17ರಂದು ಮತ್ತೊಬ್ಬ ಮಹಿಳೆಯನ್ನು ಹಿಂಸಿಸಿದ್ದ ಆರೋಪಿ: ಸ್ವಾತಿ ಮಾಲೀವಾಲ್ ಮಾಹಿತಿ
ಬೆಂಗಳೂರು: ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರಿಗೆ ಯಾವ ರೀತಿಯ ಸುರಕ್ಷತೆ ಇದೆ ಎಂಬುದನ್ನು ಖುದ್ದಾಗಿ ಪರೀಕ್ಷಿಸಲು ಮುಂದಾದ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರನ್ನು 15 ಮೀಟರ್‌ನಷ್ಟು ದೂರಕ್ಕೆ ಎಳೆದೊಯ್ದಿದ್ದ ಎನ್ನಲಾದ ಕಾರು ಚಾಲಕ, ಇದೇ ರೀತಿ ಹಲವರೊಂದಿಗೆ ವರ್ತಿಸಿದ್ದಾನೆ ಎಂದು ಸ್ವಾತಿ ಮಾಲೀವಾಲ್ ಅವರು ಬಹಿರಂಗಪಡಿಸಿದ್ದಾರೆ.
ಜನವರಿ 17ರಂದು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾಗಿ ಮಹಿಳೆಯೊಬ್ಬರು 181 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಸ್ವಾತಿ ಮಾಲೀವಾಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ನೀಡಿರುವ ಹೇಳಿಕೆಯ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.
जिस आदमी ने मुझे छेड़ा उसने और महिलाओं को भी शिकार बनाया है। एक लड़की ने 181 हेल्पलाइन पर फ़ोन कर बताया कैसे इस आदमी ने 17 जनवरी को लोधी रोड पर कई बार गाड़ी उसके आगे रोकी और गाड़ी में बैठने को कहा! अच्छा हुआ मैंने उसको पकड़वाया। सबसे अपील है डरे नहीं, आवाज़ उठाएँ pic.twitter.com/1iOJINkxz5
— Swati Maliwal (@SwatiJaiHind) January 20, 2023
’ನನಗೆ ಕಿರುಕುಳ ನೀಡಿದ ವ್ಯಕ್ತಿಯೇ ಇತರ ಮಹಿಳೆಯರಿಗೂ ಕಿರುಕುಳ ನೀಡಿದ್ದಾನೆ. ಮಹಿಳೆಯೊಬ್ಬರು 181 ಸಹಾಯವಾಣಿಗೆ ಕರೆ ಮಾಡಿ, ಜನವರಿ 17 ರಂದು ಲೋಧಿ ರಸ್ತೆಯಲ್ಲಿ ನಡೆದದ್ದನ್ನು ಹೇಳಿದ್ದಾರೆ. ಅದೇ ವ್ಯಕ್ತಿ ತನ್ನ ಮುಂದೆ ಕಾರನ್ನು ಹಲವಾರು ಬಾರಿ ನಿಲ್ಲಿಸಿ ಕುಳಿತುಕೊಳ್ಳುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ. ನಾನು ಅವನನ್ನು ಹಿಡಿದದ್ದು ಸರಿಯಾಯ್ತು. ನನ್ನ ಮನವಿ ಏನೆಂದರೆ ಯಾರೂ ಭಯಪಡಬೇಡಿ, ನಿಮ್ಮ ಧ್ವನಿ ಇನ್ನೂ ಜೋರಾಗಲಿ’ ಎಂದು ಸ್ವಾತಿ ಟ್ವೀಟ್ ಮಾಡಿದ್ದಾರೆ.
ಸಂತ್ರಸ್ತ ಮಹಿಳೆ ಹೇಳಿಕೆ
‘ಮಹಿಳಾ ಆಯೋಗದ ಅಧ್ಯಕ್ಷರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯ ಬಗ್ಗೆ ಆಗಿದ್ದ ವರದಿಗಳನ್ನು ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಗಮನಿಸಿದೆ. ಅದೇ ವ್ಯಕ್ತಿಯೇ ಅಂದು (ಜ.17ರಂದು) ನನ್ನೊಂದಿಗೂ ಅಸಭ್ಯವಾಗಿ ನಡೆದುಕೊಂಡಿದ್ದ. ಡ್ರಾಪ್ ನೀಡುವ ನೆಪದಲ್ಲಿ ಹಲವು ಬಾರಿ ನನ್ನ ಬಳಿಗೆ ಬಂದಿದ್ದ. ಯೂಟರ್ನ್ ಮಾಡಿಕೊಂಡು ಪದೇ ಪದೇ ಬಂದು ಮಾತನಾಡಿಸಿದ್ದ. ಮೊದಲ ಬಾರಿ ಅವನನ್ನು ನಿರ್ಲಕ್ಷಿಸಿದ್ದೆ. ಪದೇ ಪದೇ ನನ್ನ ಬಳಿ ಬಂದಾಗ ಆತನನ್ನು ಸೂಕ್ಷ್ಮವಾಗಿ ಗಮನಿಸಿದ್ದೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಸ್ವಾತಿ ಮಾಲೀವಾಲ್ ಅವರ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್‌ನ ನಿವಾಸಿ ಹರೀಶ್ ಚಂದ್ರ (47) ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
‘ಗಸ್ತಿನಲ್ಲಿದ್ದ ಪೊಲೀಸ್ ವಾಹನಕ್ಕೆ ಮಾಲೀವಾಲ್ ಅವರು ನಡೆದ ಘಟನೆಯನ್ನು ವಿವರಿಸಿದರು. ಬಳಿಕ ಆ ಕಾರಿನ ಜಾಡು ಹಿಡಿದು, ಆರೋಪಿಯನ್ನು ಬಂಧಿಸಲಾಯಿತು’ ಎಂದು ಡಿಸಿಪಿ (ದಕ್ಷಿಣ) ಚಂದನ್ ಚೌದರಿ ತಿಳಿಸಿದರು.
ಸ್ವಾತಿ ಮಾಲೀವಾಲ್ ಅವರನ್ನು ಎಳೆದೊಯ್ದಿದ್ದ ಆರೋಪಿ
‘ಏಮ್ಸ್ ಎದುರಿನ ವರ್ತುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಮಾಲೀವಾಲ್ ಅವರು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾರಿನ ಚಾಲಕ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಕೇಳಿದ್ದನು. ಅದನ್ನು ಮಾಲೀವಾಲ್ ನಿರಾಕರಿಸಿದಾಗ, ಕೆಲಕಾಲ ದುರುಗುಟ್ಟಿ ನೋಡಿ ಅಲ್ಲಿಂದ ತೆರಳಿದ್ದ. ಕೆಲವೇ ನಿಮಿಷಗಳಲ್ಲಿ ಅದೇ ಜಾಗಕ್ಕೆ ಮತ್ತೆ ಬಂದ ಆತ, ಕಾರಿನಲ್ಲಿ ಕೂರುವಂತೆ ಪುನಃ ಕೇಳಿದ. ಆಗಲೂ ಮಾಲೀವಾಲ್ ನಿರಾಕರಿಸಿದಾಗ, ಆತ ಅಶ್ಲೀಲ ಸನ್ನೆಗಳನ್ನು ತೋರಿ ಅಸಭ್ಯದಿಂದ ವರ್ತಿಸಿದ’ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
‘ಆತನ ವರ್ತನೆಯನ್ನು ಮಾಲೀವಾಲ್ ಖಂಡಿಸಿದಾಗ, ಆತ ಮತ್ತೆ ಅಶ್ಲೀಲ ಸನ್ನೆಗಳೊಂದಿಗೆ ಅಸಭ್ಯತೆ ತೋರಿದನು. ಈ ವೇಳೆ ಸ್ವಾತಿ ಅವರು ಚಾಲಕನನ್ನು ಹಿಡಿದಾಗ, ಆತ ಕಾರಿನ ಕಿಟಿಕಿಯ ಗಾಜನ್ನು ಮೇಲಕ್ಕೆತ್ತಿ ಅವರ ಕೈ ಸಿಲುಕುವಂತೆ ಮಾಡಿ, ಕಾರು ಚಲಾಯಿಸಿಕೊಂಡು, ಅವರನ್ನು ಎಳೆದೊಯ್ದನು. ಕೆಲ ಮೀಟರ್‌ಗಳಷ್ಟು ದೂರ ಹೋಗುತ್ತಿದ್ದಂತೆ ಮಾಲೀವಾಲ್ ಅವರು ಹೇಗೋ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಎಳೆದೊಯ್ದ ಚಾಲಕ
ಅಶೋಕ್ ಗೆಹಲೋತ್ ಅತ್ಯಾಚಾರಿಗಳ ಭಾಷೆ ಬಳಸುವುದನ್ನು ನಿಲ್ಲಿಸಬೇಕು: ಸ್ವಾತಿ ಮಲಿವಾಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.