ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಚಿಕಿತ್ಸೆಗೆ ಹಾಸಿಗೆ ಲಭ್ಯತೆ ಕುರಿತು ಬಿಜೆಪಿ–ಎಎಪಿ ನಡುವೆ ವಾಗ್ಯುದ್ಧ

Last Updated 18 ಏಪ್ರಿಲ್ 2021, 18:35 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಕೋವಿಡ್‌ ರೋಗಿಗಳಿಗೆ ಆಸ್ಪತ್ರೆ ಹಾಸಿಗೆ ಲಭ್ಯತೆಯ ವಿಚಾರದಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಭಾನುವಾರ ವಾಕ್ಸಮರ ನಡೆದಿದೆ.

ದೆಹಲಿಯ ನಗರಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಗರಪಾಲಿಕೆ ಅಧೀನದ ಆಸ್ಪತ್ರೆಗಳಲ್ಲಿ 3,127 ಹಾಸಿಗೆಗಳು ಇವೆ. ಇವುಗಳ ಪೈಕಿ ಒಂದು ಹಾಸಿಗೆಯನ್ನೂ ಕೋವಿಡ್‌ ರೋಗಿಗಳಿಗೆ ನೀಡಿಲ್ಲ ಎಂದು ಎಎಪಿ ಆರೋಪಿಸಿದೆ. ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಅನುಮತಿಯನ್ನು ದೆಹಲಿ ಸರ್ಕಾರವು ನಗರಪಾಲಿಕೆಗಳಿಗೆ ನೀಡಿಲ್ಲ ಎಂದು ಬಿಜೆಪಿ ಆಪಾದಿಸಿದೆ.

ಪ್ರತಿಯೊಬ್ಬ ನಾಗರಿಕನೂ ಕೋವಿಡ್‌ ರೋಗಿಗಳಿಗೆ ನೆರವಾಗಲು ಯತ್ನಿಸುತ್ತಿದ್ದರೆ ಬಿಜೆಪಿ ಆಳ್ವಿಕೆಯ ನಗರಪಾಲಿಕೆಗಳು ರಾಜಕಾರಣ ಮಾಡುವುದರಲ್ಲಿಯೇ ವ್ಯಸ್ತವಾಗಿವೆ ಎಂದು ಎಎಪಿ ಮುಖಂಡ ದುರ್ಗೇಶ್‌ ಪಾಠಕ್‌ ಹೇಳಿದ್ದಾರೆ. ನಗರಪಾಲಿಕೆ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ನೀಡಲು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್‌ ಗುಪ್ತಾ ಮತ್ತು ಮೇಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ನಗರಪಾಲಿಕೆ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಲು ದೆಹಲಿ ಸರ್ಕಾರವು ಏಕೆ ಅನುಮತಿ ನೀಡಿಲ್ಲ ಎಂದು ಬಿಜೆಪಿ ವಕ್ತಾರ ಪ್ರವೀಣ್‌ ಶಂಕರ್‌ ಕಪೂರ್‌ ಪ್ರಶ್ನಿಸಿದ್ದಾರೆ. ದೆಹಲಿ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಮತಿ ನೀಡಿದರೆ ಮಾತ್ರ ನಗರಪಾಲಿಕೆ ಆಸ್ಪತ್ರೆಗಳು ಕೋವಿಡ್‌ಗೆ ಚಿಕಿತ್ಸೆ ನೀಡಲು ಸಾಧ್ಯ ಎಂಬುದನ್ನು ಆರೋಪ ಹೊರಿಸುವುದಕ್ಕೆ ಮುನ್ನ ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ರೈಲ್ವೆ ನೆರವು:ರೈಲ್ವೆ ಇಲಾಖೆಯು ಪ್ರತ್ಯೇಕವಾಸಕ್ಕಾಗಿ 50 ರೈಲು ಬೋಗಿಗಳನ್ನು ದೆಹಲಿಯ ಶಾಕುರ್‌ ಬಸ್ತಿ ರೈಲು ನಿಲ್ದಾಣದಲ್ಲಿ ಒದಗಿಸಿದೆ. ಪ್ರತಿ ಬೋಗಿಯಲ್ಲಿ ಎರಡು ಆಮ್ಲಜನಕ ಸಿಲಿಂಡರ್‌ಗಳೂ ಇವೆ. ಆನಂದ್‌ ವಿಹಾರ್ ನಿಲ್ದಾಣದಲ್ಲಿ ಇಂತಹ 25 ಬೋಗಿಗಳನ್ನು ಸೋಮವಾರದ ಒಳಗೆ ಒದಗಿಸಲಾಗುವುದು ಎಂದು ರೈಲ್ವೆ ಹೇಳಿದೆ. ಐದು ಸಾವಿರ ಹಾಸಿಗೆಗಳನ್ನು ಒದಗಿಸುವಂತೆ ದೆಹಲಿ ಸರ್ಕಾರ ಮಾಡಿದ ಮನವಿಗೆ ರೈಲ್ವೆಯು ಹೀಗೆ ಸ್ಪಂದಿಸಿದೆ.

ಆಮ್ಲಜನಕ ಪೂರೈಕೆಯಲ್ಲಿ ತಾರತಮ್ಯ: ಕೇಜ್ರಿವಾಲ್‌

ದೆಹಲಿಯಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಇದೆ. ದೆಹಲಿಗೆ ಮೀಸಲಾಗಿರುವ ಆಮ್ಲಜನಕದ ಕೋಟಾವನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಕೋವಿಡ್‌ ರೋಗಿಗಳಿಗೆ ಲಭ್ಯವಿರುವ ಹಾಸಿಗೆ ಸಂಖ್ಯೆ ಹೆಚ್ಚಳ ಮತ್ತು ಆಮ್ಲಜನಕ ಪೂರೈಕೆಯನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಕೆಲವೇ ತಾಸುಗಳ ಬಳಿಕ ಅವರು ಈ ಆರೋಪ ಮಾಡಿದ್ದಾರೆ.

‘ದೆಹಲಿಯಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಇದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿರುವುದರಿಂದ ದೆಹಲಿಗೆ ಸಾಮಾನ್ಯ ಪೂರೈಕೆ ಸಾಲದು. ಇಂತಹ ಸಂದರ್ಭದಲ್ಲಿ ಪೂರೈಕೆ ಹೆಚ್ಚಿಸುವ ಬದಲು,
ರಾಜ್ಯದ ಕೋಟಾವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ಆಮ್ಲಜನಕವು ದೆಹಲಿಯ ತುರ್ತು ಅಗತ್ಯವಾಗಿದೆ’ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ತಮಿಳುನಾಡು, ಬಿಹಾರದಲ್ಲಿ ರಾತ್ರಿ ಕರ್ಫ್ಯೂ

ಚೆನ್ನೈ/ಪಟ್ನಾ: 12ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ತಮಿಳುನಾಡು ಸರ್ಕಾರ ಮುಂದೂಡಿದೆ. ಭಾನುವಾರಗಳಂದು ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿದೆ. ಮಂಗಳವಾರದಿಂದ ರಾತ್ರಿ ಕರ್ಫ್ಯೂ (ರಾತ್ರಿ 10ರಿಂದ ಬೆಳಿಗ್ಗೆ 4) ಜಾರಿಗೆ ಬರಲಿದೆ. ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಉನ್ನತ ಮಟ್ಟದ ಸಭೆಯ ಬಳಿಕ ಈ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.

ಬಿಹಾರದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಹೇರಲು ಸರ್ಕಾರ ನಿರ್ಧರಿಸಿದೆ. ಶಾಲೆ, ಕಾಲೇಜುಗಳನ್ನು ಮೇ 15ರವರೆಗೆ ತೆರೆಯುವಂತಿಲ್ಲ ಎಂದು ಸರ್ಕಾರ ಹೇಳಿದೆ. ಸರ್ಕಾರಿ ಕಚೇರಿಗಳು ಸಂಜೆ 5ಕ್ಕೆ ಮುಚ್ಚಲಿದ್ದು, ಮೂರನೇ ಒಂದರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಲಿದ್ದಾರೆ. ಅಂಗಡಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳನ್ನು ಸಂಜೆ 6ಕ್ಕೆ ಮುಚ್ಚಲು ಸೂಚಿಸಲಾಗಿದೆ.

ಗುಜರಾತ್‌: ಹಾಸಿಗೆಗಳು ಭರ್ತಿ

ಅಹಮದಾಬಾದ್‌: ಕೋವಿಡ್‌ಗಾಗಿ ಮೀಸಲಿರಿಸಿರುವ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾಗಿವೆ ಎಂದು ಗುಜರಾತ್‌ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಪ್ರತಿ ದಿನ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ನಿಭಾಯಿಸಲು ಈಗ ಇರುವ ಹಾಸಿಗೆ ಸಾಮರ್ಥ್ಯ, ಆಮ್ಲಜನಕ ಮತ್ತು ಇತರ ಸೌಲಭ್ಯಗಳು ಸಾಲುವುದಿಲ್ಲ ಎಂದು ಆರೋಗ್ಯ ಸಚಿವ ನಿತಿನ್‌ ಪಟೇಲ್‌ ಹೇಳಿದ್ದಾರೆ. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿಯೂ ಕೋವಿಡ್‌ ಪಿಡುಗು ತೀವ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 71 ಸಾವಿರ ಹಾಸಿಗೆಗಳು ಲಭ್ಯ ಇವೆ ಎಂದು ಹೈಕೋರ್ಟ್‌ಗೆ ಸರ್ಕಾರ ಕಳೆದ ವಾರ ಹೇಳಿತ್ತು. ಕೋವಿಡ್‌ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿದ್ದ ಹೈಕೋರ್ಟ್‌, ಸ್ವಪ್ರೇರಣೆಯಿಂದ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಇಷ್ಟೊಂದು ಹಾಸಿಗೆಗಳು ಇವೆ ಎಂದಾದರೆ ಜನರು ಏಕೆ ಆಸ್ಪತ್ರೆ ಹೊರಗೆ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿತ್ತು.

***

ಪ್ರಧಾನಿ ಚುನಾವಣಾ ನಿರ್ವಹಣೆ ಕೈಬಿಟ್ಟು ಕೊರೊನಾ ನಿರ್ವಹಣೆಗೆ ಗಮನ ಹರಿಸಬೇಕು. ದಯವಿಟ್ಟು ಮೊದಲು ಜನರ ಜೀವ ರಕ್ಷಿಸಿ
- ರಾಘವ್‌ ಛಡ್ಡಾ, ಎಎಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT