ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ನನ್ನ ಕೆಲಸ ಗುರುತಿಸಿದೆ: ನವಜೋತ್‌ ಸಿಂಗ್‌ ಸಿಧು

Last Updated 13 ಜುಲೈ 2021, 18:53 IST
ಅಕ್ಷರ ಗಾತ್ರ

ಚಂಡಿಗಡ: ಕಾಂಗ್ರೆಸ್‌ನ ಪಂಜಾಬ್‌ ಘಟಕದಲ್ಲಿ ಉದ್ಭವಿಸಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಹೈಕಮಾಂಡ್‌ ಪ್ರಯತ್ನ ನಡೆಸುತ್ತಿರುವ ಮಧ್ಯೆಯೇ, ಪಕ್ಷದ ಶಾಸಕ ನವಜೋತ್‌ ಸಿಂಗ್‌ ಸಿಧು ಅವರು, ವಿರೋಧ ಪಕ್ಷವಾಗಿರುವ ಆಮ್‌ ಆದ್ಮಿ ಪಾರ್ಟಿ (ಎಎಪಿ) ಬಗ್ಗೆ ಮೃದುಧೋರಣೆ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ ಬಗೆಗಿನ ತಮ್ಮ ದೂರದೃಷ್ಟಿ ಮತ್ತು ಕಾರ್ಯವನ್ನು ಎಎಪಿ ಯಾವಾಗಲೂ ಗುರುತಿಸುತ್ತ ಬಂದಿದೆ ಎಂದು ಸಿಧು ಹೇಳಿದ್ದಾರೆ.

ಖಾಸಗಿ ವಿದ್ಯುತ್‌ ಕಂಪನಿಗಳಿಂದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ನಿಧಿ ಪಡೆದಿದೆ ಎಂದು ಎಎಪಿ ಪಂಜಾಬ್ ಘಟಕದ ಮುಖ್ಯಸ್ಥ ಭಗವಂತ್ ಮಾನ್ ಆರೋಪಿಸಿ, ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ನವಜೋತ್‌ ಸಿಂಗ್‌ ಸಿಧು ಅವರನ್ನು ಕೇಳಿಕೊಂಡ ಮರುದಿವಸವೇ ಸಿಧು ಟ್ವೀಟ್‌ ಮೂಲಕ ಈ ರೀತಿಯ ಹೇಳಿಕೆ ನೀಡಿದ್ದಾರೆ.

‘ವಿರೋಧ ಪಕ್ಷವಾಗಿರುವ ಎಎಪಿ ಯಾವಾಗಲೂ ಪಂಜಾಬ್‌ಗಾಗಿ ನಾನು ಹೊಂದಿರುವ ದೂರದೃಷ್ಟಿ ಮತ್ತು ನನ್ನ ಕೆಲಸವನ್ನು ಗುರುತಿಸಿದೆ. 2017ರ ಮೊದಲು ಸಹ ರೈತರ ಸಮಸ್ಯೆಗಳು, ವಿದ್ಯುತ್‌ ಬಿಕ್ಕಟ್ಟು ಹಾಗೂ ಭ್ರಷ್ಟಾಚಾರದ ಬಗ್ಗೆ ಮತ್ತು ಪಂಜಾಬ್‌ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಅಂದಿನಿಂದಲೂ ಎಎಪಿ ನನ್ನ ಕೆಲಸವನ್ನು ಗುರುತಿಸಿದೆ. ನಾನು ಪಂಜಾಬ್‌ಗಾಗಿ ಹೋರಾಡುತ್ತಿರುವುದನ್ನು ಎಎಪಿ ತಿಳಿದುಕೊಂಡಿದೆ’ ಎಂದು ಸಿಧು ಸರಣಿ ಟ್ವೀಟ್‌ಗಳಲ್ಲಿ
ಹೇಳಿದ್ದಾರೆ.

‘ನನ್ನನ್ನು ಪ್ರಶ್ನಿಸಲು ಪ್ರತಿಪಕ್ಷಗಳಿಗೆ ಧೈರ್ಯವಿದ್ದರೆ, ಅವರು ನನ್ನ ಜನಪರವಾದ ಕಾರ್ಯಸೂಚಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿರುವ ಸಿಧು, ಹಿಂದಿನ ಎಸ್‌ಎಡಿ-ಬಿಜೆಪಿ ಆಡಳಿತದ ಅವಧಿಯಲ್ಲಿ ಡ್ರಗ್ ಮಾಫಿಯಾ ಮತ್ತು ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಎಎಪಿ ನಾಯಕರು ಹೊಗಳಿದ ಹಳೆಯ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT