ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಎಂಆರ್‌ಸಿಸಿ ಸ್ಥಾಪಿಸಲಿರುವ ಬಿಇಎಲ್‌

ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಾಬಲ್ಯ ಮರುಸ್ಥಾಪನೆ
Last Updated 29 ಮಾರ್ಚ್ 2022, 19:04 IST
ಅಕ್ಷರ ಗಾತ್ರ

ನವದೆಹಲಿ: ಕೊಲಂಬೊದಲ್ಲಿ ಸಾಗರಯಾನ ರಕ್ಷಣಾ ಸಮನ್ವಯ ಕೇಂದ್ರವನ್ನು (ಎಂಆರ್‌ಸಿಸಿ) ಸ್ಥಾಪಿಸಲು ಭಾರತ್ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌) ಶ್ರೀಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಿಂದೂ ಮಹಾಸಾಗರದ ಮಾಲ್ಡೀವ್ಸ್‌ನಲ್ಲಿ ರೇಡಾರ್‌ ವ್ಯವಸ್ಥೆಯನ್ನು ಅಳವಡಿಸಿದ ಬೆನ್ನಲ್ಲೇ, ಶ್ರೀಲಂಕಾದಲ್ಲಿ ಎಂಆರ್‌ಸಿಸಿ ಆರಂಭಿಸುವ ಮೂಲಕ ಭಾರತವು ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಜಿ.ಎಲ್.ಪೈರಿಸ್ ನಡುವೆ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಹಿಂದೂ ಮಹಾಸಾಗರದ ದ್ವೀಪರಾಷ್ಟ್ರಗಳಲ್ಲಿ ಚೀನಾವು ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡುವ ಮೂಲಕ, ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿತ್ತು. ಶ್ರೀಲಂಕಾದ ಹಂಬನ್‌ತೋಟಾದಲ್ಲಿ ಬಂದರು ಅಭಿವೃದ್ಧಿಪಡಿಸಿ, ಅದನ್ನು ಗುತ್ತಿಗೆ ಪಡೆದುಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿತ್ತು. ಇದು ಹಿಂದೂ ಮಹಾ
ಸಾಗರ ಪ್ರದೇಶದಲ್ಲಿ ಭಾರತದ ಪ್ರಾಬಲ್ಯಕ್ಕೆ ಕೊಟ್ಟ ಹೊಡೆತ ಎಂದೇ ಪರಿಗಣಿಸಲಾಗಿತ್ತು. ಈಗ ಭಾರತವು ಸಮುದ್ರಯಾನಕ್ಕೆ ಅತ್ಯಗತ್ಯವಾದ ವ್ಯವಸ್ಥೆಗಳನ್ನು ಮಾಲ್ಡೀವ್ಸ್‌ ಮತ್ತು ಶ್ರೀಲಂಕಾದಲ್ಲಿ ಸ್ಥಾಪನೆಗೆ ಮುಂದಾಗುವ ಮೂಲಕ ಪ್ರಾಬಲ್ಯವನ್ನು ಮರುಸ್ಥಾಪಿಸಿದೆ. ಆ ಮೂಲಕ ಚೀನಾಕ್ಕೆ ಸೆಡ್ಡು ಹೊಡೆದಿದೆಎಂದು ವಿಶ್ಲೇಷಿಸಲಾಗಿದೆ.

ಶ್ರೀಲಂಕಾದ ನೌಕಾಪಡೆಯ ಕೇಂದ್ರಕಚೇರಿ ಇರುವ ಕೊಲಂಬೊದಲ್ಲಿ ಭಾರತದ ಬಿಇಎಲ್‌, ಎಂಆರ್‌ಸಿಸಿಯನ್ನು ಸ್ಥಾಪಿಸಲಿದೆ. ಹಂಬನ್‌ತೋಟಾ ಬಂದರು ಪ್ರದೇಶದಲ್ಲಿ ಎಂಆರ್‌ಸಿಸಿ ಉಪಕೇಂದ್ರವನ್ನು ಸ್ಥಾಪಿಸಲಿದೆ.

ಸಹಕಾರ ವೃದ್ಧಿ

* ಶ್ರೀಲಂಕಾದಲ್ಲಿ ಆಧಾರ್ ಸ್ವರೂಪದ ‘ವಿಶಿಷ್ಟ ಡಿಜಿಟಲ್ ಗುರುತು ಕಾರ್ಯಕ್ರಮ’ ಆರಂಭಿಸಲು ಭಾರತ ನೆರವು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ

* ಶ್ರೀಲಂಕಾ ನೌಕಾಪಡೆಗೆ ಭಾರತವು, ಕರಾವಳಿ ಕಣ್ಗಾವಲು ಉದ್ದೇಶದ ಮೂರು ಡಾರ್ನಿಯರ್ ವಿಮಾನಗಳನ್ನು ನೀಡಲಿದೆ

* ಶ್ರೀಲಂಕಾದ ತ್ರಿಂಕೋಮಲೇ ಬಂದರಿಗಾಗಿ ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ತೇಲುವ ಡಾಕ್‌ ಅನ್ನು ನಿರ್ಮಿಸಿಕೊಡಲಿದೆ. ಚೀನಾದ ಬೋಗ್ಯದಲ್ಲಿ ಇರುವ ಹಂಬನ್‌ತೋಟಾ ಬಂದರು ಹೊರತುಪಡಿಸಿ, ಬೇರೆ ಬಂದರುಗಳಿಗೆ ಈ ಡಾಕ್‌ ಅನ್ನು ತುರ್ತು ಸಂದರ್ಭದಲ್ಲಿ ಸಾಗಿಸಬಹುದು

* ಶ್ರೀಲಂಕಾ ವಾಯುಪಡೆಯ ಪೈಲಟ್‌ಗಳಿಗೆ ತರಬೇತಿ ನೀಡಲು ಭಾರತೀಯ ನೌಕಾಪಡೆಯು ತನ್ನ ಸುಧಾರಿತ ಲಘು ಹೆಲಿಕಾಪ್ಟರ್‌ ಅನ್ನು ಈಚೆಗೆ ಕಳುಹಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT