ಬುಧವಾರ, ಆಗಸ್ಟ್ 10, 2022
24 °C

ಬಿಹಾರ ಆಯ್ತು, ಈಗ ಉತ್ತರ ಪ್ರದೇಶದಲ್ಲೂ ಗಂಗಾ ನದಿಯಲ್ಲಿ ಶವಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಜತೆ ಗಡಿಹಂಚಿಕೊಂಡಿರುವ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಗಂಗಾನದಿಯಲ್ಲಿ ಹೆಣಗಳು ತೇಲಿಬಂದ ಮರುದಿನವೇ, ಉತ್ತರ ಪ್ರದೇಶದ ಗಾಜಿಪುರದಲ್ಲೂ ನದಿಯಲ್ಲಿ ಹೆಣಗಳು ತೇಲಿಬಂದಿವೆ. ಗಾಜಿಪುರ ಜಿಲ್ಲೆಯ ಬಲಿಯಾ ಬಳಿ ಮಂಗಳವಾರ ಹೆಣಗಳು ಕಾಣಿಸಿಕೊಂಡವು.

ಜಿಲ್ಲೆಯ ಬುರಾಲಿ, ನಾರ್ವಾ ಮತ್ತು ಬುಲಕಿ ದಾಸ್ ಘಾಟ್‌ಗಳಲ್ಲಿ ಹೆಣಗಳು ತೇಲಿಬಂದಿವೆ. ಹೆಣಗಳನ್ನು ಸ್ಥಳೀಯಾಡಳಿತ ಸಿಬ್ಬಂದಿ ಕಲೆಹಾಕಿ, ನಂತರ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ಹೆಣಗಳು ಎಲ್ಲಿಂದ ತೇಲಿ ಬರುತ್ತಿವೆ ಎಂಬುದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗಾಜಿಪುರದ ಗಹ್ಮಾರ್‌ ಗಡಿಗ್ರಾಮವಾಗಿದೆ. ಬಕ್ಸರ್‌ನಲ್ಲಿ ಪತ್ತೆಯಾದ ಹೆಣಗಳು ಉತ್ತರ ಪ್ರದೇಶದಿಂದ ತೇಲಿಬಂದಿರಬಹುದು ಎಂದು ಶಂಕಿಸಲಾಗಿದೆ.

ಓದಿ: 

‘ಹೆಣಗಳನ್ನು ಸುಡಲು ಅಗತ್ಯವಿರುವ ಕಟ್ಟಿಗೆಯ ಕೊರತೆ ಉಂಟಾಗಿದೆ. ಹೀಗಾಗಿ ಹೆಣಗಳನ್ನು ನದಿಗೆ ಬಿಸಾಡಲಾಗಿದೆ. ಕಟ್ಟಿಗೆಯ ಬೆಲೆ ವಿಪರೀತ ಏರಿಕೆಯಾಗಿದೆ. ಹೀಗಾಗಿ ಯಾರೂ ಹೆಣಗಳನ್ನು ಸುಡುತ್ತಿಲ್ಲ’ ಎಂದು ಕಾನ್ಪುರದ ನಿವಾಸಿಯೊಬ್ಬರು ಹೇಳಿದ್ದಾರೆ.

ಕಟ್ಟಿಗೆ ಇಲ್ಲದ ಕಾರಣ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ನದಿದಂಡೆಯಲ್ಲೇ ಹೆಣಗಳನ್ನು ಹೂಳಲಾಗಿದೆ. ತರಾತುರಿಯಲ್ಲಿ ಕೇವಲ 3-4 ಅಡಿ ಆಳದಲ್ಲಿ ಹೆಣಗಳನ್ನು ಹೂಳಲಾಗಿದೆ. ನದಿ ನೀರಿನ ಮಟ್ಟ ಏರಿಕೆಯಾದ ಕಾರಣ, ಆ ಹೆಣಗಳು ಕೊಚ್ಚಿ ಬಂದಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸೇತುವೆ ಮೇಲೆ ನಿಂತಿದ್ದ ಆಂಬುಲೆನ್ಸ್‌ ಒಂದರಿಂದ ಹೆಣಗಳನ್ನು ನದಿಗೆ ಎಸೆಯುತ್ತಿರುವ ದೃಶ್ಯವಿರುವ ವಿಡಿಯೊ ಮಂಗಳವಾರ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ್ದೇ ಆಂಬುಲೆನ್ಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಈ ವಿಡಿಯೊವನ್ನು ಆಧರಿಸಿ ಎನ್‌ಡಿಟಿವಿ ವರದಿಯನ್ನು ಸಹ ಪ್ರಕಟಿಸಿದೆ.

71 ಹೆಣಗಳು: ಬಿಹಾರದ ಬಕ್ಸರ್‌ನಲ್ಲಿ ಸೋಮವಾರ 15ಕ್ಕೂ ಹೆಚ್ಚು ಹೆಣಗಳು ತೇಲಿಬಂದಿದ್ದವು. ಆ ಹೆಣಗಳ ಮರಣೋತ್ತರ ಪರಿಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಮಂಗಳವಾರ ಮತ್ತೆ 71 ಹೆಣಗಳು ಈ ರೀತಿ ತೇಲಿಬಂದಿವೆ. ಈ ಹೆಣಗಳು ಎಲ್ಲಿಂದ ತೇಲಿ ಬರುತ್ತಿವೆ ಎಂಬುದನ್ನು ಪತ್ತೆ ಮಾಡಲು, ಬಕ್ಸರ್ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು