರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ‘ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವವರನ್ನು ಬಂಧಿಸಲು ದೆಹಲಿ ಪೊಲೀಸರು ಬಂದರೆ, ಅವರನ್ನು ಘೇರಾವ್ ಮಾಡಿ’ ಎಂದು ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ನಾಯಕ ಬಲಬೀರ್ ಸಿಂಗ್ ರಾಜೇವಾಲ್‌ ಕರೆ ನೀಡಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ
ಯಾಗಿ ರಾಜೇವಾಲ್ ಈ ಹೇಳಿಕೆ ನೀಡಿದ್ದಾರೆ. ‘ನಿಮ್ಮನ್ನು ಬಂಧಿಸಲು ದೆಹಲಿ ಪೊಲೀಸರು ಬಂದರೆ, ನಿಮ್ಮ ಊರಿನ ಎಲ್ಲಾ ಜನರನ್ನು ಸೇರಿಸಿ. ದೆಹಲಿ ಪೊಲೀಸರಿಗೆ ವಿರುದ್ಧವಾಗಿ ನಿಲ್ಲಿ’ ಎಂದು ಅವರು ಕರೆ ನೀಡಿದ್ದಾರೆ.

‘ಪ್ರತಿಭಟನೆನಿರತ ರೈತರಿಗೆ ಊಟದ ವ್ಯವಸ್ಥೆ ಮಾಡುತ್ತಿರುವವರನ್ನು ಮತ್ತು ನಮಗೆ ಯಾವುದೇ ರೀತಿಯ ನೆರವು ನೀಡುತ್ತಿರುವವರಿಗೆ ದೆಹಲಿ ಪೊಲೀಸರು ನೋಟಿಸ್ ನೋಡಿದ್ದಾರೆ. ಅಂತಹ ನೋಟಿಸ್ ನಿಮಗೆ ಬಂದರೆ, ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಮಗೆ ನೀಡಿ. ಆದರೆ, ಪೊಲೀಸರ ಎದುರು ಯಾರೂ ಹಾಜರಾಗುವ ಅವಶ್ಯಕತೆ ಇಲ್ಲ. ಕೇಂದ್ರದ ಕಾಯ್ದೆಗಳ ವಿರುದ್ಧ ಆರಂಭವಾದ ಈ ಪ್ರತಿಭಟನೆ ಈಗ ಜನಾಂದೋಲನವಾಗಿ ಬದಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ರೈತರಿಗೆ ಬೆಂಬಲ ಸೂಚಿಸಿರುವ ಪಂಜಾಬ್ ಸರ್ಕಾರದ ಎದುರು ಈಗ ನಿಜವಾದ ಸವಾಲು ಇದೆ. ರೈತರನ್ನು ಬಂಧಿಸಲು ಬರುವ ದೆಹಲಿ ಪೊಲೀಸರಿಗೆ ಪಂಜಾಬ್ ಪೊಲೀಸರು ಸಹಕಾರ ನೀಡದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಪ್ರತಿಭಟನೆ ತೀವ್ರ: ವಾರವಿಡೀ ಕಾರ್ಯಕ್ರಮ

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಹೋರಾಟವನ್ನು ತೀವ್ರಗೊಳಿಸಲು ಸರಣಿ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಮಂಗಳವಾರದಿಂದ ಶನಿವಾರದವರೆಗೆ (ಫೆ. 23ರಿಂದ 27) ಈ ಕಾರ್ಯಕ್ರಮಗಳು ನಡೆಯಲಿವೆ. ಸುದೀರ್ಘ ಕಾಲ ಹೋರಾಟ ನಡೆಸುವುದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸುವುದಾಗಿಯೂ ರೈತ ಮುಖಂಡರು ಹೇಳಿದ್ದಾರೆ.

23ರಂದು ಪೇಟ ರಕ್ಷಣಾ ದಿನ, 24ರಂದು ದಮನ ವಿರೋಧಿ ದಿನ ಆಚರಿಸಲಾಗುವುದು. 26ರಂದು ಯುವ ಕೃಷಿಕರ ದಿನ ಮತ್ತು 27ರಂದು ರೈತರು–ಕಾರ್ಮಿಕರ ಒಗ್ಗಟ್ಟು ದಿನ ಆಚರಿಸುವುದಾಗಿಯೂ ರೈತರು ಹೇಳಿದ್ದಾರೆ. 

‘ಸರ್ಕಾರವು ಎಲ್ಲ ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈತರ ಬಂಧನ, ವಶಕ್ಕೆ ಪಡೆಯುವುದು, ಪ್ರಕರಣ ದಾಖಲಿಸುವಂತಹ ಕ್ರಮಗಳನ್ನು ಅನುಸರಿಸುತ್ತಿದೆ. ಸಿಂಘು ಗಡಿಯ ಸುತ್ತ ಕೋಟೆ ಕಟ್ಟಲಾಗಿದ್ದು, ಇದು ಅಂತರ
ರಾಷ್ಟ್ರೀಯ ಗಡಿಯಂತೆ ಕಾಣಿಸುತ್ತಿದೆ’ ಎಂದು ರೈತ ಮುಖಂಡ ಯೋಗೇಂದ್ರ ಯಾದವ್‌ ಹೇಳಿದ್ದಾರೆ. 

ಮಾರ್ಚ್‌ 8ರಿಂದ ಸಂಸತ್‌ ಅಧಿವೇಶನ ಆರಂಭವಾಗಲಿದೆ. ಹಾಗಾಗಿ, ಸುದೀರ್ಘ ಕಾಲ ಚಳವಳಿ ನಡೆಸಲು ಬೇಕಾದ ಕಾರ್ಯತಂತ್ರವನ್ನು ಸಂಯುಕ್ತ ಕಿಸಾನ್‌ ಮೋರ್ಚಾದ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ 122 ಜನರ ಪೈಕಿ 32 ಮಂದಿಗೆ ಈವರೆಗೆ ಜಾಮೀನು ಸಿಕ್ಕಿದೆ ಎಂದು ರೈತರ ಮುಖಂಡ ದರ್ಶನ್‌ ಪಾಲ್‌ ತಿಳಿಸಿದ್ದಾರೆ. 

ರೈತರ ಭೇಟಿಯಾದ ಕೇಜ್ರಿವಾಲ್‌

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರನ್ನು ಭಾನುವಾರ ಭೇಟಿಯಾದರು. ರೈತರ ಪಾಲಿನ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇದೇ 28ರಂದು ಮೀರಠ್‌ನಲ್ಲಿ ನಡೆಯಲಿರುವ ರೈತರ ಮಹಾಪಂಚಾಯಿತಿಯಲ್ಲಿ ಕೇಜ್ರಿವಾಲ್‌ ಅವರು ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಕೇಜ್ರಿವಾಲ್‌ ಅವರ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದೆ.  ಉತ್ತರ ಪ್ರದೇಶ ವಿಧಾನಸಭೆಗೆ  2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಅವರು ಈಗಾಗಲೇ ಘೋಷಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಸಕ್ರಿಯವಾಗಿರುವ 40ಕ್ಕೂ ಹೆಚ್ಚು ಮುಖಂಡರು ಕೇಜ್ರಿವಾಲ್‌ ಜತೆಗಿನ ಸಭೆಯಲ್ಲಿ ಭಾಗವಹಿಸಿದ್ದರು. ದೆಹಲಿ ವಿಧಾನಸಭೆ ಆವರಣದಲ್ಲಿ ಈ ಸಭೆ ನಡೆದಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು